Earthquake: ತೈವಾನ್ನಲ್ಲಿ ಪ್ರಬಲ ಭೂಕಂಪ; ಉರುಳಿದ ಮನೆಗಳು, ರೈಲು ಸಂಚಾರ ಅಸ್ತವ್ಯಸ್ತ
ಅವಶೇಷಗಳು ರೈಲ್ವೆ ಹಳಿಗಳ ಮೇಲೆ ಬಿದ್ದ ಕಾರಣ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಮೃತರು ಅಥವಾ ಗಾಯಗೊಂಡವರ ನಿಖರ ವಿವರಗಳು ಈವರೆಗೆ ಲಭ್ಯವಾಗಿಲ್ಲ.
ತೈಪೆ: ಚೀನಾದೊಂದಿಗಿನ ಸಂಘರ್ಷದಿಂದ ನಿರಂತರ ಸುದ್ದಿಯಲ್ಲಿದ್ದ ತೈವಾನ್ನಲ್ಲಿ (Taiwan) ಶನಿವಾರ (ಸೆ 17) ಸಂಜೆ ಪ್ರಬಲ ಭೂಕಂಪ (Strong Earthquake) ಸಂಭವಿಸಿದೆ. ಮನೆಗಳು ಮತ್ತು ಅಂಗಡಿಗಳ ಕಪಾಟಿನಲ್ಲಿದ್ದ ವಸ್ತುಗಳು ಉರುಳಿವೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿದ್ದು, ಅವಶೇಷಗಳು ರೈಲ್ವೆ ಹಳಿಗಳ ಮೇಲೆ ಬಿದ್ದ ಕಾರಣ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಮೃತರು ಅಥವಾ ಗಾಯಗೊಂಡವರ ನಿಖರ ವಿವರಗಳು ಈವರೆಗೆ ಲಭ್ಯವಾಗಿಲ್ಲ.
ತೈವಾನ್ ಪೂರ್ವ ಕರಾವಳಿಯ ತೈತುಂಗ್ ಕೌಂಟಿಯಲ್ಲಿ ಭೂಕಂಪದ ಕೇಂದ್ರ ಇತ್ತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 6.4 ಇತ್ತು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಹ್ಯುಲಿಯಾನ್ ಕೌಂಟಿಯಲ್ಲಿದ್ದ ಹಲವು ಮನೆಗಳು ಕುಸಿದಿವೆ. ಈ ಮನೆಗಳಲ್ಲಿ ಯಾರೂ ವಾಸವಿರಲಿಲ್ಲ. ಹೀಗಾಗಿ ಯಾವುದೇ ಸಾವುನೋವು ಸಂಭವಿಸಿರಲಿಲ್ಲ ಎಂದು ತೈವಾನ್ ಅಧಿಕಾರಿಗಳು ಹೇಳಿದ್ದಾರೆ.
ಹ್ಯುಲಿಯಾನ್ ಮತ್ತು ತೈತುಂಗ್ ಮಾರ್ಗಗಳಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಗಗಳ ಸುರಕ್ಷತೆಯ ತಪಾಸಣೆ ನಡೆದ, ಸಂಚಾರಕ್ಕೆ ಸುರಕ್ಷಿತ ಎಂದು ಘೋಷಣೆಯಾಗುವವರೆಗೆ ಸ್ಪೀಡ್ ರೈಲ್ಗಳ ಸಂಚಾರವೂ ರದ್ದುಗೊಳ್ಳಲಿದೆ. ರಾಜಧಾನಿ ತೈಪೆ ಮತ್ತು ದಕ್ಷಿಣ ತೈವಾನ್ನ ಪ್ರಮುಖ ನಗರ ಕ್ಯೊಶಿಯಂಗ್ಗಳಲ್ಲಿ ಮೆಟ್ರೊ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
Published On - 7:07 am, Sun, 18 September 22