ಅಮೆರಿಕದಲ್ಲಿ ಭಾರತೀಯ ಯುವಕನ ಹತ್ಯೆ; ಪೀಜ್ಜಾ ಡೆಲಿವರಿಗೆಂದು ಕರೆಸಿ ಸಾಯಿಸಿದ ಹಂತಕರು

Indian Pizza Delivery Boy Murdered in US: ಅಮೆರಿಕದ ಫಿಲಡೆಲ್ಫಿಯಾದಲ್ಲಿ ಭಾರತ ಮೂಲದ ಅನ್ಶುಲ್ ಕುಂಚ (28) ನಕಲಿ ಪಿಜ್ಜಾ ಆರ್ಡರ್ ಮೂಲಕ ಗುಂಡಿಕ್ಕಿ ಹತ್ಯೆಗೀಡಾಗಿದ್ದಾರೆ. ತೆಲಂಗಾಣದ ಅನ್ಶುಲ್, ಅಮೆರಿಕದಲ್ಲಿ ಪಾರ್ಟ್-ಟೈಮ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಇದು ದರೋಡೆಯಲ್ಲ, ಪೂರ್ವಯೋಜಿತ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಭಾರತೀಯ ರಾಯಭಾರ ಕಚೇರಿ ಕುಟುಂಬಕ್ಕೆ ನೆರವು ನೀಡುತ್ತಿದ್ದು, ಪೊಲೀಸರು ಹಂತಕರ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

ಅಮೆರಿಕದಲ್ಲಿ ಭಾರತೀಯ ಯುವಕನ ಹತ್ಯೆ; ಪೀಜ್ಜಾ ಡೆಲಿವರಿಗೆಂದು ಕರೆಸಿ ಸಾಯಿಸಿದ ಹಂತಕರು
ಪೀಜ್ಜಾ ಡೆಲಿವರಿ ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 07, 2026 | 5:17 PM

ವಾಷಿಂಗ್ಟನ್, ಜೂನ್ 7: ಭಾರತ ಮೂಲದ 28 ವರ್ಷದ ಯುವಕನೊಬ್ಬನನ್ನು ನಕಲಿ ಪೀಜ್ಜಾ ಆರ್ಡರ್ ನೀಡಿ, ಹೊಂಚು ಹಾಕಿ ಗುಂಡಿಕ್ಕಿ ಕೊಂದಿರುವ ಅತ್ಯಂತ ದಾರುಣ ಘಟನೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದಿದೆ. ಕುಟುಂಬಸ್ಥರು ಇದು ಕೇವಲ ಕೊಲೆ ಮಾಡುವ ಉದ್ದೇಶದಿಂದಲೇ ರೂಪಿಸಲಾಗಿದ್ದ ಸಂಚು ಎಂದು ಆರೋಪಿಸಿದ್ದಾರೆ. ತೆಲಂಗಾಣ ರಾಜಧಾನಿ ಹೈದರಾಬಾದ್ ಮೂಲದ ಅನ್ಶುಲ್ ಕುಂಚ (28) ಕೊಲೆಯಾಗಿರುವ ಯುವಕ. ಇವರ ಕುಟುಂಬ ಹೈದರಾಬಾದ್‌ನ ಹೊರವಲಯದ ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ಗುಂಡ್ಲಪೋಚಂಪಲ್ಲಿಯಲ್ಲಿ ವಾಸಿಸುತ್ತಿದೆ.

ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಉತ್ತರ ಫಿಲಡೆಲ್ಫಿಯಾದ ವಸತಿ ಸಂಕೀರ್ಣವೊಂದರ ನಿರ್ಜನ ಪ್ರದೇಶದಲ್ಲಿ ಈ ಹತ್ಯೆ ನಡೆದಿದೆ. ಯುವಕನನ್ನು ಕೊಲ್ಲಲೆಂದೇ ಖಾಲಿ ಇರುವ ಅಪಾರ್ಟ್‌ಮೆಂಟ್‌ಗೆ ನಕಲಿ ಪೀಜ್ಜಾ ಆರ್ಡರ್ (Decoy Order) ಮಾಡಿ ಕರೆಯಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.

ಘಟನೆ ಹೇಗೆ ನಡೆಯಿತು?

ಅನ್ಶುಲ್ ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿದ್ದು, ಅಲ್ಲಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ (MNC) ಉದ್ಯೋಗಿಯಾಗಿದ್ದರು. ಹೆಚ್ಚುವರಿ ಆದಾಯ ಗಳಿಸಲು ಅವರು ವಾರಾಂತ್ಯದಲ್ಲಿ (ವೀಕೆಂಡ್) ಪಾರ್ಟ್-ಟೈಮ್ ಪೀಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯರಾತ್ರಿ 12:30ರ ಸುಮಾರಿಗೆ ಅವರಿಗೆ ಮೂರು ಪೀಜ್ಜಾಗಳನ್ನು ತಲುಪಿಸುವಂತೆ ಒಂದು ಆರ್ಡರ್ ಬಂದಿತ್ತು. ಅವರು ನಿಗದಿಪಡಿಸಿದ ವಿಳಾಸಕ್ಕೆ ಹೋದಾಗ, ಅಲ್ಲಿ ಯಾರೂ ಇರಲಿಲ್ಲ. ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಕಪ್ಪು ಬಟ್ಟೆ ಧರಿಸಿ ಬೆನ್ನಿಗೆ ಬ್ಯಾಗ್ (Backpack) ಹಾಕಿಕೊಂಡಿದ್ದ ಇಬ್ಬರು ಮುಖವಾಡಧಾರಿಗಳು ಅನ್ಶುಲ್ ಅವರನ್ನು ಹಿಂಬಾಲಿಸಿ, ತಲೆಯ ಹಿಂಭಾಗಕ್ಕೆ ಅತ್ಯಂತ ಹತ್ತಿರದಿಂದ ಹಲವು ಬಾರಿ ಗುಂಡು ಹಾರಿಸಿದ್ದಾರೆ. ಅನ್ಶುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ದೆಹಲಿಯ ಪ್ರಾಧ್ಯಾಪಕಿಯನ್ನು ಕೊಲ್ಲಲು 1,400 ಕಿ.ಮೀ ದೂರದಿಂದ ಬಂದಿದ್ದ ಹಂತಕರು

