Afghanistan Crisis: ಅಪಾಯ ಪರಿಸ್ಥಿತಿಯಿರುವ ಕಾಬೂಲ್ನಲ್ಲಿ ಇನ್ನೂ ಇದ್ದಾರೆ 200 ಮಂದಿ ಭಾರತೀಯರು; ರಕ್ಷಣೆಯೇ ದೊಡ್ಡ ಸವಾಲು
Kabul Airport: ಇನ್ನೊಂದೆಡೆ ಅಫ್ಘಾನಿಸ್ತಾನ ವಾಯುಪ್ರದೇಶಗಳನ್ನು ಬಂದ್ ಮಾಡಲಾಗಿದ್ದರಿಂದ ಯುಎಸ್ನಿಂದ ಭಾರತಕ್ಕೆ ಬರುತ್ತಿರುವ ಏರ್ ಇಂಡಿಯಾ ವಿಮಾನಗಳು ಪರ್ಯಾಯ ಮಾರ್ಗ ಹಿಡಿಯುವಂತಾಗಿದೆ ಎಂದೂ ಹೇಳಲಾಗಿದೆ.
ದೆಹಲಿ: ಅಫ್ಘಾನಿಸ್ತಾನ ಇದೀಗ ತಾಲಿಬಾನ್ ಉಗ್ರರ ವಶಕ್ಕೆ ಸೇರ್ಪಡೆಯಾಗಿದೆ. ಉಗ್ರರ ವಶದಲ್ಲಿರುವ ಅಫ್ಘಾನ್ನಿಂದ ಭಾರತ ಸೇರಿ ಹಲವು ದೇಶಗಳ ಜನರು ತಮ್ಮ ದೇಶಗಳಿಗೆ ಮರಳುತ್ತಿದ್ದಾರೆ. ನಿನ್ನೆ ಅಫ್ಘಾನಿಸ್ತಾನದಿಂದ 129 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾರತಕ್ಕೆ ತಲುಪಿದೆ. ಅಫ್ಘಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಭಾರತೀಯರನ್ನು ಭಾರತಕ್ಕೆ ಕಳಿಸಲು ಎಲ್ಲ ವ್ಯವಸ್ಥೆಗಳನ್ನೂ ಮಾಡುತ್ತಿದೆ. ಆದರೆ ಇನ್ನೂ ಸುಮಾರು 200 ಭಾರತೀಯರು ಕಾಬೂಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿಯೇ ಉಳಿದಿದ್ದು, ಅವರ ರಕ್ಷಣೆಯು ತುರ್ತಾಗಿ ಆಗಬೇಕಿದೆ ಎಂದು ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಉಗ್ರರ ಕೈವಶ ಆಗುತ್ತಿದ್ದಂತೆ ಇಂದು ಕಾಬೂಲ್ ಏರ್ಪೋರ್ಟ್ನಲ್ಲಿ ಜನಸಾಗರವೇ ಇತ್ತು. ಸಾವಿರಾರು ಜನರು ಅಲ್ಲಿಂದ, ಬೇರೆಡೆಗೆ ತೆರಳಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಇಂದು ಕಾಬೂಲ್ನಲ್ಲಿ ಗುಂಡಿನ ದಾಳಿ ನಡೆದು ಐವರ ಮೃತಪಟ್ಟ ಘಟನೆಯೂ ನಡೆದಿದೆ. ಈ ಮಧ್ಯೆ ಭಾರತದ ವಿಮಾನವೊಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿಂತಿದೆ. ಅದರಲ್ಲಿ ಸುಮಾರು 200 ಜನರು ಭಾರತಕ್ಕೆ ವಾಪಸ್ ಆಗಬೇಕಿದೆ. ಹೀಗೆ ಕಾಬೂಲ್ನಲ್ಲಿ ಉಳಿದುಹೋದವರಲ್ಲಿ ಸಾಮಾನ್ಯ ಜನರಷ್ಟೇ ಅಲ್ಲ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಿಬ್ಬಂದಿ, ಅರೆಸೇನಾ ಪಡೆಯ ಸೈನಿಕರೂ ಇದ್ದಾರೆ ಎಂದು ಹೇಳಲಾಗಿದೆ. ಅದರಲ್ಲೂ ಮುಖ್ಯವಾಗಿ ಸುಮಾರು 100 ಮಂದಿ ಇಂಡೋ-ಟಿಬೆಟಿಯನ್ ಪೊಲೀಸರು ಇದ್ದಾರೆ ಎನ್ನಲಾಗಿದೆ. ಇವರೆಲ್ಲ ಅಫ್ಘಾನಿಸ್ತಾನದಲ್ಲಿ ಭಾರತದ ಮಿಷನ್ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರು.
