ಭಗವದ್ಗೀತಾ ಪಾರ್ಕ್ ಧ್ವಂಸವಾಗಿಲ್ಲ; ಭಾರತದ ಆಕ್ರೋಶದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕೆನಡಾ ಮೇಯರ್

| Updated By: ಸುಷ್ಮಾ ಚಕ್ರೆ

Updated on: Oct 03, 2022 | 2:06 PM

ಕೆನಡಾದಲ್ಲಿ ಭಗವದ್ಗೀತೆ ಉದ್ಯಾನವನದ ಫಲಕವನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ, ಈ ಸುದ್ದಿಯನ್ನು ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ತಳ್ಳಿ ಹಾಕಿದ್ದಾರೆ.

ಭಗವದ್ಗೀತಾ ಪಾರ್ಕ್ ಧ್ವಂಸವಾಗಿಲ್ಲ; ಭಾರತದ ಆಕ್ರೋಶದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕೆನಡಾ ಮೇಯರ್
ಭಗವದ್ಗೀತೆ ಪಾರ್ಕ್
Follow us on

ಕೆನಡಾ: ಕೆನಡಾದಲ್ಲಿ (Canada) ಇತ್ತೀಚೆಗೆ ಉದ್ಯಾನವನವೊಂದಕ್ಕೆ ‘ಶ್ರೀ ಭಗವದ್ಗೀತೆ’ (Bhagavad Gita Park) ಎಂದು ನಾಮಕರಣ ಮಾಡಲಾಗಿತ್ತು. ಹಿಂದಿನ ಹೆಸರನ್ನು ಅಳಿಸಿ ಈ ಹೆಸರನ್ನು ನೀಡಲಾಗಿತ್ತು. ಅಲ್ಲಿನ ಸಮುದಾಯದ ಏಳಿಗೆಗಾಗಿ ಸ್ಥಳೀಯ ಹಿಂದೂಗಳು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಒಂಟಾರಿಯೊ ಪ್ರಾಂತ್ಯದ ಬ್ರಾಂಪ್ಟನ್ ನಗರದಲ್ಲಿರುವ ಈ ಪಾರ್ಕ್​ಗೆ ‘ಶ್ರೀ ಭಗವದ್ಗೀತೆ’ ಎಂದು ಹೆಸರಿಡಲಾಗಿತ್ತು. ಆದರೆ, ಆ ಪಾರ್ಕ್ ಅನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಇದಕ್ಕೆ ಭಾರತ ಖಂಡನೆ ವ್ಯಕ್ತಪಡಿಸಿತ್ತು.

ಕೆನಡಾದಲ್ಲಿ ಭಗವದ್ಗೀತೆ ಉದ್ಯಾನವನದ ಫಲಕವನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ, ಈ ಸುದ್ದಿಯನ್ನು ತಳ್ಳಿ ಹಾಕಿರುವ ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್, ಇದು ಸುಳ್ಳು ಸುದ್ದಿ. ಭಗವದ್ಗೀತೆ ಉದ್ಯಾನದಲ್ಲಿ ಸ್ಥಾಪಿಸಲಾದ ಖಾಲಿ ಫಲಕವನ್ನು ಬಿಲ್ಡರ್ ರೆಡಿ ಮಾಡಿದ್ದಾರೆ. ಅದರಲ್ಲಿ ಇನ್ನೂ ಏನನ್ನೂ ಬರೆದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೆನಡಾದಲ್ಲಿ 10 ಜನರನ್ನು ಇರಿದು ಕೊಂದ ಇಬ್ಬರು ಸಹೋದರರಲ್ಲಿ ಒಬ್ಬ ಶವವಾಗಿ ಪತ್ತೆಯಾದರೆ ಮತ್ತೊಬ್ಬ ಪೊಲೀಸರ ಕೈಗೆ ಸಿಗುತ್ತಿಲ್ಲ

