ಲೀಸೆಸ್ಟರ್‌ನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯ ನಡುವೆ ಗಲಭೆ; ಇಬ್ಬರ ಬಂಧನ

ಲೀಸೆಸ್ಟರ್‌ನಾದ್ಯಂತ ಹಿಂದೂ ಮತ್ತು ಜೈನ ದೇವಾಲಯಗಳನ್ನು ಪ್ರತಿನಿಧಿಸುವ ಸಂಜೀವ್ ಪಟೇಲ್, ಶನಿವಾರ ರಾತ್ರಿ ಸಂಭವಿಸಿದ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.  ನಾವು ನಗರದಲ್ಲಿ ಹಲವು ದಶಕಗಳಿಂದ ಸಾಮರಸ್ಯದಿಂದ ಬದುಕಿದ್ದೇವೆ.

ಲೀಸೆಸ್ಟರ್‌ನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯ ನಡುವೆ ಗಲಭೆ; ಇಬ್ಬರ ಬಂಧನ
ಲೀಸೆಸ್ಟರ್‌ನಲ್ಲಿ ಜನರ ಗುಂಪು ಚದುರಿಸುತ್ತಿರುವ ಪೊಲೀಸರು
TV9kannada Web Team

| Edited By: Rashmi Kallakatta

Sep 20, 2022 | 10:04 PM

ಶನಿವಾರ ಯುನೈಟೆಡ್ ಕಿಂಗ್ಡಂನ ಲೀಸೆಸ್ಟರ್‌ನಲ್ಲಿ (Leicester )ಮುಸ್ಲಿಂ ಮತ್ತು ಹಿಂದೂ ಸಮುದಾಯಗಳ ನಡುವೆ ಗಲಭೆಯುಂಟಾಗಿದ್ದು ಪೊಲೀಸರು ಮತ್ತು ಸಮುದಾಯದ ಮುಖಂಡರು ಶಾಂತವಾಗಿರಲು ಜನತೆಗೆ ಕರೆ ನೀಡಿದ್ದಾರೆ. ಎರಡೂ ಸಮುದಾಯದ ಗುಂಪುಗಳ ನಡುವಿನ ಘರ್ಷಣೆ ತಪ್ಪಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಏಕಾಏಕಿ ಪ್ರತಿಭಟನೆ ನಡೆದಿದ್ದು ಉದ್ವಿಗ್ನ ಪರಿಸ್ಥಿತಿಯುಂಟಾಗಿದೆ ಎಂದು ಪೊಲೀಸರು ಹೇಳಿದರು. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಹಿಂಸಾಚಾರ ಸೇರಿದಂತೆ ಹಲವಾರು ಘಟನೆಗಳು ಇತ್ತೀಚೆಗೆ ವರದಿ ಆಗಿತ್ತು. ನಾವು ಬೀದಿಗಳಲ್ಲಿ ನೋಡಿರುವುದು ತುಂಬಾ ಆತಂಕಕಾರಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಹೊತ್ತಲ್ಲಿ ಸಮುದಾಯಗಳ ನಡುವೆ ವಾಗ್ವಾದ ಆಗುತ್ತದೆ. ಈ ಪಂದ್ಯಗಳಿಗೆ ಜನ ಸೇರುತ್ತಾರೆ, ಆದರೆ ಈವರೆಗೆ ಈ ರೀತಿ ಇಷ್ಟು ಕೆಟ್ಟದಾಗಿ ಏನೂ ಆಗಿರಲಿಲ್ಲ ಎಂದು ಲೀಸೆಸ್ಟರ್ ಮೂಲದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸುಲೇಮಾನ್ ನಗ್ಡಿ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ. “ನಮಗೆ ಶಾಂತಿ ಬೇಕು. ಈ ಉದ್ವಿಗ್ನತೆ ನಿಲ್ಲಬೇಕು. ಕೆಲವು ಅತೃಪ್ತ ಯುವಕರು ವಿನಾಶವನ್ನು ಉಂಟುಮಾಡುತ್ತಿದ್ದಾರೆ. ಇದು ಕೊನೆಗೊಳ್ಳಬೇಕು ಎಂಬ ಸಂದೇಶವನ್ನು ನಾವು ನೀಡಬೇಕು ಪೋಷಕರು ವರ ಹಿರಿಯರು ಯುವ ಜನಾಂಗದೊಂದಿಗೆ ಮಾತನಾಡುವ ಮೂಲಕ ಇದನ್ನು ಮಾಡಲು ಪ್ರಯತ್ನಿಸಬೇಕು ಎಂದಿದ್ದಾರೆ.

