ಶಾಂಘೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಮಹಿಳೆಯ ಕಿರುಕುಳದ ಆರೋಪ ನಿರಾಕರಿಸಿದ ಚೀನಾ
ಅರುಣಾಚಲ ಪ್ರದೇಶದ ಭಾರತೀಯ ಪ್ರಜೆ ಪೆಮಾ ವಾಂಗ್‌ಜೋಮ್ ಥೋಂಗ್‌ಡಾಕ್ ಅವರ ಬಂಧನ ಮತ್ತು ಕಿರುಕುಳದ ಆರೋಪಗಳನ್ನು ತಳ್ಳಿಹಾಕಿರುವ ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಚೀನಾ ತನ್ನ ವಲಸೆ ಅಧಿಕಾರಿಗಳ ಕ್ರಮಗಳನ್ನು ಸಮರ್ಥಿಸಿಕೊಂಡಿದೆ. ಬೀಜಿಂಗ್ ತನ್ನ ಕ್ರಮಗಳು "ದೇಶದ ಕಾನೂನುಗಳು ಮತ್ತು ನಿಯಮಗಳಿಗೆ ಅನುಗುಣವಾಗಿವೆ" ಎಂದು ಹೇಳಿದೆ. ಥೋಂಗ್‌ಡಾಕ್ ಅವರನ್ನು ಸುಮಾರು 18 ಗಂಟೆಗಳ ಕಾಲ ಬಂಧನದಲ್ಲಿರಿಸಿದ್ದರೂ ಸಹ ಅವರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಹೇಳಿಕೊಂಡಿದೆ.

ನವದೆಹಲಿ, ನವೆಂಬರ್ 25: ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಅರುಣಾಚಲ ಪ್ರದೇಶ ಮೂಲದ ಭಾರತೀಯ ಮಹಿಳೆಯೊಬ್ಬರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳನ್ನು ಚೀನಾ (China) ತಳ್ಳಿಹಾಕಿದೆ. ಚೀನಾದ ಕಾನೂನುಗಳು ಮತ್ತು ನಿಯಮಗಳ ಪ್ರಕಾರ, ವಲಸೆ ತಪಾಸಣೆಗಳನ್ನು ಕಟ್ಟುನಿಟ್ಟಾಗಿ ನಡೆಸಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಈ ಘಟನೆಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, “ಝಂಗ್ನಾನ್ ಚೀನಾದ ಪ್ರದೇಶ. ಭಾರತವು ಅಕ್ರಮವಾಗಿ ಸ್ಥಾಪಿಸಿರುವ ‘ಅರುಣಾಚಲ ಪ್ರದೇಶ’ ಎಂದು ಕರೆಯಲ್ಪಡುವ ಪ್ರದೇಶವನ್ನು ಚೀನಾದ ಕಡೆಯವರು ಎಂದಿಗೂ ಒಪ್ಪಿಲ್ಲ” ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಭಾರತೀಯ ಮಹಿಳೆಯೊಬ್ಬರು ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಗುರುತಿಸಲು ಅಧಿಕಾರಿಗಳು ನಿರಾಕರಿಸಿದ ನಂತರ ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಸುಮಾರು 18 ಗಂಟೆಗಳ ಕಾಲ ತಮ್ಮನ್ನು ಬಂಧನದಲ್ಲಿಡಲಾಗಿತ್ತು ಎಂದು ಮಾಡಿದ ಆರೋಪಗಳಿಗೆ ಚೀನಾ ಪ್ರತಿಕ್ರಿಯಿಸಿದೆ. ಯುಕೆ ಮೂಲದ ಭಾರತೀಯ ಪ್ರಜೆ ಪೆಮಾ ವಾಂಗ್‌ಜೋಮ್ ಥೋಂಗ್‌ಡಾಕ್ ನವೆಂಬರ್ 21ರಂದು ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದಾಗ ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ಅವರ ಭಾರತೀಯ ಪಾಸ್‌ಪೋರ್ಟ್ ಅನ್ನು ಒಪ್ಪಲು ನಿರಾಕರಿಸಿದರು. ಅರುಣಾಚಲ ಪ್ರದೇಶವನ್ನು ಅವರ ಜನ್ಮಸ್ಥಳವೆಂದು ಪಾಸ್ಪೋರ್ಟ್ನಲ್ಲಿ ನಮೂದಿಸಿರುವುದರಿಂದ ಅದನ್ನು “ಅಮಾನ್ಯ” ಎಂದು ಘೋಷಿಸಿದರು ಎಂದು ಥೋಂಗ್‌ಡಾಕ್ ಹೇಳಿದ್ದಾರೆ.