ಇದು ದರೋಡೆಯಲ್ಲ, ಪಕ್ಕಾ ಪ್ಲಾನ್ ಎಂದ ಕುಟುಂಬ

ಸಾಮಾನ್ಯವಾಗಿ ಅಮೆರಿಕದಲ್ಲಿ ಇಂತಹ ಘಟನೆಗಳು ದರೋಡೆಗಾಗಿ ನಡೆಯುತ್ತವೆ. ಆದರೆ, ಹಂತಕರು ಅನ್ಶುಲ್ ಬಳಿ ಇದ್ದ ನಗದು, ಫೋನ್ ಅಥವಾ ಯಾವುದೇ ಬೆಲೆಬಾಳುವ ವಸ್ತುಗಳನ್ನು ಕದ್ದಿಲ್ಲ. ಪೀಜ್ಜಾ ಬಾಕ್ಸ್ ಸಹ ಖಾಲಿ ಅಪಾರ್ಟ್‌ಮೆಂಟ್‌ನಲ್ಲಿ ಹಾಗೇ ಉಳಿದಿದೆ. ಈ ಹಿಂದೆ ಅನ್ಶುಲ್ ಅಮೆರಿಕದಲ್ಲಿದ್ದಾಗ ಒಮ್ಮೆ ದರೋಡೆಗೆ ಒಳಗಾಗಿದ್ದರು (ಅವರ ಚಿನ್ನದ ಸರ, ಫೋನ್ ಕಳುವಾಗಿತ್ತು). ಆದರೆ ಈ ಬಾರಿ ಯಾವುದೇ ಲೂಟಿ ನಡೆಯದಿರುವುದರಿಂದ, ಇದು ಕೇವಲ ಅವರ ಜೀವ ತೆಗೆಯಲು ಹೂಡಿದ ಸಂಚು ಎಂದು ಕುಟುಂಬದವರು ಖಚಿತಪಡಿಸಿದ್ದಾರೆ.

ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬೆಡಿ: ಸಹೋದರಿಯ ಕಣ್ಣೀರಿನ ಮನವಿ

ಅನ್ಶುಲ್ ಅವರ ಸಹೋದರಿ ತನ್ವಿ ಮಾಧ್ಯಮಗಳ ಮುಂದೆ ತೀವ್ರ ಆಕ್ರೋಶ ಮತ್ತು ದುಃಖ ವ್ಯಕ್ತಪಡಿಸಿದ್ದು, “ಅವನಿಗೆ ಅಮೆರಿಕಕ್ಕೆ ಹೋಗಲು ಇಷ್ಟವಿರಲಿಲ್ಲ, ಕುಟುಂಬದ ಒತ್ತಾಸೆಗಾಗಿ ಹೋದ. ಅಲ್ಲಿ ಕತ್ತಲು ರಸ್ತೆಯಲ್ಲಿ ತಲೆಗೆ ಗುಂಡಿಟ್ಟು ಕೊಂದಿದ್ದಾರೆ. ದಯವಿಟ್ಟು ಯಾರೂ ನಿಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬೇಡಿ,” ಎಂದು ಪೋಷಕರಿಗೆ ಕಣ್ಣೀರಿನ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆ ಕಿಡ್ನಾಪ್ ವೇಳೆ ಅಡ್ಡ ಬಂದ ವ್ಯಕ್ತಿಯ ಕೊಲೆ: ಕೊನೆಗೂ ಸಿಕ್ಕಿಬಿದ್ದ ಲವ್ ಬರ್ಡ್ಸ್ ಹಾಗೂ ಹಂತಕರು!

ಭಾರತೀಯ ರಾಯಭಾರ ಕಚೇರಿ ಮತ್ತು ತನಿಖೆ

ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯು ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದೆ. ಸ್ಥಳೀಯ ತನಿಖಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅನ್ಶುಲ್ ಅವರ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಎಲ್ಲಾ ರೀತಿಯ ಕಾನೂನು ನೆರವು ನೀಡುವುದಾಗಿ ತಿಳಿಸಿದೆ.

ಪ್ರಸ್ತುತ ಫಿಲಡೆಲ್ಫಿಯಾ ಪೊಲೀಸರು ಹಂತಕರ ಪತ್ತೆಗಾಗಿ $20,000 (ಸುಮಾರು 19 ಲಕ್ಷ ರೂಪಾಯಿ) ಬಹುಮಾನ ಘೋಷಿಸಿದ್ದಾರೆ. ಆರ್ಡರ್ ಬಂದ ಫೋನ್ ನಂಬರ್ ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us