ಅಫ್ಘಾನಿಸ್ತಾನ- ಪಾಕಿಸ್ತಾನದ ಗಡಿ ಸಂಘರ್ಷ; ಡ್ಯುರಾಂಡ್ ಲೈನ್‌ನಲ್ಲಿ ಉಭಯ ರಾಷ್ಟ್ರಗಳಿಂದ ಗುಂಡಿನ ದಾಳಿ
ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ಅಫ್ಘಾನ್ ತಾಲಿಬಾನ್ ಇನ್ನೂ ಡ್ಯುರಾಂಡ್ ಲೈನ್‌ನಲ್ಲಿ ಗುಂಡಿನ ವಿನಿಮಯ ಮಾಡಿಕೊಳ್ಳುತ್ತಿವೆ.
ನವದೆಹಲಿ: ಅಫ್ಘಾನಿಸ್ತಾನ ಸರ್ಕಾರವನ್ನು ಪತನಗೊಳಿಸಿ ತಾಲಿಬಾನ್ ಉಗ್ರರು ಸರ್ಕಾರ ರಚಿಸಿಕೊಂಡು, ಆಡಳಿತ ನಡೆಸತೊಡಗಿದ ನಂತರ ಭಾರತ, ಅಮೆರಿಕ ಸೇರಿ ಅನೇಕ ರಾಷ್ಟ್ರಗಳಿಗೆ ಭಾರೀ ತಲೆನೋವು ಶುರುವಾಗಿತ್ತು. ಅಫ್ಘಾನ್ನಲ್ಲಿ ತಾಲಿಬಾನ್ ಸರ್ಕಾರಕ್ಕೆ ಪಾಕಿಸ್ತಾನ ಕೂಡ ಬೆಂಬಲ ಘೋಷಿಸಿತ್ತು. ಹೀಗಾಗಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಬಂದ ನಂತರ ಭಾರತಕ್ಕೆ ಕೇಡುಗಾಲ ಶುರುವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಇದೀಗ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆಯೇ ಗಡಿ ವಿಚಾರಕ್ಕೆ ಗಲಾಟೆ ಏರ್ಪಟ್ಟಿದೆ.
ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ಅಫ್ಘಾನ್ ತಾಲಿಬಾನ್ ಇನ್ನೂ ಡ್ಯುರಾಂಡ್ ಲೈನ್‌ನಲ್ಲಿ ಗುಂಡಿನ ವಿನಿಮಯ ಮಾಡಿಕೊಳ್ಳುತ್ತಿವೆ. ಗಂಜ್‌ಗಲ್, ಸರ್ಕಾನೊ ಮತ್ತು ಕುನಾರ್‌ನಂತಹ ಕುಗ್ರಾಮಗಳಲ್ಲಿ ಶುಕ್ರವಾರ ಗುಂಡಿನ ಚಕಮಕಿ ನಡೆದಿದ್ದು, ಸ್ಥಳೀಯ ಮಾಧ್ಯಮಗಳಲ್ಲಿನ ವಿವಿಧ ವರದಿಗಳು ಮತ್ತು ಪತ್ರಕರ್ತರು ಟ್ವೀಟ್ ಮಾಡಿದ ವಿಡಿಯೋಗಳು ಎರಡೂ ರಾಷ್ಟ್ರಗಳ ಸೇನೆಯವರಯ ಪರಸ್ಪರ ಗುಂಡು ಹಾರಿಸುವುದನ್ನು ತೋರಿಸುತ್ತಿವೆ.
ಕೆಲವು ವರದಿಗಳ ಪ್ರಕಾರ, ನಿನ್ನೆ ಮಧ್ಯಾಹ್ನ 30 ನಿಮಿಷಗಳ ಕಾಲ ಗುಂಡಿನ ದಾಳಿ ಮುಂದುವರೆಯಿತು. ತಾಲಿಬಾನ್‌ಗೆ ಸೇರಿದ ಸ್ನೈಪರ್‌ಯೊಬ್ಬರು ಇಬ್ಬರು ಪಾಕ್ ಸೈನಿಕರನ್ನು ಹೊಡೆದುರುಳಿಸಿದ ನಂತರ ಗುಂಡಿನ ದಾಳಿ ಪ್ರಾರಂಭವಾಯಿತು. ಪಾಕಿಸ್ತಾನದ ಕಡೆಯವರು ಅದಕ್ಕೆ ಪ್ರತಿಯಾಗಿ ಗಡಿಯ ಕುಗ್ರಾಮಗಳ ಮೇಲೆ ಗುಂಡು ಹಾರಿಸಿದರು. ಇದರಿಂದ ಮತ್ತೆ ಅಫ್ಘಾನ್ ಕಡೆಯಿಂದ ಗುಂಡಿನ ದಾಳಿ ನಡೆಸಲಾಯಿತು.
ಇದರ ನಡುವೆ, ದರ್ರಾ ಆದಮ್ ಖೇಲ್‌ನಲ್ಲಿ ಫೆಡರಲ್ ಸಚಿವ ಶಿಬ್ಲಿ ಫರಾಜ್ ಅವರ ಮೇಲೆ ಡಿಸೆಂಬರ್ 19ರಂದು ನಡೆದ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ವಹಿಸಿಕೊಂಡಿದೆ. ಇದರಲ್ಲಿ ಅವರ ಚಾಲಕ ಮತ್ತು ಅಂಗರಕ್ಷಕ ಗಾಯಗೊಂಡಿದ್ದಾರೆ. ತಾಲಿಬಾನ್ ಮತ್ತು ಪಾಕಿಸ್ತಾನದ ಗಡಿ ಬೇಲಿಯ ವಿವಾದವನ್ನು ಪರಿಹರಿಸುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತೆ ಗಡಿ ಘರ್ಷಣೆಗಳು ಶುರುವಾಗಿವೆ. ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಯೋಜನೆಯ ಮುಂದಿನ ಕೆಲಸವನ್ನು ಒಮ್ಮತದ ಮೂಲಕ ಮಾಡಲಾಗುತ್ತದೆ ಎಂದು ಎರಡೂ ದೇಶಗಳು ಒಪ್ಪಿಕೊಂಡಿವೆ.
ಪಾಕಿಸ್ತಾನವು 2017ರಿಂದ ಅಫ್ಘಾನಿಸ್ತಾನದೊಂದಿಗಿನ 2,600 ಕಿಲೋಮೀಟರ್ ಉದ್ದದ ಗಡಿಯಲ್ಲಿ ಭಯೋತ್ಪಾದಕ ಒಳನುಸುಳುವಿಕೆ ಮತ್ತು ಕಳ್ಳಸಾಗಣೆಯನ್ನು ಕೊನೆಗೊಳಿಸಲು ನೆರೆಯ ರಾಷ್ಟ್ರದ ತೀವ್ರ ವಿರೋಧದ ನಡುವೆಯೂ ಬೇಲಿ ಹಾಕುತ್ತಿದೆ ಎಂದು ವರದಿ ಹೇಳಿದೆ. ಶೇ. 90ರಷ್ಟು ಬೇಲಿ ಹಾಕುವ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಶೇ.75ರಷ್ಟು ಹುಡುಗಿಯರು ಮರಳಿ ಶಾಲೆಗೆ; ಶಿಕ್ಷಣ ಕಸಿಯುವುದಿಲ್ಲವೆಂದ ತಾಲಿಬಾನ್ ಹಂಗಾಮಿ ಸಚಿವ !