ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ವಿರುದ್ಧ ಭಾನುವಾರ ವಿಪಕ್ಷಗಳ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಜಾಗೊಳಿಸಿ (No-confidence motion) , ಸ್ಪೀಕರ್ ಸಂಸತ್ ಕಲಾಪ ಏಪ್ರಿಲ್ 25ರ ವರೆಗೆ ಮುಂದೂಡಿದ್ದಾರೆ. ಕಲಾಪ ಮುಂದೂಡಿಕೆ ಆಗಿರುವುದರಿಂದ ಇಮ್ರಾನ್ ಖಾನ್ಗೆ ಏಪ್ರಿಲ್ 25ರವರೆಗೆ ಬಹುಮತ ಸಾಬೀತುಪಡಿಸಲು ಕಾಲಾವಕಾಶ ಸಿಕ್ಕಿದೆ. ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ‘ಅಸಂವಿಧಾನಿಕ’ ಎಂದ ಉಪಸಭಾಪತಿ ಖಾಸಿಂ ಖಾನ್ ಸೂರಿ (Qasim Khan Suri) ವಜಾಗೊಳಿಸಿದ್ದಾರೆ. ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸದ್ ಕೈಸರ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ ನಂತರ ಸೂರಿ ಅಧ್ಯಕ್ಷತೆ ವಹಿಸಿದ್ದರು. ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್, ಸಂಸತ್ ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಕೇಳಿದ್ದೇನೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆಗಳು ನಡೆಯಬೇಕು. ಚುನಾವಣೆಗೆ ಸಿದ್ಧರಾಗುವಂತೆ ನಾನು ಪಾಕಿಸ್ತಾನದ ಜನರಿಗೆ ಕರೆ ನೀಡುತ್ತೇನೆ ಎಂದು ಖಾನ್ ಹೇಳಿದ್ದಾರೆ.
ಸಂಸತ್ತು ವಿಸರ್ಜಿಸಲು ಅಧ್ಯಕ್ಷರಿಗೆ ಪ್ರಸ್ತಾವ ಸಲ್ಲಿಸುತ್ತೇನೆ – ಇಮ್ರಾನ್ ಖಾನ್
ವಿದೇಶಿ ಶಕ್ತಿಗಳ ಸಂಚಿನಿಂದ ನನ್ನ ವಿರುದ್ಧ ಅವಿಶ್ವಾಸ ಮಂಡನೆಯಾಗಿತ್ತು. ಕಲಾಪ ಮುಂದೂಡುವ ಮೂಲಕ ಸ್ಪೀಕರ್ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿದ್ದಾರೆ. ಹೊಸದಾಗಿ ಚುನಾವಣೆ ಎದುರಿಸಿ ಜನಾದೇಶ ಪಡೆದುಕೊಳ್ಳುತ್ತೇವೆ. ಅವರನ್ನು ಯಾರು ಆಳಬೇಕು ಎಂಬುದನ್ನು ಪಾಕಿಸ್ತಾನವೇ ನಿರ್ಧರಿಸಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಸಂಸತ್ತು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆ ನಡೆಯಬೇಕು. ಚುನಾವಣೆಗೆ ಸಿದ್ಧರಾಗುವಂತೆ ಪಾಕಿಸ್ತಾನಕ್ಕೆ ನಾನು ಜನರಿಗೆ ಕರೆ ನೀಡುತ್ತೇನೆ ಎಂದಿದ್ದಾರೆ ಖಾನ್.
