ವ್ಲಾದಿಮೀರ್ ಪುಟಿನ್ ಸಾರಥ್ಯದ ರಷ್ಯಾಕ್ಕೆ ಪುಟ್ಟ ಉಕ್ರೇನ್ ಸಡ್ಡು ಹೊಡೆದು ತನ್ನದೇ ನೆಲದಲ್ಲಿ ಕಾಲೂರಿ ಹೋರಾಟ ನಡೆಸುತ್ತಿದೆ (Russia Ukraine War). ರಷ್ಯಾ ಸೇನೆಯು ಉಕ್ರೇನ್ನಲ್ಲಿ ಕಾಲೂರಿದ್ದ ಜನರನ್ನು ಅಕ್ಷರಶಃ ಕಾಲಿನಿಂದ ಒದೆಯುತ್ತಿದೆ. ಕೈಗೆ ಸಿಕ್ಕವರನ್ನ ನೂಕುತ್ತಿದೆ. ಬೆಂಕಿಯುಂಡೆ ಆಗಿರೋ ಉಕ್ರೇನ್‌ನಿಂದ ತಪ್ಪಿಸಿಕೊಂಡು ಬರುತ್ತಿರುವವರ ಜೀವನ ಅಕ್ಷರಶಃ ನರಕವಾಗಿದೆ. ಜೀವ ಉಳಿಸಿಕೊಳ್ಳುವ ಆಸೆಯಿಂದ ಗಡಿ ದಾಟಿ ಬರುವವರಿಗೂ ಸಂಕಷ್ಟ ತಪ್ಪಿದ್ದಲ್ಲ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಈ ನಡುವೆ ರಷ್ಯಾ ದೇಶದ ಟಿವಿ ಚಾನೆಲ್ಗಳನ್ನು ವಿಶ್ವದ ಹಲವು ದೇಶಗಳು ನಿಷೇಧಿಸಿವೆ, ಮಾತ್ರವಲ್ಲದೆ ರಷ್ಯಾ ವಿರುದ್ಧ ಕಠಿಣ ಅರ್ಥಿಕ ದಿಗ್ಬಂಧನಗಳನ್ನು ವಿಧಿಸಿವೆ. ಆದರೆ ರಷ್ಯಾ ಮಾತ್ರ ಇದ್ಯಾವುದಕ್ಕೂ ಜಗ್ಗುತ್ತಿಲ್ಲ. ಉಕ್ರೇನ್ ಮತ್ತು ರಷ್ಯಾ ನಡುವೆ ಬೆಲರೂಸ್ನಲ್ಲಿ ಒಂದು ಸುತ್ತಿನ ಮಾತುಕತೆ ನಡೆಯಿತಾದರೂ ಹೆಚ್ಚು ಪ್ರಯೋಜನವಾಗಿಲ್ಲ. ಉಕ್ರೇನ್ ರಾಜಧಾನಿ ಕೀವ್ನಿಂದ ನಾಗರಿಕರು ಹೊರಹೋಗಬೇಕು ಎಂದು ರಷ್ಯಾ ತಾಕೀತು ಮಾಡುತ್ತಿದೆ. ಆದರೆ ಉಕ್ರೇನ್ ನಾಗರಿಕರು ರಷ್ಯಾ ವಿರುದ್ಧದ ಹೋರಾಟಕ್ಕೆ ಶಸ್ತ್ರ ಕೈಗೆತ್ತಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಹೊಸ ಸ್ವರೂಪ ತೆಗೆದುಕೊಳ್ಳುತ್ತಿರುವ ಸಂಘರ್ಷದ ಮುಂದಿನ ತಿರುವು ಹೀಗೆ ಎಂದು ಹೇಳಲು ಆಗುತ್ತಿಲ್ಲ. ರಷ್ಯಾ-ಉಕ್ರೇನ್ ಸಂಘರ್ಷದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ಹಾವೇರಿಯ ನವೀನ್ ದುರಂತ ಸಾವಿನ ಬಗ್ಗೆ ಟ್ವಿಟರ್ನಲ್ಲೂ ಬಾರಿ ಚರ್ಚೆಯಾಗುತ್ತಿದೆ. ಪರಿಣಾಮ ನವೀನ್ ಸಾವಿನ ವಿಚಾರ ಟ್ವಿಟರ್ನಲ್ಲಿ ಟ್ರೆಂಡ್ ಆಗಿ ಮಾರ್ಪಟ್ಟಿದೆ.
ಪಾಸ್ಪೋರ್ಟ್ ಪ್ರಾದೇಶಿಕ ಅಧಿಕಾರಿ ಕೃಷ್ಣ.ಕೆ ಮೃತ ನವೀನ್ ಮನೆಗೆ ಭೇಟಿ ನೀಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧದಲ್ಲಿ ಹಾವೇರಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ಸಾವಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮೊಂಬತ್ತಿ ಪ್ರತಿಭಟನೆ ನಡೆಸಿದೆ. ಉಡುಪಿ ನಗರದ ಅಜ್ಜರಕಾಡು ಹುತಾತ್ಮ ವೇದಿಕೆ ಬಳಿ ಪ್ರತಿಭಟನೆ ನಡೆಸಲಾಗಿದೆ. ಭಾರತದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕದನ ಪೀಡಿತ ಪ್ರದೇಶದ ವಿದ್ಯಾರ್ಥಿಗಳನ್ನು ಶೀಘ್ರ ಕರೆತನ್ನಿ ಎಂದು ಉಡುಪಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯ ಮಾಡಿದೆ.
ಮಾ.4ರಂದು ನ್ಯಾಟೋ ವಿದೇಶಾಂಗ ಮಂತ್ರಿಗಳ ಸಭೆ ಕರೆಯಲಾಗಿದೆ. ನ್ಯಾಟೋ ವಿದೇಶಾಂಗ ಮಂತ್ರಿಗಳ ತುರ್ತು ಸಭೆ ಕರೆಯಲಾಗಿದೆ.
ಶಾಂತಿ ಮಾತುಕತೆ ಮೇಲೆ ಭಾರತ ನಂಬಿಕೆಯಿಟ್ಟಿದೆ. ಮಾನವ ಹಕ್ಕುಗಳನ್ನು ರಕ್ಷಿಸಲು ಒತ್ತು ನೀಡಬೇಕಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಭಾರತದ ಪ್ರತಿನಿಧಿ ಭಾಷಣ ಮಾಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಕೀವ್ನಲ್ಲಿ ರಷ್ಯಾದ ಶೆಲ್ ದಾಳಿಯಿಂದ ಸೇತುವೆ ಕುಸಿತವಾಗಿದೆ. ಕೀವ್ನ ಬುಚಾದಲ್ಲಿ ಸಂಪೂರ್ಣವಾಗಿ ಸೇತುವೆ ಕುಸಿದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಇರುವ ನವೀನ್ ಮನೆಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ನೀಡಿದ್ದಾರೆ. ನವೀನ್ ಭಾವ ಚಿತ್ರಕ್ಕೆ ಪುಷ್ಪ ಮಾಲೆ ಹಾಕಿದ ಸಚಿವ ಹೆಬ್ಬಾರ್, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಹಿರಿಯ ಅಧಿಕಾರಿಗಳ ಜೊತೆ ಮಾತು ಕತೆ ನಡೆಸಿದ್ದಾರೆ. ಬಳಿಕ ವೀರಶೈವ ಸಂಪ್ರದಾಯ ಪ್ರಕಾರ ಪುತ್ರನ ಭಾವಚಿತ್ರಕ್ಕೆ ವಿಭೂತಿ ಹಚ್ಚಿ ನವೀನ್ ತಾಯಿ ಪೂಜೆ ಸಲ್ಲಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಭಾರತೀಯರು ರಾಜಧಾನಿ ಕೀವ್ ನಗರ ತೊರೆದಿದ್ದಾರೆ. ಕೀವ್ ನಗರದಲ್ಲಿ ಭಾರತೀಯ ನಿವಾಸಿಗಳು ಯಾರೂ ಇಲ್ಲ. ಕೀವ್‌ನಲ್ಲಿದ್ದ ಎಲ್ಲಾ ಭಾರತೀಯರು ಬೇರೆಡೆ ಹೋಗಿದ್ದಾರೆ.
ಉಕ್ರೇನ್‌ನಲ್ಲಿರುವ ಭಾರತೀಯರಿಗಾಗಿ ಹೆಲ್ಪ್‌ಲೈನ್ ನಂಬರ್ ನೀಡಲಾಗಿದೆ. ಭಾರತೀಯ ರಾಯಭಾರ ಕಚೇರಿಯಿಂದ ಹೆಲ್ಪ್‌ಲೈನ್ ಸಂಖ್ಯೆ ನೀಡಲಾಗಿದೆ.
ರೊಮೇನಿಯಾ-+40 732 124 309, +40 771 632 567 +40 745 161 631 ಹಾಗೂ +40 741 528 123
ಹಂಗೇರಿ ಹೆಲ್ಪ್‌ಲೈನ್ ಸಂಖ್ಯೆ-+36 308517373
ಸ್ಲೋವಾಕಿಯಾ ಹೆಲ್ಪ್‌ಲೈನ್ ಸಂಖ್ಯೆ-+421 252631377 +421 252962916 ಹಾಗೂ +421 951697560
ಹಂಗೇರಿ ಹೆಲ್ಪ್‌ಲೈನ್ ಸಂಖ್ಯೆ-+36 308517373
ಸ್ಲೋವಾಕಿಯಾ ಹೆಲ್ಪ್‌ಲೈನ್ ಸಂಖ್ಯೆ-+421 252631377, +421 252962916 ಹಾಗೂ +421 951697560
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಖಾರ್ಕಿವ್‌ನಲ್ಲಿ ಟೆಲಿವಿಷನ್ ಟವರ್ ಮೇಲೆ ರಷ್ಯಾ ದಾಳಿ ಮಾಡಿದೆ. ಪರಿಣಾಮ ರಷ್ಯಾದ ಏರ್ಸ್ಟ್ರೈಕ್ನಲ್ಲಿ 8 ನಾಗರಿಕರು ಮೃತಪಟ್ಟಿದ್ದಾರೆ. ಇಡೀ ಖಾರ್ಕಿವ್ ನಗರವನ್ನು ದಟ್ಟ ಹೊಗೆ ಆವರಿಸಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನಲೆಯಲ್ಲಿ ಕೀವ್ ಸಮೀಪದಲ್ಲಿ ರಷ್ಯಾದ ಬೃಹತ್ ಬೆಂಗಾವಲು ಪಡೆ ಬಂದು ನಿಂತಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಕರೆ ಮಾಡಿದ್ದಾರೆ. ಮೋದಿ ಜೊತೆ ಇಮ್ಯಾನುಯೆಲ್ ಮ್ಯಾಕ್ರನ್ ಚರ್ಚೆ ನಡೆಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್ ಶರಣಾಗಿದೆ ಎಂದು ರಷ್ಯಾದಿಂದ ತಪ್ಪು ಮಾಹಿತಿ ನೀಡಲಾಗಿದೆ. ರಷ್ಯಾ ಸಾಮೂಹಿಕ ತಪ್ಪು ಮಾಹಿತಿ ಅಭಿಯಾನ ನಡೆಸ್ತಿದೆ ಎಂದು ರಷ್ಯಾ ವಿರುದ್ಧ ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ಆರೋಪ ಮಾಡಿದ್ದಾರೆ.
ಪ್ರಧಾನಿ ಮೋದಿಗೆ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಖಾರ್ಕಿವ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವಿನ ಬಗ್ಗೆ ಚರ್ಚೆ ಮಾಡಿದ್ದಾರೆ.
ರಷ್ಯಾ ವಿರುದ್ಧ ಮಂಡಿಯೂರದೇ ಉಕ್ರೇನ್ ಹೋರಾಟ ನಡೆಸುತ್ತಿದ್ದು, ಉಕ್ರೇನ್ ಯುದ್ಧದಲ್ಲಿ ರಷ್ಯಾದ 5,710 ಸೈನಿಕರು ಬಲಿಯಾಗಿದ್ದಾರೆ. 29 ಯುದ್ಧ ವಿಮಾನಗಳನ್ನು ಉಕ್ರೇನ್ ಹೊಡೆದುರುಳಿಸಿದೆ. 29 ಹೆಲಿಕಾಪ್ಟರ್, 2 ಬೋಟ್, 305 ಸೇನಾ ವಾಹನ ಧ್ವಂಸ ಮಾಡಿದೆ. 198 ಯುದ್ಧ ಟ್ಯಾಂಕರ್, 60 ಇಂಧನ ಟ್ಯಾಂಕ್ಗಳು ನಾಶವಾಗಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ರಷ್ಯಾ ವಿರುದ್ಧ ಸೋಷಿಯಲ್ ಮೀಡಿಯಾದಲ್ಲೂ ನಿರ್ಬಂಧ ಎದುರಾಗುತ್ತಿದ್ದು, ರಷ್ಯಾ ಟುಡೆ ಸುದ್ದಿ ವಾಹಿನಿಯ ಇನ್ಸ್ಟಾಗ್ರಾಂ ಬ್ಲಾಕ್ ಮಾಡಲಾಗಿದೆ. 27 ಯುರೋಪಿಯನ್ ಒಕ್ಕೂಟದ ದೇಶಗಳಿಂದ ಹೊಸ ಅಸ್ತ್ರ ಪ್ರಯೋಗ ಮಾಡಿದ್ದು, 27 ಯುರೋಪಿಯನ್ ಒಕ್ಕೂಟ ರಷ್ಯಾ ಟುಡೆ ಸುದ್ದಿ ವಾಹಿನಿಯ ಖಾತೆ ಬ್ಲಾಕ್ ಮಾಡಿದೆ.
ರಷ್ಯಾ ಸೇನೆ ಖಾರ್ಕಿವ್‌ನಲ್ಲಿ ಮತ್ತೆ ಕ್ಷಿಪಣಿ ದಾಳಿ ಮಾಡಿದೆ. ಕ್ಷಿಪಣಿ ದಾಳಿಗೆ ಖಾರ್ಕಿವ್ ನಗರದ ಆಸ್ಪತ್ರೆ ಕಟ್ಟಡ ನೆಲಸಮವಾಗಿದೆ. ಹಲವರು ಮೃತಪಟ್ಟು, ನೂರಾರು ಜನ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಬೆಳಗ್ಗೆ ಕರೆ ಮಾಡಿ ಕ್ಷೇಮದಿಂದ ಇದ್ದೇವೆ ಅಂದಿದ್ದ. ಬಂಕರ್ನಿಂದ ತಿಂಡಿ ತರಲು ಹೋದಾಗ ದುರ್ಘಟನೆ ನಡೆದಿದೆ. ಸರ್ಕಾರದ ಜಾತಿ, ಡೊನೇಷನ್ಗೆ ನನ್ನ ಮಗ ಬಲಿಯಾಗಿದ್ದಾನೆ. ಮಗನ ಮೃತದೇಹ ಸ್ವಗ್ರಾಮಕ್ಕೆ ತನ್ನಿ ಎಂದು ಟಿವಿ9 ಬಳಿ ಶೇಖರಪ್ಪ ತಮ್ಮ ದುಃಖ ತೋಡಿಕೊಂಡಿದ್ದಾರೆ.
