Japan ಅಚ್ಚರಿ- ಜಪಾನ್ನಲ್ಲಿ 7 ಸಾವಿರ ಹೊಸ ದ್ವೀಪಗಳು ಪತ್ತೆ; ಈ ದೇಶದ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು?
7,000 New Islands In Japan: ಜಪಾನ್ ದೇಶದಲ್ಲಿ ಕಳೆದ ವರ್ಷದಿಂದ ನಡೆಸಿದ ಭೌಗೋಳಿಕ ಸಮೀಕ್ಷೆಯಲ್ಲಿ 7 ಹೊಸ ದ್ವೀಪಗಳು ಸಿಕ್ಕಿವೆ. ಇದು ಆ ದೇಶದ ಭೌಗೋಳಿಕ ವ್ಯಾಪ್ತಿಯಲ್ಲೇ ಸಿಕ್ಕಿರುವ ಐಲೆಂಡ್ಗಳು. ಇದರೊಂದಿಗೆ ಆ ಪುಟ್ಟ ದೇಶದಲ್ಲಿರುವ ದ್ವೀಪಗಳ ಸಂಖ್ಯೆ 14 ಸಾವಿರಕ್ಕೂ ಹೆಚ್ಚಾಗಿದೆ.
ಟೋಕಿಯೋ: ನಮ್ಮ ಭೂಮಿ ಅಗಣಿತ ಅಚ್ಚರಿಗಳ ಆಗರ. ಮನುಷ್ಯ ಚಂದ್ರ, ಮಂಗಳದ ಪ್ರದೇಶಗಳನ್ನು ಅನ್ವೇಷಿಸುತ್ತಿದ್ದಾನಾದರೂ ಸ್ವಂತ ಭೂಮಿಯಲ್ಲೇ (Earth) ಆತನ ಅರಿವಿಗೆ ಬಾರದಿರುವ ಅಚ್ಚರಿಗಳು ಹಲವುಂಟು. ದಿನವೂ ಹೊಸ ಹೊಸ ಪ್ರಭೇದಗಳ ಜೀವಸಂಕುಲಗಳು ಪತ್ತೆಯಾಗುತ್ತಿರುತ್ತವೆ. ಸಮುದ್ರಗರ್ಭದಲ್ಲಿ ಹುದುಗಿಹೋಗಿರುವ ಹಳೆಯ ನಗರಗಳನ್ನೇ ಪತ್ತೆ ಮಾಡುವುದು ಕಷ್ಟವಾಗಿದೆ. ಇದೇ ವೇಳೆ, ಜಪಾನ್ ದೇಶದಲ್ಲಿ (Japan) ಬಹಳ ಅಚ್ಚರಿ ಮೂಡಿಸುವ ಬೆಳವಣಿಗೆಯಾಗಿದೆ. ಆ ದೇಶದ ಭೌಗೋಳಿಕ ವ್ಯಾಪ್ತಿಯಲ್ಲಿ ಬರೋಬ್ಬರಿ ಹೊಸ 7 ಸಾವಿರ ದ್ವೀಪಗಳು ಪತ್ತೆಯಾಗಿವೆ. ಒಂದಲ್ಲ ಎರಡಲ್ಲ, ಏಳು ಸಾವಿರ… ಈ ದ್ವೀಪಗಳು ಈವರೆಗೂ ಯಾರ ಕಣ್ಣಿಗೂ ಬಿದ್ದಿಲ್ಲ ಎನ್ನುವುದೇ ಅಚ್ಚರಿ.
ಜಪಾನ್ ದೇಶದಲ್ಲಿ ನಡೆದ ಭೌಗೋಳಿಕ ಸಮೀಕ್ಷೆಯಲ್ಲಿ (Geographical Survey) ಈ ಅಚ್ಚರಿ ಸಿಕ್ಕಿದೆ. ಇದು 1987ರ ನಂತರ ಜಪಾನ್ ಸರ್ಕಾರ ನಡೆಸಿದ ಮೊದಲ ಭೌಗೋಳಿಕ ಸಮೀಕ್ಷೆ. ಜಪಾನ್ನಲ್ಲಿ ಈ ಮೊದಲೇ ಇದ್ದ ದ್ವೀಪಗಳ ಸಂಖ್ಯೆ 6,852. ಈಗ ಪತ್ತೆಯಾಗಿರುವ ದ್ವೀಪಗಳನ್ನು ಲೆಕ್ಕ ಹಾಕಿದರೆ ಆ ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು ದ್ವೀಪಗಳಿದ್ದಂತಾಗುತ್ತದೆ.
