AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಸಿಎಂ ನಿತೀಶ್ ಕುಮಾರ್​​ಗೆ ಪಾಕಿಸ್ತಾನದ ಗ್ಯಾಂಗ್​​ಸ್ಟರ್​​ನಿಂದ ಬೆದರಿಕೆ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಲವಂತವಾಗಿ ಯುವ ಮುಸ್ಲಿಂ ವೈದ್ಯೆಯೊಬ್ಬರ 'ಹಿಜಾಬ್' (ಮುಖದ ಪರದೆ) ಎಳೆದ ವಿಡಿಯೋ ಭಾರೀ ವೈರಲ್ ಆಗಿತ್ತು. ಕಾರ್ಯಕ್ರಮವೊಂದರಲ್ಲಿ ಸರ್ಟಿಫಿಕೆಟ್ ನೀಡುವಾಗ ಈ ಘಟನೆ ನಡೆದಿತ್ತು. ಈ ಬಗ್ಗೆ ಸಿಎಂ ನಿತೀಶ್ ಕುಮಾರ್ ಕ್ಷಮೆಯನ್ನು ಕೂಡ ಕೇಳಿರಲಿಲ್ಲ. ಈ ಘಟನೆಯಿಂದ ಆ ವೈದ್ಯೆ ತೀವ್ರ ಮುಜುಗರಕ್ಕೀಡಾಗಿದ್ದರು. ಇದೀಗ ಬಿಹಾರದ ಮುಖ್ಯಮಂತ್ರಿಯ ಈ ವರ್ತನೆಯನ್ನು ಪಾಕಿಸ್ತಾನ ಬಲವಾಗಿ ಖಂಡಿಸಿದೆ. ಪಾಕಿಸ್ತಾನದ ಗ್ಯಾಂಗ್​ಸ್ಟರ್​ ಶಹಜಾದ್ ಭಟ್ಟಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಬೆದರಿಕೆಯನ್ನೂ ಹಾಕಿದ್ದಾರೆ.

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಸಿಎಂ ನಿತೀಶ್ ಕುಮಾರ್​​ಗೆ ಪಾಕಿಸ್ತಾನದ ಗ್ಯಾಂಗ್​​ಸ್ಟರ್​​ನಿಂದ ಬೆದರಿಕೆ
Nitish Kumar Pulling Hijab
ಸುಷ್ಮಾ ಚಕ್ರೆ
|

Updated on: Dec 19, 2025 | 3:38 PM

Share

ಪಾಟ್ನಾ, ಡಿಸೆಂಬರ್ 19: ಪ್ರಧಾನಿ ನರೇಂದ್ರ ಮೋದಿಯವರ (PM Modi) ಜೊತೆ ಬಹಳ ಆಪ್ತವಾಗಿ ಗುರುತಿಸಿಕೊಂಡಿರುವ, ಬಿಹಾರದಲ್ಲಿ ದಾಖಲೆಯ ಅವಧಿಗೆ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಕ್ಕೇರಿರುವ ನಿತೀಶ್ ಕುಮಾರ್ (Nitish Kumar) ವಿವಾದದಲ್ಲಿ ಸಿಲುಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಯುವ ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆಯುವ ಮೂಲಕ ಸಾರ್ವಜನಿಕ ವೇದಿಕೆಯಲ್ಲೇ ಆ ಮಹಿಳೆಗೆ ಮುಜುಗರ ತಂದಿದ್ದರು. ಈ ಘಟನೆಗೆ ವಿಪಕ್ಷವಾದ ಆರ್​​ಜೆಡಿ ಸೇರಿದಂತೆ ಅನೇಕ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಇದುವರೆಗೂ ನಿತೀಶ್ ಕುಮಾರ್ ಈ ವಿಷಯದಲ್ಲಿ ಕ್ಷಮಾಪಣೆ ಕೇಳಿಲ್ಲ, ಸ್ಪಷ್ಟನೆಯನ್ನೂ ನೀಡಿಲ್ಲ.

ಇದೀಗ ಈ ಹಿಜಾಬ್ ವಿವಾದ ಪಾಕಿಸ್ತಾನದ ಅಂಗಳವನ್ನೂ ತಲುಪಿದೆ. ಮಹಿಳೆಯ ಹಿಜಾಬ್ ಎಳೆದ ಘಟನೆಗೆ ಸಂಬಂಧಿಸಿದಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪಾಕಿಸ್ತಾನ ಮೂಲದ ಗ್ಯಾಂಗ್​ಸ್ಟರ್ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.

ಇದನ್ನೂ ಓದಿ: Video: ಇದೇನ್ ಮಾಡಿದ್ರಿ? ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್

ಸರ್ಕಾರಿ ಸಮಾರಂಭವೊಂದರಲ್ಲಿ ಸಿಎಂ ನಿತೀಶ್ ಕುಮಾರ್ ಮುಸ್ಲಿಂ ಮಹಿಳೆಯ ಹಿಜಾಬ್ ಅನ್ನು ಕಿತ್ತುಹಾಕುತ್ತಿರುವ ವಿಡಿಯೋ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ನಿತೀಶ್ ಕುಮಾರ್ ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯೆಗೆ ನೇಮಕಾತಿ ಪತ್ರವನ್ನು ನೀಡುವಾಗ ಅವರ ಮುಖದಿಂದ ‘ಹಿಜಾಬ್’ ಅನ್ನು ಎಳೆದಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಅವರಿಗೆ ಪಾಕಿಸ್ತಾನದಿಂದ ಬೆದರಿಕೆ ಬಂದಿದೆ. ಹೀಗಾಗಿ, ಪಾಟ್ನಾ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ ಮತ್ತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ನಿತೀಶ್ ಕುಮಾರ್ ಅವರಿಗೆ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ. ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಎಂಬುವವರು ಇನ್‌ಸ್ಟಾಗ್ರಾಮ್​ನಲ್ಲಿ ಬಿಹಾರದ ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Nitish Kumar Swearing-In: ಹತ್ತನೇ ಬಾರಿಗೆ ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಇಂದು ಪ್ರಮಾಣವಚನ, ಪ್ರಧಾನಿ ಮೋದಿ ಭಾಗಿ

ಹಿಜಾಬ್​​ಗೆ ಕೈಹಾಕಿದ ನೀವು ಅದಕ್ಕೆ ಸೂಕ್ತವಾದ ಬೆಲೆ ತೆರಬೇಕಾಗುತ್ತದೆ. ಮೊದಲೇ ಎಚ್ಚರಿಕೆ ನೀಡಲಿಲ್ಲ ಎನ್ನಬೇಡಿ. ಅದಕ್ಕಾಗಿಯೇ ಮೊದಲೇ ಹೇಳುತ್ತಿದ್ದೇನೆ. ಹಿಜಾಬ್ ಎಳೆದ ಆ ವ್ಯಕ್ತಿಗೆ ಆ ಮುಸ್ಲಿಂ ಯುವತಿಯ ಬಳಿ ಕ್ಷಮೆ ಯಾಚಿಸಲು ಇನ್ನೂ ಸಮಯವಿದೆ. ಮುಂದೆ ಏನಾದರೂ ತೊಂದರೆಯಾದರೆ ಎಚ್ಚರಿಕೆ ನೀಡಿರಲಿಲ್ಲ ಎಂದು ಹೇಳಬೇಡಿ ಎಂದು ಆ ವ್ಯಕ್ತಿ ವೀಡಿಯೊದಲ್ಲಿ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