‘ಕಪ್ಪೆಯ ಚಾಕಲೇಟ್ ಅಲ್ಲ..ಚಾಕಲೇಟ್ ಕಪ್ಪೆ’-ಇದು ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಅಪರೂಪ ಪ್ರಭೇದದ ಕಪ್ಪೆ
ಲಿಟೋರಿಯಾ ಪ್ರಭೇದ ಹೋಲುವ ಈ ಕಪ್ಪೆಗಳಿಗೆ ನಾವು ಮಿರಾ ಎಂದು ಕರೆದಿದ್ದೇವೆ. ಮಿರಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಅಚ್ಚರಿ ಎಂದರ್ಥ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.
ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡವೊಂದು ಹೊಸ ಪ್ರಭೇದದ ಕಪ್ಪೆಯೊಂದನ್ನು ಅನ್ವೇಷಿಸಿದೆ. ಇದು ಚಾಕಲೇಟ್ ಕಪ್ಪೆ (Chocolate Frog)ಯಾಗಿದ್ದು, ನ್ಯೂ ಜಿನಿವಾದ ಮಳೆಕಾಡುಗಳಲ್ಲಿ ಪತ್ತೆಯಾಗಿದೆ. ಚಾಕಲೇಟ್ ಕಪ್ಪೆ ಎಂದಾಕ್ಷಣ ಹ್ಯಾರಿ ಪಾಟರ್ ಸಿನಿಮಾದಲ್ಲಿ ಕಾಣಿಸುವ ಕಪ್ಪೆಯಾಕಾರದ ಚಾಕಲೇಟ್ ಎಂದುಕೊಳ್ಳಬೇಡಿ. ಈಗ ಪತ್ತೆಯಾಗಿದ್ದು ಜೀವಂತ ಕಪ್ಪೆಗಳು. ಥೇಟ್ ಚಾಕಲೇಟ್ನಂತೆಯೇ ಇವೆ. ದೇಹ ಮೆಲ್ಟ್ ಆಗಬಹುದೇನೋ ಎನ್ನುವಷ್ಟು ಮೃದುವಾಗಿದೆ.
ಇದೀಗ ಪತ್ತೆಯಾದ ಹೊಸ ಕಪ್ಪೆಗಳ ಬಗ್ಗೆ ಆಸ್ಟ್ರೇಲಿಯಾದ ಝೂಲಜಿ ಮ್ಯಾಗ್ಜಿನ್ನಲ್ಲಿ ಲೇಖನ ಪ್ರಕಟವಾಗಿದೆ. ಇವು ಲಿಟೋರಿಯಾ ಎಂಬ ಪ್ರಭೇದವನ್ನೇ ಹೋಲುವ ಕಪ್ಪೆಗಳಾಗಿವೆ. ಲಿಟೋರಿಯಾ ವರ್ಗದ ಕಪ್ಪೆಗಳ ಬಣ್ಣ ಸಾಮಾನ್ಯವಾಗಿ ಹಸಿರು ಬಣ್ಣದಲ್ಲಿರುತ್ತದೆ. ಆದರೆ ಈಗ ಪತ್ತೆಯಾದ ಕಪ್ಪೆಗಳು ಪೂರ್ತಿಯಾಗಿ ಕಂದುಬಣ್ಣದಿಂದ ಕೂಡಿವೆ. ಹಾಗಾಗಿ ಅವಕ್ಕೆ ಚಾಕಲೇಟ್ ಕಪ್ಪೆಗಳೆಂದು ಹೆಸರಿಸಲಾಗಿದೆ ಎಂದು ಸಹ ಲೇಖಕರಾದ ಪೌಲ್ ಆಲಿವರ್ ತಿಳಿಸಿದ್ದಾರೆ.
ಲಿಟೋರಿಯಾ ಪ್ರಭೇದ ಹೋಲುವ ಈ ಕಪ್ಪೆಗಳಿಗೆ ನಾವು ಮಿರಾ ಎಂದು ಕರೆದಿದ್ದೇವೆ. ಮಿರಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಅಚ್ಚರಿ ಎಂದರ್ಥ. ನಮಗೆ ಇಂಥದ್ದೊಂದು ಬಣ್ಣದ, ವಿಧದ ಕಪ್ಪೆ ಸಿಕ್ಕಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದು ಹೇಳಿಕೊಂಡಿದ್ದಾರೆ. ಈ ಕಪ್ಪೆಗಳು ತುಂಬ ದೂರ ಚಲಿಸಲು ಸಾಧ್ಯವಿಲ್ಲ. ಇವು ಸಾಕಷ್ಟು ಬಿಸಿಯಾಗಿರುವ ಜೌಗು ಸ್ಥಳದಲ್ಲಿ ವಾಸಿಸುತ್ತವೆ ಎಂದು ಇನ್ನೊಬ್ಬ ಲೇಖಕ ಸ್ಟೀವ್ ರಿಚರ್ಡ್ ತಿಳಿಸಿದ್ದಾರೆ.
ವಿಧವಿಧದ ಕಪ್ಪೆಗಳು ಪತ್ತೆಯಾಗುವುದು ಹೊಸದೇನಲ್ಲ. ಕಳೆದ ವರ್ಷ ಜುಲೈನಲ್ಲಿ ಮಧ್ಯಪ್ರದೇಶದ ನರಸಿಂಗ ಪುರ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಳದಿ ಕಪ್ಪೆಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದ್ದವು. ಅದರ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಶೇರ್ ಮಾಡಿಕೊಂಡಿದ್ದರು. ಮಾನ್ಸೂನ್ನಲ್ಲಿ ಕಪ್ಪೆಗಳು ತಮ್ಮ ಮೈಬಣ್ಣ ಬದಲಿಸುತ್ತವೆ ಎಂಬ ವಿಶೇಷವಾದ ಮಾಹಿತಿಯನ್ನೂ ಹಂಚಿಕೊಂಡಿದ್ದರು.
ಇದನ್ನೂ ಓದಿ: ನಿಮಗೆ ಕನ್ನಡ ಬರುತ್ತಾ? ನೆಟ್ಟಿಗರು ಕೇಳಿದ ವಿಭಿನ್ನ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ ಕೊಹ್ಲಿ; ನೀವೂ ಓದಿ
Published On - 3:25 pm, Sun, 30 May 21