ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮೈಮೇಲೆಲ್ಲ ಗಾಯ; ವಕೀಲರಿಂದ ಗಂಭೀರ ಆರೋಪ
ಇದೀಗ ಮೆಹುಲ್ ಚೋಸ್ಕಿ ಜೈಲಿನಲ್ಲಿರುವ, ಅವರ ದೇಹದ ಮೇಲೆಲ್ಲ ಗಾಯಗಳಾಗಿರುವ ಫೋಟೋಗಳು ಇಂಡಿಯಾ ಟುಡೆ ಟಿವಿ ಮಾಧ್ಯಮಕ್ಕೆ ಲಭ್ಯವಾಗಿವೆ.
ಡೊಮಿನಿಕಾದಲ್ಲಿ ಅರೆಸ್ಟ್ ಆಗಿದ್ದ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಕೆಲವು ಫೋಟೋಗಳು ವೈರಲ್ ಆಗಿವೆ. ಆಂಟುಗುವಾ ಪೌರತ್ವ ಪಡೆದು, ಅಲ್ಲಿಯೇ ನೆಲೆಸಿದ್ದ ಚೋಸ್ಕಿ ತನ್ನ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಡೊಮಿನಿಕಾಕ್ಕೆ ಪರಾರಿಯಾಗಿದ್ದರು. ರಾಷ್ಟ್ರವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂಬ ಆರೋಪದ ಮೇಲೆ ಅಲ್ಲಿನ ಪೊಲೀಸರು ಬಂಧಿಸಿದ್ದರು.
ಇದೀಗ ಮೆಹುಲ್ ಚೋಕ್ಸಿ ಜೈಲಿನಲ್ಲಿರುವ, ಅವರ ದೇಹದ ಮೇಲೆಲ್ಲ ಗಾಯಗಳಾಗಿರುವ ಫೋಟೋಗಳು ಇಂಡಿಯಾ ಟುಡೆ ಟಿವಿ ಮಾಧ್ಯಮಕ್ಕೆ ಲಭ್ಯವಾಗಿವೆ. ಕಬ್ಬಿಣದ ಗೇಟ್ನ ಹಿಂದೆ ಚೋಸ್ಕಿ ನಿಂತಿರುವ ಫೋಟೋ ಸಿಕ್ಕಿದ್ದು, ಅವರ ಕಣ್ಣೆಲ್ಲ ಕೆಂಪಾಗಿದ್ದನ್ನು ಫೋಟೋದಲ್ಲಿ ನೋಡಬಹುದು. ಅವರ ಕೈ ಮತ್ತು ಮಣಿಕಟ್ಟಿನ ಬಳಿಯೂ ಗಾಯಗಳಾಗಿವೆ.
ಮೆಹುಲ್ ಚೋಕ್ಸಿ ಪರ ವಕೀಲರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚೋಸ್ಕಿಯನ್ನು ಆಂಟಿಗುವಾ ಮತ್ತು ಬಾರ್ಬುಡಾದಿಂದ ಅಪಹರಿಸಿ, ಒತ್ತಾಯ ಪೂರ್ವಕವಾಗಿ ಡೊಮಿನಿಕಾಕ್ಕೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಹೋದ ಮೇಲೆ ಕೆಟ್ಟದಾಗಿ ಹೊಡೆಯಲಾಗಿದೆ. ಹೀಗಾಗಿ ಅವರ ಮೈಮೇಲೆಲ್ಲ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಮೆಹುಲ್ ಚೋಕ್ಸಿ ಸದ್ಯ ಕ್ವಾರಂಟೈನ್ನಲ್ಲಿ ಇದ್ದಾರೆ. ಜೂ.2ರವರೆಗೂ ಚೋಸ್ಕಿಯನ್ನು ಯಾವುದೇ ಬೇರೆ ದೇಶಗಳಿಗೆ ವಾಪಸ್ ಕಳಿಸುವಂತಿಲ್ಲ ಎಂದು ಡೊಮಿನಿಕಾದ ನ್ಯಾಯಾಲಯವೊಂದು ಆದೇಶ ಹೊರಡಿಸಿದೆ. ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನ 13,500 ಕೋಟಿ ರೂ.ವಂಚನೆ ಕೇಸ್ನಲ್ಲಿ ಚೋಕ್ಸಿ ಕೂಡ ಆರೋಪಿಯಾಗಿದ್ದಾರೆ. ಇಲ್ಲಿಂದ ತಲೆಮರೆಸಿಕೊಂಡು ಹೋಗಿದ್ದ ಅವರು 2018ರಿಂದಲೂ ಆಂಟಿಗುವಾದಲ್ಲಿ ವಾಸವಾಗಿದ್ದಾರೆ.
Published On - 8:59 am, Sun, 30 May 21