ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ; ಯುದ್ಧ ಪರಿಸ್ಥಿತಿ ತನಿಖೆ ಶೀಘ್ರವೇ ಪ್ರಾರಂಭಿಸುತ್ತೇವೆ ಎಂದ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​

| Updated By: Lakshmi Hegde

Updated on: Mar 01, 2022 | 10:21 AM

ಈ ಬಾರಿ ರಷ್ಯಾ ಪ್ರಾರಂಭದಲ್ಲಿ ತಾನು ಉಕ್ರೇನ್​​ ನಾಗರಿಕರ ಮೇಲೆ ಹಲ್ಲೆ ನಡೆಸುವುದಿಲ್ಲ, ಹತ್ಯೆ ಮಾಡುವುದಿಲ್ಲ. ಉಕ್ರೇನ್​ ಸೇನೆಯನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ಆದ್ಯತೆ ಎಂದು ಹೇಳಿತ್ತು. ಆದರೆ ಈಗ ರಷ್ಯಾ ಮನಸಿಗೆ ಬಂದಲ್ಲಿ ದಾಳಿ ನಡೆಸುತ್ತಿದೆ.

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ; ಯುದ್ಧ ಪರಿಸ್ಥಿತಿ ತನಿಖೆ ಶೀಘ್ರವೇ ಪ್ರಾರಂಭಿಸುತ್ತೇವೆ ಎಂದ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​
ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​
Follow us on

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ (Russia Invasion on Ukraine) ಮಾಡಿ ವಾರ ಕಳೆದಿದೆ. ಹೀಗಿರುವಾಗ ರಷ್ಯಾದ ದಾಳಿಯಿಂದ ಉಕ್ರೇನ್​​ನಲ್ಲಿ ಉಂಟಾದ ಯುದ್ಧ ಅಪರಾಧ ಪರಿಸ್ಥಿತಿ ಸಂಬಂಧ ತನಿಖೆ ಶುರು ಮಾಡುವುದಾಗಿ ನೆದರ್​ಲ್ಯಾಂಡ್​ನ ಹೇಗ್​​ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​ ತಿಳಿಸಿದೆ. ರಷ್ಯಾ ಆಕ್ರಮಣದಿಂದ ಉಕ್ರೇನ್​​ನಲ್ಲಿ ಎದುರಾಗಿರುವ ಪರಿಸ್ಥಿತಿಯ ತನಿಖೆಯನ್ನು ಆದಷ್ಟು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​​ನ (International Criminal Court) ಪ್ರಾಸಿಕ್ಯೂಟರ್​ ಕರೀಮ್​ ಖಾನ್​ ಸೋಮವಾರ ಘೋಷಿಸಿದ್ದಾರೆ. 2014ರಿಂದಲೂ ಉಕ್ರೇನ್​​ನಲ್ಲಿ ಯುದ್ಧ ಅಪರಾಧಗಳು ಮತ್ತು ಮಾನವೀಯತೆ ವಿರುದ್ಧ ದೌರ್ಜನ್ಯ, ಅಪರಾಧಗಳು ನಡೆಯುತ್ತ ಬಂದಿವೆ ಎಂಬುದಕ್ಕೆ ಸಮಂಜಸವಾದ ಸಾಕ್ಷಿಗಳು ಇವೆ. ಹೀಗಾಗಿ ಕೂಡಲೇ ತನಿಖೆ ಕೈಗೆತ್ತಿಕೊಳ್ಳುತ್ತೇವೆ ಎಂದು ಕರೀಮ್​ ಖಾನ್​ ತಿಳಿಸಿದ್ದಾರೆ.

ಯುದ್ಧ ಅಪರಾಧಗಳು ಎಂದರೆ ಯಾವುದೇ ಎರಡು ದೇಶಗಳ ಮಧ್ಯೆ ಯುದ್ಧ ನಡೆಯುವಾಗ ಅದಕ್ಕೂ ಕೆಲವು ಕಾನೂನುಗಳು ಇರುತ್ತವೆ. ಅದನ್ನು ಉಲ್ಲಂಘಿಸುವುದೇ ಯುದ್ಧ ಅಪರಾಧ ಎನ್ನಿಸಿಕೊಳ್ಳುತ್ತದೆ. ಈ ಬಾರಿ ರಷ್ಯಾ ಪ್ರಾರಂಭದಲ್ಲಿ ತಾನು ಉಕ್ರೇನ್​​ ನಾಗರಿಕರ ಮೇಲೆ ಹಲ್ಲೆ ನಡೆಸುವುದಿಲ್ಲ, ಹತ್ಯೆ ಮಾಡುವುದಿಲ್ಲ. ಉಕ್ರೇನ್​ ಸೇನೆಯನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ಆದ್ಯತೆ ಎಂದು ಹೇಳಿತ್ತು. ಆದರೆ ಈಗ ರಷ್ಯಾ ಮನಸಿಗೆ ಬಂದಲ್ಲಿ ದಾಳಿ ನಡೆಸುತ್ತಿದೆ, ಶಾಲೆಗಳು, ಶಿಶುವಿಹಾರ, ಆಂಬುಲೆನ್ಸ್​ಗಳನ್ನೂ ಬಿಡುತ್ತಿಲ್ಲ ಎಂದು ಉಕ್ರೇನ್​ ಆರೋಪಿಸಿದೆ.

ಇನ್ನು ಮೂರು ದಿನಗಳ ಹಿಂದೆ ಉಕ್ರೇನ್​ ರಷ್ಯಾ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯ (ICJ)ಕ್ಕೆ ದೂರು ಸಲ್ಲಿಸಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ, ರಷ್ಯಾ ತನ್ನ ಆಕ್ರಮಣವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನರಮೇಧದ ಕಲ್ಪನೆಯನ್ನು ತಿರುಚುತ್ತಿದೆ. ಇದಕ್ಕೆ ಆ ದೇಶವೇ ಹೊಣೆಯಾಗಲಿದೆ.  ಉಕ್ರೇನ್​​ನಲ್ಲಿ ರಷ್ಯಾ ತನ್ನ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದಷ್ಟು ಶೀಘ್ರದಲ್ಲೇ ಆದೇಶ ನೀಡಬೇಕು. ಮುಂದಿನ ವಾರದಿಂದಲೇ ವಿಚಾರಣೆ ಪ್ರಾರಂಭವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ:ಉಕ್ರೇನ್​ಗೆ ಔಷಧ, ಅಗತ್ಯವಸ್ತುಗಳ ನೆರವು ನೀಡಲಿರುವ ಭಾರತ; ಪ್ರಜೆಗಳ ರಕ್ಷಣೆಗೆ ನೆರೆ ರಾಷ್ಟ್ರಗಳಿಗೂ ಸಹಾಯ ಮಾಡುವುದಾಗಿ ತಿಳಿಸಿದ ಪ್ರಧಾನಿ 

Published On - 9:54 am, Tue, 1 March 22