ಭಾರತೀಯ ವಿದ್ಯಾರ್ಥಿಗಳಿಗೆ ರೈಲು ಹತ್ತಲು ಸಿಬ್ಬಂದಿಗಳು ಬಿಡುತ್ತಿಲ್ಲ. ಖಾರ್ಕೀವ್ ರೈಲ್ವೆ ನಿಲ್ದಾಣದ ಸಿಬ್ಬಂದಿಗಳಿಂದ ಭಾರತೀಯ ವಿದ್ಯಾರ್ಥಿಗಳಿಗೆ ತಡೆ ಮಾಡಲಾಗಿದೆ. ಭಾರತೀಯ ರಾಯಭಾರಿಗಳು ಸಹಕರಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ವಿಡಿಯೋ ಮಾಡಿ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಕಳುಹಿಸಿ ಅಳಲು ತೋಡಿಕೊಂಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿರುವ ಇಟಲಿ ರಾಯಭಾರ ಕಚೇರಿಯನ್ನು ಕೀವ್ ನಗರದಿಂದ ಪಶ್ಚಿಮ ನಗರ ಎಲ್ವಿವ್‌ಗೆ ಸ್ಥಳಾಂತರ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ರಾಯಭಾರ ಕಚೇರಿ ಸ್ಥಳಾಂತರ ಮಾಡಲಾಗಿದೆ.
ಯುದ್ಧ ಆರಂಭ ಆದಾಗ ಭಯ ಶುರುವಾಗಿತ್ತು. ಮನೆಯವರಿಗೂ ನಮ್ಮ ಸ್ಥಿತಿ ಬಗ್ಗೆ ಆತಂಕ ಇತ್ತು. ನಮ್ಮನ್ನ ಮನೆವರೆಗು ಕರೆತಂದು ಬಿಟ್ಟಿದಾರೆ. ಸರ್ಕಾರಕ್ಕೆ ಭಾರತೀಯ ರಾಯಭಾರಿ ಕಛೇರಿಗೆ ಧನ್ಯವಾದ ಹೇಳ್ತೇವೆ ಎಂದು ಉಕ್ರೇನ್‌ನಿಂದ ತವರಿಗೆ ಮರಳಿದ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಬೇಕು. ಉಕ್ರೇನ್-ರಷ್ಯಾ ಯುದ್ಧ ಅಪಾಯಕಾರಿ ಹಂತ ತಲುಪಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒತ್ತಾಯ ಮಾಡಿದ್ದಾರೆ.
ಖಾರ್ಕಿವ್ಗೆ ಎಂಬಿಬಿಎಸ್ ವ್ಯಾಸಂಗಕ್ಕೆ ತೆರಳಿದ್ದ ಆಕಾಶ್ ಉಕ್ರೇನ್ನಲ್ಲಿ ಸಿಲುಕಿದ್ದಾನೆ. ನಮ್ಮ ಪುತ್ರನ ಸೇಫಾಗಿ ಕರೆತರುವಂತೆ ತಹಶಿಲ್ದಾರ ಎದುರು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಆಕಾಶ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬಸ್ಥರು ತಹಶೀಲ್ದಾರ್ ಕಿಶನ್ಗೆ ಮನವಿ ಮಾಡಿದ್ದಾರೆ. ಸುರಕ್ಷಿತವಾಗಿ ಆಕಾಶ್ನನ್ನ ಕರೆತರುವುದಾಗಿ ಆಕಾಶ್ ಪೋಷಕರಿಗೆ ತಹಶೀಲ್ದಾರ್ ಧೈರ್ಯ ತುಂಬಿದ್ದಾರೆ.
ತಕ್ಷಣವೇ ರಷ್ಯಾ ತನ್ನ ಸೇನೆಯನ್ನು ವಾಪಸ್ ಪಡೆಯಲಿ. ಹಿಂಪಡೆದು ಉಕ್ರೇನ್‌ನಲ್ಲಿ ರಕ್ತಪಾತವನ್ನ ಕೊನೆಗೊಳಿಸಲಿ. ಇಲ್ಲದಿದ್ರೆ ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧ ಹೇರಲಾಗುತ್ತದೆ ಎಂದು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಎಚ್ಚರಿಕೆ ನೀಡಿದ್ದಾರೆ.
ಪಾರ್ಥಿವ ಶರೀರ ಸುರಕ್ಷಿತವಾಗಿ ತರುವುದಕ್ಕೆ ಕ್ರಮ ಕೈಗೊಳ್ಳುತ್ತಿರೋದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ನವೀನ್ ತಂದೆ ಶೇಖಪ್ಪ ಗ್ಯಾನಗೌಡರ ಜೊತೆ ಬೊಮ್ಮಾಯಿ ಕರೆ ಮಾಡಿ ಮಾತನಾಡಿದ್ದು, ಧೈರ್ಯ ಕಳೆದುಕೊಳ್ಳದಂತೆ ಸಾಂತ್ವಾನ ಹೇಳಿದ್ದಾರೆ.
ಯುದ್ಧ ಭೂಮಿ ಉಕ್ರೇನ್‌ನಿಂದ ಇಬ್ಬರು ವಿದ್ಯಾರ್ಥಿನಿಯರು ತವರಿಗೆ ಬಂದಿದ್ದಾರೆ. ಇಂದು ಅರ್ಪಿತಾ ಹಾಗೂ ಧನುಜಾ ತಮ್ಮ ಮನೆ ತಲುಪಿದ್ದಾರೆ. ಉಕ್ರೇನ್‌ನ ಹುಜಾರ್ಡ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿಯರು ಹಾಸನಕ್ಕೆ ಮರಳಿದ್ದಾರೆ. ಮನೆಗೆ ಬಂದ ಮಕ್ಕಳನ್ನ ಆರತಿ ಬೆಳಗಿ ಪೋಷಕರು ಸ್ವಾಗತ ಮಾಡಿದ್ದಾರೆ.
ಈ ಘಟನೆ ನಡೆಯಬಾರದಿತ್ತು. ಆದರೆ ಘಟಿಸಿ ಹೋಗಿದೆ. ಅದರಿಂದ ನಮಗೂ ತುಂಬಾ ದುಃಖವಾಗುತ್ತಿದೆ. ಮತ್ತಿತರ ವಿದ್ಯಾರ್ಥಿಗಳನ್ನ ಕರೆತರುವ ಪ್ರಯತ್ನ ನಿರಂತರವಾಗಿ ನಡೆದಿದೆ. ಇಷ್ಟರ ನಡುವೆಯೂ ಈ ದುರ್ಘಟನೆ ಸಂಭವಿಸಿದೆ. ಓದಲಿಕ್ಕೆಂದು ಹೋದ ನವೀನ್ ಮೃತಪಟ್ಟಿದ್ದಾನೆ. ಆತನ ಪಾರ್ಥಿವ ಶರೀರ ತರಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಜತೆಗೆ ಅಲ್ಲಿರುವ ಇತರ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ವಾಪಸ್ ಕರೆ ತರುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಪ್ರಧಾನಿ ಜೊತೆ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಮಾತನಾಡಿದ್ದೇನೆ. ಮುಖ್ಯಮಂತ್ರಿಗಳನ್ನು ಭೇಟಿ ಆಗುತ್ತಿದ್ದೇನೆ. ನವೀನ್ ಪಾರ್ಥಿವ ಶರೀರ ತರಿಸೋಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಅಲ್ಲಿರುವ ಭಾರತೀಯರನ್ನು ಕರೆತರುವ ಪ್ರಯತ್ನವನ್ನು ಮುಂದುವರೆಸುತ್ತೇವೆ ಎಂದು ಹಾವೇರಿ ಜಿಲ್ಲೆ ಚಳಗೇರಿಯಲ್ಲಿ ಶಿವಕುಮಾರ್ ಉದಾಸಿ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಯುದ್ದ ಭೂಮಿಯಲ್ಲಿ ರಾಜ್ಯದ ವಿದ್ಯಾರ್ಥಿ ಸಾವು ಹಿನ್ನೆಲೆ ಗದಗ ವಿದ್ಯಾರ್ಥಿ ಪೋಷಕರಲ್ಲಿ ಹೆಚ್ಚಾದ ಆತಂಕ. ಗದಗ ನಗರದ ಪಂಚಾಕ್ಷರಿ ನಗರದ ಶಿಕ್ಷಕ ದಂಪತಿ ಆತಂಕಗೊಂಡಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರ ಏನಾದ್ರೂ ಮಾಡಿ ನಮ್ಮ ಪುತ್ರನ ಕರೆತರಬೇಕು. ಪ್ರಧಾನಿ ನರೇಂದ್ರ ಮೋದಿ ಅವ್ರು ರಷ್ಯಾ ಜೊತೆ ಮಾತನಾಡಿ ರಷ್ಯಾ ಗಡಿ ಮೂಲಕ ಕರೆತರಬೇಕು ಎಂದು ಟಿವಿ9 ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಉಕ್ರೇನ್‌ನ 395 ಯುದ್ಧ ಟ್ಯಾಂಕರ್ ಧ್ವಂಸಗೊಳಿಸಿದ್ದೇವೆ ಎಂದು ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಮಾಹಿತಿ ನೀಡಿದೆ.
ಖಾರ್ಕಿವ್ನಿಂದ ಲೆವಿವ್ ಕಡೆ ಬಾಗಲಕೋಟೆಯ ಸ್ಪೂರ್ತಿ ದೊಡ್ಡಮನಿ ಬಂದಿದ್ದಾರೆ. ಸ್ಪೂರ್ತಿ ದೊಡ್ಡಮನಿ ಎಮ್ಬಿಬಿಎಸ್ ವಿದ್ಯಾರ್ಥಿನಿ. ನಿನ್ನೆ ಸಂಜೆ ನಾಲ್ಕಕ್ಕೆ ಖಾರ್ಕಿವ್ನಿಂದ ಟ್ರೇನ್ ಮೂಲಕ ನಿರ್ಗಮಿಸಿದ್ದರು. ಇಂದು 12 ಗಂಟೆಗೆ ಲೆವಿವ್ಗೆ ಬಂದಿರುವ ಸ್ಪೂರ್ತಿ ಹಾಗೂ ಇತರೆ 40 ರಿಂದ 50 ಜನ ವಿದ್ಯಾರ್ಥಿಗಳು, ಖಾರ್ಕಿವ್ನಿಂದ 1 ಸಾವಿರಕ್ಕೂ ಅಧಿಕ ಕಿಮೀ ದೂರ ಇರುವ ಲೆವಿವ್ನಿಂದ ಹಂಗೇರಿ ಬಾರ್ಡರ್ಗೆ ಬರಲಿದ್ದಾರೆ. ಆದರೆ ರಷ್ಯಾ ಬೆಂಬಲ ಹಿನ್ನೆಲೆ ಲೆವಿವ್ನಿಂದ ಟ್ರೇನ್ಗೆ ಏರಲು ಉಕ್ರೇನ್ ರೇಲ್ವೆ ಸೆಕ್ಯುರಿಟಿ ಸಿಬ್ಬಂದಿ ಬಿಡಲಿಲ್ಲ. ಹೀಗಾಗಿ ಟ್ಯಾಕ್ಸಿಗಾಗಿ ವಿದ್ಯಾರ್ಥಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಉಕ್ರೇನ್ ಮನವಿಯನ್ನು ಇಯು ಅಂಗೀಕರಿಸಿದೆ. ಆ ಪ್ರಕಾರ ಯೂರೋಪಿನ ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆಯಾಗಿದೆ.
ಖಾರ್ಕಿವ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವು ಬೆನ್ನೆಲೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ. ವಿದ್ಯಾರ್ಥಿ ನವೀನ್ ಸಾವಿನ ಬಗ್ಗೆ ಮಾಹಿತಿ ಪಡೆದ ಮೋದಿ, ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರ ಬಗ್ಗೆ ಚರ್ಚೆ ನಡೆಸಿದ್ದಾರೆ.
ಉಕ್ರೇನ್‌ನ ಖಾರ್ಕಿವ್‌ನಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ ನವೀನ್ಗೆ ಟ್ವೀಟ್ ಮೂಲಕ ರಾಜ್ಯಪಾಲ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ.
ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕರ್ನಾಟಕದ ವಿದ್ಯಾರ್ಥಿ ನವೀನ್ ನಿಧನದಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
— Thaawarchand Gehlot (@TCGEHLOT) March 1, 2022
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದು ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಆ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಅಸುನೀಗಿದ್ದಾರೆಂಬ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ ಎಂದು ಹೆಚ್ಡಿ ಕುಮಾರ್ಸ್ವಾಮಿ ತಿಳಿಸಿದ್ದಾರೆ.
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಷ್ಯಾ ಶೆಲ್ ದಾಳಿ ಮುಂದುವರೆದಿದ್ದು, ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ 10 ಜನರು ಬಲಿಯಾಗಿದ್ದಾರೆ.
ರಷ್ಯಾ ಉಕ್ರೇನ್ ದೇಶದ ಮೇಲಿನ ದಾಳಿ ನಿಲ್ಲಿಸಬೇಕು. ಉಕ್ರೇನ್ ಮೇಲೆ ಹಿಡಿತಸಾಧಿಸುವ ಯುದ್ಧತಂತ್ರ ಫಲಿಸಲ್ಲ. ಪುಟಿನ್ ಅವರ ಯುದ್ಧ ಯಂತ್ರಗಳು ಯಶಸ್ವಿಯಾಗಲ್ಲ. ಈ ಯುದ್ಧದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ವಿಫಲರಾಗುತ್ತಾರೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಕಿಡಿಕಾರಿದ್ದಾರೆ.
