ಜೈಲಿನಲ್ಲೇ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೊಲ್ಲಲು ಪಿತೂರಿ, ಅಲೀಮಾ ಹೇಳಿದ್ದೇನು?
ಭ್ರಷ್ಟಾಚಾರ, ಲಂಚ ಪ್ರಕರಣದಲ್ಲಿ ಜೈಲಿನಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ರನ್ನು ಜೈಲಿನಲ್ಲಿಯೇ ಕೊಲ್ಲಲು ಪಿತೂರಿ ನಡೆಯುತ್ತಿದೆ ಎಂದು ಅವರ ಸಹೋದರಿ ಅಲೀಮಾ ಖಾನ್ ಆರೋಪಿಸಿದ್ದಾರೆ. ನನ್ನ ಸಹೋದರ ಇಮ್ರಾನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗುತ್ತಿದೆ ಎಂದು ಅವರು ಹೇಳಿದರು. ಜೈಲಿನಲ್ಲಿರುವ ಸಾಮಾನ್ಯ ಕೈದಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ಇಮ್ರಾನ್ ಖಾನ್ ಅವರಿಗೆ ನೀಡಲಾಗುತ್ತಿಲ್ಲ. ಕುಟುಂಬ ಸದಸ್ಯರಿಗೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ, ಅವರ ವಕೀಲರನ್ನು ಜೈಲಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ಇಸ್ಲಾಮಾಬಾದ್, ಜುಲೈ 02: ಜೈಲಿನಲ್ಲೇ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಹತ್ಯೆಗೆ ಸಂಚು ನಡೆಯುತ್ತಿದೆ ಎಂದು ಅವರ ಸಹೋದರಿ ಅಲೀಮಾ ಖಾನ್ ಆರೋಪಿಸಿದ್ದಾರೆ. ‘‘ನನ್ನ ಸಹೋದರ ಇಮ್ರಾನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗುತ್ತಿದೆ. ಜೈಲಿನಲ್ಲಿರುವ ಸಾಮಾನ್ಯ ಕೈದಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ಇಮ್ರಾನ್ ಖಾನ್ ಅವರಿಗೆ ನೀಡುತ್ತಿಲ್ಲ’’ ಎಂದಿದ್ದಾರೆ.
ಕುಟುಂಬ ಸದಸ್ಯರಿಗೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ, ಅವರ ವಕೀಲರನ್ನು ಜೈಲಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಇಮ್ರಾನ್ ಅವರ ಸಹೋದರಿಯರಾದ ಅಲೀಮಾ ಖಾನ್ ಮತ್ತು ಉಜ್ಮಾ ಖಾನ್ ನಿನ್ನೆ ಕೂಡ ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಹೋಗಿದ್ದರು.ಆದರೆ ಅವರಿಗೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ ಎಂದು ವರು ಹೇಳಿದ್ದಾರೆ.
ಜನರಲ್ ಅಸಿಮ್ ಮುನೀರ್ ಪಾಕಿಸ್ತಾನದಲ್ಲಿ ಅಘೋಷಿತ ಸಮರ ಕಾನೂನನ್ನು ಹೇರಿದ್ದಾರೆ ಎಂದು ಅಲಿಮಾ ಖಾನ್ ಹೇಳಿದ್ದಾರೆ. ನ್ಯಾಯಾಂಗವು ಸಂಪೂರ್ಣವಾಗಿ ಸರ್ಕಾರ ಮತ್ತು ಸೈನ್ಯದ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದೆ. ಇಮ್ರಾನ್ ಖಾನ್ ಅವರನ್ನು ರಾಜಕೀಯವಾಗಿ ಸಂಪೂರ್ಣವಾಗಿ ನಾಶಮಾಡಲು ಪಿತೂರಿ ನಡೆಯುತ್ತಿದೆ.
ಇಮ್ರಾನ್ ಅವರನ್ನು ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗುತ್ತಿದೆ. ನ್ಯಾಯಾಲಯದ ಆದೇಶದ ಮೇರೆಗೆ, ಇಮ್ರಾನ್ ಖಾನ್ ಅವರ ಸೆಲ್‌ನಲ್ಲಿ ಫ್ಯಾನ್ ಮತ್ತು ಕೂಲರ್ ಅಳವಡಿಸಲಾಗಿದೆ, ಆದರೆ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ವಕೀಲರು ಅಥವಾ ವೈದ್ಯರು ಇಮ್ರಾನ್ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಅವರು ಆರೋಪಿಸಿದ್ದಾರೆ. ಯಾವಾಗ ಏನಾಗುತ್ತೋ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಮತ್ತಷ್ಟು ಓದಿ: Imran Khan: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ
ಇಮ್ರಾನ್ ಖಾನ್ ಜೈಲಿಗೆ ಸೇರಿದ್ಯಾಕೆ? 2018ರಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾದರು. 2022ರಲ್ಲಿ ಇಮ್ರಾನ್ ಖಾನ್ ಆಗಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಅಲ್ಲಿಂದ ಇಮ್ರಾನ್ ಖಾನ್‌ಗೆ ಕೆಟ್ಟ ದಿನಗಳು ಶುರುವಾದವು. ನಂತರ ಇಮ್ರಾನ್ ಅವರ ಸರ್ಕಾರವನ್ನು ಸೇನೆಯ ಸಹಾಯದಿಂದ ಉರುಳಿಸಲಾಯಿತು. ಅವರನ್ನು ಬಂಧಿಸಲಾಯಿತು. ವರ ಬೆಂಬಲಿಗರು ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿ ಸೇರಿದಂತೆ ದೇಶಾದ್ಯಂತ ಮಿಲಿಟರಿ ನೆಲೆಗಳು ಮತ್ತು ಕಂಟೋನ್ಮೆಂಟ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಪ್ರೀಂ ಕೋರ್ಟ್ ಇಮ್ರಾನ್ ಖಾನ್‌ಗೆ ಜಾಮೀನು ನೀಡಿತ್ತು.
ಆದರೆ, ಮೇ 2023 ರಲ್ಲಿ, ಭ್ರಷ್ಟಾಚಾರ, ಲಂಚ, ಸೇನೆಯ ವಿರುದ್ಧ ದಂಗೆಗೆ ಪ್ರಚೋದನೆ, ಕಾನೂನು ಉಲ್ಲಂಘನೆ ಮತ್ತು ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸುವಂತಹ ಸುಮಾರು 200 ಪ್ರಕರಣಗಳನ್ನು ದಾಖಲಿಸಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಯಿತು. ಪಂಜಾಬ್ ಮತ್ತು ಸಿಂಧ್‌ನಿಂದ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದವರೆಗೆ ಇಮ್ರಾನ್ ಖಾನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಇಮ್ರಾನ್ ಖಾನ್ ಅವರ ಸಹೋದರಿ ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯೂ ಸೇನೆಯ ಆದೇಶದಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅದಕ್ಕಾಗಿಯೇ ಇಮ್ರಾನ್ ಖಾನ್ ಅವರಿಗೆ ಜಾಮೀನು ಸಿಗುತ್ತಿಲ್ಲ ಎಂದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




