Oxford University: ಕೊರೊನಾ ವೈರಸ್​​ ಬಗ್ಗೆ ಅಧ್ಯಯನ ನಡೆಸುತ್ತಿರುವ ಆಕ್ಸ್​​ಫರ್ಡ್​ ಮೇಲೆ ಹ್ಯಾಕರ್ಸ್​ ದಾಳಿ

| Updated By: ರಾಜೇಶ್ ದುಗ್ಗುಮನೆ

Updated on: Feb 27, 2021 | 8:26 PM

Corona Virus: ಹ್ಯಾಕಿಂಗ್​ ಆಗಿರುವ ಬಗ್ಗೆ ಆಕ್ಸ್​ಫರ್ಡ್​ ಸಂಶೋಧನಾ ಕೇಂದ್ರ ಈಗಾಗಲೇ ರಾಷ್ಟ್ರೀಯ ಸೈಬರ್​ ಭದ್ರತಾ ಕೇಂದ್ರಕ್ಕೆ (National Cyber Security Center) ಮಾಹಿತಿ ನೀಡಿದೆಯಾದರೂ ಸದ್ಯದ ತನಕ ಹ್ಯಾಕರ್ಸ್​ಗಳು ಯಾವೆಲ್ಲಾ ಮಾಹಿತಿಗೆ ಕನ್ನ ಹಾಕಿದ್ದಾರೆ ಅಥವಾ ಏನೆಲ್ಲಾ ಚಟುವಟಿಕೆ ನಡೆಸಿದ್ದಾರೆ ಎನ್ನುವ ಬಗ್ಗೆ ಖಚಿತವಾಗಿ ಗೊತ್ತಾಗಿಲ್ಲ.

Oxford University: ಕೊರೊನಾ ವೈರಸ್​​ ಬಗ್ಗೆ ಅಧ್ಯಯನ ನಡೆಸುತ್ತಿರುವ ಆಕ್ಸ್​​ಫರ್ಡ್​ ಮೇಲೆ ಹ್ಯಾಕರ್ಸ್​ ದಾಳಿ
ಸೈಬರ್ ಕ್ರೈಂ
Follow us on

ಜಗತ್ತಿನ ಅತ್ಯಂತ ಪ್ರಸಿದ್ಧ ಜೀವಶಾಸ್ತ್ರ ಸಂಶೋಧನಾ ಕೇಂದ್ರಗಳ ಪೈಕಿ ಒಂದಾಗಿರುವ ಆಕ್ಸ್​ಫರ್ಡ್​ನಲ್ಲಿ ಕೊರೊನಾ ವೈರಾಣುವನ್ನು ಹೇಗೆ ಮಣಿಸಬೇಕು ಎಂಬ ಕುರಿತಾಗಿ ಖ್ಯಾತನಾಮ ವಿಜ್ಞಾನಿಗಳೆಲ್ಲಾ ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಅತ್ಯುತಕೃಷ್ಟ ತಂತ್ರಜ್ಞಾನ ಹೊಂದಿರುವ ಈ ಸಂಶೋಧನಾ ಪ್ರಯೋಗಾಲಯ ಈಗ ಹ್ಯಾಕರ್ಸ್​ಗಳ ದಾಳಿಗೆ ಒಳಗಾಗಿದೆ ಎಂದು ಸ್ವತಃ ಆಕ್ಸ್​ಫರ್ಡ್​ ಒಪ್ಪಿಕೊಂಡಿದೆ. ಜೀವಶಾಸ್ತ್ರ ಸಂಶೋಧನೆಯ ಒಂದು ವಿಭಾಗದ ಕೆಲವು ಉಪಕರಣಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿದ್ದು, ಜೀವ ರಾಸಾಯನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲ ಪ್ರಯೋಗಗಳನ್ನು ನಡೆಸುವ ಉಪಕರಣಗಳಲ್ಲೂ ಅಸಹಜ ಚಟುವಟಿಕೆಗಳು ಪತ್ತೆಯಾಗಿವೆ. ಈ ಬೆಳವಣಿಗೆಯ ಬಗ್ಗೆ ಫೋರ್ಬ್​ ಮೊದಲೇ ಬೆಳಕು ಚೆಲ್ಲಿತ್ತಾದರೂ ನಂತರದಲ್ಲಿ ಆಕ್ಸ್​ಫರ್ಡ್​ ಒಪ್ಪಿಕೊಂಡಿದೆ.