ನವೀನ್ ಸಾವಿನ ಸುದ್ದಿ ಕೇಳಿ ದುಃಖವಾಗಿದೆ. ಮಗನನ್ನು ಕಳೆದುಕೊಂಡು ಅತೀವ ದುಃಖದಲ್ಲಿದ್ದಾರೆ. ಪೋಷಕರಿಗೆ ದೇವರು ದುಃಖ ಭರಿಸೋ ಶಕ್ತಿ ನೀಡಲಿ. ನವೀನ್ ಮೃತದೇಹ ಕುಟುಂಬಕ್ಕೆ ತಲುಪಿಸಬೇಕು. ಆದಷ್ಟು ಬೇಗ ಕುಟುಂಬಕ್ಕೆ ತಲುಪಿಸೋ ಕೆಲಸವಾಗ್ಲಿ. ವಿದ್ಯಾರ್ಥಿ ನವೀನ್ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಷ್ಯಾ ದಾಳಿಗೆ ನವೀನ್ ಬಲಿಯಾಗಿದ್ದಾನೆ. ಈ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಕುಟುಂಬಸ್ಥರಿಗೆ ದುಃಖ ಭರಿಸೋ ಶಕ್ತಿ ನೀಡಲಿ ಎಂದು ಟ್ವಿಟರ್ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವರ್ಚ್ಯೂವಲ್ ಮೀಟಿಂಗ್ನಲ್ಲಿ ಭಾವುಕರಾಗಿದ್ದಾರೆ. ಯುಇ ಪಾರ್ಲಿಮೆಂಟ್ ಸಭೆಯಲ್ಲಿ ಝೆಲೆನ್ಸ್ಕಿ ಮಾತನಾಡಿದ್ದು, ನಾವು ಸಾವಿರಾರು ಉಕ್ರೇನಿಗರನ್ನ ಕಳೆದುಕೊಂಡಿದ್ದೇವೆ. ಪುಟಿನ್ ಸೇನೆ ಉಕ್ರೇನ್‌ನ ಮಕ್ಕಳನ್ನೂ ಕೂಡ ಬಿಡಲಿಲ್ಲ. ಒಕ್ಕೂಟದ ಬೆಂಬಲ ಕಂಡು ತುಂಬಾ ಖುಷಿಯಾಗಿದೆ ಎಂದು ಯುಇ ಪಾರ್ಲಿಮೆಂಟ್ ಸಭೆಯಲ್ಲಿ ಝೆಲೆನ್ಸ್ಕಿ ಭಾವುಕರಾಗಿದ್ದಾರೆ.
ಖಾರ್ಕಿವ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವು ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾಗಿದ್ದಾರೆ. ಬಳಿಕ ಮಾತನಾಡಿದ ಅವರು, ಒಂದು ವಾರದಿಂದ ಬಂಕರ್‌ನಲ್ಲಿದ್ದರು. ವಾಯು ದಾಳಿಯಲ್ಲಿ ನವೀನ್ ಮೃತಪಟ್ಟಿದ್ದಾರೆ. ಅದೇ ಗ್ರಾಮದ ಮತ್ತೊಬ್ಬರಿಗೂ ಗಾಯವಾಗಿದೆ. ಎಂಇಎ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಮೃತದೇಹ ವಾಪಸ್ ಪಡೆಯುವ ಬಗ್ಗೆ ಚರ್ಚಿಸಿದ್ದೇನೆ. ನವೀನ್ ಕುಟುಂಬದವರ ಜೊತೆ ಪ್ರಧಾನಿ ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತೀಯ ಮಾಧ್ಯಮ ನಿಖರವಾದ ಸುದ್ದಿ ಪ್ರಸಾರ ಮಾಡಲಿ. ಇದರಿಂದ ಭಾರತದ ನಾಗರಿಕರಿಗೆ ವಸ್ತುನಿಷ್ಠ ಮಾಹಿತಿ ಸಿಗಲಿದೆ. ರಷ್ಯಾ, ಉಕ್ರೇನ್, ಅದರ ನಾಗರಿಕರ ಮೇಲೆ ಯುದ್ಧ ಸಾರಿಲ್ಲ. ಉಕ್ರೇನ್ ಅನ್ನು ನಾಜೀಕರಣ ಮುಕ್ತ, ಮಿಲಿಟರಿ ಮುಕ್ತ ಮಾಡುವ ವಿಶೇಷ ಮಿಲಿಟರಿ ಕಾರ್ಯಾಚರಣೆ ಡೋನಬಾಸ್ ಮೇಲೆ ಉಕ್ರೇನ್ ನಡೆಸುತ್ತಿರುವ 8 ವರ್ಷದ ಯುದ್ಧ ಅಂತ್ಯಗೊಳಿಸಲು ರಷ್ಯಾ ಯತ್ನಿಸಿದೆ. ರಷ್ಯಾ ಸೇನೆ ಬಾರಿ ಸಂಯಮ ತೋರುತ್ತಿದೆ. ಸಿಟಿ, ನಾಗರಿಕರ ಮೇಲೆ ರಷ್ಯಾ ದಾಳಿ ಮಾಡುತ್ತಿಲ್ಲ. ರಷ್ಯಾ ಮಿಲಿಟರಿ ಮೂಲಸೌಕರ್ಯ ಮಾತ್ರ ಟಾರ್ಗೆಟ್ ಮಾಡುತ್ತಿದೆ. ರಷ್ಯಾ ಸೇನೆ ಉಕ್ರೇನ್ ರೀತಿ ನಿರ್ಬಂಧಿತ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿಲ್ಲ. ನಾಗರಿಕರನ್ನು ರಕ್ಷಣೆಗೆ ಗುರಾಣಿಯಂತೆ ಬಳಸಿಕೊಳ್ಳುತ್ತಿಲ್ಲ. ಯುದ್ಧ ಖೈದಿಗಳನ್ನು ಗರಿಷ್ಠ ಗೌರವದಿಂದ ನಡೆಸಿಕೊಳ್ಳುತ್ತಿದ್ದೇವೆ. ರಷ್ಯಾ ಮತ್ತೆ ಮತ್ತೆ ಮಾತುಕತೆ, ಸಂಧಾನಕ್ಕೆ ಸಿದ್ಧವಾಗಿರುವ ಸಂದೇಶ ನೀಡಿದೆ. ಉಕ್ರೇನ್‌ನಲ್ಲಿರುವ ಅಣ್ವಸ್ತ್ರ ಸ್ಥಳಗಳು ಸುರಕ್ಷಿತವಾಗಿದೆ. ಇದಕ್ಕೆ ವಿರುದ್ಧವಾದ ಮಾಹಿತಿ ಪೂರ್ವಗ್ರಹಪೀಡಿತ, ತಪ್ಪು ದಾರಿಗೆಳೆಯುವಂತದ್ದು ಎಂದು ದೆಹಲಿಯಲ್ಲಿರುವ ರಷ್ಯಾ ರಾಯಭಾರ ಕಚೇರಿ ಹೇಳಿಕೆ ನೀಡಿದೆ.
ಯುಇ ಪಾರ್ಲಿಮೆಂಟ್‌ನಲ್ಲಿ ಉಕ್ರೇನ್ ಅಧ್ಯಕ್ಷ ಭಾಷಣ ಮಾಡಿದ್ದು, ಈವರೆಗೆ ಏಕಾಂಗಿಯಾಗಿದ್ದೇವೆಂದು ಅಂದುಕೊಂಡಿದ್ದೆವು ಉಕ್ರೇನ್‌ಗೆ ಯುಇ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್, ಮೈಸೂರಿನ ನಂಜನಗೂಡಿನಲ್ಲಿ ವಾಸವಾಗಿದ್ದರು. ನವೀನ್ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂಜನಗೂಡಿನಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೂ ವ್ಯಾಸಂಗ ಮಾಡಿದ್ದಾರೆ ನವೀನ್. ಎಸ್ಎಸ್ಎಲ್ಸಿಯಲ್ಲಿ ನವೀನ್ 625ಕ್ಕೆ 606 ಅಂಕಗಳನ್ನು ಪಡೆದಿದ್ದರು.
ಉಕ್ರೇನ್ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದು, ನಮ್ಮ ರಾಜ್ಯದ ಒಬ್ಬ ವಿದ್ಯಾರ್ಥಿಯೊಬ್ಬರು ಹತ್ಯೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ಅಲ್ಲಿಂದ ವಿದ್ಯಾರ್ಥಿಗಳನ್ನ ಕರೆತರಲು ನಿನ್ನೆ ನಾಲ್ಕು ಜನ ಕೇಂದ್ರ ಸಚಿವರನ್ನ ನೇಮಕ ಮಾಡಿದ್ದಾರೆ. ಇಷ್ಟು ದಿನ ಏನ್ ಮಾಡ್ತಿದ್ದರು. ನಮ್ಮ ವಿದೇಶಾಂಗ ಸಚಿವಾಲಯ ಏನಾಗಿದೆ. ಮೋದಿ ಎಲ್ಲರನ್ನು ಕರೆತರ್ತಿನಿ ಅಂದಿದ್ರು ಈಗ ಏನಾಗಿದೆ. ಇದಕ್ಕೆ ಯಾರು ಹೊಣೆ ಅಂತಾ ಕೇಂದ್ರದ ವಿರುದ್ಧ ಡಿಕೆಶಿ ಗರಂ ಆಗಿದ್ದಾರೆ.
ಖಾರ್ಕಿವ್‌ನಲ್ಲಿ ರಾಜ್ಯದ ವಿದ್ಯಾರ್ಥಿ ನವೀನ್ ಸಾವು ವಿಚಾರಕ್ಕೆ ಸಂಬಂಧಪಟ್ಟಂತೆ ನವೀನ್ ತಂದೆಗೆ ಕರೆ ಮಾಡಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ನವೀನ್ ಗ್ಯಾನಗೌಡರ್ ತಂದೆಗೆ ಪ್ರಧಾನಿ ಸಾಂತ್ವನ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್ ಬೆಂಬಲಕ್ಕೆ ಯುಇ ಪಾರ್ಲಿಮೆಂಟ್ ನಿಂತಿದೆ. ರಷ್ಯಾ ಆಕ್ರಮಣಕಾರಿ ನೀತಿ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಯುಇ ಪಾರ್ಲಿಮೆಂಟ್ ತಿಳಿಸಿದೆ.
ಉಕ್ರೇನ್ನಲ್ಲಿ ಕ್ಷಣ ಕ್ಷಣಕ್ಕೂ ಯುದ್ಧ ವಾತಾವರಣ ಉದ್ವಿಗ್ನಗೊಳ್ಳುತ್ತಿದೆ. ನಾವು 8 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಹಂಗೇರಿ ಗಡಿ ತಲುಪಬೇಕು. ಎಲ್ಲರೂ ಶಿವರಾತ್ರಿ ಆಚರಣೆ ಮಾಡ್ತಿದ್ದಾರೆ. ನಾವು ಮಗಳು ಇಲ್ಲದೆ ಕಷ್ಟದಲ್ಲಿ ಇದ್ದೇವೆ. ವಾರ ಕಳೆದರೂ ವಿದ್ಯಾರ್ಥಿಗಳು ವಾಪಸ್ ಬರೋ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಬೀಳಗಿಯ ವಿದ್ಯಾರ್ಥಿನಿ ಸಹನಾ ಪಾಟೀಲ್ ತಂದೆಯ ಕಣ್ಣೀರು ಹಾಕಿದ್ದಾರೆ.
ಈಗಾಗಲೇ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾವು 6 ದಿನಗಳಿಂದ ಬಂಕರ್‌ನಲ್ಲಿದ್ದೇವೆ. ಊಟ ಇಲ್ಲ ನೀರಿಲ್ಲ ಈಗ ಒಂದು ಬಲಿಯಾಗಿದೆ. ಮುಂದೆ ನಾವು ಊಟ ಇಲ್ಲದೆ ಸಾವು ಖಚಿತವಾಗಿದೆ. ಕೇಂದ್ರ ಸರ್ಕಾರ ಯಾವುದೇ ದಿಟ್ಟ ನಿರ್ಧಾರ ತೆಗದುಕೊಳ್ತೀಲ್ಲ. ನಮಗೆ ಜೀವ ಉಳಿಸಿಕೊಂಡ್ರೆ ಸಾಕಾಗಿದೆ ಎಂದು ಖಾರ್ಕಿವ್‌ನಲ್ಲಿರುವ ಎಂಬಿಬಿಎಸ್ ವಿದ್ಯಾರ್ಥಿ ನವ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ನಲ್ಲಿ ಶೆಲ್ಗಳ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದು ಒಂದು ದುರಂತದ ಸಂಗತಿ. ಈ ಕುರಿತು ನವೀನ್ ಅವರ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದೇನೆ. ನವೀನ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆಸಲಾಗುವುದು. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಉಳಿದ ವಿಧ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಉಕ್ರೇನ್ ನಲ್ಲಿ ಶೆಲ್ ಗಳ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದು ಒಂದು ದುರಂತದ ಸಂಗತಿ, ಈ ಕುರಿತು ನವೀನ್ ಅವರ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದೇನೆ. ನವೀನ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆಸಲಾಗುವುದು. 1/2
— Basavaraj S Bommai (@BSBommai) March 1, 2022
ನಾಲ್ಕನೇ ಸೆಮಿಸ್ಟರ್ ವಿದ್ಯಾಭ್ಯಾಸ ಮಾಡುತ್ತಿದ್ದ ನವೀನ್ ತಂದೆ ಶೇಖರಗೌಡ ಗ್ಯಾನಗೌಡರ ಎರಡು ಎಕರೆಯಲ್ಲಿ ವ್ಯವಸಾಯ ಮಾಡುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳು. ಹರ್ಷ ಮತ್ತು ನವೀನ ಗ್ಯಾನಗೌಡರ. ಹರ್ಷ ಹಿರಿಯ ಮಗ. ನವೀನ ಕಿರಿಯ ಮಗ. ಡಿಪ್ಲೋಮಾ ಇಂಜನೀಯರ್ ಓದಿದ್ದ ಶೇಖರಗೌಡ ಗ್ಯಾನಗೌಡರ, ಮೊದಲು ಸೌದಿಯಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ನಂತರ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಕೆಲವು ವರ್ಷಗಳಿಂದ ಕೃಷಿ ಕೆಲಸ ಮಾಡಿಕೊಂಡಿರುವ ನವೀನ್ ತಂದೆ. ತಾಯಿ ವಿಜಯಲಕ್ಷ್ಮಿ ಮನೆಯಲ್ಲೆ ಮಕ್ಕಳನ್ನು ಸಾಕಿ ಸಲುಹಿದ್ದರು.
ನವೀನ್ ಇಲ್ಲಾ ಎಂಬುವ ಸುದ್ದಿ ಹರಿದಾಡುತ್ತಿರುವ ಬಗ್ಗೆ ರಾಯಭಾರಿ ಅಧಿಕಾರಿ ಜೊತೆ ನವೀನ್ ಸಹೋದರ ಮಾತುಕತೆ ನಡೆಸಿದ್ದಾರೆ. ಬೆಳಗ್ಗೆ ದಿನಬಳಕೆ ವಸ್ತು ತರಲು ಹೋಗಿದ್ದಾಗ ಅವಗಢವಾಗಿದೆ ಎಂದು ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ಪದೇ ಪದೇ ಬಾಂಬ್ ದಾಳಿಯಿಂದ ಸಾಕಷ್ಟು ಆತಂಕವಾಗುತ್ತಿತ್ತು. ನಾವಿದ್ದ ಸ್ಥಳದಿಂದ ಬಾರ್ಡರ್ಗೆ 900 ಕಿಲೋ ಮೀಟರ್ ದೂರವಿತ್ತು. ಬಂಕರ್ಗಳಲ್ಲಿ ಸ್ಥಳವಕಾಶವಿರಲಿಲ್ಲ ತುಂಬಾ ಸಮಸ್ಯೆಯಾಗುತ್ತಿತ್ತು. ಅನ್ನ, ನೀರು ಏನು ಸಿಗ್ತಿರಲಿಲ್ಲ. ಬಾರ್ಡರ್ ಬಳಿ ಸೈನಿಕರು ಇಂಡಿಯನ್ಸ್ ಅಂತ ತುಂಬಾ ಟಾರ್ಚರ್ ಮಾಡಿದ್ರು. ಹೊಡೆದು ಬೈದು ಕಿರುಕುಳ ನೀಡಿದ್ರು, ನಮ್ಮ ಸ್ನೇಹಿತರು ಇನ್ನೂ ಸಾಕಷ್ಟು ಜನ ಅಲ್ಲೆ ಸಿಲುಕಿದ್ದಾರೆ. ಎಲ್ಲರನ್ನೂ ಬೇಗ ಕರೆತಂದ್ರೆ ಒಳಿತು. ನಮ್ಮ ಅಧಿಕಾರಿಗಳು ನಮಗೆ ತುಂಬಾ ಸ್ವಂದನೆ ನೀಡಿದ್ರು, ಕೊನೆಗೂ ತವರಿಗೆ ಬಂದಿದ್ದೀವಿ ತುಂಬಾ ಖುಷಿಯಾಗಿದೆ ಎಂದು ಉಕ್ರೇನ್‌ನಿಂದ ಆಗಮಿಸಿದ ವಿದ್ಯಾರ್ಥಿ ಪವನ್ ಹೇಳಿದ್ದಾರೆ.
