ಮಂಗಳ ಗ್ರಹದಲ್ಲಿ ವಾಸಿಸುವ ತರಬೇತಿ ನೀಡಲು ಮುಂದಾದ ನಾಸಾ; ಅರ್ಜಿ ಸಲ್ಲಿಸಲು ಸೆ.12 ಕೊನೇ ದಿನಾಂಕ
NASA: ಅರ್ಜಿ ಸಲ್ಲಿಸಲು 30-55ವರ್ಷದವರಿಗೆ ಮಾತ್ರ ಅವಕಾಶ ಇರಲಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM)-ಈ ಯಾವುದರಲ್ಲಾದರೂ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. 2037ರ ಹೊತ್ತಿಗೆ ಮಂಗಳ ಗ್ರಹ (Mars)ಕ್ಕೆ ಜನರನ್ನು ಕರೆದೊಯ್ಯುವ ಮಹತ್ವಾಕಾಂಕ್ಷಿ ಯೋಜನೆ ಹೊಂದಿರುವ ನಾಸಾ, ಇದೀಗ ಅದಕ್ಕೆ ಸಂಬಂಧಪಟ್ಟಂತೆ ಸಣ್ಣದೊಂದು ಅಧ್ಯಯನ ನಡೆಸಲು ಮುಂದಾಗಿದೆ. ಅಂದರೆ ಮಂಗಳ ಗ್ರಹದಲ್ಲಿ ಭೂಮಿಗಿಂತ ವಿಭಿನ್ನವಾದ ವಾತಾವರಣ ಇದ್ದೇ ಇರುತ್ತದೆ. ಒಂದೊಮ್ಮೆ ಮನುಷ್ಯರು ಮಂಗಳ ಗ್ರಹಕ್ಕೆ ತೆರಳಿ, ಅಲ್ಲಿಯೇ ಕೆಲದಿನಗಳ ಕಾಲ ನೆಲೆಸುವ ಸಂದರ್ಭ ಒದಗಿದರೆ, ಆ ವಾತಾವರಣಕ್ಕೆ ಮನುಷ್ಯರು ಹೇಗೆ ಹೊಂದಿಕೊಳ್ಳಬಲ್ಲರು ಎಂಬುದನ್ನು ಪರೀಕ್ಷಿಸಲು ಒಂದು ವ್ಯವಸ್ಥೆ ಮಾಡಿದೆ.
ಮುಂದೆ ಮಂಗಳಕ್ಕೆ ಹೋಗಲು ಈಗಲೇ ನೇಮಕಾತಿ ಪ್ರಕ್ರಿಯೆ ಶುರು ಮಾಡಿರುವ ನಾಸಾ, ಅದಕ್ಕಾಗಿ ಅರ್ಜಿಯನ್ನೂ ಆಹ್ವಾನ ಮಾಡಿದೆ. ಅದರಲ್ಲೂ ಹೆಚ್ಚು ಮಹತ್ವಾಕಾಂಕ್ಷಿಯಾಗಿರುವ, ತಾಳಿಕೊಳ್ಳುವ ಶಕ್ತಿ ಇರುವವರಿಗೆ ಮೊದಲ ಆದ್ಯತೆ ಎನ್ನಲಾಗಿದೆ. ಹೀಗೆ ಆಯ್ಕೆಯಾದವರಿಗೆ ಒಂದು ವರ್ಷ ತರಬೇತಿ ಇರುತ್ತದೆ. ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ನಲ್ಲಿ 1,700 ಚದರ್ ಅಡಿ ವಿಸ್ತೀರ್ಣದಲ್ಲಿ ಮಾರ್ಸ್ ಡ್ಯೂನ್ ಅಲ್ಫಾ ಮಾಡ್ಯೂಲ್ ಎಂಬ ತ್ರಿಡಿ ಪ್ರದೇಶದ ವ್ಯವಸ್ಥೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದವರಲ್ಲಿ ನಾಲ್ವರನ್ನು