ಕಾಬೂಲ್ ಭಾರತದ ಕೈಗೊಂಬೆಯಾಗುತ್ತಿದೆ; ಎಲ್ಲ ಅಫ್ಘಾನಿಗಳಿಗೆ ವಾಪಾಸ್ ತೆರಳಲು ಪಾಕಿಸ್ತಾನ ಸಚಿವ ಖವಾಜಾ ಆಸಿಫ್ ಸೂಚನೆ
ಅಫ್ಘಾನಿಸ್ತಾನ ಭಾರತದ ಆಜ್ಞೆಯ ಮೇರೆಗೆ ವರ್ತಿಸುತ್ತಿದೆ. ಟಿಟಿಪಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನದಲ್ಲಿ ವಾಸಿಸುವ ಎಲ್ಲಾ ಆಫ್ಘನ್‌ಗಳು ತಮ್ಮ ಮನೆಗಳಿಗೆ ಮರಳಬೇಕು ಎಂದು ಪಾಕಿಸ್ತಾನದ ಸಚಿವ ಖವಾಜಾ ಆಸಿಫ್ ಎಚ್ಚರಿಕೆ ನೀಡಿದ್ದಾರೆ. ಅಫ್ಘಾನಿಸ್ತಾನದಿಂದ ಮತ್ತಷ್ಟು ಆಕ್ರಮಣ ನಡೆದರೆ ಪಾಕಿಸ್ತಾನ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಂಪೂರ್ಣವಾಗಿ ಸಮರ್ಥವಾಗಿದೆ ಎಂದು ಆಸಿಫ್ ಹೇಳಿದ್ದಾರೆ.

ಕಾಬೂಲ್, ಅಕ್ಟೋಬರ್ 18: ಪಾಕಿಸ್ತಾನ (Pakistan) ಮತ್ತು ಅಫ್ಘಾನಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಪಾಕಿಸ್ತಾನದಲ್ಲಿರುವ ಅಫ್ಘಾನಿಗಳು ಕೂಡಲೆ ತಮ್ಮ ದೇಶಕ್ಕೆ ಮರಳಲು ಸೂಚನೆ ನೀಡಿದ್ದಾರೆ. ಇಸ್ಲಾಮಾಬಾದ್ ಕಾಬೂಲ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುತ್ತಿದೆ ಎಂದಿರುವ ಖವಾಜಾ ಆಸಿಫ್ ಪಾಕಿಸ್ತಾನದಲ್ಲಿ ವಾಸಿಸುವ ಎಲ್ಲಾ ಅಫ್ಘಾನ್ ಪ್ರಜೆಗಳು ತಮ್ಮ ತಾಯ್ನಾಡಿಗೆ ಮರಳಲು ಆದೇಶಿಸಿದ್ದಾರೆ.
ಇದೇ ವೇಳೆ ವಿನಾಕಾರಣವಾಗಿ ಭಾರತವನ್ನು ಕೂಡ ಈ ವಿವಾದದಲ್ಲಿ ಪಾಕಿಸ್ತಾನ ಎಳೆದಿದೆ. ಅಫ್ಘಾನಿಸ್ತಾನ ಭಾರತದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದೆ, ಪಾಕಿಸ್ತಾನದ ವಿರುದ್ಧ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಜೊತೆ ಸೇರಿ ಭಾರತವೂ ಪಿತೂರಿ ನಡೆಸುತ್ತಿದೆ ಎಂದು ಖವಾಜಾ ಆಸಿಫ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಪ್ರತಿಯೊಂದು ಇಂಚಿಂಚೂ ಬ್ರಹ್ಮೋಸ್ ವ್ಯಾಪ್ತಿಯಲ್ಲಿದೆ: ರಾಜನಾಥ್ ಸಿಂಗ್
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ 48 ಗಂಟೆಗಳ ಕದನ ವಿರಾಮವು ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. ಇದಾದ ನಂತರ ಎರಡೂ ಕಡೆಗಳಲ್ಲಿ ಡಜನ್ಗಟ್ಟಲೆ ಜೀವಗಳನ್ನು ಬಲಿ ಪಡೆದ ಮಾರಕ ಗಡಿ ಘರ್ಷಣೆಗಳ ನಂತರ ಅವರ ಹೇಳಿಕೆ ಹೊರಬಿದ್ದಿದೆ.
ಕಾಬೂಲ್ “ಭಾರತದ ಕೋಗೊಂಬೆಯಾಗುತ್ತಿದೆ” ಎಂದು ಸಚಿವ ಖವಾಜಾ ಆರೋಪಿಸಿದ್ದಾರೆ. ಅಫ್ಘಾನ್ ಸರ್ಕಾರ ಈಗ ಭಾರತದ ಮಡಿಲಲ್ಲಿ ಕುಳಿತು ಪಾಕಿಸ್ತಾನದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಖವಾಜಾ ಆಸಿಫ್ ಹೇಳಿದ್ದಾರೆ. ಹಾಗೇ, ಪಾಕಿಸ್ತಾನ ಮೊದಲಿನಿಂತೆ ಕಾಬೂಲ್‌ನೊಂದಿಗೆ ಸಂಬಂಧ ಹೊಂದಲು ಇನ್ನು ಮುಂದೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಾನಿನ್ನೂ ಸತ್ತಿಲ್ಲ, ಪಾಕಿಸ್ತಾನ ಸುಳ್ಳು ಹೇಳುತ್ತಿದೆ; ವಿಡಿಯೋ ಮಾಡಿ ಶಾಕ್ ಕೊಟ್ಟ ಟಿಟಿಪಿ ಮುಖ್ಯಸ್ಥ
ಅಫ್ಘಾನಿಸ್ತಾನದಿಂದ ಮತ್ತಷ್ಟು ಆಕ್ರಮಣ ನಡೆದರೆ ಪಾಕಿಸ್ತಾನ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಂಪೂರ್ಣವಾಗಿ ಸಮರ್ಥವಾಗಿದೆ ಎಂದು ಆಸಿಫ್ ಹೇಳಿದ್ದಾರೆ. ಶುಕ್ರವಾರ ತಡರಾತ್ರಿ ಅಫ್ಘಾನ್ ಪ್ರದೇಶದೊಳಗೆ ಹೊಸ ವಾಯುದಾಳಿಗಳನ್ನು ನಡೆಸುವ ಮೂಲಕ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಅಫ್ಘಾನಿಸ್ತಾನ ಆರೋಪಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Sat, 18 October 25




