ನಮ್ಮನ್ನು ಕೇಳಿ ಈ ಯುದ್ಧ ಆರಂಭಿಸಿಲ್ಲ: ಟ್ರಂಪ್‌ಗೆ ನ್ಯಾಟೋ ರಾಷ್ಟ್ರಗಳ ಶಾಕ್; ಏಕಾಂಗಿಯಾದ ಅಮೆರಿಕ?

ಇರಾನ್‌ನಲ್ಲಿ ಹೊಸ ಆಡಳಿತ ತರುವ ಅಮೆರಿಕದ ಯೋಜನೆಗೆ ಇರಾನ್ ಸೇನೆ ಮತ್ತು ಮೊಜ್ತಾಬಾ ಖಮನೈ ಮರ್ಮಾಘಾತ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದಾಗ, ಟ್ರಂಪ್ ನ್ಯಾಟೋ ಸಹಾಯ ಕೋರಿದರು, ಆದರೆ ನ್ಯಾಟೋ ರಾಷ್ಟ್ರಗಳು ಕಡಾತುಂಡಾಗಿ ನಿರಾಕರಿಸಿದವು. ಇದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅಲ್ಲದೆ, ಅಮೆರಿಕದ NCTC ನಿರ್ದೇಶಕ ಜೋಸೆಫ್ ಕೆಂಟ್ ರಾಜೀನಾಮೆ ನೀಡಿರುವುದು ಟ್ರಂಪ್‌ಗೆ ಮತ್ತಷ್ಟು ಒತ್ತಡ ತಂದಿದೆ.

ನಮ್ಮನ್ನು ಕೇಳಿ ಈ ಯುದ್ಧ ಆರಂಭಿಸಿಲ್ಲ: ಟ್ರಂಪ್‌ಗೆ ನ್ಯಾಟೋ ರಾಷ್ಟ್ರಗಳ ಶಾಕ್; ಏಕಾಂಗಿಯಾದ ಅಮೆರಿಕ?
ಸಾಂದರ್ಬೀಕ ಚಿತ್ರ
Image Credit source: Tv9 kannada

Updated on: Mar 18, 2026 | 9:52 AM

ಟೆಹ್ರಾನ್, ಮಾ.18: ಇರಾನ್‌ನಲ್ಲಿ ಹೊಸ ಆಡಳಿತ ತರುವ ಅಮೆರಿಕ ಮತ್ತು ಇಸ್ರೇಲ್ ಪ್ಲ್ಯಾನ್‌ಗೆ ಈಗ ಇರಾನ್ ಸೇನೆ ಮತ್ತು ಹೊಸ ನಾಯಕ ಮೊಜ್ತಾಬಾ ಖಮನೈ ಮರ್ಮಾಘಾತ ನೀಡಿದ್ದಾರೆ. ಅಮೆರಿಕದ ಬೆಂಬಲಕ್ಕೆ ನಿಲ್ಲಬೇಕಿದ್ದ ನ್ಯಾಟೋ (NATO) ದೇಶಗಳು ಈಗ ಯುದ್ಧದಿಂದ ಹಿಂದೆ ಸರಿದಿರುವುದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಟ್ರಂಪ್ ನ್ಯಾಟೋ ದೇಶಗಳ ಸಹಾಯ ಕೋರಿದ್ದರು. ಆದರೆ ನ್ಯಾಟೋ ರಾಷ್ಟ್ರಗಳು ಖಡಾಖಂಡಿತವಾಗಿ ನಿರಾಕರಿಸಿವೆ.

ನ್ಯಾಟೋಗೆ ಈ ಯುದ್ಧಕ್ಕೂ ಸಂಬಂಧವಿಲ್ಲ ಎಂದು ಜರ್ಮನಿ ಹೇಳಿದೆ. ನಾವು ಈ ಯುದ್ಧದಲ್ಲಿ ಪಾಲುದಾರರಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಸ್ಪಷ್ಟಪಡಿಸಿದ್ದಾರೆ. ನಮ್ಮದು ಕೇವಲ ರಕ್ಷಣಾತ್ಮಕ ನಿಲುವು ಎಂದು ಯುಕೆ ಪ್ರಧಾನಿ ಸ್ಟಾರ್ಮರ್ ಹೇಳಿದ್ದಾರೆ. ಇನ್ನು ನಮ್ಮನ್ನು ಕೇಳಿ ಈ ಯುದ್ಧ ಆರಂಭಿಸಿಲ್ಲ ಎಂದು ಕೆನಡಾ ಧಾನಿ ಮಾರ್ಕ್ ಕಾರ್ನಿ ಖಾರವಾಗಿ ಹೇಳಿದ್ದಾರೆ.

ನ್ಯಾಟೋ ನಿಲುವಿನಿಂದ ಕೆರಳಿರುವ ಟ್ರಂಪ್, “ಇದು ನ್ಯಾಟೋ ಮಾಡುತ್ತಿರುವ ಮೂರ್ಖತನದ ತಪ್ಪು. ನಮಗೆ ಯಾರ ಸಹಾಯವೂ ಬೇಕಿಲ್ಲ, ನಮ್ಮ ಶಕ್ತಿಯೇ ನಮಗೆ ಸಾಕು” ಎಂದು ಗುಡುಗಿದ್ದಾರೆ. ಅಲ್ಲದೆ, ಏಕಾಂಗಿಯಾಗಿಯಾದರೂ ಹಾರ್ಮುಜ್ ಜಲಸಂಧಿಯನ್ನು ವಶಪಡಿಸಿಕೊಳ್ಳುವುದಾಗಿ ಸವಾಲು ಹಾಕಿದ್ದಾರೆ. ಇರಾನ್ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡದ ಚೀನಾದ ಮೇಲೆ ಟ್ರಂಪ್ ಅಸಮಾಧಾನಗೊಂಡಿದ್ದಾರೆ. ಈ ಕಾರಣಕ್ಕೆ ಮಾರ್ಚ್ 31 ರಿಂದ ನಿಗದಿಯಾಗಿದ್ದ ತಮ್ಮ ಚೀನಾ ಪ್ರವಾಸವನ್ನು ಐದು ವಾರಗಳ ಕಾಲ ಮುಂದೂಡಿದ್ದಾರೆ.

ಇದನ್ನೂ ಓದಿ: ಹೊರನಡೆದಿದ್ದು ಒಳ್ಳೆಯದೇ ಆಯಿತು; ಜೋ ಕೆಂಟ್ ರಾಜೀನಾಮೆ ಕುರಿತು ಟ್ರಂಪ್ ಪ್ರತಿಕ್ರಿಯೆ

ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (NCTC) ನಿರ್ದೇಶಕ ಜೋಸೆಫ್ ಕೆಂಟ್ ತೀವ್ರ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ಇರಾನ್ ನಮ್ಮ ದೇಶಕ್ಕೆ ಯಾವುದೇ ಬೆದರಿಕೆ ಹಾಕಿಲ್ಲ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದು ಟ್ರಂಪ್ ಅವರ ‘ಮೇಕ್ ಅಮೆರಿಕಾ ಗ್ರೇಟ್ ಅಗೈನ್’ (MAGA) ಬೆಂಬಲಿಗರಲ್ಲೇ ಒಡಕು ಮೂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:23 am, Wed, 18 March 26

Follow Us