ಲೀಸೆಸ್ಟರ್‌ನಾದ್ಯಂತ ಹಿಂದೂ ಮತ್ತು ಜೈನ ದೇವಾಲಯಗಳನ್ನು ಪ್ರತಿನಿಧಿಸುವ ಸಂಜೀವ್ ಪಟೇಲ್, ಶನಿವಾರ ರಾತ್ರಿ ಸಂಭವಿಸಿದ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.  ನಾವು ನಗರದಲ್ಲಿ ಹಲವು ದಶಕಗಳಿಂದ ಸಾಮರಸ್ಯದಿಂದ ಬದುಕಿದ್ದೇವೆ. ಆದರೆ ಕಳೆದ ಕೆಲವು ವಾರಗಳಲ್ಲಿ ಜನರುಯಾವುದರ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎಂಬುದರ ಬಗ್ಗೆ ನಾವು ಚರ್ಚಿಸಬೇಕಿದೆ ಎಂದಿದ್ದಾರೆ.

ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಹಿಂಸೆ ಮಾರ್ಗವಲ್ಲ.”ನಾವು ಗಾಬರಿಗೊಂಡಿದ್ದೇವೆ ಮತ್ತು (ನಿನ್ನೆ) ಮತ್ತು ಕಳೆದ ಎರಡು ವಾರಗಳಲ್ಲಿ ಏನು ನಡೆದಿದೆಯೋ ಇದಕ್ಕೆ ವಿಷಾದಿಸುತ್ತೇವೆ. ಹಿಂದೂ ಮತ್ತು ಜೈನ ಸಮುದಾಯದಾದ್ಯಂತ ಮತ್ತು ನಮ್ಮ ಮುಸ್ಲಿಂ ಸಹೋದರರು ಮತ್ತು ಸಹೋದರಿಯರಲ್ಲಿ ನಾಯಕರು ಶಾಂತರಾಗಿರಿ ಎಂದು ಹೇಳುತ್ತಲೇ ಇದ್ದಾರೆ. ಅದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ ಪಟೇಲ್.

ಹಿಂಸೆ ಯಾವುದಕ್ಕೂ ಪರಿಹಾರವಲ್ಲ, ಶಾಂತಿ ಕಾಪಾಡಬೇಕು ಎಂದಿದ್ದಾರೆ ಅವರು. ಪ್ರಸ್ತುತ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಹಿಂಸಾತ್ಮಕ ಕೃತ್ಯಕ್ಕೆ ಸಂಚು ರೂಪಿಸಿದ ಶಂಕೆಯ ಮೇಲೆ ಮತ್ತು ಇನ್ನೊಬ್ಬ ಆಯುಧ ಹೊಂದಿದ್ದ ಎಂಬ ಕಾರಣದಿಂದ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಏನಂತಾರೆ?

