ಬಿಲ್ಗೇಟ್ಸ್ ವಿರುದ್ಧ ಭಾರತದಲ್ಲಿ ಯಾವುದೇ ಕಾನೂನು ಪ್ರಕ್ರಿಯೆಗಳೂ ನಡೆಯುತ್ತಿಲ್ಲ, ಎಚ್ಪಿವಿ ಲಸಿಕೆ ಸಂಬಂಧಿತ ಮೊಕದ್ದಮೆಯೂ ಇಲ್ಲ
Bill Gates: ಬುಡಕಟ್ಟು ಜನಾಂಗಕ್ಕೆ ಲಸಿಕೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಲ್ಗೇಟ್ಸ್ ವಿರುದ್ಧದ ಮೊಕದ್ದಮೆಗಳು ಯಾವವೂ ಬಾಕಿ ಇಲ್ಲ. ಲಸಿಕೆ ಪ್ರಯೋಗ ಕಾನೂನು ಬಾಹಿರ ಆಗಿರಲಿಲ್ಲ.
ಭಾರತದಲ್ಲಿ ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳಿಗೆ ಕಾನೂನು ಬಾಹಿರವಾಗಿ ಲಸಿಕೆಯೊಂದನ್ನು ನೀಡಲು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಸಹಾಯ ಮಾಡಿದ್ದರು. ಆ ಪ್ರಕರಣಕ್ಕೆ ಸಂಬಂಧಪಟ್ಟ ವಿಚಾರಣೆಯನ್ನು ಬಿಲ್ಗೇಟ್ಸ್ ಈಗಲೂ ಭಾರತದಲ್ಲಿ ಎದುರಿಸುತ್ತಿದ್ದಾರೆ ಎಂಬ ವರದಿ ಇತ್ತೀಚೆಗೆ ಪುನರಾವರ್ತಿತ ಆಗುತ್ತಿರುವ ಬೆನ್ನಲ್ಲೇ ಬಿಲ್ ಗೇಟ್ಸ್ ಫೌಂಡೇಶನ್ ಅದಕ್ಕೆ ಸ್ಪಷ್ಟನೆ ಕೊಟ್ಟಿದೆ. ಈ ಆರೋಪಗಳು ಸುಳ್ಳು. ಬಿಲ್ಗೇಟ್ಸ್ ಭಾರತದಲ್ಲಿ ಯಾವ ವಿಚಾರಣೆಯನ್ನೂ ಎದುರಿಸುತ್ತಿಲ್ಲ ಎಂದು ರಾಯಿಟರ್ಸ್ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗೆ ಗೇಟ್ಸ್ ಫೌಂಡೇಶನ್ ಇಮೇಲ್ ಕಳಿಸಿ, ದೃಢಪಡಿಸಿದೆ.
ಬುಡಕಟ್ಟು ಜನಾಂಗಕ್ಕೆ ಲಸಿಕೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಲ್ಗೇಟ್ಸ್ ವಿರುದ್ಧದ ಮೊಕದ್ದಮೆಗಳು ಯಾವವೂ ಬಾಕಿ ಇಲ್ಲ. ಲಸಿಕೆ ಪ್ರಯೋಗ ಕಾನೂನು ಬಾಹಿರ ಆಗಿರಲಿಲ್ಲ. ಆದರೂ ನಂತರ ಅದನ್ನು ನಿಲ್ಲಿಸಲಾಯಿತು. ಅದು ವಿವಾದಕ್ಕೆ ಕಾರಣವಾಯಿತು ಎಂದು ಫೌಂಡೇಶನ್ ತಿಳಿಸಿದೆ.
ಯುಎಸ್ ಮೂಲದ ಪ್ರೋಗ್ರಾಮ್ ಫಾರ್ ಅಪ್ರೋಪ್ರಿಯೇಟ್ ಟೆಕ್ನಾಲಜಿ ಇನ್ ಹೆಲ್ತ್ (PATH) ಎಂಬ ಎನ್ಜಿಒ ಭಾರತದ ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳ ಮೇಲೆ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಲಸಿಕೆಯನ್ನು ಅನಧಿಕೃತವಾಗಿ ಪ್ರಯೋಗ ಮಾಡಿತ್ತು. PATH ಎನ್ಜಿಒದ ಈ ಪ್ರಯೋಗಕ್ಕೆ ಬಿಲ್ ಆ್ಯಂಡ್ ಮಿಲಿಂದಾ ಫೌಂಡೇಶನ್ ಹಣಕಾಸಿನ ನೆರವು ನೀಡಿತ್ತು. ಎನ್ಜಿಒ ಲಸಿಕೆ ನೀಡಿದ ಬಳಿಕ 7ಮಂದಿ ಹೆಣ್ಣುಮಕ್ಕಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ನಂತರ 2010ರಲ್ಲಿ ಪಾಥ್ ಲಸಿಕೆ ಪ್ರಯೋಗವನ್ನು ನಿಲ್ಲಿಸಿತ್ತು ಎಂಬ ವರದಿಗಳು ಇತ್ತೀಚೆಗೆ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.
ಆದರೆ ನಂತರದ ದಿನಗಳಲ್ಲಿ ಆ ಏಳುಮಂದಿ ಸತ್ತಿದ್ದು ಪಾಥ್ ಎನ್ಜಿಒ ನೀಡಿದ ಲಸಿಕೆಯಿಂದ ಅಲ್ಲ ಎಂಬುದು ಗೊತ್ತಾಗಿದೆ. ಒಬ್ಬಳು ಕಲ್ಲುಕ್ವಾರಿಯಲ್ಲಿ ಮೃತಪಟ್ಟಿದ್ದಾಳೆ.. ಇನ್ನೊಬ್ಬಳು ಹಾವು ಕಡಿದು ಮೃತಪಟ್ಟಿದ್ದಾಳೆ. ಇಬ್ಬರು ಕ್ರಿಮಿನಾಶಕಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಬ್ಬಳು ಮಲೇರಿಯಾಕ್ಕೆ ಒಳಗಾಗಿ ಸಾವನ್ನಪ್ಪಿದ್ದಾಳೆ ಎಂಬುದು ಸ್ಪಷ್ಟವಾಗಿದೆ. ಹಾಗೇ ಇನ್ನಿಬ್ಬರ ಸಾವಿಗೆ ಕಾರಣಗಳು ಸ್ಪಷ್ಟವಾಗಿ ಗೊತ್ತಾಗದಿದ್ದರೂ, ಬೇರೆ ಕೆಲವು ಕಾಯಿಲೆಗಳಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಶನ್ ವೆಬ್ಸೈಟ್ ಬರೆದುಕೊಂಡಿದ್ದು, ನಮ್ಮ ಫೌಂಡೇಶನ್ ಭಾರತದಲ್ಲಿ ದಶಕಗಳಿಂದಲೂ ಕೆಲಸ ಮಾಡುತ್ತಿದೆ. ಭಾರತದ ಬಡ, ದುರ್ಬಲ ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ನಮ್ಮ ಫೌಂಡೇಶನ್ ಭಾರತದಲ್ಲಿ ಯಾವುದೇ ಕಾನೂನು ವಿಚಾರಣೆಯನ್ನೂ ಎದುರಿಸುತ್ತಿಲ್ಲ. ಈಗಲೂ ತನ್ನ ಕೆಲಸವನ್ನು ಮುಂದುವರಿಸಿದೆ ಎಂದು ಸ್ಪಷ್ಟವಾಗಿ ಹೇಳಿದೆ.
Published On - 1:03 pm, Sun, 30 May 21