Perseverance Rover | ಮಂಗಳನ ಅಂಗಳದಲ್ಲಿ ಇಳಿದ 24 ಗಂಟೆಗಳಲ್ಲೇ ಚಿತ್ರ ಕಳಿಸಲು ಶುರು ಮಾಡಿದ NASA ನೌಕೆ

|

Updated on: Feb 20, 2021 | 4:14 PM

Perseverance Rove: ಪ್ರತಿ ಗಂಟೆಗೆ 12,000 ಮೈಲು ವೇಗದಲ್ಲಿ ಸಂಚರಿಸುತ್ತಿದ್ದ ವೇಳೆ ಈ ಚಿತ್ರಗಳನ್ನು ಕ್ಲಿಕ್ಕಿಸಲಾಗಿದ್ದು, ಮಂಗಳನ ಅಂಗಳದಲ್ಲಿ ತನ್ನ ಹೆಜ್ಜೆಯೂರಲು ಇನ್ನೇನು ಕೊನೆಯ 7 ನಿಮಿಷಗಳಿದ್ದವು. ಅದೊಂದು ಅಸಾಮಾನ್ಯ ಮತ್ತು ರೋಮಾಂಚಕ ಘಳಿಗೆಯಾಗಿತ್ತು ಎಂದು ನಾಸಾದ ತಜ್ಞರು ಹರ್ಷಭರಿತ ರೋಮಾಂಚನಕಾರಿ ಅನುಭವವನ್ನು ಬಣ್ಣಸಿದ್ದಾರೆ.

Perseverance Rover | ಮಂಗಳನ ಅಂಗಳದಲ್ಲಿ ಇಳಿದ 24 ಗಂಟೆಗಳಲ್ಲೇ ಚಿತ್ರ ಕಳಿಸಲು ಶುರು ಮಾಡಿದ NASA ನೌಕೆ
ಮಂಗಳನ ಅಂಗಳಕ್ಕೆ ಇಳಿಯಲು 7 ನಿಮಿಷಗಳಿರುವಾಗ ಕ್ಲಿಕ್ಕಿಸಿದ ಚಿತ್ರ!
Follow us on

ವಾಷಿಂಗ್ಟನ್: 2020ರ ಜುಲೈ 30ರಂದು ಹೊರಟು 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ472 ಮಿಲಿಯನ್ ಕಿಮೀ ದೂರ ಸಾಗಿ ಮಂಗಳ ಗ್ರಹವನ್ನು ಯಶಸ್ವಿಯಾಗಿ ಸ್ಪರ್ಶಿಸಿದ ರೋವರ್ ಬಾಹ್ಯಾಕಾಶ ನೌಕೆ (Perseverance Rover) 24 ಗಂಟೆಗಳಲ್ಲಿ ಮಂಗಳನ ಅಂಗಳದ ಬಗೆಬಗೆಯ ಮೊದಲ ಚಿತ್ರಗಳನ್ನು ಕಳುಹಿಸಿಕೊಟ್ಟಿದೆ. 25 ಕ್ಯಾಮರಾ, 2 ಮೈಕ್ರೋಫೋನ್​ಗಳನ್ನು ರೋವರ್ ಬಾಹ್ಯಾಕಾಶ ನೌಕೆ ಒಳಗೊಂಡಿದ್ದು, ಇವೆಲ್ಲವೂ ಮಂಗಳನ ಅಂಗಳದಲ್ಲಿ ಲ್ಯಾಂಡ್ ಆಗುವಾಗ ಚಿತ್ರಗಳನ್ನು ಚಕಚಕನೇ ಕ್ಲಿಕ್ಕಿಸಿವೆ ಎಂದು ನಾಸಾ ತಿಳಿಸಿದೆ.

ರೋಮ ನವಿರೇಳುವಂತಹ ಅನುಭವವನ್ನು ಈ ಸಂದರ್ಭ ಒದಗಿಸಿತ್ತು ಎಂದಿದ್ದಾರೆ ನಾಸಾದ ತಜ್ಞರು

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್​ನ (NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸಿವೆರೆನ್ಸ್ ರೋವರ್ (Perseverance Rover), ಬಾಹ್ಯಾಕಾಶ ನೌಕೆ ದಕ್ಷಿಣ ಕ್ಯಾಲಿಫೋರ್ನಿಯಾದ ಜೆಟ್​ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಗುರುವಾರ ಸ್ಥಳೀಯ ಸಮಯ ಮಧ್ಯಾಹ್ನ 3.35ಕ್ಕೆ ನಾಸಾ ರೋವರ್ ಮಂಗಳ ಗ್ರಹದ ಮೇಲೆ ಕಾಲಿರಿಸಿತ್ತು. ಈ ನೌಕೆಯು ಮಂಗಳ ಗ್ರಹದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.

