ಓಪನ್‌ಎಐ ಸಭೆ ಕೊಠಡಿಯಲ್ಲಿ ಸೀಕ್ರೆಟ್ ಸ್ಪೈ ಡಿವೈಸ್: ಟಿವಿ ಹಿಂದೆ ರೆಕಾರ್ಡರ್ ಇಟ್ಟಿದ್ದ ಸೌದಿ ಮೂಲದ ಎಂಜಿನಿಯರ್ ಅರೆಸ್ಟ್​

ಓಪನ್‌ಎಐನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ರಹಸ್ಯ ಆಡಿಯೋ ರೆಕಾರ್ಡಿಂಗ್ ಸಾಧನ ಅಳವಡಿಸಿದ್ದ ಓಪನ್‌ಎಐ ಉದ್ಯೋಗಿ ಅಬ್ದುಲ್‌ರಹಮಾನ್ ಅಲ್ಫೋಜಾನ್‌ನನ್ನು ಎಫ್‌ಬಿಐ ಬಂಧಿಸಿದೆ. ಕೃತಕ ಬುದ್ಧಿಮತ್ತೆ (ಎಐ) ರಹಸ್ಯಗಳನ್ನು ಕದಿಯುವ ಯತ್ನದ ಆತಂಕ ಮೂಡಿದೆ. ಭದ್ರತಾ ತಂಡವು ಟಿವಿ ಹಿಂದೆ ಬಚ್ಚಿಟ್ಟಿದ್ದ ಸಾಧನವನ್ನು ಪತ್ತೆ ಮಾಡಿದೆ. ಈ ಪ್ರಕರಣ ಎಐ ಜಗತ್ತಿನಲ್ಲಿ ಹೆಚ್ಚುತ್ತಿರುವ ಬೇಹುಗಾರಿಕೆ ಬೆದರಿಕೆಗಳನ್ನು ಎತ್ತಿ ತೋರಿಸುತ್ತದೆ.

ಓಪನ್‌ಎಐ ಸಭೆ ಕೊಠಡಿಯಲ್ಲಿ ಸೀಕ್ರೆಟ್ ಸ್ಪೈ ಡಿವೈಸ್: ಟಿವಿ ಹಿಂದೆ ರೆಕಾರ್ಡರ್ ಇಟ್ಟಿದ್ದ ಸೌದಿ ಮೂಲದ ಎಂಜಿನಿಯರ್ ಅರೆಸ್ಟ್​
ಓಪನ್ ಎಐ ಕಚೇರಿಯಲ್ಲಿ ಬೇಹುಗಾರಿಕೆ

Updated on: Oct 14, 2026 | 7:59 AM

ಸ್ಯಾನ್​ ಫ್ರಾನ್ಸಿಸ್ಕೋ, ಅಕ್ಟೋಬರ್ 14: ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಮುಂಚೂಣಿ ಸಂಸ್ಥೆಯಾದ ಓಪನ್‌ಎಐನ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಯಲ್ಲಿ ರಹಸ್ಯವಾಗಿ ಆಡಿಯೋ ರೆಕಾರ್ಡಿಂಗ್ ಸಾಧನ ಅಳವಡಿಸಿದ್ದ ಆರೋಪದ ಮೇಲೆ ಅದರದೇ ಉದ್ಯೋಗಿಯಾಗಿದ್ದ ಸೌದಿ ಅರೇಬಿಯಾ ಪ್ರಜೆ ಅಬ್ದುಲ್‌ರಹಮಾನ್ ಅಲ್ಫೋಜಾನ್ ಎಂಬಾತನನ್ನು ಎಫ್‌ಬಿಐ ಬಂಧಿಸಿದೆ ಎಂದು ಯುಎಸ್ ನ್ಯಾಯ ಇಲಾಖೆ ತಿಳಿಸಿದೆ.

