ಅಮೆರಿಕ ಮಿಲಿಟರಿ ಪಡೆಗಳು ಬುಧವಾರ ರಾತ್ರಿ ನಡೆಸಿದ ದಾಳಿಯಲ್ಲಿ ಐಸಿಸ್ ಉಗ್ರನ ಕತೆ ಕೊನೆಗೊಂಡಿದೆ: ಜೋ ಬೈಡೆನ್
ಅಮೆರಿಕ ನಡೆಸಿದ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಹಲವಾರು ನಾಗರಿಕರು ಕೂಡ ಬಲಿಯಾಗಿರುವ ವರದಿಗಳನ್ನು ಉಲ್ಲೇಖಿಸಿ, ‘ಅತಿ ಕಡಿಮೆ ಪ್ರಮಾಣದಲ್ಲಿ ನಾಗರಿಕ ಹಾನಿಯಾಗುವ ಹಾಗೆ ಎಚ್ಚರ ವಹಿಸಬೇಕೆಂದು ನಾನು ರಕ್ಷಣಾ ಇಲಾಖೆಗೆ ಸೂಚನೆ ನೀಡಿದ್ದೆ,’ ಎಂದು ಬೈಡೆನ್ ಹೇಳಿದರು.
ಬುಧವಾರ ರಾತ್ರಿ ಅಮೆರಿಕ ಸಿರಿಯಾದ ಮೇಲೆ ದಾಳಿ ನಡೆಸಿ ಐಸಿಸ್ (ISIS) ಸಂಘಟನೆಯ ಮುಖ್ಯಸ್ಥನೊಬ್ಬನನ್ನು ನಿರ್ನಾಮಗೊಳಿಸಿದೆ ಎಂದು ಗುರುವಾರ ವ್ಹೈಟ್ ಹೌಸ್ ನಿಂದ ರಾಷ್ಟ್ರವನ್ನುದ್ದೇಶಿಸಿ ಸಂಕ್ಷಿಪ್ತ ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಹೇಳಿದರು. ‘ಕಳೆದ ರಾತ್ರಿ ಅಮೆರಿಕದ ಮಿಲಿಟರಿ ಪಡೆಗಳು ನನ್ನ ಆದೇಶದ ಮೇರೆಗೆ, ವಿಶ್ವಕ್ಕೆ ಅತಿದೊಡ್ಡ ಅಪಾಯಕಾರಿ ಭಯೋತ್ಪಾದಕನಾಗಿ ಪರಿಣಮಿಸಿದ್ದ ಹಾಜಿ ಅಬ್ದುಲ್ಲಾಹ್ (Haji Abdullah) ಹೆಸರಿನ ಐಸಿಸ್ ನಾಯಕನನ್ನು ಯಶಸ್ವೀಯಾಗಿ ಮುಗಿಸಿಬಿಟ್ಟಿವೆ. 2019 ರಲ್ಲಿ ಅಮೆರಿಕ ಭಯೋತ್ಪಾದನೆಯನ್ನು ಮಟ್ಟಹಾಕುವ ದಿಸೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ ಭಗ್ದಾದಿಯನ್ನು ಕೊಂದ ನಂತರ ಹಾಜಿ ಅಬ್ದುಲ್ಲಾಹ್ ಅದರ ಮುಖ್ಯಸ್ಥನಾಗಿ ಗುರುತಿಸಿಕೊಂಡಿದ್ದ, ನಮ್ಮ ಪಡೆಗಳ ಪರಾಕ್ರಮದಿಂದಾಗಿ ಈ ಭಯಾನಕ ಉಗ್ರನ ಕತೆ ಮುಗಿದಿದೆ’ ಎಂದು ವ್ಹೈಟ್ ಹೌಸ್ ನ (White House) ರೂಸ್ ವೆಲ್ಟ್ ಕೋಣೆಯಿಂದ ಮಾಡಿದ ಭಾಷಣದಲ್ಲಿ ಬೈಡೆನ್ ಹೇಳಿದರು.
ಅಮೆರಿಕ ನಡೆಸಿದ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಹಲವಾರು ನಾಗರಿಕರು ಕೂಡ ಬಲಿಯಾಗಿರುವ ವರದಿಗಳನ್ನು ಉಲ್ಲೇಖಿಸಿ, ‘ಅತಿ ಕಡಿಮೆ ಪ್ರಮಾಣದಲ್ಲಿ ನಾಗರಿಕ ಹಾನಿಯಾಗುವ ಹಾಗೆ ಎಚ್ಚರ ವಹಿಸಬೇಕೆಂದು ನಾನು ರಕ್ಷಣಾ ಇಲಾಖೆಗೆ ಸೂಚನೆ ನೀಡಿದ್ದೆ,’ ಎಂದು ಬೈಡೆನ್ ಹೇಳಿದರು.