ಕೆಂಪು ಗ್ರಹವೆಂದೇ ಹೆಸರಾದ ಮಂಗಳನ ಅಂಗಳದಿಂದ 2 ಮೀಟರ್​ಗಳಷ್ಟೇ ದೂರವಿದೆ ಎಂಬಾಗ ಈ ಅಸಾಧಾರಣ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ರೋವರ್ ಬಾಹ್ಯಾಕಾಶ ನೌಕೆಯ ಸ್ಕೈ ಕ್ರೇನ್​ನ ಮೇಲೆ ಕ್ಯಾಮರಾಗಳನ್ನು ಅಳವಡಿಸಿದ್ದಾಗಿ ನಾಸಾ ತಿಳಿಸಿದೆ. ಪ್ರತಿ ಗಂಟೆಗೆ 12,000 ಮೈಲು ವೇಗದಲ್ಲಿ ಸಂಚರಿಸುತ್ತಿದ್ದ ವೇಳೆ ಈ ಚಿತ್ರಗಳನ್ನು ಕ್ಲಿಕ್ಕಿಸಲಾಗಿದ್ದು, ಮಂಗಳನ ಅಂಗಳದಲ್ಲಿ ತನ್ನ ಹೆಜ್ಜೆಯೂರಲು ಇನ್ನೇನು ಕೊನೆಯ 7 ನಿಮಿಷಗಳಿದ್ದವು.

ಅದೊಂದು ಅಸಾಮಾನ್ಯ ಮತ್ತು ರೋಮಾಂಚಕ ಘಳಿಗೆಯಾಗಿತ್ತು ಎಂದು ನಾಸಾದ ತಜ್ಞರು ಹರ್ಷಭರಿತ ರೋಮಾಂಚನಕಾರಿ ಅನುಭವವನ್ನು ಬಣ್ಣಸಿದ್ದಾರೆ. 1969ರಲ್ಲಿ ಅಪೋಲೊ 11 ಬಾಹ್ಯಾಕಾಶ ನೌಕೆ ಕ್ಲಿಕ್ಕಿಸಿ ಕಳುಹಿಸಿದ್ದ ಚಿತ್ರಗಳು ಒದಗಿಸಿದ ರೋಮ ನವಿರೇಳುವಂತಹ ಅನುಭವವನ್ನೇ ಈ ಸಂದರ್ಭವೂ ಒದಗಿಸಿತ್ತು ಎಂದು ನಾಸಾದ ಮುಖ್ಯ ಇಂಜಿನಿಯರ್ ಆಡಮ್ ಸ್ಟೆಲ್ಟ್ನರ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಈ ಚಿತ್ರಗಳು ಐತಿಹಾಸಿಕ ಮತ್ತು ಅಭೂತಪೂರ್ವವೆಂದು ಇತರ ತಜ್ಞರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋವರ್ ಬಾಹ್ಯಾಕಾಶ ನೌಕೆ ಕ್ಲಿಕ್ಕಿಸಿದ ಚಿತ್ರ

ಇನ್ನೂ ಕೆಲ ದಿನಗಳಲ್ಲಿ ರೋವರ್ ಬಾಹ್ಯಾಕಾಶ ನೌಕೆ ರವಾನಿಸಿದ ಇನ್ನಷ್ಟು ಚಿತ್ರಗಳನ್ನು ಮತ್ತು ಆಡಿಯೋಗಳನ್ನು ಬಿಡುಗಡೆಗೊಳಿಸುವುದಾಗಿ ನಾಸಾದ ಅಧಿಕೃತ ಪ್ರಕಟಣೆ ತಿಳಿಸಿದೆ.