ಉಕ್ರೇನ್‌ನಿಂದ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ ನಾಲ್ವರು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಆರನೇ ಬ್ಯಾಚ್ನಲ್ಲಿ 4 ಜನ ಕನ್ನಡಿಗ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಮುಂಬೈನಿಂದ 04:10 ರ ವಿಮಾನದಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರು. ಪವನ್ ಕುಮಾರ್, ನಂದಿತಾ, ಸ್ನೇಹ, ಲಿಖಿತ ಬೆಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಗಳು. ಮಕ್ಕಳನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋಟ್ನಲ್ಲಿ ಪೋಷಕರು ಬರಮಾಡಿಕೊಂಡಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಬಾಂಬ್ ದಾಳಿಗೆ ತುತ್ತಾಗಿ ಹಾವೇರಿ ಜಿಲ್ಲೆಯ ನವೀನ್ ಮೃತರಾಗಿರುವ ಹಿನ್ನೆಲೆ ನವೀನ್ ಕುಟುಂಬಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ನವೀನ್ ಕುಟುಂಬಕ್ಕೆ ಬಿಎಸ್ವೈ ಧೈರ್ಯ ಹೇಳಿದ್ದಾರೆ. ನವೀನ್ ಮೃತದೇಹ ತರಿಸಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಉಕ್ರೇನ್ ನಿಂದ ಇಂದು ದೆಹಲಿಗೆ ಬಂದಿದ್ದ ರಾಜ್ಯದ ವಿದ್ಯಾರ್ಥಿಗಳು ರಾತ್ರಿ 8ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ. ರಾತ್ರಿ 8ಗಂಟೆಯ ಇಂಡಿಗೋ ವಿಮಾನದ ಮೂಲಕ ರಾತ್ರಿ 10-50ಕ್ಕೆ ಬೆಂಗಳೂರು ತಲುಪಲಿದ್ದಾರೆ.
ಉಕ್ರೇನ್‌ನ ಕಾರ್ಕ್ಯೂ ವಿವಿ ಕ್ಯಾಂಪಸ್ ಹೊರಗೆ ಅಗತ್ಯ ವಸ್ತುಗಳ ಖರೀದಿಗೆ ಸ್ಪಲ್ಪ ಹೊತ್ತು ಅವಕಾಶ ನೀಡಲಾಗಿದೆ. ದಾವಣಗೆರೆ ಮೂಲದ ಪ್ರವೀಣ್ ಬಾದಾಮಿ ಹಾಗೂ ಸ್ನೇಹಿತರು ಅಗತ್ಯ ವಸ್ತುಗಳ ಖರೀದಿ ಮಾಡಿದ್ದಾರೆ. ಸದ್ಯ ಇಲ್ಲಿ ಪ್ರತಿಯೊಂದಕ್ಕೂ ಪರದಾಡುವ ಸ್ಥಿತಿ ಇದೆ ಎಂದು ಟಿವಿ9ಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿ ಪ್ರವೀಣ್ ಬಾದಾಮಿ ಮಾಹಿತಿ ನೀಡಿದ್ದಾರೆ. ಪ್ರವೀಣ್ ಬಾದಾಮಿ, ಉಕ್ರೇನ್ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.
ಉಕ್ರೇನ್‌ನಿಂದ 9 ಸಾವಿರ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಬಹಳಷ್ಟು ವಿದ್ಯಾರ್ಥಿಗಳು ಸುರಕ್ಷಿತ ಪ್ರದೇಶದಲ್ಲಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.
ಭಾರತದ ವೈದ್ಯಕೀಯ ವಿದ್ಯಾರ್ಥಿ ಸಾವಿನ ಸುದ್ದಿ ಕೇಳಿ ಬರುತ್ತಿದ್ದಂತೆ ರಷ್ಯಾ ಮತ್ತು ಉಕ್ರೇನ್ ರಾಯಭಾರ ಕಚೇರಿ ಅಧಿಕಾರಿಗಳಿಗೆ ಬುಲಾವ್ ನೀಡಿದ ಭಾರತ
ಉಕ್ರೇನ್ನಲ್ಲಿ ನವೀನ್ ಸಾವು ಹಿನ್ನಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ. ಈ ಸುದ್ದಿಯನ್ನು ಕೇಳಲು ದುಃಖವಾಗುತ್ತಿದೆ. ನವೀನ್ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದೇನೆ. ಉಳಿದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತ ತಲುಪಲಿ. ಸಂಘರ್ಷ ಆದಷ್ಟು ಬೇಗ ಅಂತ್ಯವಾಗಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Feel terrible to hear this news. Prayers for his family. Pray for the safety of all other Indians stranded and hope they will be back home soon. Hope the conflict will soon come to an end. https://t.co/aHq7F8Nu8m
— Arvind Kejriwal (@ArvindKejriwal) March 1, 2022
ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದೆ. ಪೋಲೆಂಡ್‌ನ ಲಾಸ್ಕ್ ಸೇನಾ ವಾಯು ನೆಲೆಗೆ NATO ಸೆಕ್ರೆಟರಿ ಜನರಲ್ ಭೇಟಿ ನೀಡಿದ್ದಾರೆ. NATO ಸೆಕ್ರೆಟರಿ ಜನರಲ್ ಪೋಲೆಂಡ್‌ನಿಂದ ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
ಇದುವರೆಗೆ 694 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿರುವ ಬಗ್ಗೆ ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕದಲ್ಲಿರುವ ನೋಡಲ್ ಆಫೀಸರ್ ಮಾಹಿತಿ ನೀಡಿದ್ದಾರೆ.
ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸಾವು. ಭಾರತೀಯ ವಿದೇಶಾಂಗ ಇಲಾಖೆಯಿಂದ ಮಾಹಿತಿ. ಮೃತ ನವೀನ್ ಕರ್ನಾಟಕದ ಹಾವೇರಿ ಮೂಲದವರು. ಖಾರ್ಕಿವ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿದ್ದು ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದರು.
ನವೀನ್ ಅವರ ತಂದೆ ಶೇಖರಗೌಡ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವಾನ ಹೇಳಿದ್ದಾರೆ. ದೂರವಾಣಿಯಲ್ಲಿ ಮಾತನಾಡಿ ಸಾವನ್ನಪ್ಪಿದ ನವೀನ್ ಬಗ್ಗೆ ಮಾಹಿತಿ ಪಡೆದ ಸಿಎಂ, ಇದು ನಿಜಕ್ಕೂ ದೊಡ್ಡ ದುರಂತ, ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ನೀವು ಧೈರ್ಯದಿಂದಿರಿ ಎಂದು ಸಾಂತ್ವಾನ ಹೇಳಿದ್ದಾರೆ.
ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ವಿದೇಶಾಂಗ ಇಲಾಖೆಯಿಂದ ಮಾಹಿತಿ ಹೊರಬಿದ್ದಿದೆ. 21 ವರ್ಷದ ನವೀನ್ ಕುಟುಂಬದವರ ಜೊತೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ.
ವಿದೇಶಾಂಗ ಸಚಿವಾಲಯದ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದ್ದಾರೆ. ರವಿಕುಮಾರ್ಗೆ ನವೀನ್ ಸಾವಿನ ಬಗ್ಗೆ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ. ಪಾಸ್ಪೋರ್ಟ್ ಅಡ್ರೆಸ್ ಇರುವ ಸ್ಥಳಕ್ಕೆ ಸರ್ಕಾರದ ಹಿರಿಯ ಅಧಿಕಾರಿಗಳು ಎಸ್ಪಿಗೆ ರವಾನಿಸಿದ್ದಾರೆ.
ನವೀನ್ ಶೇಖರಪ್ಪ ಜ್ಞಾನಗೌಡರ್ ಶೂಟೌಟ್ನಲ್ಲಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಮಾಧ್ಯಮಗಳಲ್ಲಿ ಬಂತು. ವಿದೇಶಾಂಗ ಸಚಿವಲಾಯದವರ ಜೊತೆ ಮಾತಾನಾಡಿದ್ದೇವೆ. ಖಚಿತತೆ ಇಲ್ಲ ಅಂದಿದ್ದಾರೆ. ಹೀಗಾಗಿ ನಾವು ನವೀನ್ ಅವರ ಪೋಷಕರಿಗೆ ಕರೆ ಮಾಡಿದ್ದೇವು. ನಮಗೆ ವಿದೇಶಾಂಗ ಸಚಿವಲಾಯದಿಂದಲೋ ಎಲ್ಲಿಂದಲೋ ಕರೆ ಬಂದಿದೆ ಅಂತ ಪೋಷಕರು ಹೇಳಿದ್ದಾರೆ. ಹೀಗಾಗಿ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಎಂಬೆಸ್ಸಿ ಸೂಚನೆ ಇಲ್ಲದೇ ಹೊರ ಬರಬೇಡಿ. ಪರಿಸ್ಥಿತಿಯನ್ನ ನೋಡಿಕೊಂಡು ವಿದ್ಯಾರ್ಥಿಗಳು ನಿರ್ಧಾರ ಮಾಡಿ. ವಿದ್ಯಾರ್ಥಿಗಳು ಯೋಚನೆ ಮಾಡಿ ನಿರ್ಧಾರ ಮಾಡಿ. ಎಂಬೆಸ್ಸಿ ಸಂಪರ್ಕದಲ್ಲಿರಿ. ನಮಗೆ ಎಂಇಎಯಿಂದ ಇದುವರೆಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕದಲ್ಲಿರುವ ನೋಡಲ್ ಆಫಿಸರ್ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ 2022ರ ಪುರುಷರ ವಾಲಿಬಾಲ್ ವಿಶ್ವ ಚಾಂಪಿಯನ್‌ಶಿಪ್ ಅನ್ನು ಸ್ಥಳಾಂತರ ಮಾಡಲಾಗಿದೆ. ರಷ್ಯಾದಿಂದ ವಾಲಿಬಾಲ್ ವಿಶ್ವ ಚಾಂಪಿಯನ್‌ಶಿಪ್ ಸ್ಥಳಾಂತರ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ವಾಲಿಬಾಲ್ ಒಕ್ಕೂಟ ಘೋಷಣೆ ಮಾಡಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಹೀಗಾಗಿ ಗೂಗಲ್ ಆರ್ಟಿ, ಸ್ಪುಟ್ನಿಕ್‌ನ ಯುಟ್ಯೂಬ್ ಚಾನಲ್ ಬಂದ್ ಮಾಡಲಾಗಿದೆ.
ಉಕ್ರೇನ್‌ನ ಖಾರ್ಕಿವ್‌ನಲ್ಲಿ ವ್ಯಾಸಂಗ ಮಾಡ್ತಿದ್ದ ನವೀನ್ ಸಾವನ್ನಪ್ಪಿದ್ದಾನೆ. ಖಾರ್ಕಿವ್‌ನಲ್ಲಿ ಐವರು ಸ್ನೇಹಿತರ ಜೊತೆ ಇದ್ದ ನವೀನ್, ಬೆಳಗ್ಗೆ ತಿಂಡಿ ತರಲು ಹೊರ ಹೋಗಿದ್ದಾಗ ರಷ್ಯಾ ದಾಳಿ ನಡೆದಿದೆ. ರಷ್ಯಾ ಸೇನೆ ದಾಳಿಗೆ ವಿದ್ಯಾರ್ಥಿ ನವೀನ್ ಬಲಿಯಾಗಿದ್ದಾನೆ. ಬೆಳಗ್ಗೆ 8 ಗಂಟೆಗೆ ರಾಜ್ಯಪಾಲರ ಭವನ ಮೇಲೆ ರಷ್ಯಾ ದಾಳಿ ಮಾಡಿತ್ತು, ಇದಕ್ಕೂ ಮುನ್ನ ರಷ್ಯಾ ನಡೆಸಿದ ದಾಳಿಗೆ ನವೀನ್ ಬಲಿಯಾಗಿದ್ದಾನೆ.
ರಷ್ಯಾ ಮತ್ತು ಉಕ್ರೇನ್‌ನ ರಾಯಭಾರಿಗಳನ್ನು ಕರೆಸಿಕೊಂಡು ವಿದೇಶಾಂಗ ಕಾರ್ಯದರ್ಶಿ ಮನವಿ ಮಾಡಿದ್ದಾರೆ. ಭಾರತೀಯರ ಸ್ಥಳಾಂತರಕ್ಕೆ ಖಾರ್ಕಿವ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಸುರಕ್ಷಿತ ಮಾರ್ಗಕ್ಕಾಗಿ ಮನವಿ ಮಾಡಲಾಗಿದೆ. ನವೀನ್ ಸಾವಿನ ಬೆನ್ನಲ್ಲೆ ಮತ್ತೊಮ್ಮೆ ಭಾರತ ಮನವಿ ಸಲ್ಲಿಸಿದೆ.
ಉಕ್ರೇನ್‌ನ ಖಾರ್ಕಿವ್‌ನಲ್ಲಿ ಹಾಸನದ ಸರಸ್ವತಿ ಸಿಲುಕಿದ್ದಾಳೆ. ಹೇಮಾವತಿ ನಗರದ ಸುದೀಶ್, ನಾಗಮಣಿ ದಂಪತಿಯ ಪುತ್ರಿ ಉಕ್ರೇನ್ನಲ್ಲಿ 3ನೇ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದಾಳೆ. ಸದ್ಯ ಮಗಳು ಸರಸ್ವತಿ ಸಂಕಷ್ಟದಲ್ಲಿದ್ದಾಳೆಂದು ಪೋಷಕರು ಅಳಲು ತೊಡಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿರುವ ಎಂಬಿಬಿಎಸ್ ವಿದ್ಯಾರ್ಥಿನಿ ಸಹನಾ ಪಾಟೀಲ್ ಮನೆಗೆ ಸಚಿವ ನಿರಾಣಿ ಭೇಟಿ ನೀಡಿದ್ದಾರೆ. ಸಹನಾ ಪಾಟೀಲ್ ಪೋಷಕರಿಗೆ ಸಚಿವ ನಿರಾಣಿ ಧೈರ್ಯ ತುಂಬಿದ್ದಾರೆ. ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ವಿದ್ಯಾರ್ಥಿನಿ ಸಹನಾ ಪಾಟೀಲ್ ಪೋಷಕರಿಗೆ ಸಚಿವ ನಿರಾಣಿ ಭರವಸೆ ನೀಡಿದ್ದಾರೆ.
