Taiwan: ತೈವಾನ್ ಮೇಲೆ ಚೀನಾ ಆಕ್ರಮಣ ಮಾಡಿದರೆ ಅಮೆರಿಕ ಪಡೆಗಳ ರವಾನೆ; ಜೋ ಬೈಡೆನ್ ನೇರ ಎಚ್ಚರಿಕೆ
ರಷ್ಯಾ ದಾಳಿಯನ್ನು ಉಕ್ರೇನ್ ಹಿಮ್ಮೆಟ್ಟಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯು ಮಹತ್ವ ಪಡೆದಿದೆ.
ವಾಷಿಂಗ್ಟನ್: ಚೀನಾ ಏನಾದರೂ ತೈವಾನ್ (China VS Taiwan) ಮೇಲೆ ಆಕ್ರಮಣ ಮಾಡಿದರೆ ಅಮೆರಿಕದ ಪಡೆಗಳು (American Army) ರಕ್ಷಣೆಗೆ ಧಾವಿಸುತ್ತವೆ ಎಂದು ಚೀನಾಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಭಾನುವಾರ ನೇರ ಎಚ್ಚರಿಕೆ ನೀಡಿದರು. ತೈವಾನ್ ಕೊಲ್ಲಿಯಲ್ಲಿ ಮುಂದುವರಿದಿರುವ ಬಿಕ್ಕಟ್ಟು ಮತ್ತು ಅಮೆರಿಕದ ಪರೋಕ್ಷ ನೆರವಿನಿಂದ ರಷ್ಯಾ ದಾಳಿಯನ್ನು ಉಕ್ರೇನ್ ಹಿಮ್ಮೆಟ್ಟಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯು ಮಹತ್ವ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಚೀನಾದ ಯುದ್ಧವಿಮಾನಗಳು ತೈವಾನ್ನ ವಾಯುಗಡಿ ಉಲ್ಲಂಘಿಸಿದ್ದವು. ಚೀನಾದ ಡ್ರೋಣ್ಗಳು ತೈವಾನ್ ಮೇಲೆ ಹಾರಾಡುವುದು ಸಾಮಾನ್ಯ ಎನಿಸಿತ್ತು. ತೈವಾನ್ ಕೂಡ ಹಲವು ಬಾರಿ ಪ್ರತೀಕಾರದ ಮಾತುಗಳನ್ನು ಆಡಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಿಗೇ ಅಮೆರಿಕದ ಅಧ್ಯಕ್ಷರು ಇದೀಗ ತೈವಾನ್ಗೆ ನೇರ ಬೆಂಬಲ ಘೋಷಿಸಿ, ಚೀನಾ ಏನಾದರೂ ದುಸ್ಸಾಸಹಕ್ಕೆ ಕೈಹಾಕಿದರೆ ಸೇನಾಪಡೆಯನ್ನು ರವಾನಿಸುವ ಭರವಸೆ ನೀಡಿದ್ದಾರೆ.
‘ಸಿಬಿಎಸ್ 60 ಮಿನಿಟ್ಸ್’ ಸಂದರ್ಶನದಲ್ಲಿ ಮಾತನಾಡಿದ ಜೋ ಬೈಡೆನ್, ಚೀನಾವು ತನ್ನದೆಂದು ಹೇಳಿಕೊಳ್ಳುತ್ತಿರುವ ದ್ವೀಪ ರಾಷ್ಟ್ರವನ್ನು ಅಮೆರಿಕ ಸೇನೆಯು ರಕ್ಷಿಸುತ್ತದೆಯೇ’ ಎಂದು ಕೇಳಿದಾಗ, ‘ಹೌದು, ದಾಳಿ ನಡೆದರೆ ನಮ್ಮ ಸೇನೆ ಅತ್ತ ಧಾವಿಸಬೇಕಾಗುತ್ತದೆ’ ಎಂದರು. ‘ಉಕ್ರೇನ್ ಸಂಘರ್ಷಕ್ಕೆ ಪ್ರತಿಯಾಗಿ ಅಮೆರಿಕ ಸೇನೆಯಲ್ಲಿರುವ ಸಿಬ್ಬಂದಿಯೇ ನೇರವಾಗಿ ತೈವಾನ್ ರಕ್ಷಣೆಗೆ ಮುಂದಾಗುತ್ತಾರೆಯೇ’ ಎಂದು ಕೇಳಿದಾಗ, ‘ಹೌದು’ ಎಂದು ಸ್ಪಷ್ಟಪಡಿಸಿದರು.