ಪುಟ್ಟ ದೇಶ ಜಪಾನ್
ಜಪಾನ್ ದೇಶ ಸುಮಾರು 2,34,964 ಚದರ ಕಿಮೀ ಭೌಗೋಳಿಕ ವಿಸ್ತೀರ್ಣ ಇರುವ ಪ್ರದೇಶ. ಅಂದರೆ ಕರ್ನಾಟಕಕ್ಕಿಂತ ತುಸು ದೊಡ್ಡದು. 12 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದೆ. 1987ರ ನಂತರ ಇಲ್ಲಿ ಭೌಗೋಲಿಕ ಸಮೀಕ್ಷೆ ಆಗಿಲ್ಲದಿರುವುದರಿಂದ ವರ್ಷದ ಹಿಂದೆ ಇಲ್ಲಿನ ಸಂಸತ್ನಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಜಪಾನ್ನಲ್ಲಿರುವ ದ್ವೀಪಗಳ ಸಂಖ್ಯೆ ನಿಖರವಾಗಿಲ್ಲ. ಇನ್ನೂ ಹೆಚ್ಚು ಐಲೆಂಡ್ಗಳಿರಬಹುದು ಎಂದು ಹಲವು ಸಂಸದರು ಶಂಕಿಸಿ, ಈ ಬಗ್ಗೆ ಸರ್ವೆ ಆಗಬೇಕೆಂದು ಪಟ್ಟುಹಿಡಿದಿದ್ದರು.
ಇದನ್ನೂ ಓದಿ: Ancient Fridge: 5000 ವರ್ಷಗಳ ಹಿಂದಿನ ಪುರಾತನ ಹೋಟೆಲಿನ ಅವಶೇಷಗಳು ಪತ್ತೆ
ಅದರಂತೆ ಜಪಾನ್ನ ಜಿಯೋಸ್ಟಾಷಿಯಲ್ ಇನ್ಫಾರ್ಮೇಷನ್ ಅಥಾರಿಟಿ (Geospatial Information Authority of Japan) ಹೊಸದಾಗಿ ಭೌಗೋಳಿಕ ಸಮೀಕ್ಷೆ ನಡೆಸಿತು. ಆಗ 7 ಹೊಸ ದ್ವೀಪಗಳು ಜಪಾನ್ ವ್ಯಾಪ್ತಿಯಲ್ಲಿ ಇರುವುದು ಗೊತ್ತಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ ಹೊಸದಾಗಿ 7 ದ್ವೀಪಗಳು ಸಿಕ್ಕಿರುವುದರಿಂದ ಜಪಾನ್ನ ಭೂಪ್ರದೇಶಗಳು ಹೆಚ್ಚಾದಂತಾಗುವುದಿಲ್ಲ. ಆದರೆ, ಒಟ್ಟಾರೆ ಭೂಭಾಗದ ವ್ಯಾಪ್ತಿಯಲ್ಲಿ ಏನೇನಿವೆ ಎಂಬ ನಿಖರ ಮಾಹಿತಿ ಸಿಕ್ಕಂತಾಗುತ್ತದೆ. ಕಂಪ್ಯೂಟರ್ ಆಧರಿತ ಎಲೆಕ್ಟ್ರಾನಿಕ್ ಲ್ಯಾಂಡ್ ಮ್ಯಾಪ್ನ ಸಹಾಯದಿಂದ ಜಪಾನ್ ಸರ್ಕಾರ ಶೀಘ್ರದಲ್ಲೇ ತನ್ನ ಭೂಪ್ರದೇಶದ ನಿಖರ ಅಂಕಿ ಅಂಶವನ್ನು ಬಿಡುಗಡೆ ಮಾಡಲಿದೆ.
ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಜಪಾನ್ನ 14 ಸಾವಿರ ದ್ವೀಪಗಳು ತೀರಾ ಹೆಚ್ಚಲ್ಲ. ಭಾರತದಲ್ಲೂ 1,200 ದ್ವೀಪಗಳಿವೆ. ನಾರ್ವೆ ಮತ್ತು ಸ್ವೀಡನ್ ದೇಶಗಳಲ್ಲಿ 2 ಲಕ್ಷಕ್ಕೂ ಹೆಚ್ಚು ದ್ವೀಪಗಳಿವೆ. ನಮ್ಮ ಅಂಡಮಾನ್ ನಿಕೋಬಾರ್ ಪ್ರದೇಶದಲ್ಲೇ ನೂರಾರು ದ್ವೀಪಗಳು ಒಳಗೊಂಡಿವೆ.