ಇದುವರೆಗೆ 694 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಹೀಗಾಗಿ ವಿದೇಶಾಂಗ ಸಚಿವಾಲಯದ ಜೊತೆ ನೋಡಲ್ ಆಫಿಸರ್ ಸಂಪರ್ಕದಲ್ಲಿದ್ದಾರೆ.
ಕೊನೆಗೂ ಖಾರ್ಕೀವ್ ನಗರದಲ್ಲಿನ ಕನ್ನಡಿಗ ವಿದ್ಯಾರ್ಥಿಗಳಿಗೆ ತವರಿಗೆ ಬರುವ ಭಾಗ್ಯ ಸಿಕ್ಕಿದೆ. ಲಗೇಜ್ ಸಿದ್ಧಪಡಿಸಿಕೊಳ್ಳಲು ಹಾಸ್ಟೆಲ್ ಮೇಲ್ವಿಚಾರಕರು ಹೇಳಿದ್ದಾರೆ. ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ ವಿದ್ಯಾರ್ಥಿಗಳು ಲಗೇಜ್ ಸಿದ್ಧಪಡಿಸಿಕೊಳ್ಳಲು ಸೂಚಿಸಿದ್ದಾರೆ. ಆದರೆ ಯಾವ ಮಾರ್ಗದಿಂದ ಕರೆದೊಯ್ತುತ್ತಾರೆ. ಹೇಗೆ ಕರೆದೊಯ್ಯುತ್ತಾರೆ ಎಂದು ಹೇಳಿಲ್ಲ. ಎಲ್ಲ ವಿದ್ಯಾರ್ಥಿಗಳು ಲಗೇಜ್ ಸಿದ್ಧಪಡಿಸಿಕೊಂಡು ಸಿದ್ದರಾಗುತ್ತಿದ್ದೇವೆ ಎಂದು ಎಮ್ಬಿಬಿಎಸ್ ವಿದ್ಯಾರ್ಥಿ ಕಿರಣ ಸವದಿ ಮಾಹಿತಿ ನೀಡಿದ್ದಾರೆ.
ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ರಷ್ಯಾ ಸೇನೆಯ ರಾಕೆಟ್ ದಾಳಿಗೆ ನವೀನ್ ಬಲಿಯಾಗಿದ್ದಾರೆ. ಮೃತ ನವೀನ್ ಕರ್ನಾಟಕದ ಹಾವೇರಿ ಮೂಲದವರು. ಬೆಳಗ್ಗೆ ನಡೆದ ರಾಕೆಟ್ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದಾನೆ. ಖಾರ್ಕಿವ್‌ನ ಶವಾಗಾರದಲ್ಲಿ ನವೀನ್ ಮೃತದೇಹ ಇರಿಸಲಾಗಿದೆ. ಉಕ್ರೇನ್‌ನ ಖಾರ್ಕಿವ್‌ನಲ್ಲಿ ನವೀನ್ ವ್ಯಾಸಂಗ ಮಾಡುತ್ತಿದ್ದ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿದಿದ್ದು, ಚೆರ್ನಿಹಿವ್‌ನಲ್ಲಿ ರಷ್ಯಾ ಸೇನೆಗೆ ನಾಗರಿಕರು ಮುತ್ತಿಗೆ ಹಾಕಿದ್ದಾರೆ.
ರಷ್ಯಾ ದುಷ್ಟ ಶಕ್ತಿ, ಅದನ್ನು ಆರ್ಥಿಕವಾಗಿ ನಾಶಪಡಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ ರಷ್ಯಾ, ಬೆಲಾರಸ್ ಕ್ರೀಡಾಪಟುಗಳನ್ನು ಅಮಾನತು ಮಾಡಲಾಗಿದೆ. ಅಂತಾರಾಷ್ಟ್ರೀಯ ಐಸ್ ಸ್ಕೇಟಿಂಗ್ ಸ್ಪರ್ಧೆಗಳಿಂದ ಅಮಾನತು ಮಾಡಲಾಗಿದೆ.
ಉಕ್ರೇನ್ನಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಖಾರ್ಕಿವ್‌ನಲ್ಲಿ ಸಂಕಷ್ಟದಲ್ಲಿ 200 ವಿದ್ಯಾರ್ಥಿಗಳು ಸಿಲುಕಿದ್ದಾರೆ. 200 ವಿದ್ಯಾರ್ಥಿಗಳ ಪೈಕಿ ರಾಜ್ಯದ 90 ವಿದ್ಯಾರ್ಥಿಗಳಿದ್ದಾರೆ. ಊಟ, ತಿಂಡಿ ನೀರಿಗೂ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಯಾವುದೇ ಅಧಿಕಾರಿಗಳು ವಿದ್ಯಾರ್ಥಿಗಳ ಸಂಪರ್ಕಕ್ಕೆ ಸಿಗುತ್ತಿಲ್ಲ. ಬೇರೆ ದೇಶದ ಪ್ರಜೆಗಳು ಸುರಕ್ಷಿತವಾಗಿ ಹೋಗುತ್ತಿದ್ದಾರೆ ಎಂದು ಉಕ್ರೇನ್‌ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಇಂದು ಸಂಜೆ 4.20 ಕ್ಕೆ ಉಕ್ರೇನ್‌ನಿಂದ ನಾಲ್ವರು ವಿದ್ಯಾರ್ಥಿಗಳು ಬೆಂಗಳೂರು ತಲುಪಲಿದ್ದಾರೆ. ದೆಹಲಿಯಿಂದ ಮುಂಬೈ ಮಾರ್ಗವಾಗಿ ಬೆಂಗಳೂರು ತಲುಪಲಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಖೆರ್ಸನ್ ನಗರವನ್ನು ರಷ್ಯಾ ಸೇನೆ ಸುತ್ತುವರಿದಿದೆ. ಖಾರ್ಕಿವ್ ನಗರದಲ್ಲಿ ಕ್ಷಿಪಣಿ ದಾಳಿ ಮಾಡಿದ್ದು, 6 ಜನರು ಗಾಯಗೊಂಡಿದ್ದಾರೆ.
ಭಾರತ ಸರ್ಕಾರದಿಂದ ಭಾರತೀಯರ ಸ್ಥಳಾಂತರಕ್ಕೆ ಐಎಎಫ್ ವಿಮಾನಗಳ ನಿಯೋಜನೆ ಮಾಡಲಾಗಿದೆ. ಕಾರ್ಯಾಚರಣೆಗೆ ಸಿ-17 ಸೇನಾ ವಿಮಾನಗಳ ಬಳಕೆ ಮಾಡಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನಲೆಯಲ್ಲಿ ಕೂಡಲೇ ಕೀವ್ ನಗರವನ್ನು ತೊರೆಯುವಂತೆ ಭಾರತೀಯ ನಿವಾಸಿಗಳಿಗೆ ರಾಯಭಾರ ಕಚೇರಿ ಸಲಹೆ ನೀಡಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಸೇನೆಗೆ ಮತ್ತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಸಂದೇಶದಲ್ಲಿ ಅಧ್ಯಕ್ಷ ಝೆಲೆನ್‌ಸ್ಕಿ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರಲು ಪ್ರಧಾನಿ ವಿಶೇಷ ಕಾಳಜಿ ವಹಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಮಾಹಿತಿ ತಲುಪಿಸಿದೆ. ಹಂತ ಹಂತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತಾಯ್ನಾಡಿಗೆ ಬರುವ ವಿಶ್ವಾಸವಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೆಳಗಾವಿಯಲ್ಲಿ ಹೇಳಿದ್ದಾರೆ.
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಹಾಸನದ ವಿದ್ಯಾರ್ಥಿನಿ ಸರಸ್ವತಿ ಮತ್ತು ದಾವಣಗೆರೆಯ ವಿನಯ್ ಸಿಲುಕಿದ್ದಾರೆ.
ಪೋಷಕರಿಗೆ ಕಡೆ ಮಾಡಿದ್ದ ಸರಸ್ವತಿ ತಮ್ಮ ಪರಿಸ್ಥಿತಿ ವಿವರಿಸಿದರು. ಮಗಳ ಮಾತು ಕೇಳಿ ಪೋಷಕರು ಕಣ್ಣೀರಿಟ್ಟರು. ಭಾರತೀಯ ರಾಯಭಾರಿ ಕಚೇರಿ ಪ್ರತಿಕ್ರಿಯಿಸುತ್ತಿಲ್ಲ. ಪಶ್ಚಿಮ ಗಡಿಗೆ ತೆರಳಲು ಯತ್ನಿಸಿದರೂ ಅವಕಾಶ ಆಗುತ್ತಿಲ್ಲ. ಬೆಳಿಗ್ಗೆ ನಾಲ್ಕು ಗಂಟೆಯಲ್ಲಿ ಬಾಂಬ್ ಶಬ್ದ ಕೇಳಿಸಿತು. ಬಂಕರ್‌ನಲ್ಲಿದ್ದ ನೂರು ಜನರ ಪೈಕಿ ಕೆಲವರು ಹೊರಗೆ ಹೊರಟಿದ್ದಾರೆ. ಸ್ವಂತ ರಿಸ್ಕ್ ಮೇಲೆ ಹೋಗುವುದಾದ್ರೆ ರೈಲು ಸಿದ್ಧವಿದೆ ಎನ್ನುತ್ತಿದ್ದಾರೆ. ಉಕ್ರೇನ್ ಸೈನಿಕರು ನಮ್ಮ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ. ಬಾಂಬ್ಗಳ ಸದ್ದು ಹೆಚ್ಚಾಗುತ್ತಿದೆ ಎಂದು ಸರಸ್ವತಿ ವಿಡಿಯೊ ಕಾಲ್ನಲ್ಲಿ ಅಳಲು ತೋಡಿಕೊಂಡರು.
ದಾವಣಗೆರೆಯ ವಿದ್ಯಾರ್ಥಿ ವಿನಯ್ ಕಲ್ಲಿಹಾಳು ಪ್ರಸ್ತುತ ಎಂಬಿಬಿಎಸ್ನ 4 ವರ್ಷದ 7ನೇ ಸೆಮಿಸ್ಟರ್ ಓದುತ್ತಿದ್ದಾರೆ. ಶಿವರಾತ್ರಿ ಹಬ್ಬವಿದ್ದರೂ ಕುಟುಂಬ ಆತಂದಲ್ಲಿದ್ದು, ಮಗನಿಗಾಗಿ ಕಾಯುತ್ತಿದೆ.
ಉಕ್ರೇನ್‌ನ ಪ್ರಮುಖ ನಗರ ಖಾರ್ಕಿವ್‌ನಲ್ಲಿ ಹಾಸನದ ವಿದ್ಯಾರ್ಥಿನಿ ಸರಸ್ವತಿ ಮತ್ತು ದಾವಣಗೆರೆಯ ವಿನಯ್ ಸಿಲುಕಿದ್ದಾರೆ. ಪೋಷಕರಿಗೆ ಕಡೆ ಮಾಡಿದ್ದ ಸರಸ್ವತಿ ತಮ್ಮ ಪರಿಸ್ಥಿತಿ ವಿವರಿಸಿದರು. ಮಗಳ ಮಾತು ಕೇಳಿ ಪೋಷಕರು ಕಣ್ಣೀರಿಟ್ಟರು. ಭಾರತೀಯ ರಾಯಭಾರಿ ಕಚೇರಿ ಪ್ರತಿಕ್ರಿಯಿಸುತ್ತಿಲ್ಲ. ಪಶ್ಚಿಮ ಗಡಿಗೆ ತೆರಳಲು ಯತ್ನಿಸಿದರೂ ಅವಕಾಶ ಆಗುತ್ತಿಲ್ಲ. ಬೆಳಿಗ್ಗೆ ನಾಲ್ಕು ಗಂಟೆಯಲ್ಲಿ ಬಾಂಬ್ ಶಬ್ದ ಕೇಳಿಸಿತು. ಬಂಕರ್‌ನಲ್ಲಿದ್ದ ನೂರು ಜನರ ಪೈಕಿ ಕೆಲವರು ಹೊರಗೆ ಹೊರಟಿದ್ದಾರೆ. ಸ್ವಂತ ರಿಸ್ಕ್ ಮೇಲೆ ಹೋಗುವುದಾದ್ರೆ ರೈಲು ಸಿದ್ಧವಿದೆ ಎನ್ನುತ್ತಿದ್ದಾರೆ. ಉಕ್ರೇನ್ ಸೈನಿಕರು ನಮ್ಮ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ. ಬಾಂಬ್ಗಳ ಸದ್ದು ಹೆಚ್ಚಾಗುತ್ತಿದೆ ಎಂದು ಸರಸ್ವತಿ ವಿಡಿಯೊ ಕಾಲ್ನಲ್ಲಿ ಅಳಲು ತೋಡಿಕೊಂಡರು.
ದಾವಣಗೆರೆಯ ವಿದ್ಯಾರ್ಥಿ ವಿನಯ್ ಕಲ್ಲಿಹಾಳು ಪ್ರಸ್ತುತ ಎಂಬಿಬಿಎಸ್ನ 4 ವರ್ಷದ 7ನೇ ಸೆಮಿಸ್ಟರ್ ಓದುತ್ತಿದ್ದಾರೆ. ಶಿವರಾತ್ರಿ ಹಬ್ಬವಿದ್ದರೂ ಕುಟುಂಬ ಆತಂದಲ್ಲಿದ್ದು, ಮಗನಿಗಾಗಿ ಕಾಯುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಯಾವುದೇ ದೇಶದ ಪ್ರಜೆಗಳು ತಮ್ಮ ದೇಶಕ್ಕೆ ನೆರವು ನೀಡಲು ಬಂದರೆ, ಅಂಥವರಿಗೆ ಮುಕ್ತ ಅವಕಾಶ ಇದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ. ವಿದೇಶಿಯರು ನೇರವಾಗಿ ಉಕ್ರೇನ್‌ಗೆ ಪ್ರವೇಶಿಸಬಹುದು ಎಂದು ವೀಸಾ ರಹಿತ ಪ್ರಯಾಣಕ್ಕೆ ಅನುಮತಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ರೈಲು ನಿಲ್ದಾಣದಿಂದ ಹೊರಗೆ ತೆರಳುತ್ತಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ನೆರವು ನೀಡಲೆಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಿಬ್ಬಂದಿ ರೈಲು ನಿಲ್ದಾಣಗಳಿಗೆ ಧಾವಿಸಿದ್ದಾರೆ. ಕೀವ್ನಿಂದ ಉಕ್ರೇನ್‌ನ ಪಶ್ಚಿಮ ಭಾಗದ ಕಡೆಗೆ ಈಗಾಗಲೇ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿದೆ. ಕೀವ್ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಎಲ್ಲ ವಿದ್ಯಾರ್ಥಿಗಳಿಗೂ ವಿಶೇಷ ರೈಲುಗಳನ್ನು ಹತ್ತಲು ಸಾಧ್ಯವಾಗುತ್ತಿಲ್ಲ. ಅಸಹಾಯಕ ಸ್ಥಿತಿಯಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳನ್ನು ರಕ್ಷಿಸಲು ವಿದೇಶಾಂಗ ಇಲಾಖೆ ಯತ್ನಿಸುತ್ತಿದೆ.