ಇಂದಿನ ಪೊಲೀಸ್ ಕಾರ್ಯಾಚರಣೆಯ ಮುಂದಿನ ಹಂತಗಳನ್ನು ಅಂತಿಮಗೊಳಿಸಲು ಮುಖ್ಯ ಅಧಿಕಾರಿಗಳು ಇಂದು ಬೆಳಿಗ್ಗೆ ಯೋಜನಾ ಸಭೆ ನಡೆಸಿದ್ದಾರೆ. ಸ್ಥಳೀಯ ಸಮುದಾಯದ ಮುಖಂಡರ ಬೆಂಬಲದೊಂದಿಗೆ ನಾವು ಸಂವಾದ ಮತ್ತು ಶಾಂತಿಗೆ ಕರೆ ನೀಡುವುದನ್ನು ಮುಂದುವರಿಸುತ್ತಿದ್ದೇವೆ. ನಮ್ಮ ನಗರದಲ್ಲಿ ಹಿಂಸೆ ಅಥವಾ ಅವ್ಯವಸ್ಥೆಯನ್ನು ನಾವು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಪೂರ್ವ ಲೀಸೆಸ್ಟರ್‌ನಲ್ಲಿ ಮಹತ್ವದ ಪೊಲೀಸ್ ಕಾರ್ಯಾಚರಣೆ ಇರಲಿದೆ ನೆಲದ ಮೇಲೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಮತ್ತು ವದಂತಿಯನ್ನು ಹಂಚಬೇಡಿ. ನೀವು ನಿಜವೆಂದು ತಿಳಿದಿರುವ ಮಾತ್ರ ಮಾಹಿತಿಯನ್ನು ಹಂಚಿಕೊಳ್ಳಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ.ಇಂದು ಸಂಜೆ ಪೂರ್ವ ಲೀಸೆಸ್ಟರ್‌ನಲ್ಲಿ ಪೊಲೀಸ್ ಉಪಸ್ಥಿತಿ ಇರುತ್ತದೆ ಎಂದು ಲೀಸೆಸ್ಟರ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಶನಿವಾರದ ಘಟನೆ ಬಗ್ಗೆ ಮಾತನಾಡಿದ ಲೀಸೆಸ್ಟರ್‌ಶೈರ್ ಪೋಲೀಸ್‌ನ ತಾತ್ಕಾಲಿಕ ಮುಖ್ಯ ಕಾನ್ಸ್‌ಟೇಬಲ್ ರಾಬ್ ನಿಕ್ಸನ್ ನಗರದ ಪೂರ್ವ ಲೀಸೆಸ್ಟರ್ ಪ್ರದೇಶದ ಕೆಲವು ಭಾಗಗಳಲ್ಲಿ ಗಲಭೆಯುಂಟಾಗಿದೆ. ನಾವು ಅಲ್ಲಿ ಅಧಿಕಾರಿಗಳನ್ನು ಹೊಂದಿದ್ದೇವೆ, ನಾವು ಆ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದೇವೆ, ಹೆಚ್ಚುವರಿ ಅಧಿಕಾರಿಗಳು ಅತ್ತ ಹೋಗುತ್ತಿದ್ದಾರೆ.  ದಯವಿಟ್ಟು ಇಂಥಾ ಗಲಭೆಗಳಲ್ಲಿ ತೊಡಗಿಸಿಕೊಳ್ಳಬೇಡಿ, ನಾವು ಶಾಂತವಾಗಿರಲು ಕರೆ ನೀಡುತ್ತಿದ್ದೇವೆ ಎಂದಿದ್ದಾರೆ.

ಭಾನುವಾರ ಬೆಳಗ್ಗೆ ಪರಿಸ್ಥಿತಿ ಶಾಂತವಾಗಿದೆ ಮತ್ತು “ನಿಯಂತ್ರಣದಲ್ಲಿದೆ” ಎಂದು ಪೊಲೀಸರು ಹೇಳಿದ್ದಾರೆ. “ಹಲವು ಹಿಂಸಾಚಾರ ಮತ್ತು ಹಾನಿಯ ಘಟನೆಗಳ ಬಗ್ಗೆ ಪೊಲೀಸರಿಗೆ ದೂರು ಲಭಿಸಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಲೀಸೆಸ್ಟರ್‌ನ ಮೆಲ್ಟನ್ ರಸ್ತೆಯಲ್ಲಿರುವ ಧಾರ್ಮಿಕ ಕಟ್ಟಡದ ಹೊರಗೆ ವ್ಯಕ್ತಿಯೊಬ್ಬ ಧ್ವಜವನ್ನು ಕೆಳಗೆ ಎಳೆಯುತ್ತಿರುವುದನ್ನು ತೋರಿಸುವ ವಿಡಿಯೊ ಪ್ರಸಾರವಾಗುತ್ತಿರುವ ಬಗ್ಗೆ ನಮಗೆ ತಿಳಿದಿದೆ.  ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada