Whitehouse: ವೈಟ್ಹೌಸ್ ಗುಲಾಬಿ ಉದ್ಯಾನಕ್ಕೆ ಮೆಲಾನಿಯಾ ಟ್ರಂಪ್ ತಂದಿದ್ದ ಬದಲಾವಣೆಗೆ ಈಗ ವಿರೋಧ
ಅಮೆರಿಕದ ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪತ್ನಿ ಮೆಲಾನಿಯಾ ವೈಟ್ಹೌಸ್ನ ಉದ್ಯಾನದಲ್ಲಿ ಬದಲಾವಣೆಗಳನ್ನು ಮಾಡಿದ್ದರು. ಅದನ್ನು ಸರಿಪಡಿಸಿ, ಈ ಹಿಂದಿನ ಸ್ಥಿತಿಗೆ ತರಬೇಕು ಎಂದು ಅಲ್ಲೀಗ ಆನ್ಲೈನ್ ಸಹಿ ಅಭಿಯಾನ ನಡೆಯುತ್ತಿದೆ.
ವಾಷಿಂಗ್ಟನ್ ಡಿ.ಸಿ.: ಅಮೆರಿಕದ ವೈಟ್ಹೌಸ್ ಅಂದರೆ ಅಲ್ಲಿನ ಅಧ್ಯಕ್ಷರ ಗೃಹ ಕಚೇರಿ. ಆ ವೈಭೋಗ, ವೈಶಾಲ್ಯ ಓಹ್, ಹೇಳಿ ಮುಗಿಸುವುದಕ್ಕೆ ಸಾಧ್ಯವೇ ಇಲ್ಲ. ಇನ್ನು ಅಲ್ಲಿಂದ ಬರುವ ಹುಕುಂಗಳಿಗೂ ಸಿಕ್ಕಾಪಟ್ಟೆ ತೂಕ. ಅಂಥ ವೈಟ್ಹೌಸ್ನಲ್ಲೇ ಇದ್ದು, ನಿರ್ಗಮಿಸಿದವರು ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಂದ ಹಾಗೆ ಅಮೆರಿಕ ಅಧ್ಯಕ್ಷರನ್ನು ದೇಶದ ಮೊದಲ ಪ್ರಜೆ ಎನ್ನಲಾಗುತ್ತದೆ. ಅವರ ಹೆಂಡತಿಗೆ ದೇಶದ ಮೊದಲ ಮಹಿಳೆ ಎಂದು ಗೌರವಿಸಲಾಗುತ್ತದೆ. ಇದೀಗ ಏನಾಗಿದೆ ಅಂದರೆ, ಈ ಹಿಂದಿನ ಮೊದಲ ಮಹಿಳೆ, ಮೆಲಾನಿಯಾ ಟ್ರಂಪ್ 2019ರಲ್ಲಿ ವೈಟ್ಹೌಸ್ನ ಉದ್ಯಾನದಲ್ಲಿ ಮಾಡಿದ ಬದಲಾವಣೆಗಳನ್ನು ಅದಕ್ಕೂ ಮುಂಚೆ ಹೇಗಿತ್ತೋ ಆ ರೀತಿ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಈಗಿನ ಪ್ರಥಮ ಮಹಿಳೆ- ಜೋ ಬೈಡನ್ರ ಪತ್ನಿ ಜಿಲ್ ಅವರನ್ನು ಇದಕ್ಕಾಗಿ ಒತ್ತಾಯಿಸಿ, 54,000 ಮಂದಿ ಆನ್ಲೈನ್ ಸಹಿ ಅಭಿಯಾನ ನಡೆಸಿದ್ದಾರೆ.
