Nanmadol Typhoon: ಜಪಾನ್‌ಗೆ ಅಪ್ಪಳಿಸಿದ ಪ್ರಬಲ ಚಂಡಮಾರುತ; ಲಕ್ಷಾಂತರ ಜನರ ಸ್ಥಳಾಂತರ
ನನ್ಮಾಡೋಲ್ ಎಂದು ಹೆಸರಿಸಲಾದ ಈ ಚಂಡಮಾರುತ ಯಕುಶಿಮಾದ ದಕ್ಷಿಣ ದ್ವೀಪದ ಸಮೀಪದಲ್ಲಿ ಇದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ.
ಟೋಕಿಯೊ: ಬಲವಾದ ಗಾಳಿ ಮತ್ತು ಭಾರೀ ಮಳೆಯೊಂದಿಗೆ ದಕ್ಷಿಣ ಜಪಾನ್‌ಗೆ ಇಂದು ಪ್ರಬಲ ಚಂಡಮಾರುತ (Nanmadol Typhoon) ಅಪ್ಪಳಿಸಿದೆ. ಈ ಚಂಡಮಾರುತದಿಂದ ಜಪಾನ್ನ ಭೂ ಸಾರಿಗೆ ಮತ್ತು ವಾಯು ಸಾರಿಗೆಯ ಮೇಲೂ ಪರಿಣಾಮ ಉಂಟಾಗಿದ್ದು, ಹಲವು ರೈಲು, ಬಸ್, ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಲಕ್ಷಾಂತರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ನನ್ಮಾಡೋಲ್ ಎಂದು ಹೆಸರಿಸಲಾದ ಈ ಚಂಡಮಾರುತ ಯಕುಶಿಮಾದ ದಕ್ಷಿಣ ದ್ವೀಪದ ಸಮೀಪದಲ್ಲಿ ಇದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ. ಇದರಿಂದ ಗಂಟೆಗೆ 162 ಕಿಲೋಮೀಟರ್ ವೇಗವಾಗಿ ಗಾಳಿ ಬೀಸುತ್ತಿದೆ. ಇದು ನಿಧಾನವಾಗಿ ಉತ್ತರಕ್ಕೆ ದೇಶದ ಪ್ರಮುಖ ದಕ್ಷಿಣ ದ್ವೀಪವಾದ ಕ್ಯುಶುಗೆ ತೆರಳಿದೆ. ಈ ಚಂಡಮಾರುತದಿಂದ ಕೆಲವೆಡೆ ಭೂಕುಸಿತವೂ ಉಂಟಾಗಿದೆ.
ಇದನ್ನೂ ಓದಿ: Viral Video: ಚಬಾ ಚಂಡಮಾರುತಕ್ಕೆ ಮುಳುಗಿದ ಹಡಗು, ನಾವಿಕರನ್ನು ರಕ್ಷಿಸುವ ರೋಚಕ ವಿಡಿಯೋ ವೈರಲ್
ಪೂರ್ವ ಜಪಾನ್ನಲ್ಲಿ ಚಂಡಮಾರುತದ ಪ್ರಭಾವದಿಂದ ಸೋಮವಾರ ಮಧ್ಯಾಹ್ನದ ವೇಳೆಗೆ 50 ಸೆಂಟಿಮೀಟರ್‌ಗಳಷ್ಟು (20 ಇಂಚು) ಮಳೆಯಾಗಲಿದೆ. ಇಲ್ಲಿಯವರೆಗೆ ಯಾವುದೇ ದೊಡ್ಡ ಪ್ರಮಾಣದ ಹಾನಿ ಅಥವಾ ಗಾಯಗಳಾಗಿಲ್ಲ. ಕಗೋಶಿಮಾ ಪ್ರಾಂತ್ಯದಲ್ಲಿ, 9,000ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಮಿಯಾಜಾಕಿ ಪ್ರಾಂತ್ಯದಲ್ಲಿ 4,700 ಜನರನ್ನು ಸ್ಥಳಾಂತರಿಸಲಾಗಿದೆ. ವಿದ್ಯುತ್ ತಂತಿಗಳು ಮತ್ತು ಸೌಲಭ್ಯಗಳಿಗೆ ಹಾನಿಯಾದ ಕಾರಣ ಕ್ಯುಶುವಿನಾದ್ಯಂತ 93,000ಕ್ಕೂ ಹೆಚ್ಚು ಮನೆಗಳಿಗೆ ಭಾನುವಾರ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.