AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಹೊಸ ನಿಯಮ; ಮಧುಮೇಹ, ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಯಿದ್ದರೆ ಅಮೆರಿಕದ ವೀಸಾ ಸಿಗೋದಿಲ್ವ?

ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತರಲು ಪ್ರಾರಂಭಿಸಿದೆ. ಅಮೆರಿಕದ ಸೂಚನೆಯ ಅಡಿಯಲ್ಲಿ ಅಮೆರಿಕದಲ್ಲಿ ವಾಸಿಸಲು ವೀಸಾ ಬಯಸುವ ವಿದೇಶಿಯರಿಗೆ ಒಂದುವೇಳೆ ಮಧುಮೇಹ ಅಥವಾ ಬೊಜ್ಜು ಸೇರಿದಂತೆ ಕೆಲವು ವೈದ್ಯಕೀಯ ಸಮಸ್ಯೆಗಳಿದ್ದರೆ ಅವರಿಗೆ ವೀಸಾ ನಿರಾಕರಿಸಬಹುದಾಗಿದೆ. ಮಧುಮೇಹ ಮತ್ತು ಬೊಜ್ಜು ಸೇರಿದಂತೆ ಕೆಲವು ವೈದ್ಯಕೀಯ ಪರಿಸ್ಥಿತಿಗಳ ಆಧಾರದ ಮೇಲೆ ಯುಎಸ್‌ಗೆ ವೀಸಾಗಳನ್ನು ತಿರಸ್ಕರಿಸಬಹುದು ಎಂದು ಅಮೆರಿಕದ ನಿರ್ದೇಶನವು ಸೂಚಿಸುತ್ತದೆ.

ಟ್ರಂಪ್ ಹೊಸ ನಿಯಮ; ಮಧುಮೇಹ, ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಯಿದ್ದರೆ ಅಮೆರಿಕದ ವೀಸಾ ಸಿಗೋದಿಲ್ವ?
Donald Trump
ಸುಷ್ಮಾ ಚಕ್ರೆ
|

Updated on: Nov 08, 2025 | 7:07 PM

Share

ವಾಷಿಂಗ್ಟನ್, ನವೆಂಬರ್ 8: ಅನಾರೋಗ್ಯ ಸಮಸ್ಯೆ ಇರುವವರಿಗೆ ಇನ್ನುಮುಂದೆ ಅಮೆರಿಕಕ್ಕೆ ವೀಸಾ ಸಿಗುವುದು ಕಷ್ಟವಾಗಬಹುದು. ಏಕೆಂದರೆ, ಆರೋಗ್ಯ ಸಮಸ್ಯೆ ಇರುವವರಿಗೆ ಅಮೆರಿಕಕ್ಕೆ ವೀಸಾ ನೀಡದಿರುವ ಬಗ್ಗೆ ಟ್ರಂಪ್ (Donald Trump) ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಎಫ್‌ಎಫ್ ಹೆಲ್ತ್ ನ್ಯೂಸ್ ಪ್ರಕಟಿಸಿದ ವರದಿಯ ಪ್ರಕಾರ, ಒಂದುವೇಳೆ ಅನಾರೋಗ್ಯ ಸಮಸ್ಯೆ ಇರುವವವರಿಗೆ ವೀಸಾಗಳನ್ನು ನೀಡಿದರೆ ಈ ವ್ಯಕ್ತಿಗಳು ಸಾರ್ವಜನಿಕ ಪ್ರಯೋಜನಗಳನ್ನು ಅವಲಂಬಿಸಬಹುದು ಮತ್ತು ಅಮೆರಿಕದ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು ಎಂಬ ಕಾರಣಕ್ಕೆ ಈ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂದು ಶ್ವೇತಭವನ ಹೇಳಿದೆ.

ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ರಾಯಭಾರ ಕಚೇರಿ ಮತ್ತು ಕಾನ್ಸುಲರ್ ಅಧಿಕಾರಿಗಳಿಗೆ ಕಳುಹಿಸಿದ ಸೂಚನೆಯಲ್ಲಿ ಈ ನಿರ್ದೇಶನವನ್ನು ನೀಡಲಾಗಿದೆ. “ನೀವು ಅರ್ಜಿದಾರರ ಆರೋಗ್ಯವನ್ನು ಪರಿಗಣಿಸಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ. “ಕೆಲವು ವೈದ್ಯಕೀಯ ಸಮಸ್ಯೆಗಳು, ಉದಾಹರಣೆಗೆ- ಹೃದಯರಕ್ತನಾಳದ ಕಾಯಿಲೆಗಳು, ಉಸಿರಾಟದ ಕಾಯಿಲೆಗಳು, ಕ್ಯಾನ್ಸರ್, ಮಧುಮೇಹ, ಚಯಾಪಚಯ ಸಮಸ್ಯೆ, ನರವೈಜ್ಞಾನಿಕ ಕಾಯಿಲೆಗಳು ಮತ್ತು ಮಾನಸಿಕ ಆರೋಗ್ಯ ಪರಿಸ್ಥಿತಿಗಳು ಸೇರಿದಂತೆ ಕೆಲವು ರೋಗಗಳ ಚಿಕಿತ್ಸೆಗೆ ಲಕ್ಷಾಂತರ ಡಾಲರ್‌ ವೆಚ್ಚದ ಚಿಕಿತ್ಸೆಯ ಅಗತ್ಯವಿರುತ್ತದೆ. ಹೀಗಾಗಿ, ವೀಸಾಗೆ ಅರ್ಜಿ ಸಲ್ಲಿಸುವವರು ಆರೋಗ್ಯವನ್ನು ಪರಿಶೀಲಿಸಬೇಕು. ಅಧಿಕ ರಕ್ತದೊತ್ತಡ, ಮಧುಮೇಹ, ಅಸ್ತಮಾ, ಬೊಜ್ಜು ಮುಂತಾದ ಸಮಸ್ಯೆಗಳನ್ನು ಕೂಡ ಪರಿಗಣಿಸಬೇಕು” ಎಂದು ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ಎಚ್1ಬಿ ವೀಸಾ ಸಿಸ್ಟಂ ರದ್ದುಗೊಳಿಸಿ, ಹೊಸ ನಿಯಮ ತರಲಿರುವ ಅಮೆರಿಕ

