ಪಾಕಿಸ್ತಾನದ ಸಿಬಿಯಲ್ಲಿ ಬಾಂಬ್ ಸ್ಫೋಟ: ನಾಲ್ವರು ಭದ್ರತಾ ಸಿಬ್ಬಂದಿ ಸಾವು,15ಕ್ಕೂ ಹೆಚ್ಚು ಮಂದಿಗೆ ಗಾಯ
ಅಧ್ಯಕ್ಷ ಆರಿಫ್ ಅಲ್ವಿ ಸಿಬಿಯಲ್ಲಿ ನಡೆದ ಉತ್ಸವದಲ್ಲಿ ಭಾಗವಹಿಸಿದ 30 ನಿಮಿಷಗಳ ನಂತರ ಸ್ಫೋಟ ಸಂಭವಿಸಿದೆ ಎಂದು ರಿಂಡ್ ಹೇಳಿದರು. ದಾಳಿಯಲ್ಲಿ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕ್ವೆಟ್ಟಾ: ನೈಋತ್ಯ ಪಾಕಿಸ್ತಾನ (Pakistan) ಬಲೂಚಿಸ್ತಾನದ ಸಿಬಿ (Sibi) ನಗರದ ಥಂಡಿ ಸರಕ್ ಬಳಿ ನಡೆದ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಮತ್ತು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಬಿಯ ಭಯೋತ್ಪಾದನಾ ನಿಗ್ರಹ ಇಲಾಖೆಯ ಹಿರಿಯ ಅಧಿಕಾರಿ, ಹಫೀಜ್ ರಿಂಡ್ ಇದು ಆತ್ಮಹತ್ಯಾ ಸ್ಫೋಟದಂತೆ (suicide blast) ತೋರುತ್ತಿದೆ ಎಂದು ಹೇಳಿರುವುದಾಗಿ ಡಾನ್ ಡಾಟ್ ಕಾಮ್ ವರದಿ ಮಾಡಿದೆ. ತನಿಖೆ ಮುಂದುವರಿದಿದೆ. ವಾರ್ಷಿಕ ಸಿಬಿ ಮೇಳ ನಡೆಯುತ್ತಿದ್ದ ಬಯಲು ಪ್ರದೇಶದ ಬಳಿ ಸ್ಫೋಟ ಸಂಭವಿಸಿದೆ. ಅಧ್ಯಕ್ಷ ಆರಿಫ್ ಅಲ್ವಿ ಸಿಬಿಯಲ್ಲಿ ನಡೆದ ಉತ್ಸವದಲ್ಲಿ ಭಾಗವಹಿಸಿದ 30 ನಿಮಿಷಗಳ ನಂತರ ಸ್ಫೋಟ ಸಂಭವಿಸಿದೆ ಎಂದು ರಿಂಡ್ ಹೇಳಿದರು. ದಾಳಿಯಲ್ಲಿ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಕನಿಷ್ಠ 28 ಗಾಯಾಳುಗಳನ್ನು ಸಿವಿಲ್ ಆಸ್ಪತ್ರೆಗೆ ಕರೆತರಲಾಗಿದ್ದು, ಅವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಲೂಚಿಸ್ತಾನ್ ಆರೋಗ್ಯ ಇಲಾಖೆಯ ಸಂಯೋಜಕ ಡಾ ವಾಸಿಂ ಬೇಗ್ ಹೇಳಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಭದ್ರತಾ ಸಿಬ್ಬಂದಿಗಳು ಎಂದು ವೈದ್ಯಕೀಯ ಅಧೀಕ್ಷಕ ಸಿವಿಲ್ ಆಸ್ಪತ್ರೆ ಡಾ ಸರ್ವರ್ ಹಶ್ಮಿ ಡಾನ್ ಡಾಟ್ ಕಾಮ್‌ಗೆ ತಿಳಿಸಿದರು. ತೀವ್ರವಾಗಿ ಗಾಯಗೊಂಡ ಐವರನ್ನು ಕ್ವೆಟ್ಟಾಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಬಲೂಚಿಸ್ತಾನ್ ಮುಖ್ಯಮಂತ್ರಿ ಮೀರ್ ಅಬ್ದುಲ್ ಖುದ್ದೂಸ್ ಬಿಜೆಂಜೊ ಸ್ಫೋಟವನ್ನು ಬಲವಾಗಿ ಖಂಡಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಬಿಜೆಂಜೊ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸ್ಫೋಟವು ವಾರ್ಷಿಕ ಉತ್ಸವ ಮತ್ತು ಪ್ರಾಂತ್ಯದಲ್ಲಿ ಒಟ್ಟಾರೆ ಶಾಂತಿಯನ್ನು ಹಾಳುಮಾಡುವ ಪ್ರಯತ್ನವಾಗಿದೆ ಎಂದು ಬಿಜೆಂಜೊ ಹೇಳಿದರು.
“ಪ್ರಾಂತ್ಯದ ವಿರುದ್ಧದ ಎಲ್ಲಾ ಪಿತೂರಿಗಳನ್ನು” ವಿಫಲಗೊಳಿಸಲು ಅವರು ಪ್ರತಿಜ್ಞೆ ಮಾಡಿದರು. ಸಿಬಿಯಲ್ಲಿ ಭದ್ರತೆ ಹೆಚ್ಚಿಸುವಂತೆ ಹಾಗೂ ಘಟನೆಯಲ್ಲಿ ಭಾಗಿಯಾದವರನ್ನು ಬಂಧಿಸುವಂತೆ ಮುಖ್ಯಮಂತ್ರಿ ಪೊಲೀಸರಿಗೆ ಸೂಚಿಸಿದ್ದಾರೆ.
ಕಳೆದ ವಾರ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಪೇಶಾವರದ ಕೊಚಾ ರಿಸಾಲ್ದಾರ್ ಪ್ರದೇಶದಲ್ಲಿನ ಶಿಯಾ ಮಸೀದಿಯೊಳಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು, ಕನಿಷ್ಠ 56 ಮಂದಿ ಸಾವಿಗೀಡಾಗಿದ್ದು 190 ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: Video: ಯುದ್ಧ ವಲಯ ಸುಮಿಯಿಂದ ಬಸ್ ವ್ಯವಸ್ಥೆ ಮಾಡಿದ ಉಕ್ರೇನ್ ಸರ್ಕಾರ; 694 ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ಪ್ರಾರಂಭ
Published On - 6:21 pm, Tue, 8 March 22