ಜಪಾನ್ ಮಾಜಿ ಪಿಎಂ ಶಿಂಜೋ ಅಬೆ ಅಂತ್ಯಕ್ರಿಯೆ ವಿರೋಧಿಸಿ ಪ್ರಧಾನ ಮಂತ್ರಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡ ವ್ಯಕ್ತಿ

| Updated By: ಸುಷ್ಮಾ ಚಕ್ರೆ

Updated on: Sep 21, 2022 | 8:51 AM

ಮುಂದಿನ ವಾರ ನಡೆಯಲಿರುವ ಶಿಂಜೋ ಅಬೆ ಅಂತ್ಯಕ್ರಿಯೆಗೆ ವಿರೋಧಿಸುವುದಾಗಿ ಪೊಲೀಸರಿಗೆ ತಿಳಿಸಿದ ನಂತರ ಆ ವ್ಯಕ್ತಿ ಸ್ವತಃ ತಮಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದಾರೆ.

ಜಪಾನ್ ಮಾಜಿ ಪಿಎಂ ಶಿಂಜೋ ಅಬೆ ಅಂತ್ಯಕ್ರಿಯೆ ವಿರೋಧಿಸಿ ಪ್ರಧಾನ ಮಂತ್ರಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡ ವ್ಯಕ್ತಿ
ಶಿಂಜೋ ಅಬೆ
Follow us on

ಟೋಕಿಯೊ: ಹತ್ಯೆಗೀಡಾದ ಮಾಜಿ ಪ್ರಧಾನಿ ಶಿಂಜೋ ಅಬೆ (Shinzo Abe) ಅವರ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ನಂತರ ಇಂದು ಜಪಾನ್ ಪ್ರಧಾನಿ ಕಚೇರಿ (Japan PM Office) ಬಳಿ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು, ಪ್ರಧಾನಿ ಕಚೇರಿ ಮತ್ತು ಸಂಪುಟ ಕಚೇರಿ ಈ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಮುಂದಿನ ವಾರ ನಡೆಯಲಿರುವ ಶಿಂಜೋ ಅಬೆ ಅಂತ್ಯಕ್ರಿಯೆಗೆ ವಿರೋಧಿಸುವುದಾಗಿ ಪೊಲೀಸರಿಗೆ ತಿಳಿಸಿದ ನಂತರ ಆ ವ್ಯಕ್ತಿ ಸ್ವತಃ ತಮಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಈ ವೇಳೆ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಅಂತ್ಯಕ್ರಿಯೆಗೆ ತನ್ನ ವಿರೋಧವನ್ನು ವ್ಯಕ್ತಪಡಿಸುವ ವ್ಯಕ್ತಿಯ ಬಳಿ ಒಂದು ಚೀಟಿಯೂ ಕಂಡುಬಂದಿದೆ. ಆ ಸ್ಥಳದಲ್ಲಿ ಹುಲ್ಲು ಮತ್ತು ಗಿಡಗಳು ಸುಟ್ಟುಹೋಗಿತ್ತು. ಜಪಾನ್‌ನ ಸುದೀರ್ಘ ಸೇವೆ ಸಲ್ಲಿಸಿದ ಮಾಜಿ ಪ್ರಧಾನ ಮಂತ್ರಿ ಶಿಂಜೋ ಅಬೆ ಜುಲೈ 8ರಂದು ಪ್ರಚಾರ ಮಾಡುವಾಗ ಅವರಿಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಅವರ ಸಾರ್ವಜನಿಕ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಜಪಾನ್ ನಾಯಕ ಶಿಂಜೋ ಅಬೆ ಅಂತ್ಯಕ್ರಿಯೆ ಸಮಾರಂಭದಲ್ಲಿ ಮೋದಿ ಭಾಗವಹಿಸುವ ಸಾಧ್ಯತೆ: ವರದಿ

ಶಿಂಜೋ ಅಬೆ ಜಪಾನ್‌ನ ಅತ್ಯಂತ ಪ್ರಸಿದ್ಧ ರಾಜಕಾರಣಿಯಾಗಿದ್ದರು. 2020ರಲ್ಲಿ ಆರೋಗ್ಯದ ಕಾರಣಗಳಿಗಾಗಿ ರಾಜೀನಾಮೆ ನೀಡಿದ ನಂತರ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು ಮತ್ತು ಜನರೊಂದಿಗೆ ಬೆರೆಯುತ್ತಿದ್ದರು. ಅವರು ನಾರಾ ಪ್ರದೇಶದಲ್ಲಿ ಮೇಲ್ಮನೆ ಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರು. ಅವರು ಏಕೀಕರಣ ಚರ್ಚ್‌ನೊಂದಿಗೆ ಸಂಬಂಧವನ್ನು ಹೊಂದಿದ್ದಾರೆಂದು ನಂಬಿದ್ದ ವ್ಯಕ್ತಿ ಶಿಂಜೋ ಅಬೆ ಮೇಲೆ ಗುಂಡು ಹಾರಿಸಿ ಕೊಂದಿದ್ದರು. ಈ ಹತ್ಯೆಯು ಆಘಾತ ಮತ್ತು ಅಂತಾರಾಷ್ಟ್ರೀಯ ಖಂಡನೆಗೆ ಕಾರಣವಾಯಿತು.

ಶಿಂಜೋ ಅಬೆಯ ಅಂತ್ಯಕ್ರಿಯೆ ಸಮಾರಂಭಕ್ಕೆ ಕನಿಷ್ಠ 1.7 ಬಿಲಿಯನ್ ಯೆನ್ (12 ಮಿಲಿಯನ್ ಡಾಲರ್) ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಶಿಂಜೋ ಅಬೆ ಅವರ ಅಂತಿಮ ಸಂಸ್ಕಾರವು ಟೋಕಿಯೊದ ಬುಡೋಕನ್‌ನಲ್ಲಿ ನಡೆಯಲಿದೆ. ಇದು ಸಂಗೀತ ಕಚೇರಿಗಳು ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆಯುವ ದೊಡ್ಡ ಸ್ಥಳವಾಗಿದೆ. ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿದಂತೆ ವಿಶ್ವ ನಾಯಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