ಹಮಾಸ್ ಉಗ್ರರ ಒತ್ತೆಯಾಳುಗಳಾಗಿದ್ದ ಇಬ್ಬರು ಅಮೆರಿಕ ಪ್ರಜೆಗಳ ಬಿಡುಗಡೆ, ಆರೋಗ್ಯ ವಿಚಾರಿಸಿದ ಜೋ ಬೈಡನ್
ಶುಕ್ರವಾರ ರಾತ್ರಿ ಅಮೆರಿಕದ ಪ್ರಜೆಗಳಾದ ಜುಡಿತ್ ತೈ ರಾನನ್ ಮತ್ತು ಅವರು ಮಗಳು ನಟಾಲಿ ಶೋಷನಾ ರಾನನ್ ಅವರು ಹಮಾಸ್ ಕೈಯಿಂದ ಬಿಡುಗಡೆಗೊಂಡು ಇಸ್ರೇಲ್ಗೆ ಬಂದಿದ್ದಾರೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ. ಈ ಇಬ್ಬರಲ್ಲಿಯೂ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಫೋನ್ ಮೂಲಕ ಮಾತನಾಡಿದ್ದಾರೆ.
ಹಮಾಸ್ ಭಯೋತ್ಪಾದಕರು (Hamas terrorists) ಮತ್ತು ಇಸ್ರೇಲ್ (Israel) ನಡುವೆ ನಿರಂತರ ಘರ್ಷಣೆಗಳು ನಡೆಯುತ್ತಿದೆ. ಈ ಯುದ್ಧದಿಂದ ಹಲವು ಸಾವು-ನೋವುಗಳು ಸಂಭವಿಸಿದೆ. ಎರಡು ರಾಷ್ಟ್ರಗಳು ಹಠದಲ್ಲಿ ನಿಂತಿರುವಂತೆ ಕಾಣುತ್ತಿದೆ. ನೀ ಬಿಡಲ್ಲ, ನಾನು ಬಿಡಲಾರೇ ಎಂಬಂತೆ ಎರಡು ಕಡೆ ಕಾದಾಟಗಳು ನಡೆಯುತ್ತಿದೆ. ಇದರ ಮಧ್ಯೆ ಹಮಾಸ್ ಉಗ್ರರು 200ಕ್ಕೂ ಹೆಚ್ಚು ಇಸ್ರೇಲ್ ಸೇರಿ ಅಮೆರಿಕಾದ ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ. ಒಂದಿಷ್ಟು ಜನರನ್ನು ಹಮಾಸ್ ಉಗ್ರರಿಂದ ಇಸ್ರೇಲ್ ಸೈನ್ಯ ಬಿಡಿಸಿಕೊಂಡು ಬಂದಿದೆ. ಆದರೆ ಇನ್ನು ಸುಮಾರಷ್ಟು ಜನ ಹಮಾಸ್ ಕೈ ವಶದಲ್ಲಿದ್ದಾರೆ. ಇನ್ನು ಅಮೆರಿಕದ ನಾಗರಿಕರು ಕೂಡ ಹಮಾಸ್ ವಶದಲ್ಲಿದ್ದು, ಇದೀಗ ಇಬ್ಬರು ಅಮೆರಿಕ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದೆ ಎಂದು ಇಸ್ರೇಲ್ ಸೈನ್ಯ ಹೇಳಿದೆ.
ಶುಕ್ರವಾರ ರಾತ್ರಿ ಅಮೆರಿಕದ ಪ್ರಜೆಗಳಾದ ಜುಡಿತ್ ತೈ ರಾನನ್ ಮತ್ತು ಅವರು ಮಗಳು ನಟಾಲಿ ಶೋಷನಾ ರಾನನ್ ಅವರು ಹಮಾಸ್ ಕೈಯಿಂದ ಬಿಡುಗಡೆಗೊಂಡು ಇಸ್ರೇಲ್ಗೆ ಬಂದಿದ್ದಾರೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ. ಈ ಇಬ್ಬರಲ್ಲಿಯೂ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಫೋನ್ ಮೂಲಕ ಮಾತನಾಡಿದ್ದಾರೆ. ಈ ಸಮಯದಲ್ಲಿ ತಾಯಿ -ಮಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. 14 ದಿನಗಳ ಕಾಲ ನಮ್ಮ ನಾಗರಿಕರು ತುಂಬಾ ಸಂಕಷ್ಟ ಅನುಭವಿಸಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ಕುಟುಂಬವನ್ನು ಭೇಟಿಯಾಗಲಿದ್ದಾರೆ. ತುಂಬಾ ಸಂತೋಷವಾಗುತ್ತಿದೆ. ಇನ್ನು ಮುಂದೆ ಅವರು ತಮ್ಮ ಕುಟುಂಬದ ಜತೆಗೆ ಸಂತೋಷವಾಗಿರಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಭದ್ರತಾ ಸಿಬ್ಬಂದಿಗೆ ಕೇರಳದಿಂದ ಸಮವಸ್ತ್ರ ಸರಬರಾಜು; ಕಣ್ಣೂರಿನ ಮರ್ಯನ್ ವರ್ಲ್ಡ್ಫೇಮಸ್
ಇನ್ನು ಈ ಕಾರ್ಯಕ್ಕೆ ಸಹಾಯ ಮಾಡಿದ ಕತಾರ್ ಮತ್ತು ಈಜಿಪ್ಟ್, ಇಸ್ರೇಲ್ಗೆ ಧನ್ಯವಾದವನ್ನು ಜೋ ಬೈಡನ್ ಹೇಳಿದ್ದಾರೆ. ಈ ಬಿಡುಗಡೆ ಇತರ ಒತ್ತೆಯಾಳು ಕುಟುಂಬಕ್ಕೆ ಭರವಸೆಯನ್ನು ತಂದಿದೆ. ಹೀಗಾಗಿ ಮಾನವೀಯತೆಗೆ ಆದ್ಯತೆ ನೀಡಿ, ಸಂಘರ್ಷವನ್ನು ಕೊನೆಗೊಳಿಸುವುದು ಅಗತ್ಯ ಎಂದು ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮಿರ್ಜಾನಾ ಸ್ಪೋಲ್ಜಾರಿಕ್ ಹೇಳಿದ್ದಾರೆ.
ಈ ತಾಯಿ-ಮಗಳನ್ನು ಅ.7ರಂದು ಇಸ್ರೇಲ್-ಗಾಜಾ ಗಡಿಯ ಸಮೀಪವಿರುವ ನಹಾಲ್ ಓಜ್ ಕಿಬ್ಬುಟ್ಜ್‌ನಿಂದ ಅಪಹಾರಿಸಲಾಗಿತ್ತು. ಈ ಇಬ್ಬರನ್ನು ಅಲ್-ಕಸ್ಸಾಮ್ ಬ್ರಿಗೇಡ್ಸ್ ಮಾನವೀಯ ಕಾರಣಗಳಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಹೇಳಿದೆ. ಇನ್ನು ಅನೇಕ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಇಸ್ರೇಲ್ ಹೇಳಿದೆ. ಜುಡಿತ್ ತೈ ರಾನನ್ ಅಮೆರಿಕ ಹಾಗೂ ಇಸ್ರೇಲ್ಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