ಪ್ರವಾಹದ ವೇಳೆ ನೆರವು ನೀಡಿದ ಭಾರತ, ಚೀನಾಕ್ಕೆ ಕೃತಜ್ಞತೆ ಸಲ್ಲಿಸಿದ ನೇಪಾಳದ ಪ್ರಧಾನಿ ಬಾಲೆನ್ ಷಾ

ಹಿಮಾಲಯನ್ ರಾಷ್ಟ್ರವಾದ ನೇಪಾಳದಲ್ಲಿ 1 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಪ್ರಳಯಾಂತಕ ಪ್ರವಾಹದ ಸಮಯದಲ್ಲಿ ತಕ್ಷಣವೇ ಸ್ಪಂದಿಸಿ ಪರಿಹಾರ ಕಾರ್ಯಾಚರಣೆಗೆ ಬೆಂಬಲ ನೀಡಿದ್ದಕ್ಕಾಗಿ ನೇಪಾಳದ ಪ್ರಧಾನಿ ಬಾಲೆನ್ ಷಾ ಇಂದು ಭಾರತ ಮತ್ತು ಚೀನಾ ದೇಶಗಳಿಗೆ ಸಂಸತ್ತಿನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ. ನೇಪಾಳದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬಾಲೆನ್ ಷಾ, ಇಂತಹ ಬೃಹತ್ ಮಟ್ಟದ ದುರಂತ ಸಂಭವಿಸಿದಾಗ ಅಂತಾರಾಷ್ಟ್ರೀಯ ನೆರವನ್ನು ನಿರಾಕರಿಸುವ ಪ್ರಶ್ನೆಯೇ ಏಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರವಾಹದ ವೇಳೆ ನೆರವು ನೀಡಿದ ಭಾರತ, ಚೀನಾಕ್ಕೆ ಕೃತಜ್ಞತೆ ಸಲ್ಲಿಸಿದ ನೇಪಾಳದ ಪ್ರಧಾನಿ ಬಾಲೆನ್ ಷಾ
ಬಾಲೆನ್ ಶಾ ಮತ್ತು ಪಿಎಂ ಮೋದಿ

Updated on: Sep 02, 2026 | 4:31 PM

ಕಠ್ಮಂಡು, ಸೆಪ್ಟೆಂಬರ್ 2: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತಗಳ ಸಂದರ್ಭದಲ್ಲಿ ತಕ್ಷಣವೇ ಧಾವಿಸಿ ಬಂದು ಬೃಹತ್ ಮಟ್ಟದ ರಕ್ಷಣೆ ಹಾಗೂ ತುರ್ತು ಪರಿಹಾರ ನೆರವು ನೀಡಿದ್ದಕ್ಕಾಗಿ ನೇಪಾಳದ ಪ್ರಧಾನ ಮಂತ್ರಿ ಬಾಲೇಂದ್ರ ಷಾ (ಬಾಲೆನ್ ಷಾ) ಅವರು ಸಂಸತ್ತಿನ ಭಾಷಣದ ವೇಳೆ ಭಾವುಕವಾಗಿ ಭಾರತ ಮತ್ತು ಚೀನಾ ದೇಶಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜಲಪ್ರಳಯದಿಂದ ಉಂಟಾಗಿರುವ ತೀವ್ರ ವಿನಾಶ ಮತ್ತು ಕೈಗೊಂಡಿರುವ ಪರಿಹಾರ ಕಾರ್ಯಾಚರಣೆಗಳ ಕುರಿತು ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಬಾಲೆನ್ ಷಾ, ಅಕ್ಕಪಕ್ಕದ ರಾಷ್ಟ್ರಗಳು ಸಮಯಕ್ಕೆ ಸರಿಯಾಗಿ ನೀಡಿದ ಮಾನವೀಯ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು.

ನೆರೆಹೊರೆಯ ದೇಶಗಳ ಸಹಾಯಕ್ಕೆ ಧನ್ಯವಾದ:

ಪ್ರವಾಹದ ದುರಂತ ಸಂಭವಿಸಿದ ತಕ್ಷಣವೇ ಭಾರತ ಮತ್ತು ಚೀನಾ ದೇಶಗಳು ತಮ್ಮ ಅತ್ಯಾಧುನಿಕ ರಕ್ಷಣಾ ಪಡೆಗಳು, ತಾಂತ್ರಿಕ ಸಾಮಗ್ರಿಗಳು, ಹೆಲಿಕಾಪ್ಟರ್‌ಗಳು ಮತ್ತು ತುರ್ತು ವೈದ್ಯಕೀಯ ತಂಡಗಳನ್ನು ನೇಪಾಳಕ್ಕೆ ರವಾನಿಸಿದ್ದವು. ಈ ಸಹಾಯವನ್ನು ಪ್ರಧಾನಿ ಬಾಲೆನ್ ಷಾ ಸಂಸತ್ತಿನಲ್ಲಿ ವಿಶೇಷವಾಗಿ ಸ್ಮರಿಸಿದರು.

