ಪಾಕಿಸ್ತಾನ: ಪ್ರವಾಹದಲ್ಲಿ 1500ಕ್ಕಿಂತಲೂ ಹೆಚ್ಚು ಮಂದಿ ಸಾವು, ಎರಡನೇ ವಿಪತ್ತು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮತ್ತಷ್ಟು ಆಸ್ತಿ ಮತ್ತು ಪ್ರಾಣ ನಷ್ಟವನ್ನು ತಪ್ಪಿಸಲು ಪಾಕಿಸ್ತಾನದ ಕೆಲವು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವಂತೆ ಸಲಹೆ ನೀಡಿದೆ...

ಪಾಕಿಸ್ತಾನ: ಪ್ರವಾಹದಲ್ಲಿ 1500ಕ್ಕಿಂತಲೂ ಹೆಚ್ಚು ಮಂದಿ ಸಾವು, ಎರಡನೇ ವಿಪತ್ತು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ
ಪಾಕಿಸ್ತಾನದಲ್ಲಿ ಪ್ರವಾಹ
TV9kannada Web Team

| Edited By: Rashmi Kallakatta

Sep 19, 2022 | 2:04 PM

ಹವಾಮಾನ ಬದಲಾವಣೆಯಿಂದಾಗಿ ಪಾಕಿಸ್ತಾನದಲ್ಲಿ ಸುರಿದ ಮಳೆ ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿದೆ. ಮಳೆ, ಪ್ರವಾಹದಲ್ಲಿ 1,500 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು ಪಾಕಿಸ್ತಾನ (Pakistan) ಮತ್ತಷ್ಟು ಪ್ರವಾಹ (Flood) ಭೀತಿ ಎದುರಿಸುತ್ತಿದೆ. ಕೆಲವು ಪ್ರದೇಶಗಳಲ್ಲಿ ನೀರು ಕಡಿಮೆಯಾಗಲು ಪ್ರಾರಂಭಿಸಿದ್ದರೂ, ನೆರೆಯ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯು ಪಾಕಿಸ್ತಾನದ ಪ್ರಮುಖ ನದಿಗಳಲ್ಲಿ ನೀರು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮತ್ತಷ್ಟು ಆಸ್ತಿ ಮತ್ತು ಪ್ರಾಣ ನಷ್ಟವನ್ನು ತಪ್ಪಿಸಲು ಪಾಕಿಸ್ತಾನದ ಕೆಲವು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವಂತೆ ಸಲಹೆ ನೀಡಿದೆ. ನದಿಗಳು ಇನ್ನೂ ನೀರಿನ ಮಟ್ಟದಲ್ಲಿ ಯಾವುದೇ ಹೆಚ್ಚಳವನ್ನು ಕಂಡಿಲ್ಲ ಎಂದು ಪಾಕಿಸ್ತಾನದ ಹವಾಮಾನ ಇಲಾಖೆಯ ವೆಬ್‌ಸೈಟ್ ಶನಿವಾರ ಹೇಳಿದೆ. ದಕ್ಷಿಣ ಏಷ್ಯಾದ ರಾಷ್ಟ್ರದಲ್ಲಿನ ಹವಾಮಾನ ವಿಪತ್ತಿನಿಂದಾಗಿ ಈಗಾಗಲೇ ಕರೆನ್ಸಿ ಮೀಸಲು ಖಾಲಿಯಾಗಿದ್ದು ದೇಶ ಅತಿ ಹೆಚ್ಚು ಹಣದುಬ್ಬರದಿಂದ ತತ್ತರಿಸುತ್ತಿದೆ. ಪಾಕಿಸ್ತಾನದಲ್ಲಿನ ಪ್ರವಾಹದಿಂದಾಗಿ  30 ಶತಕೋಟಿ ಡಾಲರ್ ಹಾನಿಯುಂಟಾಗಿದ್ದು 33 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸಹಾಯದಿಂದಾಗಿ ದೇಶವು ಇತ್ತೀಚೆಗೆ ದೀವಾಳಿಯಾಗುವುದನ್ನುನ್ನು ತಪ್ಪಿಸಿದೆ. ಜುಲೈ ಮಧ್ಯದ ನಂತರ ಬಾಂಡ್‌ಗಳು ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದ್ದು ರೂಪಾಯಿ ದಾಖಲೆಯ ಕುಸಿತ ಕಂಡಿದೆ.

ಪ್ರವಾಹದ ಆರ್ಥಿಕ ಪರಿಣಾಮವು ಜಾಗತಿಕ ಹೂಡಿಕೆದಾರರಿಗೆ ಕಳವಳವುಂಟು ಮಾಡಿದೆ ಎಂದು ದುಬೈ ಮೂಲದ ಅರ್ಕಾಮ್ ಕ್ಯಾಪಿಟಲ್ ಲಿಮಿಟೆಡ್‌ನ ಸ್ಥಿರ ಆದಾಯ ಆಸ್ತಿ ನಿರ್ವಹಣೆಯ ಮುಖ್ಯಸ್ಥ ಅಬ್ದುಲ್ ಕದಿರ್ ಹುಸೇನ್ ಹೇಳಿದ್ದಾರೆ.

