ಭಾರತ ನಮ್ಮ ಒಂದು ವಿಮಾನವನ್ನೂ ಹೊಡೆದುರುಳಿಸಿಲ್ಲ; ಐಎಎಫ್​ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ

ಭಾರತೀಯ ವಾಯುಪಡೆಯ ಮುಖ್ಯಸ್ಥ ಎಪಿ ಸಿಂಗ್ ಇಂದು ಆಪರೇಷನ್ ಸಿಂಧೂರದ ವೇಳೆ ನಡೆದ ಕಾರ್ಯಾಚರಣೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದರು. ಭಾರತವು ಪಾಕಿಸ್ತಾನದ 6 ಜೆಟ್‌ಗಳನ್ನು ಹೊಡೆದುರುಳಿಸಿರುವುದಾಗಿ ಘೋಷಿಸಿದ್ದರು. ಆದರೆ, ಭಾರತೀಯ ಪಡೆಗಳಿಂದ ಪಾಕಿಸ್ತಾನದ ಯಾವುದೇ ವಿಮಾನ ನೆಲಕ್ಕುರುಳಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

ಭಾರತ ನಮ್ಮ ಒಂದು ವಿಮಾನವನ್ನೂ ಹೊಡೆದುರುಳಿಸಿಲ್ಲ; ಐಎಎಫ್​ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ
Khawaja Asif

Updated on: Aug 09, 2025 | 10:05 PM

ನವದೆಹಲಿ, ಆಗಸ್ಟ್ 9: ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ (AP Singh) ಅವರು ಭಾರತೀಯ ಪಡೆಗಳು 5 ಫೈಟರ್ ಜೆಟ್ ಮತ್ತು ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಹೇಳಿದ ಕೆಲವೇ ಗಂಟೆಗಳ ನಂತರ, ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ತಮ್ಮ ದೇಶದ ಯಾವುದೇ ವಿಮಾನಗಳನ್ನು ನಾಶಪಡಿಸಿಲ್ಲ ಎಂದು ಪಾಕಿಸ್ತಾನ ಪ್ರತಿಪಾದಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ವಾಯುಪಡೆ ಪಾಕಿಸ್ತಾನದ ಯಾವುದೇ ಮಿಲಿಟರಿ ವಿಮಾನವನ್ನು ಹೊಡೆದುರುಳಿಸಿಲ್ಲ ಎಂದು ಹೇಳಿದ್ದಾರೆ.

“ಭಾರತೀಯ ಪಡೆ ಒಂದೇ ಒಂದು ಪಾಕಿಸ್ತಾನಿ ವಿಮಾನವನ್ನು ಹೊಡೆದುರುಳಿಸಿಲ್ಲ ಅಥವಾ ನಾಶಪಡಿಸಿಲ್ಲ” ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ 3 ತಿಂಗಳವರೆಗೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಭಾರತದ ಹೇಳಿಕೆಯನ್ನು ಪ್ರಶ್ನಿಸಿದ ಆಸಿಫ್, ಎರಡೂ ದೇಶಗಳು ತಮ್ಮ ವಿಮಾನ ದಾಸ್ತಾನುಗಳನ್ನು ಸ್ವತಂತ್ರ ಪರಿಶೀಲನೆಗೆ ತೆರೆಯಬೇಕೆಂದು ಸೂಚಿಸಿದರು. ಇದು “ಭಾರತ ಮರೆಮಾಚಲು ಪ್ರಯತ್ನಿಸುವ ವಾಸ್ತವವನ್ನು ಬಯಲು ಮಾಡುತ್ತದೆ” ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ 5 ಪಾಕಿಸ್ತಾನಿ ಜೆಟ್‌, ಒಂದು ದೊಡ್ಡ ವಿಮಾನ ನಾಶ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ

ಏಪ್ರಿಲ್ 22ರಂದು 26 ನಾಗರಿಕರನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7ರಂದು ಪ್ರಾರಂಭಿಸಲಾದ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಪಡೆಗಳು 5 ಪಾಕಿಸ್ತಾನಿ ಫೈಟರ್ ಜೆಟ್‌ಗಳು ಮತ್ತು ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಿವೆ ಎಂದು ಬೆಂಗಳೂರಿನಲ್ಲಿ ನಡೆದ ಏರ್ ಚೀಫ್ ಮಾರ್ಷಲ್ ಎಲ್ಎಂ ಕತ್ರೆ ಉಪನ್ಯಾಸದಲ್ಲಿ ಏರ್ ಚೀಫ್ ಮಾರ್ಷಲ್ ಸಿಂಗ್ ಹೇಳಿದ್ದರು.

ಇಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಎಪಿ ಸಿಂಗ್ ಆಪರೇಷನ್ ಸಿಂಧೂರದ ವೇಳೆ ಪಾಕಿಸ್ತಾನದ ಮೇಲೆ ನಡೆದ ದಾಳಿಯ ಬಗ್ಗೆ ಮಾಹಿತಿ ನೀಡಿದ್ದರು. 5 ಪಾಕಿಸ್ತಾನಿ ಫೈಟರ್ ಜೆಟ್ ಮತ್ತು ಒಂದು ವಿಮಾನವನ್ನು ಹೊಡೆದುರುಳಿಸಲಾಗಿದೆ. ಶಹಬಾಜ್ ಜಕೋಬಾಬಾದ್ ವಾಯುನೆಲೆಯಲ್ಲಿ ಪಾಕಿಸ್ತಾನಿ ವಾಯುಪಡೆಯ ಕೆಲವು F-16 ಫೈಟರ್ ಜೆಟ್‌ಗಳು ಸಹ ನಾಶವಾಗಿವೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಮುರಿಯ್ ಮತ್ತು ಚಕ್ಲಾಲಾದಂತಹ ಎರಡು ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಸಹ ಹಾನಿಗೊಳಗಾಗಿವೆ ಎಂದಿದ್ದರು.

ಇದನ್ನೂ ಓದಿ: ಜಗತ್ತಿನ ಯಾವುದೇ ದೇಶದ ನಾಯಕರು ಆಪರೇಷನ್ ಸಿಂಧೂರ್ ತಡೆಯುವ ಪ್ರಯತ್ನ ಮಾಡಿಲ್ಲ: ಮೋದಿ

ಒಂದು ದೊಡ್ಡ ವಿಮಾನವನ್ನು ಕೂಡ ಹೊಡೆದುರುಳಿಸಲಾಗಿದ್ದು, ಅದು ELINT ವಿಮಾನ ಅಥವಾ AWACS (ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ಆಗಿರಬಹುದು. ಇದನ್ನು ಸುಮಾರು 300 ಕಿಲೋಮೀಟರ್ ದೂರದಿಂದ ಹೊಡೆದುರುಳಿಸಲಾಗಿದೆ. ಭಾರತ ಇತ್ತೀಚೆಗೆ ಖರೀದಿಸಿದ್ದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಶ್ಲಾಘಿಸಿದ ಅವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ಅದು ಅದ್ಭುತ ಕೆಲಸ ಮಾಡಿದೆ. ಅದು ನಮ್ಮ ಪಾಲಿನ ಗೇಮ್ ಚೇಂಜರ್ ಎಂದು ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