ಉಕ್ರೇನ್-ಪೊಲೆಂಡ್ ಗಡಿಯಲ್ಲಿರುವ ಶೆಹ್ಯನಿ ಗಡಿ ಠಾಣೆಗೆ ಪೊಲೆಂಡ್ ರಾಜಧಾನಿ ವಾರ್ಸಾದಿಂದ ಬಸ್ಗಳನ್ನು ಕಳುಹಿಸಿಕೊಡಲು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ. ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಸಹ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಪೊಲೆಂಡ್ಗೆ ತೆರಳುತ್ತಿದ್ದಾರೆ.
ರಷ್ಯಾದ 29 ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಉಕ್ರೇನ್ ಸೇನೆ ಹೇಳಿದೆ. ಈವರೆಗೆ 29 ಯುದ್ಧವಿಮಾನಗಳು, 29 ಹೆಲಿಕಾಪ್ಟರ್, 198 ಯುದ್ಧ ಟ್ಯಾಂಕ್, 846 ಸಶಸ್ತ್ರ ವಾಹನ, 305 ವಾಹನ, 77 ತೋಪ್ ಸಿಸ್ಟಮ್, 7 ಏರ್ ಡಿಫೆನ್ಸ್ ಸಾಮಗ್ರಿ, 2 ಹಡಗು, 5710 ಯೋಧರನ್ನು ಹತ್ಯೆಗೈದಿದ್ದಾಗಿ ಹೇಳಿಕೊಂಡಿದೆ. 200 ಯೋಧರನ್ನು ಸೆರೆಹಿಡಿಯಲಾಗಿದೆ ಎಂದೂ ತಿಳಿಸಿದೆ.
ಉಕ್ರೇನ್ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ರಷ್ಯಾ ಪಡೆಗಳು ಒಖ್ತಿರ್ಕಾ, ಸುಮ್‌ಸ್ಕಾ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆಗೆ ಮೂರು ವ್ಯಾಕ್ಯೂಮ್ ಬಾಂಬ್ಗಳನ್ನು ಬಳಸಿದೆ ಎಂದು ಉಕ್ರೇನ್ ಸಚಿವರು ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ವಾತಾವರಣದಲ್ಲಿರುವ ಆಮ್ಲಜನಕವನ್ನು ಹೀರಿ ಉಷ್ಣಾಂಶ ಹೆಚ್ಚಿಸುತ್ತದೆ, ಬಾಂಬ್ ವ್ಯಾಪ್ತಿಯಲ್ಲಿರುವ ಜೀವಿಗಳ ದೇಹದಿಂದ ತೇವಾಂಶ ಬತ್ತಿ ಹೋಗುತ್ತದೆ. ಸಾವು ಭೀಕರವಾಗಿರುತ್ತದೆ.
UNCONFIRMED. Ukrainian media is saying that allegedly in this video could be captured use of vaccum bomb by Russian army. These type of bombs forbidden by Geneva convention.#ukrainewar #ukraineinaction #Ukraine #UkraineUnderAttack pic.twitter.com/92qnpW7CdG
— Ukraine in Action (@ukraineinaction) March 1, 2022
ರಷ್ಯಾ ಸೇನೆಯ ಆಕ್ರಮಣದ ನಂತರ ಉಕ್ರೇನ್‌ನಿಂದ ಹೊರಹೋಗುತ್ತಿರುವ ನಿರಾಶ್ರಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 1 ಲಕ್ಷ ಜನರು ಉಕ್ರೇನ್‌ನಿಂದ ಬಂದಿದ್ದಾರೆ ಎಂದು ಪೊಲೆಂಡ್ ಸರ್ಕಾರದ ಸಚಿವ ಮೆಸಿಜ್ ವಾಸಿಕ್ ಹೇಳಿದ್ದಾರೆ. ಈವರೆಗೆ ಉಕ್ರೇನ್‌ನಿಂದ ಪೊಲೆಂಡ್ಗೆ ಬಂದ ನಿರಾಶ್ರಿತರ ಒಟ್ಟು ಸಂಖ್ಯೆ ಮೂರು ಲಕ್ಷ ದಾಟಿದೆ ಎಂದು ಹೇಳಿದ್ದಾರೆ.
ಈ ಬಾರಿ ರಷ್ಯಾ ಪ್ರಾರಂಭದಲ್ಲಿ ತಾನು ಉಕ್ರೇನ್ ನಾಗರಿಕರ ಮೇಲೆ ಹಲ್ಲೆ ನಡೆಸುವುದಿಲ್ಲ, ಹತ್ಯೆ ಮಾಡುವುದಿಲ್ಲ. ಉಕ್ರೇನ್ ಸೇನೆಯನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ಆದ್ಯತೆ ಎಂದು ಹೇಳಿತ್ತು. ಆದರೆ ಈಗ ರಷ್ಯಾ ಮನಸಿಗೆ ಬಂದಲ್ಲಿ ದಾಳಿ ನಡೆಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ವಿಮಾನ ಮೂಲಕ ಕರ್ನಾಟಕಕ್ಕೆ ಬಂದಿಳಿದ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಪರಿಗಣಿಸಿ ವಿಮಾನ ನಿಲ್ದಾಣದಿಂದ ಅವರ ಊರುಗಳಿಗೆ ತಲುಪಿಸುವ ಮೂಲಕ ಉಚಿತ ಪ್ರಯಾಣವನ್ನು ನೀಡಲು ಕೆಎಸ್ಆರ್ಟಿಸಿ ನಿರ್ಧರಿಸಿದೆ.
ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ನೀಡಲು ಕೆಎಸ್ಆರ್ಟಿಸಿ ನಿರ್ಧಾರ#Ukraine #UkraineRussiaWar #ksrtc @KSRTC_Journeys https://t.co/CYpk4x8YQW
— TV9 Kannada (@tv9kannada) March 1, 2022
ಉಕ್ರೇನ್‌ನ ರಸ್ತೆ ಬದಿಗಳಲ್ಲಿ ಯುದ್ಧ ಟ್ಯಾಂಕ್ಗಳು, ಸಾಮಗ್ರಿಗಳೊಂದಿಗೆ ನಿಂತ ರಷ್ಯಾ ಸೈನಿಕರೊಂದಿಗೆ ಉಕ್ರೇನ್ ನಾಗರಿಕರು ನಡೆಸಿದ ಮಾತುಕತೆ, ಅವರನ್ನು ವಿರೋಧಿಸಿದ ರೀತಿಯ ಹಲವು ತುಣುಕುಗಳನ್ನು ವಿಡಿಯೋ ಒಳಗೊಂಡಿದೆ. ಅದರಲ್ಲಿ ಉಕ್ರೇನಿಯನ್ ಪ್ರಜೆಯೊಬ್ಬ ರಷ್ಯಾದ ಯುದ್ಧ ಟ್ಯಾಂಕ್ನ್ನು ತನ್ನ ಕೈಯಲ್ಲೇ ಹಿಡಿದಿಡಲು ಪ್ರಯತ್ನ ಪಟ್ಟಿದ್ದನ್ನು ನೋಡಬಹುದು. ರಷ್ಯಾ ತನ್ನ ಸೈನಿಕರನ್ನು ಉಕ್ರೇನ್‌ಗೆ ಕಳಿಸುವಾಗ ಅವರಿಗೆ, ನಿಮ್ಮನ್ನು ಉಕ್ರೇನ್ನಲ್ಲಿ ನಾಗರಿಕರು ಹೂವುಕೊಟ್ಟು ಸ್ವಾಗತಿಸುತ್ತಾರೆ ಎಂಬ ಭರವಸೆ ನೀಡಿತ್ತು. ಆದರೆ ಉಕ್ರೇನ್ ಜನರು ಖಾಲಿ ಕೈಯಲ್ಲಿಯೇ ರಷ್ಯಾದ ಸೈನಿಕರು ಮತ್ತು ಯುದ್ಧ ಟ್ಯಾಂಕ್ಗಳ ವಿರುದ್ಧ ಹೋರಾಡುತ್ತಿದ್ದಾರೆ.
ರಷ್ಯಾ ದಾಳಿಯಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಉಕ್ರೇನ್ ಜನರ ಪರಿಸ್ಥಿತಿ ಬಿಂಬಿಸುವ ಚಿತ್ರಗಳು ಇಲ್ಲಿವೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎನ್ನುತ್ತಾರೆ. ಮಾನವೀಯ ಬಿಕ್ಕಟ್ಟಿನ ಈ ಚಿತ್ರಸಂಪುಟ ನೋಡಲು ಇಲ್ಲಿ ಕ್ಲಿಕ್ ಮಾಡಿ.
ರಷ್ಯಾ ದಾಳಿಗೆ ಚೂರು ಚೂರಾದ ಉಕ್ರೇನ್ ಜನರ ಜೀವನ: ಇಲ್ಲಿದೆ ಯುದ್ಧನಾಡಿನ ಫೋಟೋಗಳು#world #ukrainephotoshttps://t.co/Qmq6E2mYkR
— TV9 Kannada (@tv9kannada) March 1, 2022
ಕೀವ್ ನಗರದಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ತಕ್ಷಣ ಕೀವ್ ನಗರ ತೊರೆಯಿರಿ. ಎಂದು ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಎಚ್ಚರಿಸಿದೆ.
Advisory to Indians in Kyiv
All Indian nationals including students are advised to leave Kyiv urgently today. Preferably by available trains or through any other means available.
— India in Ukraine (@IndiainUkraine) March 1, 2022
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್ ಕಾರ್ಯಾಚರಣೆ ಚುರುಕುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಪ್ರಧಾನಿ ಸೂಚನೆಯ ಮೇರೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಸ್ಲೊವಾಕಿಯಾಗೆ ತೆರಳಿದ್ದು, ಉಕ್ರೇನ್‌ನಲ್ಲಿ ಸಿಲುಕಿರುವವರ ಭಾರತೀಯರ ಏರ್‌ಲಿಫ್ಟ್ ಕಾರ್ಯಾಚರಣೆಯ ನಿಗಾ ವಹಿಸಲಿದ್ದಾರೆ. ಈ ನಡುವೆ ಏರ್‌ಲಿಫ್ಟ್ ಕಾರ್ಯಾಚರಣೆಗೆ ಭಾರತೀಯ ವಾಯುಸೇನೆಯ ಸಿ-17 ಗ್ಲೋಬ್ಮಾಸ್ಟರ್ ವಿಮಾನವನ್ನೂ ಬಳಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬೃಹತ್ ವಿಮಾನ ಬಳಕೆ ಸಾಧ್ಯವಾದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ಸ್ವದೇಶಕ್ಕೆ ಕರೆತರಲು ಸಾಧ್ಯವಾಗುತ್ತದೆ.
ಆದರೆ ‘ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸದವರು ನಮ್ಮ ವಿರೋಧಿಗಳಿದ್ದಂತೆ’ ಎಂದು ಅಮೆರಿಕ ಘೋಷಿಸಿರುವುದು ಭಾರತವೂ ಸೇರಿದಂತೆ ಹಲವು ದೇಶಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದಂತೆ ಆಗಿದೆ. ರಕ್ಷಣಾ ಉಪಕರಣಗಳ ನಿರ್ವಹಣೆಗಾಗಿ ರಷ್ಯಾವನ್ನು ನೆಚ್ಚಿಕೊಂಡಿರುವ ಭಾರತಕ್ಕೆ ಇದು ಬಿಸಿತುಪ್ಪವಾಗಿದೆ. ಚೀನಾ ಮತ್ತು ಪಾಕಿಸ್ತಾನಗಳಿಂದ ಭದ್ರತೆಗೆ ಆತಂಕ ಎದುರಿಸುತ್ತಿರುವ ಭಾರತಕ್ಕೆ ರಷ್ಯಾವನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ. ಹಾಗೆಂದು ರಷ್ಯಾ ಪರ ಮಾತನಾಡಿ ಅಮೆರಿಕವನ್ನು ಎದುರು ಹಾಕಿಕೊಂಡರೆ ಆರ್ಥಿಕತೆ ಹೊಡೆತ. ಹೀಗಾಗಿ ಭಾರತ ಅಡಕತ್ತರಿಯಲ್ಲಿ ಸಿಲುಕಿದಂತೆ ಆಗಿದೆ.
ರಷ್ಯಾದ ಕರೆನ್ಸಿ ರೂಬಲ್ ಮತ್ತು ಭಾರತದ ಕರೆನ್ಸಿ ರೂಪಾಯಿ ವಿನಿಮಯಕ್ಕೆ ಡಾಲರ್ ಆಶ್ರಯ ಬೇಕಿಲ್ಲ ಎನ್ನುವ ಒಪ್ಪಂದವೊಂದು ಚಾಲ್ತಿಯಲ್ಲಿದೆ. ಇದು ಎರಡೂ ದೇಶಗಳಿಗೂ ಅನುಕೂಲ ಕಲ್ಪಿಸಿಕೊಡುತ್ತದೆ. ಇದೀಗ ಅಮೆರಿಕ ಮತ್ತು ಯೂರೋಪ್ ಬ್ಯಾಂಕ್ಗಳು ರಷ್ಯಾ ವಿರುದ್ಧ ದಿಗ್ಬಂಧನ ಹೇರಿರುವುದರಿಂದ ರಷ್ಯಾಕ್ಕೆ ವಿದೇಶಗಳೊಂದಿಗೆ ಹಣಕಾಸು ವ್ಯವಹಾರ ಇರಿಸಿಕೊಳ್ಳಲು ಈ ಕ್ರಮ ಸಹಾಯಕ. ಇದೇ ಕಾರಣಕ್ಕೆ ಭಾರತದ ಬಗ್ಗೆ ಹಲವು ದೇಶಗಳು ಕೆಂಗಣ್ಣ ಬೀರುತ್ತಿರುವುದೂ ಉಂಟು.
