Breaking News: ಭಾರತದ ಮೂಲಕ ಚೀನಾಕ್ಕೆ ಹೋಗುತ್ತಿದ್ದ ಪ್ರಯಾಣಿಕರ ವಿಮಾನಕ್ಕೆ ಬಾಂಬ್ ಬೆದರಿಕೆ, ಭೂಸ್ಪರ್ಶಕ್ಕೆ ಅನುಮತಿ ನಿರಾಕರಣೆ
ಕ್ಷಣಕ್ಷಣದ ಬೆಳವಣಿಗೆಯನ್ನು ಭಾರತೀಯ ವಾಯುಪಡೆ ಗಮನಿಸುತ್ತಿದೆ.
ದೆಹಲಿ: ಇರಾನ್ನಿಂದ ಚೀನಾಕ್ಕೆ ಹೋಗುತ್ತಿದ್ದ ಪ್ರಯಾಣಿಕರ ವಿಮಾನದಲ್ಲಿ ಬಾಂಬ್ (Bomb Threat) ಇರಿಸಲಾಗಿದೆ ಎಂದು ಚೀನಾದ ಭದ್ರತಾ ಸಂಸ್ಥೆಗಳು ಭಾರತ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿವೆ. ವಿಮಾನವು ಭಾರತದ ವಾಯುಗಡಿಯಲ್ಲಿ (Indian Air Space) ಇದ್ದ ಸಂದರ್ಭದಲ್ಲಿ ಬಾಂಬ್ ಇರುವ ಮಾಹಿತಿ ರವಾನೆಯಾದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ (Indian Air Force) ಯುದ್ಧ ವಿಮಾನಗಳನ್ನು ಪ್ರಯಾಣಿಕರ ವಿಮಾನದ ರಕ್ಷಣೆಗಾಗಿ ನಿಯೋಜಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆಯು ವರದಿ ಮಾಡಿದೆ. ಪ್ರಸ್ತುತ ಪ್ರಯಾಣಿಕರ ವಿಮಾನವು ಚೀನಾದತ್ತ ಹಾರುತ್ತಿದ್ದು, ಕ್ಷಣಕ್ಷಣದ ಬೆಳವಣಿಗೆಯನ್ನು ಭಾರತೀಯ ವಾಯುಪಡೆ ಗಮನಿಸುತ್ತಿದೆ.
‘Bomb threat’ onboard Iranian passenger jet over Indian airspace, with final destination in China, triggers alert, IAF jets scrambled. The passenger jet is now moving towards China. Security agencies monitoring the plane: Sources pic.twitter.com/5Up2fHURxW
— ANI (@ANI) October 3, 2022
ಭಾರತದ ವಾಯುಮಾರ್ಗದ ಮೂಲಕ ಇರಾನ್ನಿಂದ ಚೀನಾಕ್ಕೆ ಹೋಗುತ್ತಿದ್ದ ಪ್ರಯಾಣಿಕರ ವಿಮಾನದಲ್ಲಿ ಬಾಂಬ್ ಇರಿಸಿರುವ ಬೆದರಿಕೆ ಕೇಳಿಬಂದಿದೆ. ವಿಷಯ ತಿಳಿದ ತಕ್ಷಣ ಜೈಪುರ ಮತ್ತು ಆಗ್ರಾ ವಾಯುನೆಲೆಯಲ್ಲಿರುವ ಭಾರತೀಯ ವಾಯುಪಡೆಯ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಯಿತು. ಪ್ರಯಾಣಿಕರ ವಿಮಾನದ ರಕ್ಷಣೆಗಾಗಿ ಧಾವಿಸಲು ವಾಯುಪಡೆಯು ತಾಲೀಮು ಆರಂಭಿಸಿತು. ಇರಾನ್ನ ಪ್ರಯಾಣಿಕರ ವಿಮಾನವನ್ನು ದೆಹಲಿ ಅಥವಾ ಬೇರೆ ಯಾವುದೇ ವಿಮಾನ ನಿಲ್ದಾಣದಲ್ಲಿ ಇಳಿಸಲು ಅವಕಾಶ ಮಾಡಿಕೊಡಬೇಕು ಎನ್ನುವ ಮನವಿಯನ್ನು ವಿಮಾನ ಸಂಚಾರ ನಿಯಂತ್ರಕರು ತಾಂತ್ರಿಕ ಕಾರಣಗಳಿಂದಾಗಿ ನಿರಾಕರಿಸಿದರು.
ವಿಮಾನವು ಇರಾನ್ ರಾಜಧಾನಿ ತೆಹರಾನ್ನಿಂದ ಚೀನಾದ ಗುಂಝ್ಹೌ ನಗರಕ್ಕೆ ತೆರಳುತ್ತಿತ್ತು ಎಂದು ವಿಮಾನಗಳ ಹಾರಾಟವನ್ನು ತೋರಿಸುವ ಫ್ಲೈಟ್ರಾಡಾರ್ ಮಾಹಿತಿ ನೀಡಿದೆ. ದೆಹಲಿ ಮತ್ತು ಜೈಪುರ ವಿಮಾನ ನಿಲ್ದಾಣಗಳಲ್ಲಿ ವಿಮಾನದ ತುರ್ತು ಭೂಸ್ಪರ್ಶಕ್ಕೆ ಅನುಮತಿ ನಿರಾಕರಿಸಿದ ನಂತರ ವಿಮಾನವು ಚೀನಾದ ವಾಯುಗಡಿ ಪ್ರವೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ಜಾಲತಾಣವು ವರದಿ ಮಾಡಿದೆ.
ಮುಂಜಾನೆ 9.20ಕ್ಕೆ ವಿಮಾನದಲ್ಲಿ ಬಾಂಬ್ ಇರಿಸಿರುವ ಬಗ್ಗೆ ಮಾಹಿತಿಯನ್ನು ಮೊದಲ ಬಾರಿಗೆ ಸ್ವೀಕರಿಸಲಾಯಿತು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ವಿಮಾನದಲ್ಲಿ ಬಾಂಬ್ ಇರಿಸಿರುವ ಬೆದರಿಕೆ ಕೇಳಿ ಬಂದ ತಕ್ಷಣ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು. ವಿಮಾನವನ್ನು ದೆಹಲಿಯಲ್ಲಿ ಇಳಿಸಲು ಅನುಮತಿ ನಿರಾಕರಿಸಿದ ನಂತರ ಜೈಪುರಕ್ಕೆ ವಿಮಾನದ ಮಾರ್ಗವನ್ನು ಬದಲಿಸಲಾಯಿತು. ನಂತರ ಅಲ್ಲಿ ವಿಮಾನ ಇಳಿಸಲು ಪೈಲಟ್ಗಳು ಒಪ್ಪಲಿಲ್ಲ.
Published On - 11:46 am, Mon, 3 October 22