ಚೀನಾ ವಿಚಾರದಲ್ಲಿ ಅಮೆರಿಕ ಇತ್ತೀಚೆಗೆ ಹಲವು ಬಾರಿ ಆಕ್ರಮಣಕಾರಿ ನೀತಿಯನ್ನು ಪ್ರದರ್ಶಿಸಿದೆ. ಈ ಸಂದರ್ಶನವು ಅದೇ ನೀತಿಯ ಮುಂದುವರಿದ ಭಾಗ ಎನಿಸಿದೆ. ಈ ನಡುವೆ ತೈವಾನ್ ಬಗ್ಗೆ ಅಮೆರಿಕದ ನೀತಿ ಬದಲಾಗಿಲ್ಲ ಎಂದು ಶ್ವೇತಭವನದ ವಕ್ತಾರರು ಹೇಳಿದ್ದಾರೆ. ‘ಈ ವರ್ಷದ ಆರಂಭದಲ್ಲಿ ಟೋಕಿಯೋ ಸೇರಿದಂತೆ ವಿವಿಧೆಡೆ ಅಧ್ಯಕ್ಷರು ಇದೇ ಮಾತು ಹೇಳಿದ್ದರು. ನಮ್ಮ ತೈವಾನ್ ನೀತಿ ಬದಲಾಗಿಲ್ಲ. ಮೊದಲಿನಂತೆಯೇ ಅದು ಇದೆ’ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಬೈಡನ್ ಅವರೊಂದಿಗೆ ಸಿಬಿಎಸ್ ವಾಹಿನಿಯು ಸಂದರ್ಶನವನ್ನು ನಡೆಸಿತ್ತು. ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೆಂದು ಅಮೆರಿಕ ಅಧ್ಯಕ್ಷರು ಪ್ರಸ್ತುತ ಬ್ರಿಟನ್ನಲ್ಲಿದ್ದಾರೆ.
ತೈವಾನ್ ಮೇಲೆ ಚೀನಾ ಮಿಲಿಟರಿ ದಾಳಿ ನಡೆಸಿದರೆ ಅಮೆರಿಕ ಸಹ ಮಿಲಿಟರಿ ಕ್ರಮಗಳಿಂದಲೇ ಪ್ರತಿಕ್ರಿಯಿಸುತ್ತದೆ. ಈ ನಿಲುವಿಗೆ ಅಮೆರಿಕ ದೀರ್ಘಕಾಲದಿಂದ ಅಂಟಿಕೊಂಡಿದೆ ಎಂದು ಬೈಡೆನ್ ಹೇಳಿದ್ದರು. 60 ನಿಮಿಷಗಳ ಸಂದರ್ಶನದಲ್ಲಿ ಮತ್ತೊಂದು ಮಹತ್ವದ ಸ್ಪಷ್ಟನೆಯನ್ನೂ ಬೈಡೆನ್ ನೀಡಿದರು. ‘ನಾವು ತೈವಾನ್ ಸ್ವಾತಂತ್ರ್ಯವನ್ನು ಬೆಂಬಲಿಸುವುದಿಲ್ಲ. ‘ಒಂದೇ ಚೀನಾ’ ನೀತಿಗೆ ಅಮೆರಿಕ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
Published On - 9:04 am, Mon, 19 September 22