ಉಕ್ರೇನ್ ಮೇಲೆ ರಷ್ಯಾ ದಂಡೆತ್ತಿ ಹೋಗಿರುವುದನ್ನು ವಿಶ್ವದ ಬಹುತೇಕ ದೇಶಗಳು ಖಂಡಿಸಿವೆ. ಐರೋಪ್ಯ ಒಕ್ಕೂಟದ ಸದಸ್ಯತ್ವಕ್ಕೆ ಬೆಂಬಲಿಸುವುದು, ಶಸ್ತ್ರಾಸ್ತ್ರ ಹಾಗೂ ಹಣಕಾಸು ನೆರವು ಒದಗಿಸುವುದೂ ಸೇರಿದಂತೆ ಹಲವು ರೀತಿಯಲ್ಲಿ ಹತ್ತಾರು ದೇಶಗಳು ಉಕ್ರೇನ್ ಸಹಾಯಕ್ಕೆ ಮುಂದಾಗಿವೆ. ಭಾರತವೂ ಉಕ್ರೇನ್‌ಗೆ ಮಾನವೀಯತೆಯ ದೃಷ್ಟಿಯಿಂದ ವೈದ್ಯಕೀಯ ಉಪಕರಣಗಳಿಗೆ ಕಳಿಸಿಕೊಡುವುದಾಗಿ ಘೋಷಿಸಿದೆ. ಆದರೆ ಸ್ಪಷ್ಟವಾಗಿ ಮತ್ತು ಕಟುವಾಗಿ ರಷ್ಯಾ ನಡೆಯನ್ನು ಖಂಡಿಸಲು ಭಾರತ ಸರ್ಕಾರಕ್ಕೆ ಆಗುತ್ತಿಲ್ಲ.
ಉಕ್ರೇನ್ನಲ್ಲಿ ನೆಲೆಸಿರುವ ಭಾರತೀಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಭಾರತ ಸರ್ಕಾರವು ಹೇಗಾದ್ರೂ ಸರಿ, ತಕ್ಷಣ ಕೀವ್ ನಗರದಿಂದ ಹೊರಗೆ ಬನ್ನಿ ಎಂದು ನಿರ್ದೇಶನ ನೀಡಿದೆ. ಕೀವ್ ನಗರದ ಸುತ್ತ ಜಮಾಯಿಸಿರುವ ರಷ್ಯಾ ಪಡೆಗಳು ಯಾವುದೇ ಕ್ಷಣದಲ್ಲಿ ದಾಳಿ ತೀವ್ರಗೊಳಿಸಬಹುದು ಎಂಬ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಸೂಚನೆ ಮಹತ್ವ ಪಡೆದಿದೆ.
ಯುದ್ಧಪೀಡಿತ ಉಕ್ರೇನ್‌ನಲ್ಲಿರುವ ಸಾವಿರಾರು ಭಾರತೀಯರು ಸ್ವದೇಶಕ್ಕೆ ಹಿಂದಿರುಗಬೇಕೆಂದು ತಹತಹಿಸುತ್ತಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭವಾಗಿ ಆರು ದಿನಗಳಾಗಿವೆ. ಕಳೆದ ಮೂರು ದಿನಗಳಿಂದ ತೆರವು ಕಾರ್ಯಾಚರಣೆ ಚುರುಕುಗೊಳಿಸಿರುವ ಭಾರತ ಸರ್ಕಾರವು ಉಕ್ರೇನ್‌ನಲ್ಲಿ ಸಿಲುಕಿದ್ದ 1,396 ಮಂದಿಯನ್ನು ‘ಆಪರೇಷನ್ ಗಂಗಾ’ ಯೋಜನೆಯಡಿ ಕಾರ್ಯಾಚರಣೆ ನಡೆಸಿ ಸ್ವದೇಶಕ್ಕೆ ಕರೆತಂದಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.
1396 Indians brought back home safely from Ukraine in three days.
Continuous monitoring is being done by Modi Government for expanding the evacuation process through #OperationGanga. pic.twitter.com/vedQvRHrMj
— Piyush Goyal (@PiyushGoyal) March 1, 2022
ವಿಶ್ವಸಂಸ್ಥೆಯಲ್ಲಿದ್ದ ರಷ್ಯಾದ 12 ರಾಜತಾಂತ್ರಿಕರನ್ನು ಅಮೆರಿಕ ಗೂಢಚರ್ಚೆಯ ಆರೋಪ ಹೊರಿಸಿ ಗಡಿಪಾರು ಮಾಡಿದೆ. ಅಮೆರಿಕದ ಕ್ರಮವನ್ನು ರಷ್ಯಾ ತೀವ್ರವಾಗಿ ಖಂಡಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಜಾಗ ಕೊಟ್ಟಿರುವ ಅಮೆರಿಕ ಆತಿಥೇಯ ದೇಶವಾಗಿ ಅನುಸರಿಸಬೇಕಾದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದೂರಿದೆ. ‘ನಮ್ಮ ದೇಶಕ್ಕೆ ಹಾನಿಯುಂಟು ಮಾಡುವ ಚಟುವಟಿಕೆಗಳಲ್ಲಿ ಈ ರಾಜತಾಂತ್ರಿಕರು ತೊಡಗಿಸಿಕೊಂಡಿದ್ದಾರೆ. ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸುತ್ತಿದ್ದೇವೆ’ ಎಂದು ಅಮೆರಿಕ ಸರ್ಕಾರವು ವಿಶ್ವಸಂಸ್ಥೆಯಲ್ಲಿರುವ ರಷ್ಯಾದ ಶಾಶ್ವತ ಪ್ರತಿನಿಧಿಗೆ ತಿಳಿಸಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮಂಗಳವಾರ ಮುಂಜಾನೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಸಂಘರ್ಷವೂ ಸೇರಿದಂತೆ ಹಲವು ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದರು.
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಹಾಸನ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಂಗಳವಾರ ಮಾತನಾಡಿ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಿದರು. ಎಲ್ಲರನ್ನೂ ಸ್ವದೇಶಕ್ಕೆ ಕರೆಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿವೆ. ಧೈರ್ಯವಾಗಿ ಇರಿ, ಏನೇ ಸಮಸ್ಯೆಯಾದರೂ ನನ್ನ ನಂಬರ್‌ಗೆ ಕಾಲ್ ಮಾಡಿ, ನಾನೇ ರಿಸೀವ್ ಮಾಡುತ್ತೇನೆ ಎಂದು ಧೈರ್ಯ ತುಂಬಿದರು. ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೊಮ್ಮಾಯಿಯವರು ವಿಶೇಷ ಕ್ರಮ ಕೈಗೊಂಡಿದ್ದಾರೆ. ನಿಮ್ಮ ಜೊತೆ ಇರೋರಿಗೂ ಧೈರ್ಯ ಹೇಳಿ ಎಂದರು.
ಉಕ್ರೇನ್‌ಗೆ ಐರೋಪ್ಯ ಒಕ್ಕೂಟದ (European Union) ಸದಸ್ಯತ್ವ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಐರೋಪ್ಯ ಒಕ್ಕಟದ ಪರವಾಗಿ ಉಕ್ರೇನ್ ವಿದ್ಯಮಾನಗಳನ್ನು ಗಮನಿಸುವ ಜವಾಬ್ದಾರಿ ಹೊತ್ತಿರುವ ಯೂರೋಪಿಯನ್ ಅಟಾಮಿಕ್ ಎನರ್ಜಿ ಕಮ್ಯುನಿಟಿಯ ಸೆವೊಲೊಡ್ ಚೆಂಟೊವ್ ಹೇಳಿದ್ದಾರೆ.
President @ZelenskyyUa has signed application for the membership of #Ukraine in the European Union.
This is a historic moment! pic.twitter.com/rmzdgIwArc
— Verkhovna Rada of Ukraine (@ua_parliament) February 28, 2022
ಉಕ್ರೇನ್ ಮೇಲೆ ರಷ್ಯಾ ದಾಳಿ 6ನೇ ದಿನವೂ ಮುಂದುವರಿದಿದೆ. ಉಕ್ರೇನ್-ರೊಮಾನಿಯಾ ಗಡಿಯಲ್ಲಿರುವ ಸಿರೆಟ್‌ನ ತಾತ್ಕಾಲಿಕ ಶಿಬಿರದಲ್ಲಿ ಭಾರತೀಯ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದು, ತೆರವು ಕಾರ್ಯಾಚರಣೆಯ ನಿರೀಕ್ಷೆಯಲ್ಲಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದನ್ನು ವರ್ಲ್ಡ್ ಟೇಕ್ವಾಂಡೊ ಅಸೊಸಿಯೇಷನ್ ಖಂಡಿಸಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಗೌರವಸೂಚಕವಾಗಿ ಕೊಟ್ಟಿದ್ದ ಬ್ಲಾಕ್ಬೆಲ್ಟ್ ಅನ್ನು ಟೆಕ್ವಾಂಡೊ ಅಸೋಸಿಯೇಷನ್ ಹಿಂಪಡೆದಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಡೆದುಕೊಂಡಿದ್ದ ಗೌರವ ಟೇಕ್ವಾಂಡೋ ಬ್ಲಾಕ್ ಬೆಲ್ಟ್ ಅನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದುಕೊಂಡಿದೆ.#VladimirPutin #BlackBelt #RussiaUkrainehttps://t.co/xBArTqz8I4
— TV9 Kannada (@tv9kannada) March 1, 2022
ಉಕ್ರೇನ್ ಮೇಲೆ ರಷ್ಯಾ 6ನೇ ದಿನವೂ ಭೀಕರ ದಾಳಿ ಮುಂದುವರಿಸಿದೆ. ರಷ್ಯಾ ದಾಳಿಯಲ್ಲಿ 70 ಉಕ್ರೇನ್ ಯೋಧರು ಮೃತಪಟ್ಟಿದ್ದಾರೆ. ಕೀವ್, ಖಾರ್ಕಿವ್ ನಡುವಿನ ಓಖ್ತಿರ್ಕಾದಲ್ಲಿರುವ ಸೇನಾ ನೆಲೆ ಮೇಲೆ ರಷ್ಯಾ ಭೀಕರ ದಾಳಿ ನಡೆಸಿದೆ. ಉಕ್ರೇನ್ ನಾಗರಿಕರು ಮನೆಯಲ್ಲೇ ಇರಬೇಕು ಎಂದು ಸರ್ಕಾರ ಸಲಹೆ ಮಾಡಿದೆ. ವೊಲಿನ್, ಟೆರ್ನೋಪಿಲ್‌ನಲ್ಲಿ ವಾಯುದಾಳಿ ನಡೆಯಬಹುದು ಎಂದು ಸರ್ಕಾರ ಎಚ್ಚರಿಸಿದೆ.
ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ಹೊತ್ತು ರೊಮೇನಿಯಾದಿಂದ ಮುಂಬೈಗೆ ವಿಮಾನ ಆಗಮಿಸಿದೆ. ಈ ವಿಮಾನದಲ್ಲಿ ನಾಲ್ವರು ಕನ್ನಡಿಗರು ಇದ್ದಾರೆ. ಇವರಿಗೆ ಬೆಂಗಳೂರಿಗೆ ತೆರಳಲು ರಾಜ್ಯದ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ ಎಂದು ರಕ್ಷಣಾ ವಿಭಾಗದ ಅಧಿಕಾರಿ ರವಿ ಕರಲಿಂಗಣ್ಣವರ್ ಟಿವಿ9ಗೆ ಮಾಹಿತಿ.
ರಷ್ಯಾನ್ನರೇ ರಷ್ಯಾದ ಈ ನಡೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೀಗ ಮತ್ತೊಂದು ಉದಾಹರಣೆ ಸಿಕ್ಕಿದೆ. ರಷ್ಯಾದ ಖ್ಯಾತ ಟೆನಿಸ್ ಆಟಗಾರ್ತಿ ಅನಸ್ತಾಸಿಯಾ ಪಾವ್ಲ್‌ಯುಚೆಂಕೋವಾ (Anastasia Pavlyuchenkova) ಯುದ್ದವನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.
— Anastasia Pavlyuchenkova (@NastiaPav) February 28, 2022
ಉಕ್ರೇನ್ ರಾಜಧಾನಿ ಕೀವ್ ಮತ್ತು ಪ್ರಮುಖ ನಗರ ಖಾರ್ಕಿವ್ ಮೇಲೆ ರಷ್ಯಾ ಸೇನೆ ರಾತ್ರಿಯಿಡೀ ಗುಂಡಿನ ದಾಳಿ ನಡೆಸಿತು. ಕೀವ್ ಬಳಿ ರಷ್ಯಾ ಸೈನಿಕರು ಘೇರಾಬಂದಿ ಮಾಡಿದ್ದಾರೆ. ಇಡೀ ನಗರಕ್ಕೆ ರಷ್ಯಾ ಸೇನೆ ಮುತ್ತಿಗೆ ಹಾಕಿದ್ದು, ನಾಗರಿಕರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ಉಕ್ರೇನ್‌ಗೆ 75 ಮಿಲಿಯನ್ ಡಾಲರ್ ನೆರವನ್ನು ಆಸ್ಟ್ರೇಲಿಯಾ ಘೋಷಿಸಿದೆ.
ಉಕ್ರೇನ್ ದೇಶದಲ್ಲಿ ಕೊಡಗಿನ ಯುವಕ ಅಪಾಯದಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿದೆ. ಕಗ್ಗತ್ತಲ ಬಂಕರ್ನಲ್ಲಿ ಅನ್ನ ಆಹಾರವಿಲ್ಲದೆ ಯುವಕ ಪರದಾಟ ಪಡುತ್ತಿದ್ದಾನೆ ಎಂದು ಮಾಹಿತಿ ಲಭಿಸಿದೆ. ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಚಂದನ್ ಉಕ್ರೇನ್‌ನ ಕಾರ್ಕಿವ್ ನಲ್ಲಿ ಇದ್ದಾರೆ. ಬಂಕರ್ನಲ್ಲಿ ಅವಿತಿರುವ ಕರ್ನಾಟಕದ ಒಂಭತ್ತು ಮಂದಿ ಅಲ್ಲಿ ಬಿಸ್ಕೆಟ್, ಟ್ಯಾಪ್ ವಾಟರ್ ಕುಡಿದು ಜೀವನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ನಮ್ಮನ್ನು ಹೇಗಾದ್ರು ಮಾಡಿ ಇಲ್ಲಿಂದ ರಕ್ಷಿಸಿ. ಇನ್ನೆರೆಡು ದಿನಗಳಲ್ಲಿ ನಮ್ಮ ಆಹಾರ ಖಾಲಿಯಾಗುತ್ತದೆ. ನಂತರ ನಾವು ಹಸಿವಿನಿಂದಲೆ ಸಾಯುವ ಪರಿಸ್ಥಿತಿ ಬರಲಿದೆ. ನಾವು ಯಾವುದೇ ಕಾರಣಕ್ಕೂ ಹೊರಗೆ ತೆರಳುವಂತಿಲ್ಲ. ಹೊರಗಡೆ ಭಾರೀ ಗುಂಡಿನ ಶಬ್ಧ ಕೇಳುತ್ತಿದೆ ಎಂದು ಟಿವಿ9 ಜೊತೆ ಉಕ್ರೇನ್‌ನಿಂದ ಚಂದನ್ ಸಂಕಷ್ಟ ತೋಡಿಕೊಂಡಿದ್ದಾರೆ. ತಂದೆ ಮಂಜುನಾಥ್ ಪುತ್ರನ ನೆನೆದು ಕಣ್ಣೀರಿಡುತ್ತಿದ್ದಾರೆ.
