ಗಡಿಯಲ್ಲಿ ಡಜನ್ಗಟ್ಟಲೆ ಜನ ಸಾವು; ಅಫ್ಘಾನಿಸ್ತಾನದೊಂದಿಗೆ 48 ಗಂಟೆಯ ಕದನವಿರಾಮ ಘೋಷಿಸಿದ ಪಾಕಿಸ್ತಾನ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಗಡಿ ಗಲಾಟೆ ಭುಗಿಲೆದ್ದಿದೆ. ಗಡಿ ಘರ್ಷಣೆಯಲ್ಲಿ ಡಜನ್ಗಟ್ಟಲೆ ಜನರು ಸಾವನ್ನಪ್ಪಿದ ನಂತರ ಪಾಕಿಸ್ತಾನವು ಅಫ್ಘಾನಿಸ್ತಾನದೊಂದಿಗೆ 48 ಗಂಟೆಗಳ ಕದನ ವಿರಾಮವನ್ನು ಘೋಷಿಸಿದೆ. ಪಾಕಿಸ್ತಾನದ ಗಡಿ ಹೊರಠಾಣೆಗಳ ಮೇಲೆ ದಾಳಿ ನಡೆಸುವ ಡ್ರೋನ್ ದೃಶ್ಯಗಳನ್ನು ಅಫ್ಘಾನ್ ತಾಲಿಬಾನ್ ಬಿಡುಗಡೆ ಮಾಡಿದ್ದರಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಸ್ಪಿನ್ ಬೋಲ್ಡಾಕ್ ಬಳಿ ಭೀಕರ ಘರ್ಷಣೆಯಲ್ಲಿ ಡಜನ್ಗಟ್ಟಲೆ ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ.

ಇಸ್ಲಮಾಬಾದ್, ಅಕ್ಟೋಬರ್ 15: ನೆರೆಹೊರೆಯ ದೇಶಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ (Afghanistan) ನಡುವಿನ ಗಡಿ ಘರ್ಷಣೆಗಳು ಎರಡೂ ಕಡೆಗಳಲ್ಲಿ ಡಜನ್ಗಟ್ಟಲೆ ಜೀವಗಳನ್ನು ಬಲಿ ಪಡೆದ ನಂತರ, ಪಾಕಿಸ್ತಾನ (Pakistan) ಇಂದು ಸಂಜೆ 6 ಗಂಟೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದೊಂದಿಗೆ 48 ಗಂಟೆಗಳ ಕದನ ವಿರಾಮವನ್ನು ಘೋಷಿಸಿದೆ.
“ತಾಲಿಬಾನ್‌ನ ಕೋರಿಕೆಯ ಮೇರೆಗೆ ಇಂದು ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ ಎರಡೂ ಪಕ್ಷಗಳ ಪರಸ್ಪರ ಒಪ್ಪಿಗೆಯೊಂದಿಗೆ ಪಾಕಿಸ್ತಾನ ಸರ್ಕಾರ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ನಡುವೆ ತಾತ್ಕಾಲಿಕ ಕದನ ವಿರಾಮವನ್ನು ನಿರ್ಧರಿಸಲಾಗಿದೆ” ಎಂದು ಡಾನ್ ಪತ್ರಿಕೆ ವಿದೇಶಾಂಗ ಕಚೇರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದೊಳಗೆ ಪಾಕಿಸ್ತಾನದಿಂದ ವೈಮಾನಿಕ ದಾಳಿ; 12ಕ್ಕೂ ಹೆಚ್ಚು ಜನ ಸಾವು
ಆದರೆ, ಅಫ್ಘಾನ್ ಸರ್ಕಾರದಿಂದ ಈ ಬಗ್ಗೆ ತಕ್ಷಣದ ಯಾವುದೇ ದೃಢೀಕರಣವಿಲ್ಲ. ಪಾಕಿಸ್ತಾನ ಸಶಸ್ತ್ರ ಪಡೆಗಳು ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಕದನ ವಿರಾಮ ಘೋಷಿಸಲಾಯಿತು. ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯ ಸಮೀಪವಿರುವ ಸ್ಪಿನ್ ಬೋಲ್ಡಕ್ ಜಿಲ್ಲೆಯ ವಸತಿ ಪ್ರದೇಶಗಳ ಮೇಲೆ ಈ ದಾಳಿಗಳು ನಡೆದಿದ್ದು, 15 ನಾಗರಿಕರು ಸಾವನ್ನಪ್ಪಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