ಲಕ್ಷಾಂತರ ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡಲು ದೇಶವು ಹೆಣಗಾಡುತ್ತಿರುವ ಈ ಸಮಯದಲ್ಲಿ, ರಾಜಕೀಯ ಪರಿಸ್ಥಿತಿಯೂ ಹದಗೆಟ್ಟಿದೆ . ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಹೊಸ ಸೇನಾ ಮುಖ್ಯಸ್ಥರನ್ನು ನೇಮಿಸುವವರೆಗೆ ಸರ್ಕಾರವು ಚುನಾವಣೆಗಳನ್ನು ವಿಳಂಬಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಹವಾಮಾನ ಬದಲಾವಣೆಯು ಪಾಕಿಸ್ತಾನದ ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಶೇ75 ರಷ್ಟು ಹೆಚ್ಚು ತೀವ್ರತರವಾದ ಮಳೆ ಕಂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವರ್ಷದ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾದ ಶಾಖದ ಅಲೆಯು ಪ್ರವಾಹವನ್ನು ಇನ್ನಷ್ಟು ಹದಗೆಡಿಸಿತು ಎಂದು ವರ್ಲ್ಡ್ ವೆದರ್ ಅಟ್ರಿಬ್ಯೂಷನ್ ಹೇಳಿದೆ.

ಮಂಗಳವಾರದವರೆಗೆ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಮಾನ್ಸೂನ್ ಮಳೆಯಾಗಲಿದೆ ಎಂದು ಭಾರತದ ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ. ಆದರೂ ಪಾಕಿಸ್ತಾನದಲ್ಲಿ ಒಟ್ಟಾರೆ ಪರಿಸ್ಥಿತಿ ಸುಧಾರಿಸುತ್ತಿದೆ. ಕೆಲವು ಪ್ರದೇಶಗಳು ಎರಡರಿಂದ ಮೂರು ವಾರಗಳಲ್ಲಿ ಪ್ರವಾಹದಿಂದ ಮುಕ್ತವಾಗಲಿದೆ ಆದರೆ ಕೆಲವು ಸ್ಥಳಗಳಲ್ಲಿ ಇದು ಮೂರು ತಿಂಗಳವರೆಗೆ ತೆಗೆದುಕೊಳ್ಳಬಹುದು ಎಂದು ಬ್ಲೂಮ್‌ಬರ್ಗ್‌ನ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಕಚೇರಿ ತಿಳಿಸಿದೆ.

ಎರಡನೇ ವಿಪತ್ತು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರವಾಹ ಪೀಡಿತ ಪಾಕಿಸ್ತಾನದಲ್ಲಿ “ಎರಡನೇ ವಿಪತ್ತು” ಸಂಭವಿಸುವ ಬಗ್ಗೆ ಗಂಭೀರ ಆತಂಕ ಮತ್ತು ಕಳವಳವನ್ನು ವ್ಯಕ್ತಪಡಿಸಿದೆ. ಹಲವು ಪ್ರದೇಶಗಳಲ್ಲಿ ನೀರು ತಂಗಿದ್ದು ಇವು ನೀರಿನಿಂದ ಹರಡುವ ರೋಗಗಳಿಗೆ ಕಾರಣವಾಗಬಹುದು. ಇದು ಸಾವಿರಾರು ಜನರಿಗೆ ಸೋಂಕು ತರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸಿಂಧ್ ಪ್ರಾಂತ್ಯದ ಗಂಭೀರ ಪರಿಸ್ಥಿತಿಯನ್ನು ಉಲ್ಲೇಖಿಸಿದ ಡಬ್ಲ್ಯುಎಚ್ಒ ಪ್ರವಾಹದ ನೀರು ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳ ಮೂಲಕ ಹರಿಯುತ್ತಲೇ ಇದೆ. ಇವು ದಾರಿಯಲ್ಲಿ ಬರುವ ಎಲ್ಲವನ್ನೂ ನಾಶಪಡಿಸುತ್ತದೆ. ಹೀಗಿರುವಾಗ ಜೀವಗಳನ್ನು ಉಳಿಸಲು ಮತ್ತು ಹೆಚ್ಚಿನ ಹಾನಿ ತಡೆಯಲು ದೇಣಿಗೆಗೆ ಡಬ್ಲ್ಯುಎಚ್ಒ ಕರೆ ನೀಡಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಲುಷಿತ ನೀರಿನ ಸೇವನೆಯು ಕಾಲರಾ, ಮಲೇರಿಯಾ, ಡೆಂಗ್ಯೂ ಮತ್ತು ಅತಿಸಾರ ಸೇರಿದಂತೆ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತಿದೆ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada