ಆಪರೇಷನ್ ಸಿಂಧೂರ್ ದೊಡ್ಡ ದಾಳಿಯಾಗಿತ್ತು, ಪಾಕಿಸ್ತಾನವನ್ನೇ ದಿಗ್ಭ್ರಮೆಗೊಳಿಸಿತು; ಒಪ್ಪಿಕೊಂಡ ಲಷ್ಕರ್ ಕಮಾಂಡರ್

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸು, ಪಾಕಿಸ್ತಾನದ ಭಯೋತ್ಪಾದನಾ ನೀತಿಯ ಬಗ್ಗೆ ಲಷ್ಕರ್ ಕಮಾಂಡರ್ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಹಫೀಜ್ ಅಬ್ದುಲ್ ರೌಫ್, ಭಾರತದ ಆಪರೇಷನ್ ಸಿಂಧೂರ್ ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಕೇಂದ್ರಕ್ಕೆ ವಿನಾಶಕಾರಿ ಹೊಡೆತವನ್ನು ನೀಡಿತು ಎಂದು ಒಪ್ಪಿಕೊಂಡಿದ್ದಾರೆ.

ಆಪರೇಷನ್ ಸಿಂಧೂರ್ ದೊಡ್ಡ ದಾಳಿಯಾಗಿತ್ತು, ಪಾಕಿಸ್ತಾನವನ್ನೇ ದಿಗ್ಭ್ರಮೆಗೊಳಿಸಿತು; ಒಪ್ಪಿಕೊಂಡ ಲಷ್ಕರ್ ಕಮಾಂಡರ್
Hafiz Abdur Rauf

Updated on: Jan 16, 2026 | 4:46 PM

ನವದೆಹಲಿ, ಜನವರಿ 16: 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ (Operation Sindoor) ಮೇ 6 ಮತ್ತು 7ರ ಮಧ್ಯರಾತ್ರಿಯ ದಾಳಿಯ ಸಮಯದಲ್ಲಿ ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಿತ್ತು ಎಂದು ಲಷ್ಕರ್-ಎ-ತೈಬಾ (ಎಲ್‌ಇಟಿ) ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ ರೌಫ್, ಆಪರೇಷನ್ ಸಿಂಧೂರ್ ಅನ್ನು ಪ್ರಮುಖ ದಾಳಿ ಎಂದು ಕರೆದಿದ್ದಾರೆ. ಆ ದಾಳಿ ಪಾಕಿಸ್ತಾನ (Pakistan) ಸರ್ಕಾರವನ್ನು ದಿಗ್ಭ್ರಮೆಗೊಳಿಸಿತು, ಆದರೆ, ಪಾಕಿಸ್ತಾನೀಯರನ್ನು ಹೇಗೋ ಅಲ್ಲಾಹ್ ರಕ್ಷಿಸಿದನು ಎಂದು ಹೇಳಿದ್ದಾರೆ.

“ಮೇ 6 ಮತ್ತು 7ರಂದು ಮುರಿಡ್ಕೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಮಸೀದಿಯನ್ನು ಗುರಿಯಾಗಿಸಿಕೊಂಡು ಕೆಡವಲಾಯಿತು. ಅದು ಒಂದು ದೊಡ್ಡ ದಾಳಿಯಾಗಿತ್ತು, ಆದರೆ ಅಲ್ಲಾಹ್ ನಮ್ಮನ್ನು ರಕ್ಷಿಸಿದನು. ಅಲ್ಲಿ ಮಕ್ಕಳು ಇರಲಿಲ್ಲ” ಎಂದು ಅವರು ಹೇಳುವ ವಿಡಿಯೋ ವೈರಲ್ ಆಗಿದೆ. “ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೋದಿ ಹೇಳಿದರು, ಆದರೆ ವಾಸ್ತವದಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಾಗಿತ್ತು, ಯುದ್ಧದ ನಿಯಮಗಳು ಬದಲಾಗಿವೆ” ಎಂದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಭಾರತದಿಂದ ದೇವರೇ ನಮ್ಮನ್ನು ಕಾಪಾಡಿದ; ಪಾಕ್ ಸೇನಾ ಮುಖ್ಯಸ್ಥ ಹೇಳಿದ್ದೇನು?

ಕಳೆದ ವರ್ಷ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎಲ್‌ಇಟಿಯ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