ಜುಲೈ 2025 ರಿಂದ ಓಪನ್‌ಎಐನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ, ನಿರ್ಬಂಧಿತ ಉನ್ನತ ಕಾರ್ಯನಿರ್ವಾಹಕರ ಸಭಾ ಕೊಠಡಿಯಲ್ಲಿ ಟಾಯ್ಲೆಟ್ ಪೇಪರ್‌ನಲ್ಲಿ ಸುತ್ತಿದ ಅತ್ಯಾಧುನಿಕ ಯುಎಸ್‌ಬಿ ಆಡಿಯೋ ರೆಕಾರ್ಡಿಂಗ್ ಸಾಧನವನ್ನು ಟೆಲಿವಿಷನ್ ಹಿಂಭಾಗದಲ್ಲಿ ಅಡಗಿಸಿಟ್ಟಿದ್ದು ಭದ್ರತಾ ತಂಡದ ಕಣ್ಣಿಗೆ ಬಿದ್ದಿದೆ.

ಟಿವಿ ಹಿಂದೆ ಬಚ್ಚಿಟ್ಟಿದ್ದ ಸಾಧನ: ಕಳೆದ ತಿಂಗಳ ಕೊನೆಯಲ್ಲಿ ಓಪನ್‌ಎಐ ಭದ್ರತಾ ತಂಡವು ಸಮ್ಮೇಳನ ಕೊಠಡಿಯನ್ನು ತಪಾಸಣೆ ನಡೆಸುತ್ತಿದ್ದಾಗ ಟಿವಿ ಹಿಂದೆ ಅಡಗಿಸಿಟ್ಟಿದ್ದ ರೆಕಾರ್ಡಿಂಗ್ ಸಾಧನ ಪತ್ತೆಯಾಗಿದೆ.

ಸಿಸಿಟಿವಿ ದೃಶ್ಯಾವಳಿ: ಸಿಸಿಟಿವಿ ಪರಿಶೀಲಿಸಿದಾಗ, ಆ ಕೊಠಡಿಗೆ ಪ್ರವೇಶಿಸಲು ಯಾವುದೇ ಅಧಿಕಾರವಿಲ್ಲದಿದ್ದರೂ ಅಲ್ಫೋಜಾನ್ ಹಲವು ಬಾರಿ ಅನುಮಾನಾಸ್ಪದವಾಗಿ ಓಡಾಡಿದ್ದು, ಟಿವಿ ಹಿಂಭಾಗದಲ್ಲಿ ಏನನ್ನೋ ಸರಿಪಡಿಸುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಬಳಿಕ ಭದ್ರತಾ ಸಿಬ್ಬಂದಿ ಆತನ ಬ್ಯಾಗ್ ಅನ್ನು ಶೋಧಿಸಿದಾಗ ಮತ್ತೊಂದು ರಹಸ್ಯ ಎಲೆಕ್ಟ್ರಾನಿಕ್ ಸಾಧನ ಪತ್ತೆಯಾಗಿದೆ.

ಮತ್ತಷ್ಟು ಓದಿ: ಕೋಡಿಂಗ್ ಜ್ಞಾನವಿಲ್ಲದೆ AI ಕಲಿಯಿರಿ; ಎಸ್‌ಬಿಐ ನೀಡುತ್ತಿದೆ ಸರ್ಟಿಫೈಡ್ ಉಚಿತ ಆನ್‌ಲೈನ್ ಕೋರ್ಸ್‌ಗಳು

ಆತನ ಸಂಗಾತಿಗೆ ಲಿಂಕ್ ಆಗಿರುವ ಚಾಟ್‌ಬಾಟ್ ಖಾತೆಯಲ್ಲಿ, ಆಡಿಯೋವನ್ನು ರಿಮೋಟ್ ಆಗಿ ರೆಕಾರ್ಡ್ ಮಾಡುವುದು ಹೇಗೆ? ಮತ್ತು ಮೆಮೊರಿ ಕಾರ್ಡ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವುದು ಹೇಗೆ?”ಎಂದು ಹುಡುಕಾಟ ನಡೆಸಿರುವುದು ಪತ್ತೆಯಾಗಿದೆ.