ಇದನ್ನೂ ಓದಿ: ಅರುಣಾಚಲ ಭಾರತದ್ದಲ್ಲ, ನಿಮ್ಮ ಪಾಸ್‌ಪೋರ್ಟ್ ಅಸಿಂಧು: ಭಾರತೀಯ ಮಹಿಳೆಗೆ ಚೀನೀ ಅಧಿಕಾರಿಗಳ ಕಿರಿಕ್
ಈ ಘಟನೆಗೆ ಪ್ರತಿಕ್ರಿಯೆಯಾಗಿ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾವೋ ನಿಂಗ್ ಅರುಣಾಚಲ ಪ್ರದೇಶದ ಬಗ್ಗೆ ಚೀನಾದ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದರು. “ಆ ಮಹಿಳೆ ಜನಿಸಿದ ಝಂಗ್ನಾನ್ ಚೀನಾದ ಪ್ರದೇಶ. ಭಾರತವು ಕಾನೂನುಬಾಹಿರವಾಗಿ ಸ್ಥಾಪಿಸಿದ “ಅರುಣಾಚಲ ಪ್ರದೇಶ”ವನ್ನು ಚೀನಾ ಎಂದಿಗೂ ಒಪ್ಪಿಲ್ಲ” ಎಂದು ಅವರು ಹೇಳಿದ್ದಾರೆ.
ಶಾಂಘೈ ವಿಮಾನ ನಿಲ್ದಾಣದಲ್ಲಿ ಥಾಂಗ್‌ಡಾಕ್ ಅವರ ಕಿರುಕುಳದ ಆರೋಪಗಳನ್ನು ಮಾವೋ ತಳ್ಳಿಹಾಕಿದರು. ಚೀನಾದ ವಲಸೆ ಅಧಿಕಾರಿಗಳ ಕ್ರಮಗಳು ದೇಶದ “ಕಾನೂನುಗಳು ಮತ್ತು ನಿಯಮಗಳಿಗೆ” ಸಂಪೂರ್ಣವಾಗಿ ಅನುಗುಣವಾಗಿವೆ ಎಂದು ಪ್ರತಿಪಾದಿಸಿದರು. ಈ ತನಿಖೆಯಿಂದ ಆದ ವಿಳಂಬದ ಸಮಯದಲ್ಲಿ ವಿಮಾನಯಾನ ಸಂಸ್ಥೆಯು ಮಹಿಳೆಗೆ ವಿಶ್ರಾಂತಿ ಸೌಲಭ್ಯಗಳು ಮತ್ತು ಊಟವನ್ನು ಒದಗಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Arunachal Pradesh CM Swearing in Ceremony: ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪೆಮಾ ಖಂಡು
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಈ ಘಟನೆಯನ್ನು ಖಂಡಿಸಿ, “ಅರುಣಾಚಲ ಪ್ರದೇಶದ ಹೆಮ್ಮೆಯ ಭಾರತೀಯ ಪ್ರಜೆ ಪ್ರೇಮಾ ವಾಂಗ್ಜೋಮ್ ಥೋಂಗ್ಡಾಕ್ ಅವರನ್ನು ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಚೀನಾದ ವಲಸೆ ಅಧಿಕಾರಿಗಳು ನಡೆಸಿಕೊಂಡ ರೀತಿಗೆ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಮಾನ್ಯ ಭಾರತೀಯ ಪಾಸ್‌ಪೋರ್ಟ್ ಇದ್ದರೂ ಅವರನ್ನು ಅವಮಾನ ಮತ್ತು ಜನಾಂಗೀಯ ಅಪಹಾಸ್ಯಕ್ಕೆ ಒಳಪಡಿಸುವುದು ಭಯಾನಕವಾಗಿದೆ” ಎಂದಿದ್ದಾರೆ.
“ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಯಾವಾಗಲೂ ಭಾರತದ ಭಾಗವಾಗಿಯೇ ಇರುತ್ತದೆ. ಈ ರೀತಿಯ ಆರೋಪಗಳು ಆಧಾರರಹಿತ ಮತ್ತು ಆಕ್ರಮಣಕಾರಿ ವರ್ತನೆ ಸರಿಯಲ್ಲ. ಇಂತಹ ನಡವಳಿಕೆ ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸುತ್ತದೆ ಮತ್ತು ನಮ್ಮ ನಾಗರಿಕರ ಘನತೆಗೆ ಧಕ್ಕೆ ತರುತ್ತದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯವು ಈ ವಿಷಯವನ್ನು ತುರ್ತಾಗಿ ಪರಿಗಣಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