3.75 ಎಕರೆಗಳಷ್ಟು ವಿಸ್ತಾರವಾಗಿರುವ ಈ ಉದ್ಯಾನವನದಲ್ಲಿ ಕೆಲವು ಹಿಂದೂ ದೇವತೆಗಳ ಪ್ರತಿಮೆಗಳು ಮತ್ತು ಸಾರಥಿಗಳಾದ ಕೃಷ್ಣಾರ್ಜುನರ ಪ್ರತಿಮೆಗಳನ್ನು ಇರಿಸಲಾಗಿತ್ತು. ಈ ಭಗವದ್ಗೀತೆ ಪಾರ್ಕ್ ಫಲಕವನ್ನು ಧ್ವಂಸಗೊಳಿಸಲಾಗಿದೆ ಎಂಬ ಗೊಂದಲದ ಸುದ್ದಿಯನ್ನು ಹರಡಲಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾದುದು ಎಂದು ಮೇಯರ್ ಪ್ಯಾಟ್ರಿಕ್ ಬ್ರೌನ್ ಟ್ವೀಟ್ ಮಾಡಿದ್ದಾರೆ. ಭಗವದ್ಗೀತೆ ಪಾರ್ಕ್ ಸ್ಥಾಪನೆಯ ಸಮಯದಲ್ಲಿ ಫಲಕವು ಹಾನಿಗೊಳಗಾಗಿದೆ. ನಿನ್ನೆಯಷ್ಟೇ ಹೊಸ ಬೋರ್ಡ್​ ಹಾಕಲಾಗಿದೆ. ಅದನ್ನು ತಾತ್ಕಾಲಿಕವಾಗಿ ಪಾರ್ಕ್​ನಲ್ಲಿ ಹಾಕಲಾಗಿದೆ ಎಂದಿದ್ದಾರೆ.

ಭಾನುವಾರ ತಡರಾತ್ರಿ ಈ ವಿಧ್ವಂಸಕ ಕೃತ್ಯದ ವರದಿಗಳನ್ನು ಖಂಡಿಸಿದ ಭಾರತೀಯ ಹೈಕಮಿಷನ್ ಅಪರಾಧಿಗಳ ವಿರುದ್ಧ ತ್ವರಿತ ಕ್ರಮಕ್ಕೆ ಕರೆ ನೀಡಿದ ಬೆನ್ನಲ್ಲೇ ಬ್ರಾಂಪ್ಟನ್ ನಗರದ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಭಾರತದ ಹೈಕಮಿಷನ್, ಶ್ರೀ ಭಗವದ್ಗೀತೆ ಪಾರ್ಕ್​ನಲ್ಲಿ ನಡೆದ ಕೃತ್ಯವನ್ನು ನಾವು ಖಂಡಿಸುತ್ತೇವೆ. ಇದು ಜನಾಂಗೀಯ ದ್ವೇಷದ ವಿಚಾರವಾಗಿದೆ. ಈ ಬಗ್ಗೆ ಕೆನಡಾ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿತ್ತು.

ಇದನ್ನೂ ಓದಿ: ಕೆನಡಾದಲ್ಲಿ ದ್ವೇಷ ಅಪರಾಧಗಳು ಹೆಚ್ಚುತ್ತಿವೆ, ಅಲ್ಲಿರುವ ಭಾರತೀಯರು ಜಾಗರೂಕರಾಗಿರಿ ಎಂದ ಭಾರತ ಸರ್ಕಾರ

ಈ ಪಾರ್ಕ್​ಗೆ ಈ ಹಿಂದೆ ಟ್ರಾಯರ್ಸ್ ಪಾರ್ಕ್ ಎಂದು ಕರೆಯಲಾಗುತ್ತಿತ್ತು. ಸ್ಥಳೀಯ ಹಿಂದೂ ಸಮುದಾಯ ಮತ್ತು ಅವರ ಕೊಡುಗೆಗಳನ್ನು ಗೌರವಿಸಲು ಇದಕ್ಕೆ ಶ್ರೀ ಭಗವದ್ಗೀತಾ ಪಾರ್ಕ್ ಎಂದು ಮರುನಾಮಕರಣ ಮಾಡಲಾಗಿತ್ತು. ಭಾರತೀಯ ಮೂಲದ 1.6 ಮಿಲಿಯನ್ ಜನರು ಮತ್ತು ಅನಿವಾಸಿ ಭಾರತೀಯರು ನೆಲೆಸಿರುವ ಕೆನಡಾದಲ್ಲಿ ಈ ವರ್ಷ ಹಿಂದೂ ಪೂಜಾ ಸ್ಥಳಗಳ ಮೇಲೆ ಹಲವಾರು ದಾಳಿಗಳು ನಡೆದಿದ್ದವು. ಅದರ ಬೆನ್ನಲ್ಲೇ ಈ ಕೃತ್ಯ ಬೆಳಕಿಗೆ ಬಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