ದೆಹಲಿಯಿಂದ ಬೆಂಗಳೂರಿನತ್ತ 7 ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ 7 ವಿದ್ಯಾರ್ಥಿಗಳು ತಾಯ್ನಾಡಿನತ್ತ ಮರಳಿದ್ದಾರೆ. ನಿನ್ನೆ ದೆಹಲಿಗೆ ಬಂದಿದ್ದ ವಿದ್ಯಾರ್ಥಿಗಳು ಬೆಂಗಳೂರಿನತ್ತ ಹೊರಟಿದ್ದು ಬೆಳಗ್ಗೆ 10.45ಕ್ಕೆ ಬೆಂಗಳೂರು ತಲುಪಲಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ 182 ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದೆ. ‘ಆಪರೇಷನ್ ಗಂಗಾ’ 7ನೇ ವಿಮಾನ ಮುಂಬೈಗೆ ಆಗಮಿಸಿದೆ. ರೊಮೇನಿಯಾದ ಬುಕಾರೆಸ್ಟ್‌ನಿಂದ ಮುಂಬೈಗೆ ಆಗಮನ ಆಗಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಭಾರತೀಯರಿಗೆ ಸ್ವಾಗತ ಕೋರಲಾಗಿದೆ. ಕೇಂದ್ರ ಸಚಿವ ನಾರಾಯಣ್ ರಾಣೆಯಿಂದ ಸ್ವಾಗತ ಕೋರಲಾಗಿದೆ.
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ 7 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಈ ಪೈಕಿ ಅಥಣಿ ತಾಲೂಕಿನ ಐವರು, ರಾಯಭಾಗ, ನಿಪ್ಪಾಣಿ ತಾಲೂಕಿನ ತಲಾ ಒಬ್ಬರು ಇದ್ದಾರೆ. ಉಕ್ರೇನ್ನಲ್ಲಿ ಸದ್ಯ ಪರಿಸ್ಥಿತಿ ಚೆನ್ನಾಗಿಲ್ಲ. ಊಟಕ್ಕೂ ಪರದಾಡಬೇಕಾದ ಪರಸ್ಥಿತಿ ಉಂಟಾಗಿದೆ. ಅಥಣಿ ತಾಲ್ಲೂಕಿನ ಮಲಾಬಾದ ಗ್ರಾಮದ ಆನಂದ ನಾಜರೆ, ಅಥಣಿ ಪಟ್ಟಣದ ಆಪರೀನಾ ನೀಡೋಣಿ ಹಾಗೂ ರಕ್ಷೀತ್ ಗಣಿ. ತೇಲಸಂಗ್ ಗ್ರಾಮದ ನಾಗೇಶ್ ಪೂಜಾರಿ ಹಾಗೂ ರಾಕೇಶ್ ಪೂಜಾರಿ, ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದ ಪ್ರೀಯಾ ನಿಡಗುಂದಿ, ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಸೂರಜ್ ಬಾಗೋಜಿ ಮರಳಿ ತಾಯ್ನಾಡಿಗೆ ಬರಲು ಕಾತರದಿಂದ ಕಾಯುತ್ತಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವಂತೆ ಭಾರತ ಸರ್ಕಾರವು ಸಲಹೆ ನೀಡಿದೆ. ರಾಜತಾಂತ್ರಿಕ ಚರ್ಚೆಯೇ ಇದಕ್ಕೆ ಪರಿಹಾರ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
Peaceful settlement of disputes has been India's consistent position; my govt firmly believes that there's no other choice but to return to the path of diplomacy: India's Permanent Rep to UN, TS Tirumurti, at 11th Emergency Special Session of UNGA on #Ukraine pic.twitter.com/TjLeLpr5nR
— ANI (@ANI) March 1, 2022
ರಷ್ಯಾ ಸೇನೆಯ ವಿರುದ್ಧದ ಹೋರಾಟಕ್ಕೆ ತನ್ನೆಲ್ಲಾ ಸಂಪನ್ಮೂಲಗಳನ್ನು ಕ್ರೋಡೀಕರಿಸಿರುವ ಉಕ್ರೇನ್ ಇದೀಗ ಕೈದಿಗಳಿಗೂ ಶಸ್ತ್ರಾಸ್ತ್ರ ಕೊಟ್ಟು ಹೋರಾಡುವಂತೆ ಪ್ರೇರೇಪಿಸುತ್ತಿದೆ. ಉಕ್ರೇನ್‌ನ ಈ ನಿರ್ಧಾರವನ್ನು ರಷ್ಯಾ ತೀವ್ರವಾಗಿ ವಿರೋಧಿಸಿದೆ. ಕೈದಿಗಳಿಗೆ ಶಸ್ತ್ರಾಸ್ತ್ರ ನೀಡಿದರೆ ದೊಡ್ಡಮಟ್ಟದಲ್ಲಿ ದರೋಡೆ, ಕೊಲೆಗಳಾಗುತ್ತವೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ಆತಂಕ ವ್ಯಕ್ತಪಡಿಸಿತು.
ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರಷ್ಯಾ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಚೆರ್ನೋಬಿಲ್ ಸ್ಥಾವರದಲ್ಲಿ ವಿಕಿರಣ ಸೋರಿಕೆ ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆ ವಿಶೇಷ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಆತಂಕ ವ್ಯಕ್ತಪಡಿಸಿದೆ.
ಉಕ್ರೇನ್ನಲ್ಲಿ ಕದನ ವಿರಾಮ ಘೋಷಿಸಬೇಕಿದೆ: ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆ ಅಭಿಪ್ರಾಯ#UNGA #UkraineRussiaWar #Ukraine #Russia https://t.co/TqCgXYsqbh
— TV9 Kannada (@tv9kannada) February 28, 2022
ಉಕ್ರೇನ್ನಲ್ಲಿ ಸಿಲುಕಿದ್ದ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಮಹಾಗಣಪತಿ ಬಿಳಿಮಗ್ಗದ ಕುಟುಂಬಕ್ಕೆ ಮರಳಿದ್ದಾರೆ. ಮನೆಗೆ ಬಂದ ಮಗನಿಗೆ ಕುಟುಂಬದ ಸದಸ್ಯರು ಆರತಿ ಬೆಳಗಿ ಬರಮಾಡಿಕೊಂಡರು. ಉಕ್ರೇನ್‌ನ ಚರ್ನಿವಿಸಿ ನಗರದಲ್ಲಿ ಇವರು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಪೋಲೆಂಡ್, ಹಂಗೇರಿ ಮಾರ್ಗವಾಗಿ ಬೆಂಗಳೂರಿಗೆ ಬಂದು, ಅಲ್ಲಿಂದ ಸ್ವಗ್ರಾಮಕ್ಕೆ ಬಂದರು.
ರಷ್ಯಾ ದಾಳಿಗೆ ನಲುಗಿರುವ ಉಕ್ರೇನ್‌ಗೆ ಇಂಗ್ಲೆಂಡ್ ಹಣಕಾಸಿನ ನೆರವು ಘೋಷಿಸಿದೆ. ಉಕ್ರೇನ್‌ಗೆ 54 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ. ಯುದ್ಧದಿಂದ ಆಗಿರುವ ಹಾನಿ ಮತ್ತು ದೇಶದ ಅಭಿವೃದ್ಧಿಗಾಗಿ 500 ಮಿಲಿಯನ್ ಡಾಲರ್ ಸಾಲ ನೀಡುವುದಾಗಿಯೂ ಇಂಗ್ಲೆಂಡ್ ಭರವಸೆ ನೀಡಿದೆ.
ಯುದ್ಧಪೀಡಿತ ಉಕ್ರೇನ್‌ಗೆ ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಭಾರತ ಸರ್ಕಾರವು ಮುಂದಾಗಿದೆ. ಮಾನವೀಯತೆಯ ದೃಷ್ಟಿಯಿಂದ ಭಾರತವು ನೆರವು ಒದಗಿಸುತ್ತಿದ್ದು, ನಾಳೆಯೇ ಈ ವಸ್ತುಗಳನ್ನು ರವಾನಿಸಲಾಗುವುದು ಎಂದು ಕೇಂದ್ರ ಸರ್ಕಾರವು ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ನೋ-ಫ್ಲೈ ಜೋನ್ ರೂಪಿಸಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊದ್ಮಿರ್ ಝೆಲೆನ್ಸ್ಕಿ ಕರೆ ನೀಡಿದ್ದಾರೆ. ಈ ಮೂಲಕ ಬಾಂಬ್ ದಾಳಿಗೆ ಕಡಿವಾಣ ಹಾಕಬೇಕು ಎಂದು ವಿನಂತಿಸಿದ್ದಾರೆ. ಆದರೆ ಅಮೆರಿಕ ವಿನಂತಿಯನ್ನು ತಳ್ಳಿ ಹಾಕಿದೆ.
ರಷ್ಯಾ ಸೇನೆಯ ದಾಳಿಯ ನಂತರ ಉಕ್ರೇನ್‌ನಿಂದ ಸುಮಾರು 5.20 ಲಕ್ಷ ಜನರು ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ವಲಸೆ ಹೋಗಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್‌ಗೆ ತೆರಳಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ವಿದ್ಯಾರ್ಥಿನಿ ಶಕ್ತಿಶ್ರೀ ತವರಿಗೆ ಮರಳಿದಿದ್ದಾರೆ. ಉಕ್ರೇನ್ ಗಲಭೆ ಹಿನ್ನೆಲೆಯಲ್ಲಿ ಅವರನ್ನು ಏರ್‌ಲಿಫ್ಟ್ ಕಾರ್ಯಾಚರಣೆಯ ಮೂಲಕ ತಡರಾತ್ರಿ ಸ್ವದೇಶಕ್ಕೆ ಕರೆತರಲಾಯಿತು. ಪುತ್ರಿ ಆಗಮನದಿಂದಾಗಿ ಆತಂಕದಲ್ಲಿದ್ದ ಪೋಷಕರು ನಿರಾಳರಾದರು.
ರಷ್ಯಾ ದಾಳಿಯಿಂದ ಜರ್ಝರಿತವಾಗಿರುವ ಉಕ್ರೇನ್‌ಗೆ ಅಗತ್ಯ ನೆರವು ನೀಡುವುದಾಗಿ ಫಿನ್‌ಲ್ಯಾಂಡ್ ದೇಶವು ಭರವಸೆ ನೀಡಿದೆ. ಅಗತ್ಯ ಶಸ್ತ್ರಾಸ್ತ್ರ ಒದಗಿಸುವುದಾಗಿ ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಘೋಷಿಸಿದ್ದಾರೆ.
ರಷ್ಯಾ ವಿರುದ್ಧ ವಿಶ್ವದ ಹಲವು ದೇಶಗಳು ಆರ್ಥಿಕ ದಿಗ್ಬಂಧನ ವಿಧಿಸಿವೆ. ರಷ್ಯಾ ಬ್ಯಾಂಕುಗಳಿಗೆ ನಿರ್ಬಂಧ ಇರುವ ಕಾರಣ ರಷ್ಯಾದಲ್ಲಿರುವ ಅಮೆರಿಕನ್ನರು ಹಣ ಹಿಂಪಡೆಯಲು ಸಾಧ್ಯವಾಗದೆ ಪರದಾಡುವಂತಾಗಿದೆ. ಬ್ಯಾಂಕ್ ಕಾರ್ಡ್‌ಗಳು ಕೆಲಸ ಮಾಡುತ್ತಿಲ್ಲ.
ಉಕ್ರೇನ್‌ನಿಂದ ಹಂಗೇರಿಗೆ ಬಂದಿದ್ದ 216 ಭಾರತೀಯರನ್ನು ಭಾರತ ಸರ್ಕಾರವು ‘ಆಪರೇಷನ್ ಗಂಗಾ’ ಕಾರ್ಯಾಚರಣೆಯ ಮೂಲಕ ಏರ್‌ಲಿಫ್ಟ್ ಮಾಡಿದೆ. ಈ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
Eighth #OperationGanga flight leaves from Budapest for New Delhi with 216 Indian nationals.
Our endeavor for everyone’s safe return continues. https://t.co/aUclKB8MJF
— Dr. S. Jaishankar (@DrSJaishankar) February 28, 2022
ರಷ್ಯಾ ಮತ್ತು ಉಕ್ರೇನ್ ನಿಯೋಗಗಳ ಮಧ್ಯೆ ಬೆಲರೂಸ್ ಗಡಿಯಲ್ಲಿ ಶಾಂತಿ ಮಾತುಕತೆ ನಡೆಯಿತು. ಎರಡೂ ದೇಶಗಳು ತಮ್ಮ ನಿಲುವುಗಳಿಗೆ ಅಂಟಿಕೊಂಡ ಹಿನ್ನೆಲೆಯಲ್ಲಿ ಮಾತುಕತೆ ಪ್ರಗತಿ ಕಾಣಲಿಲ್ಲ. ಉಕ್ರೇನ್ ದೇಶದ ಸೇನೆಯು ಶಸ್ತ್ರ ತ್ಯಜಿಸಬೇಕು. ತಟಸ್ಥ ಸ್ಥಿತಿ ಖಾತ್ರಿಪಡಿಸಬೇಕೆಂದು ರಷ್ಯಾ ಷರತ್ತು ವಿಧಿಸಿತು. ರಷ್ಯಾ ಕೂಡಲೇ ಕದನ ವಿರಾಮ ಘೋಷಿಸಬೇಕು. ಸೇನೆಯನ್ನ ವಾಪಸ್ ಕರೆಸಿಕೊಳ್ಳಬೇಕು ಎಂದು ಉಕ್ರೇನ್ ತನ್ನ ಷರತ್ತು ಹೇಳಿತು. ಹೀಗಾಗಿ ಉಕ್ರೇನ್, ರಷ್ಯಾದ ಶಾಂತಿ ಸಂಧಾನ ಸಭೆ ಪ್ರಗತಿ ಕಾಣಲಿಲ್ಲ.
ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರ ಏರ್‌ಲಿಫ್ಟ್ ಕಾರ್ಯಾಚರಣೆ ಮುಂದುವರಿದಿದೆ. ‘ಆಪರೇಷನ್ ಗಂಗಾ’ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ 9ನೇ ವಿಮಾನವು ರೊಮೇನಿಯಾದ ಬುಕಾರೆಸ್ಟ್‌ನಿಂದ ದೆಹಲಿಯತ್ತ ಹೊರಟಿದೆ. ಈ ವಿಮಾನದಲ್ಲಿ 218 ಭಾರತೀಯರಿದ್ದಾರೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಮಾಹಿತಿ ನೀಡಿದ್ದಾರೆ.
Published On - Mar 01,2022 6:33 AM