‘ಈ ಭಯೋತ್ಪಾದಕ ಮಕ್ಕಳನ್ನು ಒಳಗೊಂಡಂತೆ ಕುಟುಂಬಗಳಿಂದ ಸುತ್ತುವರಿಯಲ್ಪಟ್ಟಿರುತ್ತಾನೆ ಅನ್ನೋದು ನಮಗೆ ಗೊತ್ತಿತ್ತು. ವೈಮಾನಿಕ ದಾಳಿಯಲ್ಲಿ ನಾಗರಿಕರಲ್ಲಿ ಹೆಚ್ಚಿನ ಸಾವು-ನೋವು ಉಂಟಾಗುವುದನ್ನು ತಪ್ಪಿಸಲು ನಮ್ಮ ಯೋಧರ ಪ್ರಾಣಗಳನ್ನೇ ಅಪಾಯಕ್ಕೆ ಒಡ್ಡಿ ವಿಶೇಷ ಪಡೆಗಳ ದಾಳಿಯನ್ನು ನಾವು ಆಯ್ಕೆ ಮಾಡಿಕೊಂಡೆವು,’ ಎಂದು ಹೇಳಿದ ಬೈಡೆನ್, ‘ನಾಗರಿಕ ಸಾವು-ನೋವುಗಳನ್ನು ಕಡಿಮೆ ಮಾಡಲು ನಾವು ಹೀಗೆ ಮಾಡಬೇಕಾಯಿತು’ ಎಂದರು.
‘ನಮ್ಮ ಪಡೆಗಳು ಹಾಜಿ ಅಬ್ದುಲ್ಲಾನನ್ನು ಜೀವಂತವಾಗಿ ಸೆರೆಹಿಡಿಯಲು ಅವನಿದ್ದ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಹತಾಷೆಭರಿತ ಹೇಡಿತನದಿಂದ ತನ್ನ ಸ್ವಂತ ಕುಟುಂಬ ಅಥವಾ ಕಟ್ಟಡದಲ್ಲಿದ್ದ ಇತರ ಜನರ ಜೀವಗಳ ಬಗ್ಗೆ ಕಿಂಚಿತ್ತೂ ಯೋಚಿಸದೆ, ತನ್ನನ್ನು ತಾನು ಸ್ಫೋಟಿಸಿಕೊಂಡು ಸಾಯಲು ನಿರ್ಧರಿಸಿದ. ತಾನು ಎಸಗಿದ ಹೀನ ಅಪರಾಧಗಳಿಗೆ ವಿಚಾರಣೆ ಎದುರಿಸುವ ಬದಲು ಕುಟುಂಬದ ಹಲವಾರು ಸದಸ್ಯರನ್ನು ತನ್ನೊಂದಿಗೆ ಕರೆದುಕೊಂಡು ಕಟ್ಟಡದ ಮೂರನೇ ಮಹಡಿಯಲ್ಲಿ ಸ್ಫೋಟಿಸಿಕೊಂಡು ಸುಟ್ಟುಹೋದ. ಅಲ್ ಭಗ್ದಾದಿ ಸಹ ಹೀಗೆಯೇ ಮರಣವನ್ನಿಪ್ಪಿದ್ದ,’ ಎಂದು ಬೈಡೆನ್ ಹೇಳಿದರು.
“As our troops approached to capture the terrorist, in a final act of desperate cowardice with no regard to the lives of his own family or others in the building, he chose to blow himself up,” Pres. Biden says after U.S. raid kills ISIS leader. https://t.co/ul0UcRntyG pic.twitter.com/DZ7JzGLDeL
— ABC News Politics (@ABCPolitics) February 3, 2022
ಇದಕ್ಕೂ ಮುನ್ನ ಗುರುವಾರ ಬೆಳಗ್ಗೆ, ಅಧ್ಯಕ್ಷ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಆಧ್ಯಕ್ಷರ ರಾಷ್ಟ್ರೀಯ ಭದ್ರತಾ ದಳದ ಸಿಬ್ಬಂದಿ ಅಮೆರಿಕದ ಮಿಲಿಟರಿ ಪಡೆಗಳು ನಡೆಸುತ್ತಿದ್ದ ದಾಳಿಯನ್ನು ವೀಕ್ಷಿಸುತ್ತಾ ಕುಳಿತಿದ್ದ ವಿಡಿಯೋವನ್ನು ವ್ಹೈಟ್ ಹೌಸ್ ಟ್ವೀಟ್ ಮಾಡಿತ್ತು.
