ವಿಶೇಷ ವಿಮಾನಗಳ ಮೂಲಕ ಸುಮಾರು 18,000 ಭಾರತೀಯರನ್ನು ಉಕ್ರೇನ್‌ನಿಂದ ವಾಪಸ್ ಕರೆತರಲಾಗಿದೆ: ಕೇಂದ್ರ ಸರ್ಕಾರ

ಆಪರೇಷನ್ ಗಂಗಾ ಭಾಗವಾಗಿ 2467 ಪ್ರಯಾಣಿಕರನ್ನು ಮರಳಿ ಕರೆತರಲು ಭಾರತೀಯ ವಾಯುಪಡೆಯು 12 ವಿಮಾನ ಕಾರ್ಯಾಚರಣೆಗಳನ್ನು ನಡೆಸಿದೆ ಮತ್ತು 32 ಟನ್ ಪರಿಹಾರ ಸಾಮಗ್ರಿಗಳನ್ನು ಸಾಗಿಸಿದೆ.

ವಿಶೇಷ ವಿಮಾನಗಳ ಮೂಲಕ ಸುಮಾರು 18,000 ಭಾರತೀಯರನ್ನು ಉಕ್ರೇನ್‌ನಿಂದ ವಾಪಸ್ ಕರೆತರಲಾಗಿದೆ: ಕೇಂದ್ರ ಸರ್ಕಾರ
ಆಪರೇಷನ್ ಗಂಗಾ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Mar 08, 2022 | 9:58 PM

ದೆಹಲಿ: ವಿಶೇಷ ವಿಮಾನಗಳ ಮೂಲಕ ಸುಮಾರು 18,000 ಭಾರತೀಯ ಪ್ರಜೆಗಳನ್ನು ಉಕ್ರೇನ್‌ನ(Ukraine) ನೆರೆಯ ದೇಶಗಳಿಂದ ಭಾರತಕ್ಕೆ ಮರಳಿ ಕರೆತರಲಾಗಿದೆ ಎಂದು ಕೇಂದ್ರ ಮಂಗಳವಾರ ತಿಳಿಸಿದೆ. ಸುಸೇವಾದಿಂದ ವಿಶೇಷ ನಾಗರಿಕ ವಿಮಾನಗಳ ಮೂಲಕ ಒಟ್ಟು 410 ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಆಪರೇಷನ್ ಗಂಗಾ (Operation Ganga) ಭಾಗವಾಗಿ 2467 ಪ್ರಯಾಣಿಕರನ್ನು ಮರಳಿ ಕರೆತರಲು ಭಾರತೀಯ ವಾಯುಪಡೆಯು 12 ವಿಮಾನ ಕಾರ್ಯಾಚರಣೆಗಳನ್ನು ನಡೆಸಿದೆ ಮತ್ತು 32 ಟನ್ ಪರಿಹಾರ ಸಾಮಗ್ರಿಗಳನ್ನು ಸಾಗಿಸಿದೆ ಎಂದು ಸಚಿವಾಲಯ ಹೇಳಿದೆ.  ನಾಗರಿಕ ವಿಮಾನಗಳಲ್ಲಿ ಬುಕಾರೆಸ್ಟ್‌ನಿಂದ 21 ವಿಮಾನಗಳ ಮೂಲಕ 4,575 ಪ್ರಯಾಣಿಕರನ್ನು, ಒಂಬತ್ತು ವಿಮಾನಗಳ ಮೂಲಕ 1,820 ಸುಸೇವಾದಿಂದ, 5,571ಮಂದಿಯನ್ನು ಬುಡಾಪೆಸ್ಟ್‌ನಿಂದ 28 ವಿಮಾನಗಳ ಮೂಲಕ, 909 ಪ್ರಯಾಣಿಕರನ್ನು ಕೊಸಿಸ್‌ನಿಂದ ಐದು ವಿಮಾನಗಳಲ್ಲಿ, 2,404 ಭಾರತೀಯರನ್ನು ರ್ಜೆಸ್ಜೋವ್‌ನಿಂದ 11 ವಿಮಾನಗಳಲ್ಲಿ ಮತ್ತು ಕೀವ್ ನಿಂದ 242 ವ್ಯಕ್ತಿಗಳನ್ನು ಕರೆತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಏತನ್ಮಧ್ಯೆ, ಉಕ್ರೇನ್‌ನಲ್ಲಿ ಯುದ್ಧ ಪೀಡಿತ ಸುಮಿಯಿಂದ ಸುಮಾರು 600 ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ಭಾರತೀಯ ರಾಯಭಾರ ಕಚೇರಿ ಮತ್ತು ರೆಡ್‌ಕ್ರಾಸ್‌ನ ಅಧಿಕಾರಿಗಳು ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ ಮತ್ತು ಟುನೀಶಿಯಾದ ಕೆಲವು ನಾಗರಿಕರೊಂದಿಗೆ ಭಾರತೀಯ ಪ್ರಜೆಗಳನ್ನು ಪೋಲ್ಟವಾ ಪ್ರದೇಶಕ್ಕೆ ಕರೆದೊಯ್ದರು. ಉಕ್ರೇನ್ ರಾಜಧಾನಿ ಕೀವ್ ಬಳಿಯ ಸುಮಿ ಮತ್ತು ಇರ್ಪಿನ್ ಪಟ್ಟಣದಿಂದ ನಾಗರಿಕರನ್ನು ಸ್ಥಳಾಂತರಿಸುವ ಭಾಗವಾಗಿ ವಿದ್ಯಾರ್ಥಿಗಳನ್ನು ಹಸಿರು ಕಾರಿಡಾರ್ ಮೂಲಕ ಮಧ್ಯ ಉಕ್ರೇನ್‌ನ ಪೋಲ್ಟೋವಾ ನಗರಕ್ಕೆ ಸ್ಥಳಾಂತರಿಸಲಾಯಿತು. ಉಕ್ರೇನ್‌ನ ವಿದೇಶಾಂಗ ಸಚಿವಾಲಯವು ಸುಮಿ ನಾಗರಿಕರನ್ನು ಸ್ಥಳಾಂತರಿಸುವ ವಿಡಿಯೊವನ್ನು ಟ್ವೀಟ್ ಮಾಡಿದೆ.

ಸುಮಿ ರಷ್ಯಾದ ಗಡಿಯ ಸಮೀಪದಲ್ಲಿದೆ ಮತ್ತು ಉಕ್ರೇನಿಯನ್ ರಾಜಧಾನಿ ಕೀವ್ ನಿಂದ ಪೂರ್ವಕ್ಕೆ 350 ಕಿಮೀ ದೂರದಲ್ಲಿದೆ. ಇಂದು ನಗರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಸುಮಿಯಲ್ಲಿ ಸಿಲುಕಿರುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ: ಕೇಂದ್ರ ಸರ್ಕಾರ