ಸರ್ಕಾರ ಸಂವಿಧಾನವನ್ನು ಉಲ್ಲಂಘಿಸಿದೆ: ಬಿಲಾವಲ್ ಭುಟ್ಟೋ ಜರ್ದಾರಿ
“ಸರ್ಕಾರವು ಸಂವಿಧಾನವನ್ನು ಉಲ್ಲಂಘಿಸಿದೆ” ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ. “ಅವರು ಅವಿಶ್ವಾಸ ನಿರ್ಣಯದ ಮೇಲೆ ಮತದಾನಕ್ಕೆ ಅವಕಾಶ ನೀಡಲಿಲ್ಲ. ಸಂಯುಕ್ತ ವಿಪಕ್ಷಗಳು ಸಂಸತ್ತನ್ನು ಬಿಡುತ್ತಿಲ್ಲ. ನಮ್ಮ ವಕೀಲರು ಸುಪ್ರೀಂಕೋರ್ಟ್‌ಗೆ ಹೋಗುತ್ತಿದ್ದಾರೆ. ಪಾಕಿಸ್ತಾನದ ಸಂವಿಧಾನವನ್ನು ರಕ್ಷಿಸಲು, ಎತ್ತಿಹಿಡಿಯಲು, ರಕ್ಷಿಸಲು ಮತ್ತು ಜಾರಿಗೆ ತರಲು ನಾವು ಎಲ್ಲಾ ಸಂಸ್ಥೆಗಳಿಗೆ ಕರೆ ನೀಡುತ್ತೇವೆ ಎಂದಿದ್ದಾರೆ ಜರ್ದಾರಿ.
Government has violated constitution. did not allow voting on no confidence motion. The united opposition is not leaving parliament. Our lawyers are on their way to Supreme Court. We call on ALL institutions to protect, uphold, defend & implement the constitution of Pakistan ?? pic.twitter.com/sThqng0SI5
— BilawalBhuttoZardari (@BBhuttoZardari) April 3, 2022
ನ್ಯಾಷನಲ್ ಅಸೆಂಬ್ಲಿಯಲ್ಲಿ ವಿಪಕ್ಷಗಳ ಧರಣಿ
ಅವಿಶ್ವಾಸ ನಿರ್ಣಯವನ್ನು ಡೆಪ್ಯುಟಿ ಸ್ಪೀಕರ್ ವಜಾಗೊಳಿಸಿದ ನಂತರ ಪ್ರತಿಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಧರಣಿ ನಡೆಸಲಿವೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
342 ಸದಸ್ಯ ಬಲದ ಪಾಕ್ ಸಂಸತ್ತಿನಲ್ಲಿ ಕೇವಲ 164 ಸದಸ್ಯರನ್ನು ಹೊಂದಿರುವ ಇಮ್ರಾನ್ ಖಾನ್ ಅವರ ಆಡಳಿತಾರೂಢ ಪಿಟಿಐ ಮೈತ್ರಿಕೂಟವು ಅಲ್ಪಮತಕ್ಕೆ ಇಳಿದಿದೆ. ಬಹುಮತಕ್ಕೆ 172 ಸದಸ್ಯ ಬಲ ಬೇಕು. ವಿರೋಧ ಪಕ್ಷವು 177 ಸದಸ್ಯ ಬಲವನ್ನು ಹೊಂದಿದ್ದು, ಅವಿಶ್ವಾಸ ಗೊತ್ತುವಳಿಯಲ್ಲಿ ಇಮ್ರಾನ್ ಖಾನ್ಗೆ ಹಿನ್ನಡೆಯಾಗುವುದು ಬಹುತೇಕ ನಿರೀಕ್ಷಿತ ಎನ್ನಲಾಗಿದೆ. ಆದಾಗ್ಯೂ , ಬಹುಮತ ಸಾಬೀತು ಪಡಿಸಲು ಇಮ್ರಾನ್ ಖಾನ್ಗೆ ಇದೀಗ ಹೆಚ್ಚಿನ ಕಾಲಾವಕಾಶ ಲಭಿಸಿದ್ದು, ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಪಾಕಿಸ್ತಾನ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ: ಕಲಾಪದಿಂದ ದೂರ ಉಳಿದ ಪ್ರಧಾನಿ
Published On - 1:16 pm, Sun, 3 April 22