ಘಟನೆಯ ನಂತರ ಓಪನ್‌ಎಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಪ್ರಮುಖ ಮಾದರಿ ತೂಕಗಳು , ಸೋರ್ಸ್​ ಕೋಡ್ ಅಥವಾ ಗ್ರಾಹಕರ ಗೌಪ್ಯ ಡೇಟಾಗಳು ಸೋರಿಕೆಯಾಗಿರುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಈ ಸಾಧನ ಎಷ್ಟು ದಿನಗಳಿಂದ ಅಲ್ಲಿತ್ತು ಮತ್ತು ಏನೆಲ್ಲಾ ಮಾತುಕತೆಗಳನ್ನು ರೆಕಾರ್ಡ್ ಮಾಡಿದೆ ಎಂಬುದರ ಕುರಿತು ಎಫ್‌ಬಿಐ ವಿಧಿವಿಜ್ಞಾನ ತನಿಖೆ ನಡೆಸುತ್ತಿದೆ.

ಆರೋಪಿಯ ಹಿನ್ನೆಲೆ ಮತ್ತು ಕಾನೂನು ಕ್ರಮ
ಅಲ್ಫೋಜಾನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (ಬರ್ಕ್ಲಿ) ಮತ್ತು ಎಂಐಟಿ (MIT) ಯಲ್ಲಿ ವ್ಯಾಸಂಗ ಮಾಡಿದ್ದು, ಈ ಹಿಂದೆ ಮೆಟಾ (ಫೇಸ್‌ಬುಕ್), ಖಾಸಗಿ ಎಐ ಸ್ಟಾರ್ಟ್‌ಅಪ್ ಮತ್ತು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದ.

5 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಈತನ ವಿರುದ್ಧ ಅಧಿಕೃತವಾಗಿ ಗೂಢಚರ್ಯೆ ಅಥವಾ ಬೇಹುಗಾರಿಕೆ ಆರೋಪ ಹೊರಿಸಲಾಗಿಲ್ಲವಾದರೂ, “ಅನಧಿಕೃತವಾಗಿ ಮೌಖಿಕ ಸಂವಹನಗಳನ್ನು ಕದ್ದಾಲಿಸಲು ಎಲೆಕ್ಟ್ರಾನಿಕ್ ಸಾಧನ ಬಳಕೆ/ಪ್ರಯತ್ನ” ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ತಪ್ಪಿತಸ್ಥನೆಂದು ಸಾಬೀತಾದರೆ ಗರಿಷ್ಠ 5 ವರ್ಷಗಳ ಜೈಲು ಶಿಕ್ಷೆ ಮತ್ತು 2.1 ಕೋಟಿ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಅಕ್ಟೋಬರ್ 19 ರಂದು ಆತನನ್ನು ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ರಾಷ್ಟ್ರೀಯ ಭದ್ರತಾ ಆತಂಕ: ಜಾಗತಿಕ ಸೂಪರ್ ಇಂಟೆಲಿಜೆನ್ಸ್ ರೇಸ್ ಗೆಲ್ಲುವುದು ಅಮೆರಿಕದ ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ನಮ್ಮ ದೇಶದ ಅತ್ಯಾಧುನಿಕ ಬೌದ್ಧಿಕ ಆಸ್ತಿಯನ್ನು ಯಾವುದೇ ವಿದೇಶಿ ಬೆದರಿಕೆಗಳಿಂದ ರಕ್ಷಿಸಲು ಗುಪ್ತಚರ ಸಂಸ್ಥೆಗಳು ಬದ್ಧವಾಗಿವೆ ಎಂದು ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಜೇ ಕ್ಲೇಟನ್ ಎಚ್ಚರಿಸಿದ್ದಾರೆ.

ಈ ಹಿಂದೆ 2022ರಲ್ಲಿ ಟ್ವಿಟರ್‌ನಲ್ಲಿದ್ದ ಮಾಜಿ ಉದ್ಯೋಗಿ ಅಹ್ಮದ್ ಅಬೌಮ್ಮೊ ಎಂಬಾತ ಸೌದಿ ಸರ್ಕಾರದ ಟೀಕಾಕಾರರ ಖಾಸಗಿ ಮಾಹಿತಿಯನ್ನು ರಹಸ್ಯವಾಗಿ ಸೌದಿ ಅಧಿಕಾರಿಗಳಿಗೆ ಸೋರಿಕೆ ಮಾಡಿದ ಆರೋಪದಲ್ಲಿ ಅಮೆರಿಕ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us