ಗಾಜಾ(Gaza)ದ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ(Bomb Attack) ನಡೆದಿದ್ದು, ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳ ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಇಸ್ರೇಲಿ ವಾಯುದಾಳಿಯಿಂದ ಸ್ಫೋಟ ಸಂಭವಿಸಿದೆ ಎಂದು ಹಮಾಸ್ ಹಿಡಿತದಲ್ಲಿರುವ ಗಾಜಾ ಪಟ್ಟಿಯಲ್ಲಿರುವ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಇಸ್ರೇಲಿ ಮಿಲಿಟರಿ ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಗುಂಪನ್ನು ದೂಷಿಸಿದೆ.
ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ಮಾತನಾಡಿ 500ಕ್ಕೂ ಅಧಿಕ ಮಂದು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ಇನ್ನೂ ಅವಶೇಷಗಳಿಂದ ದೇಹಗಳನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದರು. ಗಾಜಾದ ಆರೋಗ್ಯ ಅಧಿಕಾರಿಗಳು ಇಸ್ರೇಲ್‌ನ 11 ದಿನಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 3,000 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಈ ದಾಳಿಯನ್ನು ಅಮೆರಿಕ ಅಧ್ಯಕ್ಷ ಜೋ ಬಿಡನ್ ಖಂಡಿಸಿದ್ದಾರೆ,ಗಾಜಾದ ಅಲ್ ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ಸಂಭವಿಸಿದ ಸ್ಫೋಟ ಮತ್ತು ಅದರ ಪರಿಣಾಮವಾಗಿ ಸಂಭವಿಸಿದ ಭೀಕರ ಪ್ರಾಣಹಾನಿಯಿಂದ ನಾನು ಆಕ್ರೋಶಗೊಂಡಿದ್ದೇನೆ ಮತ್ತು ತೀವ್ರವಾಗಿ ದುಃಖಿತನಾಗಿದ್ದೇನೆ,ಇಸ್ರೇಲಿ ಪ್ರಧಾನಿ ನೇತನ್ಯಾಹು ಅವರೊಂದಿಗೆ ಮಾತನಾಡಿದ್ದೇನೆ ಎಂದರು.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಇಸ್ರೇಲ್ಗೆ ಭೇಟಿ ನೀಡುವ ವಿಚಾರವನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ದೃಢಪಡಿಸಿದ್ದಾರೆ. ಇಸ್ರೇಲ್ ತನ್ನ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಮತ್ತು ಇದು ಇಸ್ಲಾಮಿಕ್ ಜಿಹಾದ್ ಗುಂಪಿನಿಂದ ನಡೆದಿದೆ ಹೇಳಿದೆ. ಆಸ್ಪತ್ರೆಯ ಮೇಲೆ ಹಮಾಸ್ ಸ್ವತಃ ಬಾಂಬ್ ಹಾಕಿಕೊಂಡಿದೆ ಎಂದು ಇಸ್ರೇಲ್ ರಕ್ಷಣಾಪಡೆ ಹೇಳಿದೆ.
ಮತ್ತಷ್ಟು ಓದಿ: ಇಸ್ರೇಲ್ ಗಾಜಾದಲ್ಲಿ ಬಾಂಬ್ ದಾಳಿ ನಿಲ್ಲಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಿದ್ಧ ಎಂದ ಹಮಾಸ್
ಆಸ್ಪತ್ರೆಯ ಮೇಲೆ ರಾಕೆಟ್ ಬೀಳುತ್ತಿರುವ ವಿಡಿಯೋವನ್ನು ಇಸ್ರೇಲಿ ಸೇನೆ ಬಿಡುಗಡೆ ಮಾಡಿದೆ. ಹಮಾಸ್ ದಾಳಿ ನಡೆಸುತ್ತಿದ್ದಾಗ ಆಸ್ಪತ್ರೆಯ ಮೇಲೆ ರಾಕೆಟ್ ಬಿದ್ದಿದೆ ಎಂದು ಇಸ್ರೇಲಿ ಸೇನೆ ಹೇಳಿಕೊಂಡಿದೆ.
ಇಸ್ರೇಲ್(Israel) ಗಾಜಾದಲ್ಲಿ ಬಾಂಬ್ ದಾಳಿ ನಿಲ್ಲಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ. ಅಕ್ಟೋಬರ್ 7 ರಂದು ಹಮಾಸ್(Hamas) ಮೊದಲ ಬಾರಿಗೆ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್ಗಳಿಂದ ದಾಳಿ ನಡೆಸಿತ್ತು. ಅಷ್ಟೇ ಅಲ್ಲದೆ ಕಂಡ ಕಂಡಲ್ಲಿ ಜನರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿ ನಡೆಸಿದೆ. ಒಟ್ಟಾರೆ ಘಟನೆಯಲ್ಲಿ ಇದುವರೆಗೆ 4 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಗಾಜಾ ಮೇಲೆ ನಾವು ಬಾಂಬ್ ದಾಳಿ ನಡೆಸುತ್ತೇವೆ ನಾಗರಿಕರೆಲ್ಲರೂ ಗಾಜಾದ ದಕ್ಷಿಣ ಭಾಗಕ್ಕೆ ಹೋಗಿ ಎಂದು ಇಸ್ರೇಲ್ ಹೇಳಿತ್ತು ಹೀಗಾಗಿ 10 ಲಕ್ಷಕ್ಕೂ ಹೆಚ್ಚು ಮಂದಿ ಗಾಜಾವನ್ನು ತೊರೆದಿದ್ದರು. ಇಸ್ರೇಲ್ ಗಾಜಾದ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದರೆ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಹಿರಿಯ ಹಮಾಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 am, Wed, 18 October 23