ಆಸ್ಟ್ರಾಜೆನೆಕಾ – ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕೊರೊನಾ ಲಸಿಕೆ ಈಗಾಗಲೇ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಬಳಕೆಗೆ ಅನುಮತಿ ಗಿಟ್ಟಿಸಿಕೊಂಡಿದೆ. ಭಾರತದಲ್ಲಿಯೂ ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇದೇ ಕೊರೊನಾ ಲಸಿಕೆಯನ್ನು ಕೊವಿಶೀಲ್ಡ್ ಹೆಸರಲ್ಲಿ ಉತ್ಪಾದಿಸಿ ವಿತರಣೆ ಮಾಡಿದೆ. ಆದರೆ, ಈಗ ನಡೆದಿರುವ ಕೆಲ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಯುರೋಪ್, ಏಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳು ಸದರಿ ಕೊರೊನಾ ಲಸಿಕೆಯ ಬಳಕೆಗೆ ಹಠಾತ್ ಕತ್ತರಿ ಹಾಕಿವೆ. ಆಸ್ಟ್ರಾಜೆನೆಕಾ ಲಸಿಕೆ ಸ್ವೀಕರಿಸಿದ ಒಂದಷ್ಟು ವ್ಯಕ್ತಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣಗಳು ತೋರಿಬಂದಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆಯೆಂದು ರಾಷ್ಟ್ರಗಳು ಸ್ಪಷ್ಟನೆ ನೀಡಿವೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಕೆಲ ದೇಶಗಳು ತಾವು ಲಸಿಕೆ ಬಳಕೆಯನ್ನು ಮುಂದುವರೆಸುವುದಾಗಿಯೂ, ಅವು ಸುರಕ್ಷಿತ ಎಂಬ ಭರವಸೆ ತಮಗಿರುವುದಾಗಿಯೂ ತಿಳಿಸಿವೆ.
ಥೈಲ್ಯಾಂಡ್ ಆಸ್ಟ್ರಾಜೆನೆಕಾ ಲಸಿಕೆ ಬಳಕೆಗೆ ತಡೆ ನೀಡಿದ ಏಷ್ಯಾ ಪ್ರಾಂತ್ಯದ ಮೊದಲ ದೇಶವೆಂದು ಗುರುತಿಸಿಕೊಂಡಿದೆ. ಅದರ ಬೆನ್ನಲ್ಲೇ ಡೆನ್ಮಾರ್ಕ್ ಕೂಡ ಲಸಿಕೆಗೆ ಎರಡು ವಾರಗಳ ತಾತ್ಕಾಲಿಕ ತಡೆ ಘೋಷಿಸಿದ್ದು, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಮತ್ತು ಓರ್ವ ವ್ಯಕ್ತಿಯ ಸಾವಿನ ನಂತರ ಈ ನಿಲುವನ್ನು ತಳೆದಿದೆ ಎಂದು ವರದಿಯಾಗಿದೆ.
ನಾರ್ವೇ, ಐಸ್ಲ್ಯಾಂಡ್, ಬಲ್ಗೇರಿಯಾ, ಲುಕ್ಸೆಮ್ಬರ್ಗ್, ಇಸ್ಟೋನಿಯಾ, ಲಿಥುಯೇನಿಯಾ ಮತ್ತು ಲ್ಯಾಟ್ವಿಯಾ ಸೇರಿದಂತೆ 7 ದೇಶಗಳು ಸಹ ಆಸ್ಟ್ರಾಜೆನೆಕಾ ಲಸಿಕೆಯನ್ನು ಬಳಸಲು ಹಿಂದೇಟು ಹಾಕಿರುವುದರಿಂದ ಯುರೋಪ್ ಪ್ರಾಂತ್ಯದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಹಿನ್ನೆಡೆ ಆಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಇನ್ನೊಂದೆಡೆ, ಆಸ್ಟ್ರೇಲಿಯಾ ಹಾಗೂ ಇಟಲಿ ನಿರ್ದಿಷ್ಟ ಬ್ಯಾಚ್ನ ಕೊರೊನಾ ಲಸಿಕೆಗೆ ತಡೆ ಒಡ್ಡಿರುವುದಾಗಿ ಹೇಳಿಕೊಂಡಿವೆ.
ಇದೆಲ್ಲದರ ನಡುವೆಯೂ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಯುರೋಪ್ ಔಷಧ ನಿಯಂತ್ರಣಾ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಸಂಸ್ಥೆಗಳು ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಯಾವುದೇ ಅಧಿಕೃತ ಪುರಾವೆಗಳು ಸಿಕ್ಕಿಲ್ಲ. ಸದ್ಯ ಯುರೋಪಿನ 50 ಲಕ್ಷಕ್ಕೂ ಅಧಿಕ ಮಂದಿ ಈಗಾಗಲೇ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ಸ್ವೀಕರಿಸಿದ್ದು, 30 ಪ್ರಕರಣಗಳಲ್ಲಿ ಮಾತ್ರ ರಕ್ತ ಹೆಪ್ಪುಗಟ್ಟುವಿಕೆ ಮಾದರಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದಾಗಿ ವರದಿಯಾಗಿದೆ. ಇನ್ನು ಆಸ್ಟ್ರಾಜೆನೆಕಾ ಸಂಸ್ಥೆ ಸಹ ತನ್ನ ಲಸಿಕೆಯ ಬಗ್ಗೆ ಸಂಪೂಣರ್ ವಿಶ್ವಾಸ ವ್ಯಕ್ತಪಡಿಸಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:
ಕೊರೊನಾ ಲಸಿಕೆ ಪಡೆದ ಸಿಎಂ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್
ದೇಶದಲ್ಲಿ ಈವರೆಗೆ 2.60 ಕೋಟಿಗೂ ಅಧಿಕ ಕೊರೊನಾ ಲಸಿಕೆ ವಿತರಣೆ; ಪಂಜಾಬ್ನಲ್ಲಿ ಮತ್ತೆ ಶುರುವಾಯ್ತು ನೈಟ್ ಕರ್ಫ್ಯೂ
Published On - 7:08 pm, Fri, 12 March 21