H-1B ಹಗರಣ; ಚೆನ್ನೈಗೆ 85 ಸಾವಿರದ ಬದಲಾಗಿ 2.20 ಲಕ್ಷ ವೀಸಾ ದೊರೆತಿದೆ ಎಂದು ಅಮೆರಿಕ ಆರೋಪ
ಅಮೆರಿಕದ ಅರ್ಥಶಾಸ್ತ್ರಜ್ಞ ಡಾ. ಡೇವ್ ಬ್ರಾಟ್ ಅವರು H-1B ವೀಸಾ ವ್ಯವಸ್ಥೆಯಲ್ಲಿ ವ್ಯಾಪಕ ವಂಚನೆ ನಡೆದಿದೆ ಎಂದು ಆರೋಪಿಸಿದ್ದು, ಭಾರತದ ಒಂದು ಜಿಲ್ಲೆಯು ದೇಶಾದ್ಯಂತ ಕಾನೂನುಬದ್ಧವಾಗಿ ಅನುಮತಿಸಲಾದ ಒಟ್ಟು ವೀಸಾಗಳ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಪಡೆದುಕೊಂಡಿದೆ ಎಂದು ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ. ಟ್ರಂಪ್ ಸರ್ಕಾರ H-1B ವೀಸಾಗಳ ಮೇಲಿನ ಕಠಿಣ ಕ್ರಮಗಳನ್ನು ತೀವ್ರಗೊಳಿಸುತ್ತಿರುವ ಸಮಯದಲ್ಲಿ ಬ್ರಾಟ್ ಅವರ ಹೇಳಿಕೆ ಮಹತ್ವ ಪಡೆದಿವೆ.

ನವದೆಹಲಿ, ನವೆಂಬರ್ 26: ಅಮೆರಿಕ ಎಚ್-1ಬಿ ವೀಸಾಗಳ (US H-1B Visa) ಮೇಲೆ ಕಠಿಣ ನಿಯಮಗಳನ್ನು ಹೇರಲು ನಿರ್ಧರಿಸಿರುವ ಬೆನ್ನಲ್ಲೇ ಭಾರತದ ಮೇಲೆ ಅಮೆರಿಕದ ಅರ್ಥಶಾಸ್ತ್ರಜ್ಞರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ತಮಿಳುನಾಡಿನ ಚೆನ್ನೈಗೆ 85 ಸಾವಿರ ಅಮೆರಿಕನ್ ವೀಸಾ ಮಿತಿಯ ಬದಲಾಗಿ 2,20,000 H-1B ವೀಸಾಗಳು ದೊರೆತಿವೆ ಎಂದು ಅವರು ಪಾಡ್ಕಾಸ್ಟ್ ಒಂದರಲ್ಲಿ ಬಹಿರಂಗಪಡಿಸಿದ್ದಾರೆ. ಎಚ್-1ಬಿ ವೀಸಾದ ಭಾರತದ ಮಿತಿಯಲ್ಲಿ ಭಾರಿ ವಂಚನೆ ನಡೆದಿದೆ ಎಂದು ಅಮೆರಿಕದ ಅರ್ಥಶಾಸ್ತ್ರಜ್ಞ ಡಾ. ಡೇವ್ ಬ್ರಾಟ್ ಆರೋಪಿಸಿದ್ದಾರೆ. ಇದೀಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಸ್ಟೀವ್ ಬ್ಯಾನನ್ ಅವರ ವಾರ್ ರೂಮ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಡಾ. ಬ್ರಾಟ್, ಭಾರತದಲ್ಲಿ ವೀಸಾ ಹಂಚಿಕೆಗಳು ಶಾಸನಬದ್ಧ ಮಿತಿಗಳನ್ನು ಉಲ್ಲಂಘಿಸುವ ಮಟ್ಟವನ್ನು ತಲುಪಿವೆ ಎಂದು ಆರೋಪಿಸಿದರು. “ಶೇ. 71ರಷ್ಟು H-1B ವೀಸಾಗಳು ಭಾರತದಿಂದ ಬರುತ್ತವೆ ಮತ್ತು ಕೇವಲ ಶೇ. 12ರಷ್ಟು ಚೀನಾದಿಂದ ಬರುತ್ತವೆ. ಅಲ್ಲಿ ಏನೋ ನಡೆಯುತ್ತಿದೆ ಎಂದು ಇದು ನಿಮಗೆ ಸೂಚಿಸುತ್ತದೆ” ಎಂದು ಬ್ರಾಟ್ ಹೇಳಿದ್ದಾರೆ. “ಕೇವಲ 85,000 H-1B ವೀಸಾಗಳ ಮಿತಿ ಇದೆ. ಆದರೆ ಹೇಗೋ ಭಾರತದ ಮದ್ರಾಸ್ (ಚೆನ್ನೈ) ಜಿಲ್ಲೆ 2,20,000 ವೀಸಾಗಳನ್ನು ಪಡೆದುಕೊಂಡಿದೆ. ಅದು ಅಮೆರಿಕದಿಂದ ನಿಗದಿಪಡಿಸಿದ ಮಿತಿಗಿಂತ 2.5 ಪಟ್ಟು ಹೆಚ್ಚು. ಆದ್ದರಿಂದ ಅದೊಂದು ಹಗರಣ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಟ್ರಂಪ್ ಹೊಸ ನಿಯಮ; ಮಧುಮೇಹ, ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಯಿದ್ದರೆ ಅಮೆರಿಕದ ವೀಸಾ ಸಿಗೋದಿಲ್ವ?
ವರದಿಗಳ ಪ್ರಕಾರ, ಚೆನ್ನೈನಲ್ಲಿರುವ ಯುಎಸ್ ಕಾನ್ಸುಲೇಟ್ 2024ರಲ್ಲಿ ಸುಮಾರು 2,20,000 H-1B ವೀಸಾಗಳನ್ನು ಮತ್ತು ಹೆಚ್ಚುವರಿಯಾಗಿ 1,40,000 H-4 ಅವಲಂಬಿತ ವೀಸಾಗಳನ್ನು ಪ್ರಕ್ರಿಯೆಗೊಳಿಸಿದೆ. ಕಾನ್ಸುಲೇಟ್ 4 ಪ್ರಮುಖ ಪ್ರದೇಶಗಳಾದ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ತೆಲಂಗಾಣದಿಂದ ಅರ್ಜಿಗಳನ್ನು ನಿರ್ವಹಿಸುತ್ತದೆ. ಇದು ವಿಶ್ವದ ಅತ್ಯಂತ ಜನನಿಬಿಡ H-1B ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾಗಿದೆ.
H-1B ವೀಸಾವು ಅಮೆರಿಕದ ಕಂಪನಿಗಳಿಗೆ ವಿಶೇಷ ಕ್ಷೇತ್ರಗಳಲ್ಲಿ, ವಿಶೇಷವಾಗಿ ತಂತ್ರಜ್ಞಾನದಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. 2024ರಲ್ಲಿ ಸುಮಾರು ಶೇ. 70ರಷ್ಟು ಭಾರತೀಯ ಪ್ರಜೆಗಳು ಈ ವೀಸಾ ಹೊಂದಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




