ಪಾಕಿಸ್ತಾನ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ: ಕಲಾಪದಿಂದ ದೂರ ಉಳಿದ ಪ್ರಧಾನಿ

ಪಾಕಿಸ್ತಾನ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ: ಕಲಾಪದಿಂದ ದೂರ ಉಳಿದ ಪ್ರಧಾನಿ
ಪಾಕ್ ಪಿಎಂ ಇಮ್ರಾನ್ ಖಾನ್ (ಸಂಗ್ರಹ ಚಿತ್ರ)

ಸಂಸತ್ ಕಲಾಪದಲ್ಲಿ ಭಾಗವಹಿಸದೇ ದೂರ ಉಳಿಯಲು ನಿರ್ಧರಿಸಿರುವ ಇಮ್ರಾನ್ ಖಾನ್, ಮನೆಯಲ್ಲಿ ಉಳಿದೇ ಕಲಾಪ ವೀಕ್ಷಿಸಲು ನಿರ್ಧರಿಸಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 03, 2022 | 12:19 PM

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Pakistan Prime Minister Imran Khan) ವಿರುದ್ಧ ವಿರೋಧ ಪಕ್ಷಗಳು ಭಾನುವಾರ ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಕಲಾಪದಲ್ಲಿ ಭಾಗವಹಿಸದೇ ದೂರ ಉಳಿಯಲು ನಿರ್ಧರಿಸಿರುವ ಇಮ್ರಾನ್ ಖಾನ್, ಮನೆಯಲ್ಲಿ ಉಳಿದೇ ಕಲಾಪ ವೀಕ್ಷಿಸಲು ನಿರ್ಧರಿಸಿದ್ದಾರೆ. ಈವರೆಗಿನ ಲೆಕ್ಕಾಚಾರಗಳ ಪ್ರಕಾರ ಅವಿಶ್ವಾಸ ಗೊತ್ತುವಳಿಯಲ್ಲಿ ಇಮ್ರಾನ್ ಖಾನ್ ಬಹುಮತ ಸಾಬೀತು ಪಡಿಸುವುದು ಕಷ್ಟ ಎಂದು ವಿಶ್ಲೇಷಿಸಲಾಗಿದೆ. ಸಂಸತ್ತಿಗೆ ತೆರಳುವ ಮೊದಲು ದೇಶದ ಜನರೊಂದಿಗೆ ಮಾತನಾಡಿದ್ದ ಇಮ್ರಾನ್ ಖಾನ್, ಬೀದಿಗಿಳಿದು ಪ್ರತಿಭಟನೆ ನಡೆಸಬೇಕೆಂದು ಕರೆ ನೀಡಿದ್ದರು. ಸಂಸತ್ ಭವನದ ಸಮೀಪ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಪ್ರಧಾನಿ ಬಹುಮತ ಯಾಚಿಸುವ ಪ್ರಸ್ತಾವ ಮಂಡನೆಗೆ ಕೆಲ ನಿಮಿಷಗಳ ಮೊದಲು ಟ್ವೀಟ್ ಮಾಡಿರುವ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷವು, ’ಪ್ರಧಾನಿ ಇಮ್ರಾನ್ ಖಾನ್ ಅವರು ಸಿಕ್ಕ ಅವಕಾಶದಲ್ಲಿ ಪಾಕಿಸ್ತಾನಿಗಳನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಇಂದು ಇಡೀ ರಾಷ್ಟ್ರವು ಇಮ್ರಾನ್ ಖಾನ್ ಪರವಾಗಿ ನಿಂತಿದೆ’ ಎಂದು ಹೇಳಿದೆ. ಇಮ್ರಾನ್ ಆಡಳಿತ ವೈಖರಿಯನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಷರೀಫ್ ಟೀಕಿಸಿದ್ದಾರೆ. ‘ಹಣದುಬ್ಬರ, ಅಸಮರ್ಥತೆ, ಅದಕ್ಷತೆ ಮತ್ತು ಇತಿಹಾಸ ಕಂಡ ಅತ್ಯಂತ ಕೆಟ್ಟ ಸರ್ಕಾರವನ್ನು ತೊಡೆದುಹಾಕುವ ರಾಷ್ಟ್ರಕ್ಕೆ ಅಭಿನಂದನೆಗಳು’ ಎಂದು ಹೇಳಿದರು.

ಪ್ರಧಾನಿ ಇಮ್ರಾನ್ ಖಾನ್ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರೆ ಅವರನ್ನು ಬಂಧಿಸಲಾಗುತ್ತದೆ ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಶೇಖ್ ಅಹ್ಮದ್ ಹೇಳಿದ್ದಾರೆ. ವಿರೋಧ ಪಕ್ಷಗಳು ಇಮ್ರಾನ್​ರನ್ನು ಸಹಿಸುವುದಿಲ್ಲ. ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ಎದುರಾಗಿದೆ. ಈ ಪರಿಸ್ಥಿತಿಗೆ ಚುನಾವಣೆಯೊಂದೇ ಪರಿಹಾರ ಎಂದು ಅವರು ಹೇಳಿದ್ದಾರೆ.

342 ಸದಸ್ಯ ಬಲದ ಪಾಕ್ ಸಂಸತ್ತಿನಲ್ಲಿ ಕೇವಲ 164 ಸದಸ್ಯರನ್ನು ಹೊಂದಿರುವ ಇಮ್ರಾನ್ ಖಾನ್ ಅವರ ಆಡಳಿತಾರೂಢ ಪಿಟಿಐ ಮೈತ್ರಿಕೂಟವು ಅಲ್ಪಮತಕ್ಕೆ ಇಳಿದಿದೆ. ಬಹುಮತಕ್ಕೆ 172 ಸದಸ್ಯ ಬಲ ಬೇಕು. ವಿರೋಧ ಪಕ್ಷವು 177 ಸದಸ್ಯ ಬಲವನ್ನು ಹೊಂದಿದ್ದು, ಅವಿಶ್ವಾಸ ಗೊತ್ತುವಳಿಯಲ್ಲಿ ಇಮ್ರಾನ್ ಖಾನ್​ಗೆ ಹಿನ್ನಡೆಯಾಗುವುದು ಬಹುತೇಕ ನಿರೀಕ್ಷಿತ ಎನ್ನಲಾಗಿದೆ.

ಇದನ್ನೂ ಓದಿ: ಅವಿಶ್ವಾಸ ಗೊತ್ತುವಳಿ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿ: ಪಾಕ್ ಜನರಿಗೆ ಇಮ್ರಾನ್ ಖಾನ್ ಕರೆ

ಇದನ್ನೂ ಓದಿ: 45 ನಿಮಿಷಗಳ ಭಾಷಣದಲ್ಲಿ ‘ನಾನು, ನನಗೆ ನನ್ನ’ ಎಂದು 213 ಬಾರಿ ಹೇಳಿದ ಇಮ್ರಾನ್ ಖಾನ್; ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್

Follow us on

Related Stories

Most Read Stories

Click on your DTH Provider to Add TV9 Kannada