ಕಾಬೂಲ್ ನಗರದಲ್ಲಿ ತಾಲಿಬಾನ್ ಉಗ್ರರು ಕರ್ಫ್ಯೂ ಹೇರಿದ್ದಾರೆ. ಅಲ್ಲಿ ದುಗುಡ ಸೃಷ್ಟಿಸುವ ವಾತಾವರಣ ಇದ್ದು, ಜೀವ ಉಳಿಸಿಕೊಂಡು ಬರುವುದೇ ದೊಡ್ಡ ಸವಾಲು ಎಂಬಂತಾಗಿದೆ. ಈ ಮಧ್ಯೆಯೂ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಬಗ್ಗೆ ಸಹಜವಾಗಿಯೇ ಕಳವಳ ವ್ಯಕ್ತವಾಗಿದೆ.
ಇನ್ನೊಂದೆಡೆ ಅಫ್ಘಾನಿಸ್ತಾನ ವಾಯುಪ್ರದೇಶಗಳನ್ನು ಬಂದ್ ಮಾಡಲಾಗಿದ್ದರಿಂದ ಯುಎಸ್ನಿಂದ ಭಾರತಕ್ಕೆ ಬರುತ್ತಿರುವ ಏರ್ ಇಂಡಿಯಾ ವಿಮಾನಗಳು ಪರ್ಯಾಯ ಮಾರ್ಗ ಹಿಡಿಯುವಂತಾಗಿದೆ ಎಂದೂ ಹೇಳಲಾಗಿದೆ. AI-126 (ಚಿಕಾಗೋ-ದೆಹಲಿ) ಮತ್ತು AI-174 (ಸ್ಯಾನ್ ಫ್ರಾನ್ಸಿಸ್ಕೋ-ದೆಹಲಿ) ವಿಮಾನಗಳು ಅಫ್ಘಾನಿಸ್ತಾನ ಮಾರ್ಗದಲ್ಲಿ ಬರಲು ಸಾಧ್ಯವಾಗದೆ, ಗಲ್ಫ್ ದೇಶಕ್ಕೆ ಹೋಗಿ ಇಂಧನ ತುಂಬಿಕೊಂಡಿವೆ. ಹಾಗೇ, ಭಾರತದಿಂದ ಅಮೆರಿಕಕ್ಕೆ ತೆರಳುವ ಏರ್ ಇಂಡಿಯಾ ವಿಮಾನಗಳೂ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ.
ಇದನ್ನೂ ಓದಿ: ಚಾಸಿ ಕಟ್ ಆಗಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದ ಸರ್ಕಾರಿ ಬಸ್; 20ಕ್ಕೂ ಹೆಚ್ಚು ಜನರಿಗೆ ಗಾಯ
Afghanistan Plane Crash: ಉಜಬೆಕಿಸ್ತಾನದಲ್ಲಿ ಅಫ್ಘಾನಿಸ್ತಾನದ ಮಿಲಿಟರಿ ವಿಮಾನ ಪತನ
(Over 200 Indians are yet to be evacuated from Afghanistan’s capital Kabul)
Published On - 6:48 pm, Mon, 16 August 21