ಇದು ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಮಂಗಳ ಗ್ರಹದಲ್ಲಿ ಜೀವಗಳ ಇರುವಿಕೆಯ ಕುರುಹು ಹುಡುಕಲಿದೆ. ಅಧಿಕೃತ ಮಾಹಿತಿಯಂತೆ ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಯೋಜನೆಯನ್ನು ಕೂಡ ನಾಸಾ ಹೊಂದಿದೆ. ರೋವರ್ ಸಂಗ್ರಹಿಸಿದ ಮಾದರಿಗಳಿಂದ ನಾಸಾ ಹಾಗೂ ಯುರೋಪ್​ನ ಸ್ಪೇಸ್ ಏಜನ್ಸಿ (ESA) ವಿಜ್ಞಾನಿಗಳು ಪ್ರಾಚೀನ ಜೀವದ ಕುರುಹುಗಳನ್ನು ಅಧ್ಯಯನ ನಡೆಸಲು ನೆರವಾಗಲಿದೆ.

ರೋವರ್ ನಾಸಾಗೆ ಕಳುಹಿಸಿದ ಚಿತ್ರ

ಬಂಡೆ ಹಾಗೂ ಇತರ ಭೌಗೋಳಿಕ ಅಂಶಗಳನ್ನು ನಾಸಾ ಅಧ್ಯಯನಕ್ಕಾಗಿ ರೋವರ್ ಸಂಗ್ರಹಿಸಲಿದೆ. 1997ರ ಬಳಿಕ ಮಂಗಳ ಗ್ರಹಕ್ಕೆ ಕಾಲಿಡಲು ನಾಸಾ ನಡೆಸಿದ 5ನೇ ಪ್ರಯತ್ನ ಇದಾಗಿತ್ತು. ಮಂಗಳ ಗ್ರಹ ಸ್ಪರ್ಶಿಸಲು ಕಳೆದ 50 ವರ್ಷಗಳಲ್ಲಿ ನಡೆಸಿದ ಪ್ರಯತ್ನದಲ್ಲಿ ಅರ್ಧಕ್ಕೂ ಹೆಚ್ಚು ಯತ್ನಗಳು ವಿಫಲವಾಗಿದ್ದವು. ಸೋವಿಯತ್ ಯೂನಿಯನ್ (ರಷ್ಯಾ) ಮಾತ್ರ ಈ ಮೊದಲು ಮಂಗಳನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳಿಸಲು ಯಶಸ್ವಿಯಾಗಿತ್ತು.

‘ಹೆಗಲಿಗೆ ಹೆಗಲು ಕೊಟ್ಟು ದುಡಿದಾಗ, ಕೈಜೋಡಿಸಿ ಕೆಲಸ ಮಾಡಿದಾಗ, ಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡಾಗ, ನಾವು ನಮ್ಮ ಕಾರ್ಯದಲ್ಲಿ ಯಶಸ್ವಿಯಾಗಬಹುದು’ ಎಂದು ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಮುಖ್ಯ ಇಂಜಿನಿಯರ್, ರಾಬ್ ಮ್ಯಾನ್ನಿಂಗ್ ತಿಳಿಸಿದ್ದಾರೆ. ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮಂಗಳ ಗ್ರಹಕ್ಕೆ ಕಾಲಿರಿಸುವುದು ಬಹುದೊಡ್ಡ ಸವಾಲಾಗಿದೆ. ಅಂಥಾ ಕಠಿಣ ಸವಾಲನ್ನು ನಾಸಾ (NASA) ಯಶಸ್ವಿಯಾಗಿ ಎದುರಿಸಿದೆ.

ಇದನ್ನೂ ಓದಿ: Swati Mohan ವ್ಯಕ್ತಿ ವ್ಯಕ್ತಿತ್ವ | ಮಂಗಳನ ಅಂಗಳದಲ್ಲಿ ಜೀವ ಕುರುಹು ಹುಡುಕುವ ನಾಸಾ ತಂಡದಲ್ಲಿ ಭಾರತ ಸಂಜಾತೆ ಡಾ. ಸ್ವಾತಿ ಮೋಹನ್

Perseverance Rover: ಮಂಗಳದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ! ಮಂಗಳ ಗ್ರಹಕ್ಕೆ ಕಾಲಿರಿಸಿದ NASA ಬಾಹ್ಯಾಕಾಶ ನೌಕೆ

Published On - 4:09 pm, Sat, 20 February 21