ಹ್ಯಾಕಿಂಗ್​ ಆಗಿರುವ ಬಗ್ಗೆ ಆಕ್ಸ್​ಫರ್ಡ್​ ಸಂಶೋಧನಾ ಕೇಂದ್ರ ಈಗಾಗಲೇ ರಾಷ್ಟ್ರೀಯ ಸೈಬರ್​ ಭದ್ರತಾ ಕೇಂದ್ರಕ್ಕೆ (National Cyber Security Center) ಮಾಹಿತಿ ನೀಡಿದೆಯಾದರೂ ಸದ್ಯದ ತನಕ ಹ್ಯಾಕರ್ಸ್​ಗಳು ಯಾವೆಲ್ಲಾ ಮಾಹಿತಿಗೆ ಕನ್ನ ಹಾಕಿದ್ದಾರೆ ಅಥವಾ ಏನೆಲ್ಲಾ ಚಟುವಟಿಕೆ ನಡೆಸಿದ್ದಾರೆ ಎನ್ನುವ ಬಗ್ಗೆ ಖಚಿತವಾಗಿ ಗೊತ್ತಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಕ್ಸ್​ಫರ್ಡ್​ ವಿಶ್ವವಿದ್ಯಾನಿಲಯದ ವಕ್ತಾರ, ಸಂಶೋಧನಾ ಕೇಂದ್ರದಲ್ಲಿ ಒಂದಷ್ಟು ಸಮಸ್ಯಾತ್ಮಕ ಚಟುವಟಿಕೆಗಳು ಕಂಡುಬಂದಿವೆ. ಅವುಗಳ ಬಗ್ಗೆ ತ್ವರಿತಗತಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಸಂಶೋಧನೆಗೆ ಸಂಬಂಧಿಸಿದಂತೆ ಯಾವುದೇ ಬಗೆಯ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಅಂತೆಯೇ, ಸಮಸ್ಯೆಗೆ ಒಳಗಾಗಿರುವ ವಿಭಾಗದಲ್ಲಿ ಮಹತ್ತರ ಚಟುವಟಿಕೆಗಳೇನೂ ನಡೆಯುತ್ತಿರಲಿಲ್ಲ. ಆದರೂ ನಾವಿದನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದೇವೆ ಹಾಗೂ ಅವರೊಂದಿಗೆ ತನಿಖೆಯಲ್ಲಿ ಸಂಪೂರ್ಣ ಪಾಲ್ಗೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಆಕ್ಸ್​ಫರ್ಡ್​ನಂತಹ ಸಂಶೋಧನಾ ಕೇಂದ್ರಗಳ ಮಾಹಿತಿ ಹ್ಯಾಕರ್ಸ್​ ಕೈಗೆ ಸಿಕ್ಕರೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಭದ್ರತಾ ತಂಡದವರು ಈ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಅದರಲ್ಲೂ ಕೊರೊನಾ ವೈರಾಣು ಬಗೆಗಿನ ಹಲವು ರೀತಿಯ ವೈದ್ಯಕೀಯ ಸಂಶೋಧನೆಗಳನ್ನು ನಡೆಸುತ್ತಿರುವ ಆಕ್ಸ್​ಫರ್ಡ್​ ಮೇಲೆ ಸಹಜವಾಗಿಯೇ ಹಲವರು ಕಣ್ಣಿಟ್ಟಿರುವುದರಿಂದ ಮಾಹಿತಿ ಸೋರಿಕೆಯಾಗದಂತೆ ತಡೆಯುವುದು ಬಹುದೊಡ್ಡ ಹೊಣೆಗಾರಿಕೆಯಾಗಿದೆ. ಈ ಹಿಂದೆ ಹ್ಯಾಕಿಂಗ್​ಗೆ ಸಂಬಂಧಪಟ್ಟಂತೆ ರಷ್ಯಾ ಮತ್ತು ಉತ್ತರ ಕೊರಿಯಾ ಹ್ಯಾಕರ್ಸ್​ಗಳ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಸದ್ಯ ಕೆಲವು ರಾಷ್ಟ್ರಗಳು ಹಣ ಪಾವತಿಸಿ ಹ್ಯಾಕಿಂಗ್​ಗೆ ಪ್ರೇರೇಪಣೆ ನೀಡುತ್ತಿವೆ ಎಂಬ ಅನುಮಾನ ಮೂಡಿದೆಯಾದರೂ ನಿರ್ದಿಷ್ಟವಾಗಿ ಯಾವ ರಾಷ್ಟ್ರದ ಮೇಲೂ ಆರೋಪ ಕೇಳಿಬಂದಿಲ್ಲ.

ಇದನ್ನೂ ಓದಿ:

ಲಕ್ಷಾಂತರ Airtel​ ಮೊಬೈಲ್​ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್​

ಸರ್ಕಾರದ್ದೇ ಕುಮ್ಮಕ್ಕು! ಲಸಿಕೆಯ ರಹಸ್ಯ ಕದಿಯಲು ಚೀನಾ, ರಷ್ಯಾ ಹ್ಯಾಕರ್​ಗಳ ಯತ್ನ