ಇದನ್ನೂ ಓದಿ: ನೇಪಾಳ ಪ್ರವಾಹದಲ್ಲಿ ತೇಲಿಬಂದ ಬೃಹತ್ ಗಾತ್ರದ ಮೀನುಗಳು: ಸೇವನೆ, ಮಾರಾಟ ಮಾಡದಂತೆ ಬಿಹಾರ ಸರ್ಕಾರ ಎಚ್ಚರಿಕೆ

ನೇಪಾಳದ ಚಿಲಿಮೆಯ ಜಲವಿದ್ಯುತ್ ಯೋಜನೆಯ ಸುರಂಗಗಳಲ್ಲಿ ಸಿಲುಕಿರುವ ನೂರಾರು ಕಾರ್ಮಿಕರ ರಕ್ಷಣೆಗೆ ಭಾರತ ಕಳುಹಿಸಿರುವ ವಿಶೇಷ ಸುರಂಗ ರಕ್ಷಣಾ ಪಡೆ ಹಾಗೂ ಮೃತರ ಗುರುತು ಪತ್ತೆ ಹಚ್ಚಲು ನೆರವಾಗುತ್ತಿರುವ ಫಾರೆನ್ಸಿಕ್ ತಜ್ಞರ ತಂಡದ ಶ್ರಮವನ್ನು ಕೂಡ ನೇಪಾಳದ ಪ್ರಧಾನಿ ಹೊಗಳಿದರು.

ಭಾರತದಿಂದ ತಾತ್ಕಾಲಿಕ ಸೇತುವೆ ನಿರ್ಮಾಣ:

ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದ ನೇಪಾಳದ ಗ್ರಾಮೀಣ ಪ್ರದೇಶಗಳನ್ನು ತಲುಪಲು ಭಾರತ ಮತ್ತು ಚೀನಾದ ತಜ್ಞರ ತಂಡಗಳು ಜಂಟಿಯಾಗಿ ಬೈಲಿ ಸೇತುವೆಗಳನ್ನು ನಿರ್ಮಿಸಿ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ನೆರವಾಯಿತು ಎಂದು ಅವರು ಹೇಳಿದರು. “ನೇಪಾಳ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನಮಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ನಾಯಕತ್ವಕ್ಕೆ ನೇಪಾಳದ ಎಲ್ಲಾ ಜನರ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಪ್ರಧಾನಿ ಬಾಲೆನ್ ಷಾ ಹೇಳಿದರು.

ಇದನ್ನೂ ಓದಿ: ‘ನಿಮ್ಮ ದಾನ ಬೇಡ, ಪರಿಹಾರ ಬೇಕು’; ಭೀಕರ ಪ್ರವಾಹಕ್ಕೆ ಭಾರತ, ಚೀನಾ, ಅಮೆರಿಕ ಕಾರಣವೆಂದ ನೇಪಾಳ

“ನಮ್ಮ ಹಿತೈಷಿಗಳಾದ ನೆರೆಹೊರೆಯ ರಾಷ್ಟ್ರಗಳಾದ ಚೀನಾ ಮತ್ತು ಭಾರತ ತಕ್ಷಣವೇ ತಮ್ಮ ತಾಂತ್ರಿಕ ತಜ್ಞರನ್ನು ರವಾನಿಸಿದ್ದವು. ಮೊದಲ ದಿನದಿಂದಲೇ ಈ ತಂಡಗಳು ವೈಮಾನಿಕ ಸಮೀಕ್ಷೆ ನಡೆಸಿ, ಹಾನಿಯ ತೀವ್ರತೆಯನ್ನು ಅಳೆದು ದುರ್ಗಮ ಪ್ರದೇಶಗಳನ್ನು ತಲುಪಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿದವು” ಎಂದು ಪ್ರಧಾನಿ ಬಾಲೆನ್ ಷಾ ತಿಳಿಸಿದರು.

ಇದೇ ನೇಪಾಳದ ಪ್ರಧಾನಿನ ಬಾಲೆನ್ ಶಾ ನೇಪಾಳದ ಪ್ರವಾಹಕ್ಕೆ ಭಾರತ, ಚೀನಾ, ಅಮೆರಿಕದಂತಹ ಬೃಹತ್ ರಾಷ್ಟ್ರಗಳು ತಾಪಮಾನ ಏರಿಕೆಗೆ ಕಾರಣವಾಗುವ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತಿರುವುದೇ ಕಾರಣ ಎಂದು ಆರೋಪಿಸಿದೆ. ಅದರ ಜೊತೆಗೆ ಭಾರತ ಮತ್ತು ಚೀನಾ ದೇಶಗಳ ಸಹಾಯಕ್ಕೂ ಧನ್ಯವಾದ ತಿಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us