ವಿಶ್ವಯುದ್ಧದಲ್ಲಿ ಸಂವಹನ ರಹಸ್ಯವಾಗಿಡಲು ನಾಜಿಗಳು ಬಳಕೆ ಮಾಡುತ್ತಿದ್ದ ಟೈಪ್ರೈಟರ್ ನಂತಹ ಯಂತ್ರ ಪತ್ತೆ!
ಎಲೆಕ್ಟ್ರೋಮೆಕಾನಿಕಲ್ ಯಂತ್ರ ಇದಾಗಿದ್ದು, ನಾಜಿ ಸೇನೆ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಿತ್ತು. ಸಂವಹನ ಸೋರಿಕೆ ಆಗದಂತೆ ನೋಡಿಕೊಳ್ಳಲು ಈ ಯಂತ್ರ ಸಹಕಾರಿಯಾಗಿತ್ತು.
ಜರ್ಮನಿಯ ಬಳಿ ಇರುವ ಬಾಲ್ಟಿಕ್ ಸಮುದ್ರದಲ್ಲಿ ಕೆಲ ಮೀನುಗಾರರು ಮೀನುಗಾರಿಕೆಗೆ ಇಳಿದಿದ್ದರು. ಬಲೆ ಕೂಡ ಬೀಸಿದ್ದರು. ಬಲೆಯನ್ನು ಆಳಕ್ಕೆ ಇಳಿಸಿದರೆ ದೊಡ್ಡ ಮೀನು ಸಿಗಬಹುದು ಎನ್ನುವುದು ಇವರ ಲೆಕ್ಕಾಚಾರವಾಗಿತ್ತು. ಬಲೆ ಎತ್ತುವಾಗ ಭಾರವೇನೋ ಅನಿಸಿತ್ತು. ಆದರೆ, ಎತ್ತಿ ನೋಡಿದಾಗ ಅಲ್ಲಿ ಮೀನಿರಲಿಲ್ಲ. ಅಲ್ಲಿ ಸಿಕ್ಕಿದ್ದು ತುಕ್ಕು ಹಿಡಿದ ಎನಿಗ್ಮಾ ಯಂತ್ರ!
1939ರಿಂದ 1945ರ ಅವಧಿಯಲ್ಲಿ ಎರಡನೇ ವಿಶ್ವ ಯುದ್ಧ ನಡೆದಿತ್ತು. ಈ ವೇಳೆ ವೈರಿ ರಾಷ್ಟ್ರಗಳನ್ನು ಬಗ್ಗು ಬಡಿಯಲು ಅನೇಕ ರಾಷ್ಟ್ರಗಳು ನಾನಾ ತಂತ್ರಗಳನ್ನು ಅನುಸರಿಸಿದ್ದರು. ಅಂತೆಯೇ ನಾಯಕರ ನಡುವೆ ನಡೆಯುವ ಸಂವಹನ ಗುಟ್ಟಾಗಿರಿಸಲು ನಾಜಿ ಸೇನೆ ಎನಿಗ್ಮಾ ಯಂತ್ರ ಬಳಕೆ ಮಾಡುತ್ತಿತ್ತು. ಈಗ ಈ ಯಂತ್ರ ಸಮುದ್ರದಾಳದಲ್ಲಿ ಪತ್ತೆ ಆಗಿದೆ.
ಎಲೆಕ್ಟ್ರೋಮೆಕಾನಿಕಲ್ ಯಂತ್ರ ಇದಾಗಿದ್ದು, ನಾಜಿ ಸೇನೆ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಿತ್ತು. ಸಂವಹನ ಸೋರಿಕೆ ಆಗದಂತೆ ನೋಡಿಕೊಳ್ಳಲು ಈ ಯಂತ್ರ ಸಹಕಾರಿಯಾಗಿತ್ತು. ಇದರಲ್ಲಿ ರವಾನೆಯಾಗುತ್ತಿದ್ದ ಸಂದೇಶ ಸಾಮಾನ್ಯರಿಂದ ಓದಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ವಿಶೇಷ ತರಬೇತಿ ಅಗತ್ಯವಿತ್ತು. ಹೀಗಾಗಿ, ನಾಜಿಗಳ ಸಂವಹನ ಗುಟ್ಟಾಗಿಯೇ ಉಳಿಯುತ್ತಿತ್ತು.
ಈ ಯಂತ್ರ ನೋಡಲು ಟೈಪ್ರೈಟರ್ ಯಂತ್ರದ ರೀತಿಯಲ್ಲೇ ಕಾಣುತ್ತದೆ. ವಿಶ್ವಯುದ್ಧದ ಸಮಯದಲ್ಲಿ ಸಾಕಷ್ಟು ಈ ರೀತಿಯ ಯಂತ್ರಗಳನ್ನು ನಾಜಿಗಳು ಅಭಿವೃದ್ಧಿಪಡಿಸಿದ್ದರು. ಈ ಮೂಲಕ ಯುದ್ಧದಲ್ಲಿ ತಮ್ಮ ಸಂವಹನವನ್ನು ಗುಟ್ಟಾಗಿರಿಸಿದ್ದಾರೆ.
Published On - 12:01 pm, Sat, 5 December 20