President Biden, Vice President Harris and members of the President’s national security team observe the counterterrorism operation responsible for removing from the battlefield Abu Ibrahim al-Hashimi al-Qurayshi — the leader of ISIS. pic.twitter.com/uhK75WeUme
— The White House (@WhiteHouse) February 3, 2022
‘ಮುಂದಿನ ದಿನಗಳಲ್ಲಿ ನಾವು ಜಾಗರೂಕರಾಗಿತ್ತೇವೆ ಮತ್ತು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತೇವೆ. ಕಳೆದರಾತ್ರಿಯ ಕಾರ್ಯಾಚರಣೆ ಒಬ್ಬ ಪ್ರಮುಖ ಭಯೋತ್ಪಾದಕನ ಕತೆ ಮುಗಿಸಿದೆ ಮತ್ತು ವಿಶ್ವದೆಲ್ಲೆಡೆ ಹಬ್ಬಿರುವ ಭಯೋತ್ಪಾದಕರಿಗೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ,’ ಎಂದು ಬೈಡೆನ್ ಹೇಳಿದರು. ಅಧ್ಯಕ್ಷರ ಭಾಷಣಕ್ಕೆ ಮೊದಲೇ, ಭಯೋತ್ಪಾದನೆದಮನ ಅಂತ ಈ ಕಾರ್ಯಾಚನೆಯನ್ನು ಉಲ್ಲೇಖಿಸಿರುವ ಪೆಂಟಗನ್ ಬುಧವಾರ ನಡೆಸಿದ ದಾಳಿ ಯಶ ಕಂಡಿದೆ ಅಂತ ಹೇಳಿತ್ತಾದರೂ ವಿವರಗಳನ್ನು ನೀಡಿರಲಿಲ್ಲ
‘ಯುಎಸ್ ಸೆಂಟ್ರಲ್ ಕಮಾಂಡ್ ನಿಯಂತ್ರಣದಲ್ಲಿರುವ ಯುಎಸ್ ವಿಶೇಷ ಕಾರ್ಯಾಚರಣೆ ಪಡೆಗಳು ಸಿರಿಯಾದ ವಾಯುವ್ಯ ಭಾಗದಲ್ಲಿ ಇಂದು ಸಂಜೆ ಭಯೋತ್ಪಾದನೆ ದಮನ ಕಾರ್ಯಾಚರಣೆಯನ್ನು ನಡೆಸಿವೆ. ಕಾರ್ಯಾಚರಣೆ ಯಶಸ್ವಿಯಾಗಿದೆ. ಯುಎಸ್ ಪಡೆಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿವರಗಳು ಲಭ್ಯವಾಗುತ್ತಿದ್ದಂತೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುವುದು,’ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.
ಯುಎಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಅಮೆರಿಕ ಪಡೆಗಳ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ತಲೆದೋರಿದ್ದರಿಂದ ಅದನ್ನು ಸ್ಫೋಟಿಸಲಾಯಿತು
ಕಾರ್ಯಚರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ವಿಷಯಗಳು ಹರಿದಾಡುತ್ತವೆಯಾದರೂ ದಾಳಿಯಲ್ಲಿ ಭೂಪಡೆ ಮತ್ತು ಹೆಲಿಕಾಪ್ಟರ್ ಗಳನ್ನು ಬಳಸಲಾಯಿತೇ ಎನ್ನುವ ಬಗ್ಗೆ ಯಾವುದೇ ವಿವರ ಲಭ್ಯವಾಗಿಲ್ಲ.
ಟರ್ಕಿಯ ಗಡಿಗೆ ಹತ್ತಿರದಲ್ಲಿರುವ ಪಶ್ಚಿಮ ಸಿರಿಯಾದ ಇದ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕ ಮಿಲಿಟರಿ ಪಡೆಗಳು ಕಾರ್ಯಾಚರಣೆ ನಡೆಸಿದವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಮಾಡಲಾಗಿದೆ. ಅತ್ಮೆ ಮತ್ತು ದರ್ ಬಾಲೌತ್ ಎಂಬ ಪಟ್ಟಣಗಳಲ್ಲಿ ಮದ್ದು ಗುಂಡಿನ ಮೊರೆತ ಮತ್ತು ರಾತ್ರಿಯ ಸಮಯ ತೀರ ಕೆಳಮಟ್ಟದಲ್ಲಿ ಹಾರಾಡುತ್ತಿರುವುದು ತೋರಿಸುವ ವಿಡಿಯೋಗಳನ್ನು ಸಹ ಪೋಸ್ಟ್ ಮಾಡಲಾಗಿದೆ.
ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 13 ಜನ ಸತ್ತಿದ್ದಾರೆಂದು ವ್ಹೈಟ್ ಹೆಲ್ಮೆಟ್ಸ್ ಎಂದ ಕರೆಸಿಕೊಳ್ಳುವ ಸಿರಿಯನ್ ಸಿವಿಲ್ ಡಿಫೆನ್ಸ್ ಹೇಳಿದೆ.
ಯುನೈಟೆಡ್ ಕಿಂಗ್‌ಡಂ ನೆಲೆಸಿರುವ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಸ್ಥಳೀಯ ಮೂಲಗಳ ಆಧಾರದ ಮೇಲೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಬುಧವಾರದ ಕಾರ್ಯಾಚರಣೆಯಲ್ಲಿ ಕನಿಷ್ಟ ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಒಟ್ಟು ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ವರದಿಯಾಗಿರುವ ನಾಗರಿಕ ಸಾವು-ನೋವುಗಳು ಯುಎಸ್ ಮಿಲಿಟರಿ ಹಾರಿಸಿದ ಗುಂಡಿನ ಪರಿಣಾಮದಿಂದಲ್ಲ ಆದರೆ ಕಾರ್ಯಾಚರಣೆಯ ಆರಂಭದಲ್ಲಿ ಸ್ಫೋಟಕ ಸಾಧನವನ್ನು ಸಿಡಿಸಿದಾಗ ಸಂಭವಿಸಿವೆ ಎಂದು ಯುಎಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿರಿಯಾದ ಪೂರ್ವಭಾಗದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಅಮೆರಿಕದ ಸುಮಾರು 1,000 ಮಿಲಿಟರಿ ಪಡೆಗಳು ಐಸಿಸ್ ವಿರುದ್ಧ ನಡೆಸಿದ ದಾಳಿಗೆ ಬೆಂಬಲ ವ್ಯಕ್ತಪಡಿಸಿವೆ.
ಅಮೆರಿಕದ ಮಿಲಿಟರಿ ಪಡೆಗಳು ವಾಯುವ್ಯ ಸಿರಿಯಾದಲ್ಲಿನ ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ವಿಶೇಷವಾಗಿ ಇದ್ಲಿಬ್ ಪ್ರಾಂತ್ಯದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ, ಇದು ಕಳೆದ ದಶಕದಲ್ಲಿ ಉಗ್ರಗಾಮಿಗಳ ಸುರಕ್ಷಿತ ತಾಣವಾಗಿತ್ತು. ಆದರೆ ಇದ್ಲಿಬ್‌ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಸಂದರ್ಭಕ್ಕೆ ಅನುಗುಣವಾಗಿ ನಡೆಸಲಾಗುತ್ತಿದೆ. ಡ್ರೋನ್ ದಾಳಿಗಳೊಂದಿಗೆ ವಿವಿಧ ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳನ್ನು ಗುರಿಯಾಗಿಸುತ್ತಿದ್ದಾರೆ.
ಅಕ್ಟೋಬರ್ 27, 2019 ರಂದು ಟರ್ಕಿ ಗಡಿಗೆ ಸಮೀಪವಿರುವ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಐಸಿಸ್‌ನ ಪರಮೋನ್ನತ ನಾಯಕ ಅಬು ಬಕರ್ ಅಲ್ ಭಗ್ದಾದಿಯನ್ನು ಕೊಂದಿದ್ದು ಭೂ ದಾಳಿಯ ಉನ್ನತ ಶ್ರೇಣಿ ಕಾರ್ಯಾಚರಣೆಯಾಗಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ಪ್ರಭಾವಿ ನಾಯಕನೆಂಬ ಮನ್ನಣೆ, ಏಂಜೆಲಾ ಮರ್ಕೆಲ್, ಜೋ ಬೈಡೆನ್ಗಿಂತ ಹೆಚ್ಚು ಮಾನ್ಯತೆ
Published On - 1:39 am, Fri, 4 February 22