ಅರ್ಜಿದಾರರು ಯುಎಸ್ ಸರ್ಕಾರವನ್ನು ಅವಲಂಬಿಸದೆ ಸ್ವತಂತ್ರವಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಸಾಧ್ಯವೇ ಎಂದು ನಿರ್ಣಯಿಸಿ ನಂತರ ಅವರಿಗೆ ವೀಸಾ ನೀಡಿ ಎಂದು ವೀಸಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. “ಅರ್ಜಿದಾರನು ಅಮೆರಿಕದಲ್ಲಿರುವ ಸಮಯದಲ್ಲಿ ಸಾರ್ವಜನಿಕ ನಗದು ನೆರವು ಅಥವಾ ಸರ್ಕಾರಿ ವೆಚ್ಚದಲ್ಲಿ ದೀರ್ಘಾವಧಿಯ ಚಿಕಿತ್ಸೆ ಪಡೆಯದೆ ಅಂತಹ ಆರೈಕೆಯ ವೆಚ್ಚವನ್ನು ತಾನೇ ಭರಿಸಲು ಆರ್ಥಿಕವಾಗಿ ಸಬಲನಾಗಿದ್ದೇನೆಯೇ ಎಂದು ಪರಿಶೀಲಿಸಿ” ಎಂದು ಕೂಡ ವೀಸಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.

“ಯಾವುದೇ ಅವಲಂಬಿತರಿಗೆ ಅಂಗವೈಕಲ್ಯ, ದೀರ್ಘಕಾಲದ ವೈದ್ಯಕೀಯ ಪರಿಸ್ಥಿತಿಗಳು ಅಥವಾ ಇತರ ವಿಶೇಷ ಅಗತ್ಯಗಳಿವೆಯೇ ಮತ್ತು ಅರ್ಜಿದಾರರು ಉದ್ಯೋಗವನ್ನು ನಿರ್ವಹಿಸಲು ಸಾಧ್ಯವಾಗದಷ್ಟು ಆರೈಕೆಯ ಅಗತ್ಯವಿದೆಯೇ?” ಎಂದು ಗಮನಿಸಿ ಎಂದು ಕೂಡ ಸೂಚಿಸಲಾಗಿದೆ.

ಇದನ್ನೂ ಓದಿ: ಎಚ್​​-1 ಬಿ ವೀಸಾ ಶುಲ್ಕ ಹೆಚ್ಚಳ ಗೊಂದಲ, ಯಾರ್ಯಾರಿಗೆ ಅನ್ವಯ? ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ಟ್ರಂಪ್

ಸಾಮಾನ್ಯವಾಗಿ ಬೇರೆ ದೇಶಕ್ಕೆ ತೆರಳುವವರ ಆರೋಗ್ಯವನ್ನು ಮೌಲ್ಯಮಾಪನ ಮಾಡುವುದು ವೀಸಾ ಪ್ರಕ್ರಿಯೆಯ ಒಂದು ಭಾಗವಾಗಿದೆ. ಇದರಲ್ಲಿ ಕ್ಷಯರೋಗದಂತಹ ಸಾಂಕ್ರಾಮಿಕ ರೋಗಗಳಿಗೆ ತಪಾಸಣೆ ಮತ್ತು ಲಸಿಕೆಯ ಇತಿಹಾಸಗಳನ್ನು ಕೂಡ ಪರಿಶೀಲಿಸಲಾಗುತ್ತದೆ.. ಆದರೆ, ಅಮೆರಿಕದ ಹೊಸ ಮಾರ್ಗಸೂಚಿಗಳು ಈ ವೈದ್ಯಕೀಯ ಸಮಸ್ಯೆಗಳ ವ್ಯಾಪ್ತಿಯನ್ನು ವಿಸ್ತರಿಸಿವೆ.

ಗಮನಿಸಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ, ಅಮೆರಿಕದ ಈ ಹೊಸ ನಿರ್ದೇಶನವು ಬಹುತೇಕ ಎಲ್ಲಾ ವೀಸಾ ಅರ್ಜಿದಾರರಿಗೆ ಅನ್ವಯಿಸುತ್ತದೆ. ಆದರೆ ಅರ್ಜಿದಾರರು ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಬಯಸುವ ಸಂದರ್ಭಗಳಲ್ಲಿ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