ತರಬೇತಿಗೆ ಆಯ್ಕೆ ಮಾಡಿ, ಅವರನ್ನು ಈ ಮಾರ್ಸ್ ಡ್ಯೂನ್ ಅಲ್ಫಾ ಮಾಡ್ಯೂಲ್ನಲ್ಲಿ ಒಂದು ವರ್ಷಗಳ ಕಾಲ ಬಿಡಲಾಗುತ್ತದೆ. ಈ ಮಾರ್ಸ್ ಡ್ಯೂನ್ ಒಂದು ಕೃತಕ ಮಂಗಳ ಗ್ರಹವಾಗಿದ್ದು, ಆ ಗ್ರಹದಲ್ಲಿರುವಂತಹ ವಾತಾವರಣವೇ ಇಲ್ಲಿಯೂ ಇರಲಿದೆ. ಆ ನಾಲ್ವರಿಗೆ ಒಟ್ಟು ಮೂರು ಸ್ಟಿಮ್ಯುಲೇಶನ್ಗಳಡಿ ತರಬೇತಿ ನಡೆಯಲಿದೆ. ಮೊದಲ ಹಂತ 2022ರಿಂದಲೇ ಶುರುವಾಗಲಿದೆ. ಅವರು, ಮಂಗಳ ಗ್ರಹದ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ? ಆರೋಗ್ಯದಲ್ಲೇನಾದರೂ ಏರುಪೇರಾಗಲಿದೆಯಾ? ಸೀಮಿತ ಸಂಪನ್ಮೂಲಗಳಲ್ಲಿ ಹೇಗೆ ಬದುಕು ನಡೆಸುತ್ತಾರೆ? ಎಂಬಿತ್ಯಾದಿ ಪರೀಕ್ಷೆಗಳು ಅವರಿಗೆ ಎದುರಾಗಲಿವೆ.
ಏನೆಲ್ಲ ಅರ್ಹತೆಗಳಿರಬೇಕು? ಅರ್ಜಿ ಸಲ್ಲಿಸಲು 30-55ವರ್ಷದವರಿಗೆ ಮಾತ್ರ ಅವಕಾಶ ಇರಲಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM)-ಈ ಯಾವುದರಲ್ಲಾದರೂ ಸ್ನಾತಕೋತ್ತರ ಪದವಿ ಪಡೆದಿರಬೇಕು. ಮೊಟ್ಟಮೊದಲನೇದಾಗಿ ಯುಎಸ್ ನಾಗರಿಕತ್ವ ಹೊಂದಿರಬೇಕು. ಅಲ್ಲಿಯ ಶಾಶ್ವತ ನಿವಾಸಿಯಾಗಿದ್ದರೂ ಸರಿ ಅಥವಾ ಯುಎಸ್ ಪೌರತ್ವ ಹೊಂದಿರುವ ಬೇರೆ ದೇಶದವರಾದರೂ ಸರಿ. ಕೊನೇ ದಿನಾಂಕ ಸೆಪ್ಟೆಂಬರ್ 12, 2021. ಸೇನಾ ವಿಮಾನಗಳ ಪೈಲಟ್, ವೈದ್ಯಕೀಯ ಶಿಕ್ಷಣ ಪಡೆದಿದ್ದವೂ ಕೂಡ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ತಮಿಳುನಾಡು ವಿತ್ತ ಸಚಿವ ತಿಯಾಗ ರಾಜನ್ರಿಂದ ರಾಜ್ಯ ಹಣಕಾಸು ಕುರಿತು ಶ್ವೇತಪತ್ರ ಬಿಡುಗಡೆ
‘ರೈತರು, ಕನ್ನಡಪರ ಸಂಘಗಳ ಮೇಲೆ ಬೇಕೆಂದೇ ಹಿಂದಿನ ಸರ್ಕಾರ ಕೇಸ್ ಹಾಕಿದೆ; ಅದನ್ನೂ ಹಿಂಪಡೆಯಲಾಗುವುದು’
Published On - 3:23 pm, Tue, 10 August 21