ಉದ್ಯಾನವನ್ನು ಈ ಹಿಂದಿನ ಡಿಸೈನ್ಗೆ ಮಾಡಬೇಕು ಅನ್ನೋದಷ್ಟೇ ಅಲ್ಲ. ನಿರ್ದಿಷ್ಟವಾಗಿ ಅಮೆರಿಕ ಹಿಂದಿನ ಅಧ್ಯಕ್ಷ ಜಾನ್ ಎಫ್. ಕೆನಡಿ ಪತ್ನಿ ಜಾಕ್ವೆಲಿನ್ ಕೆನಡಿ ಅವರು ಹೆಸರಾಂತ ಡಿಸೈನರ್ ಬನ್ನಿ ಮೆಲ್ಲಾನ್ ನೆರವಿನಿಂದ ರೂಪಿಸಿದ್ದ ಗುಲಾಬಿ ಉದ್ಯಾನದಂತೆಯೇ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸದ್ಯಕ್ಕೆ ಈ ಕುರಿತು ಆನ್ಲೈನ್ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಆ ಅರ್ಜಿಯಲ್ಲಿ ಹೇಳುತ್ತಿರುವ ಪ್ರಕಾರ, ಜಪಾನ್ನಿಂದ ನೀಡಿದ ಚೆರಿ ಮರಗಳನ್ನು ಹಾಕುವ ಸಲುವಾಗಿ ಅಲ್ಲಿನ ಎಲೆಗಳನ್ನು ಸಹ ತೆಗೆದುಹಾಕಲಾಗಿದೆ. 1960ರ ದಶಕದಲ್ಲಿ ಜಾಕ್ವೆಲಿನ್ ಕೆನಡಿ ರೂಪಿಸಿದ್ದಂತೆಯೇ ಮತ್ತೆ ಉದ್ಯಾನ ಆಗಬೇಕು ಎಂದು ಆಗ್ರಹಿಸಲಾಗಿದೆ. ಇನ್ನು ವೈಟ್ಹೌಸ್ನಲ್ಲಿ ಇರುವಂತಹ ಗುಣಮಟ್ಟದ ಉದ್ಯಾನವನ್ನು ಅಥವಾ ಆಕರ್ಷಣೆಯನ್ನು ಎಲ್ಲೂ ನೋಡಿಲ್ಲ ಎಂದು ಸ್ವತಃ ಟ್ರಂಪ್ ಹೇಳಿದ್ದರು ಎಂಬುದನ್ನು ನೆನಪಿಸಲಾಗಿದೆ.
2020ರ ಜುಲೈನಲ್ಲಿ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷ ಹುದ್ದೆಗೆ ಪುನರಾಯ್ಕೆ ಬಯಸಿ ಚುನಾವಣೆಗೆ ನಿಂತಾಗ ಮತ್ತು ಕೊರೊನಾ ಬಿಕ್ಕಟ್ಟು ವಿಪರೀತ ಹೆಚ್ಚಾದಾಗ ಮೆಲಾನಿಯಾಗೆ ಇರುವ ನವೀಕರಣದ ಯೋಜನೆ ಬಗ್ಗೆ ಘೋಷಣೆ ಮಾಡಿದ್ದರು. ಅದರಲ್ಲಿ ಟೀವಿಗಳಿಗೆ ಎಲೆಕ್ಟ್ರಿಕಲ್ ಅಪ್ಗ್ರೇಡ್, ಹೊಸದಾದ ನಡೆದಾಡುವ ಮಾರ್ಗ, ಹೊಸ ಹೂವುಗಳು ಮತ್ತಿತರವು ಸೇರಿದ್ದವು. ಇವೆಲ್ಲವನ್ನೂ ಭವಿಷ್ಯದ ಬಗ್ಗೆ ಭರವಸೆ ಮತ್ತು ಆಶಾದಾಯಕ ಬೆಳವಣಿಗೆಯಿಂದ ಮಾಡಲಾಗಿತ್ತು.
ಈ ಹಿಂದೆ ಮಿಶೆಲ್ ಒಬಾಮ 2009ರಲ್ಲಿ 1100 ಚದರಡಿ ಜಾಗವನ್ನು ಅಗೆಸಿ, ಅಲ್ಲಿ ತರಕಾರಿ ಉದ್ಯಾನ ಮಾಡಿದ್ದರು. ಆ ನಂತರದಲ್ಲಿ ಮೆಲಾನಿಯಾರಿಂದ ಉದ್ಯಾನದ ನವೀಕರಣ ನಡೆದಿತ್ತು. ಆದರೆ ಟ್ರಂಪ್ ಅವರು ನವೀಕರಣದ ಘೋಷಣೆ ಮಾಡಿದ್ದಾಗಲೇ ಅದಕ್ಕೆ ವಿರೋಧ ಬಂದಿತ್ತು. ಆದರೆ ಈಗ ಜಿಲ್ ಬೈಡನ್ ಆನ್ಲೈನ್ ಅರ್ಜಿಗೆ ಹೇಗೆ ಸ್ಪಂದಿಸುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಗೆ ಮೆಲಾನಿಯಾ ಟ್ರಂಪ್ ಭೇಟಿ, ವಿದ್ಯಾರ್ಥಿಗಳಿಂದ ಕಲಿತಿದ್ದೇನು?
(54000 people signed online petition in America to erase whitehouse rose garden makeover done by Melania Trump in Whitehouse)