
ಕಠ್ಮಂಡು, ಆ.29: ಹಿಮಾಲಯ ಪ್ರದೇಶದಲ್ಲಿ ಗ್ಲೇಸಿಯರ್ (ಹಿಮಪಾತ) ಕುಸಿತದಿಂದಾಗಿ ಉಂಟಾದ ಭೀಕರ ಪ್ರವಾಹವು ನೇಪಾಳ ಮತ್ತು ಟಿಬೆಟ್ ಗಡಿ ಪ್ರದೇಶಗಳಲ್ಲಿ ಆಹಾಕಾರ ಸೃಷ್ಟಿಸಿದೆ. ನೇಪಾಳ ಸೇನೆಯು ಪ್ರವಾಹ, ಕೆಸರು ಹಾಗೂ ತ್ಯಾಜ್ಯಗಳ ನಡುವೆ ಸಿಲುಕಿರುವ ಜನರನ್ನು ರಕ್ಷಿಸಲು ಬೃಹತ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ನೇಪಾಳದಲ್ಲಿ579 ಹಾಗೂ ಟಿಬೆಟ್‌ನಲ್ಲಿ 7 ಜನರು ಸೇರಿ ಒಟ್ಟು 586ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಗಡಿಯ ಎರಡೂ ಬದಿಗಳಲ್ಲಿ ಇನ್ನೂ 2,400ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಭೋಟೆಕೋಶಿ ನದಿಯ ಆರ್ಭಟಕ್ಕೆ ಸಂಪೂರ್ಣ ಜಲಾವೃತಗೊಂಡಿರುವ ಕಟ್ಟಡಗಳ ಛಾವಣಿ ಮೇಲೆ ಸಾವಿರಾರು ಜನರು ಆಶ್ರಯ ಪಡೆದಿದ್ದಾರೆ. ನೇಪಾಳ ಸೇನೆಯ ಹೆಲಿಕಾಪ್ಟರ್‌ಗಳು ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಕೆಳಗಿಳಿದು ಸಂತ್ರಸ್ತರನ್ನು ರಕ್ಷಿಸುತ್ತಿರುವ ದೃಶ್ಯಗಳು ಬೆಳಕಿಗೆ ಬಂದಿವೆ.
ಮನೆಗಳ ಮೇಲ್ಛಾವಣಿಯಿಂದ ಕೈಬೀಸಿ ನೆರವು ಕೋರುತ್ತಿದ್ದ ಜನರನ್ನು ಸೇನಾ ಸಿಬ್ಬಂದಿ ರೋಪ್ ಮೂಲಕ ಹೆಲಿಕಾಪ್ಟರ್‌ಗೆ ಎತ್ತಿಕೊಂಡು ಸುರಕ್ಷಿತ ತಾಣಗಳಿಗೆ ತಲುಪಿಸುತ್ತಿದ್ದಾರೆ. ರಸುವಾ ಜಿಲ್ಲೆಯ ‘ಅಪ್ಪರ್ ತ್ರಿಶೂಲಿ ಜಲವಿದ್ಯುತ್ ಯೋಜನೆ’ಯ ಸುರಂಗದಲ್ಲಿ ನೂರಾರು ಕಾರ್ಮಿಕರು ಹಾಗೂ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.
ಸುರಂಗದ ಪ್ರವೇಶ ದ್ವಾರವು ಗಟ್ಟಿ ಕೆಸರಿನಿಂದ ಆವೃತವಾಗಿದ್ದು, ನೇಪಾಳ ಸೇನೆಯ ಇಬ್ಬರು ಯೋಧರು ಜೀವದ ಹದನೋಡದೆ ಕೆಸರಿನಲ್ಲೇ ತೆವಳುತ್ತಾ ಒಳಹೋಗಿ ನೂರಾರು ಸಂತ್ರಸ್ತರನ್ನು ರಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಪ್ರಸ್ತುತ 14,829 ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿಯವರೆಗೆ 3,742 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ನೇಪಾಳ-ಟಿಬೆಟ್ ಜಲಪ್ರಳಯ: ಸಾವಿನ ಸಂಖ್ಯೆ 584ಕ್ಕೆ ಏರಿಕೆ, 2,482 ಮಂದಿ ನಾಪತ್ತೆ, 320 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ
ನೇಪಾಳದಲ್ಲಿ 1,924 ಜನರು ಹಾಗೂ ಟಿಬೆಟ್‌ನಲ್ಲಿ 540ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಸೇರಿದಂತೆ 558 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಿಂದ ಇದುವರೆಗೆ 84 ಭಾರತೀಯರನ್ನು ರಕ್ಷಿಸಲಾಗಿದ್ದು, 149 ಮಂದಿ ಚೀನಾದಿಂದ ನೇಪಾಳ ಗಡಿಗೆ ಸುರಕ್ಷಿತವಾಗಿ ತಲುಪಿದ್ದಾರೆ. ಚೀನಾದಲ್ಲಿ 400 ಭಾರತೀಯರು ಸುರಕ್ಷಿತವಾಗಿದ್ದರೂ, ಇನ್ನೂ 320 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ ಅಥವಾ ನಾಪತ್ತೆಯಾಗಿದ್ದಾರೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