ರಾಜತಾಂತ್ರಿಕತೆ ಮೂಲಕ ಸಂಘರ್ಷ ಪರಿಹಾರ, ನಾರ್ಕೋ-ಟೆರರಿಸಂಗೆ ಅಂತ್ಯ, ಎಸ್​ಸಿಒ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್​

ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಯುರೇಷಿಯನ್ ಪ್ರದೇಶದ ಶಾಂತಿ ಮತ್ತು ಭದ್ರತೆಗಾಗಿ 10 ಪ್ರಮುಖ ಕಾರ್ಯತಂತ್ರಗಳನ್ನು ಮಂಡಿಸಿದ್ದಾರೆ. ಭಯೋತ್ಪಾದನೆ ಮತ್ತು ನಾರ್ಕೋ-ಟೆರರಿಸಂನ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾಶಪಡಿಸಲು, ಸಂಘರ್ಷಗಳನ್ನು ರಾಜತಾಂತ್ರಿಕತೆ ಮೂಲಕ ಪರಿಹರಿಸಲು ಕರೆ ನೀಡಿದರು. ಭಾರತದ ಈ ಪ್ರಸ್ತಾವನೆಯು ಪ್ರಾದೇಶಿಕ ಸಹಕಾರ, ಸಂಪರ್ಕ ಮತ್ತು ಆರ್ಥಿಕ ಪ್ರಗತಿಗೆ ಒತ್ತು ನೀಡಿದೆ, ಜಾಗತಿಕ ದಕ್ಷಿಣದ ಧ್ವನಿಯಾಗಿ ಹೊರಹೊಮ್ಮಿದೆ.

ರಾಜತಾಂತ್ರಿಕತೆ ಮೂಲಕ ಸಂಘರ್ಷ ಪರಿಹಾರ, ನಾರ್ಕೋ-ಟೆರರಿಸಂಗೆ ಅಂತ್ಯ, ಎಸ್​ಸಿಒ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್​
ನರೇಂದ್ರ ಮೋದಿ

Updated on: Sep 01, 2026 | 1:49 PM

ಬಿಷ್ಕೆಕ್, ಸೆಪ್ಟೆಂಬರ್ 01: ಶಾಂಘೈ ಸಹಕಾರ ಸಂಸ್ಥೆಯ (SCO) 26ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಯುರೇಷಿಯನ್ ಪ್ರದೇಶದ ಶಾಂತಿ, ಭದ್ರತೆ ಮತ್ತು ಆರ್ಥಿಕ ಪ್ರಗತಿಯನ್ನು ಗುರಿಯಾಗಿಸಿಕೊಂಡು 10 ಪ್ರಮುಖ ಕಾರ್ಯತಂತ್ರದ ಸೂತ್ರಗಳನ್ನು ಪ್ರಸ್ತುತಪಡಿಸಿದ್ದಾರೆ.

ಕೇವಲ ಭರವಸೆಗಳಿಗೆ ಸೀಮಿತವಾಗದೆ ಅಳೆಯಬಹುದಾದ ಫಲಿತಾಂಶಗಳತ್ತ ಸಾಗುವಂತೆ ಕರೆ ನೀಡಿದ ಭಾರತ, ಭಯೋತ್ಪಾದನೆಯ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾಶಮಾಡಲು ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ಪ್ರಾದೇಶಿಕ ಸಂಪರ್ಕ ಬೆಳೆಸಲು ಸದಸ್ಯ ರಾಷ್ಟ್ರಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡಿದೆ.

  • ಎಸ್‌ಸಿಒ ಮೂರು ಸ್ತಂಭಗಳ ಬಲವರ್ಧನೆ: ಭದ್ರತೆ , ಸಂಪರ್ಕ ಮತ್ತು ಅವಕಾಶ ಎಂಬ ಮೂರು ಸ್ತಂಭಗಳನ್ನು ಬಲಪಡಿಸಿ, ಕೇವಲ ಸಿದ್ಧಾಂತಕ್ಕೆ ಸೀಮಿತವಾಗದೆ ಕಣ್ಣಿಗೆ ಕಾಣುವ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸುವುದು.
  • ಭಯೋತ್ಪಾದಕ ಜಾಲದ ಬುಡಮೇಲು: ಉಗ್ರರಿಗೆ ಹಣಕಾಸು ನೆರವು, ನೇಮಕಾತಿ, ಮೂಲಭೂತವಾದ ಹರಡುವಿಕೆ ಮತ್ತು ಸುರಕ್ಷಿತ ಆಶ್ರಯ ನೀಡುವ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾಶಪಡಿಸುವುದು; ಈ ವಿಷಯದಲ್ಲಿ ‘ದ್ವಿಮುಖ ನೀತಿ’ಗೆ ಯಾವುದೇ ಅವಕಾಶ ನೀಡದಿರುವುದು.
  • ಪ್ರಾಯೋಜಿತ ಭಯೋತ್ಪಾದನೆಗೆ ಎಚ್ಚರಿಕೆ: ಭಯೋತ್ಪಾದನೆಯನ್ನು ಎಂದಿಗೂ ಯಾವುದೇ ದೇಶದ “ಕಾರ್ಯತಂತ್ರದ ಆಸ್ತಿ”ಯನ್ನಾಗಿ ಬಳಸಿಕೊಳ್ಳಲು ಬಿಡದಿರುವುದು ಮತ್ತು ಪ್ರಾಯೋಜಿತ ಉಗ್ರವಾದದ ವಿರುದ್ಧ ಕಠಿಣ ಸಂದೇಶ ರವಾನಿಸುವುದು.
  • ಅಫ್ಘಾನಿಸ್ತಾನದಲ್ಲಿ ಶಾಂತಿ ಹಾಗೂ ನೆರವು: ಅಫ್ಘಾನಿಸ್ತಾನದ ಜನತೆಗೆ ನಿರಂತರ ಮಾನವೀಯ ನೆರವು ಮತ್ತು ಅಭಿವೃದ್ಧಿ ಬೆಂಬಲ ನೀಡುವ ಮೂಲಕ ಅಲ್ಲಿ ಸ್ಥಿರತೆ ಕಾಪಾಡುವುದು.
  • ಸಂವಾದ ಮತ್ತು ರಾಜತಾಂತ್ರಿಕತೆ: ಜಾಗತಿಕ ಇಂಧನ ಭದ್ರತೆ, ಕಡಲ ವ್ಯಾಪಾರ ಮತ್ತು ಪೂರೈಕೆ ಸರಪಳಿಗಳಿಗೆ ಧಕ್ಕೆಯಾಗದಂತೆ, ಎಲ್ಲಾ ಪ್ರಾದೇಶಿಕ ಸಂಘರ್ಷಗಳನ್ನು ಯುದ್ಧದ ಬದಲಿಗೆ ಕೇವಲ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಬಗೆಹರಿಸುವುದು.
  • ಮಾದಕವಸ್ತು ಹಾಗೂ ಸಂಘಟಿತ ಅಪರಾಧಗಳ ನಿಯಂತ್ರಣ: ಮಾದಕವಸ್ತು ಕಳ್ಳಸಾಗಣೆ ಮತ್ತು ಸೈಬರ್ ಬೆದರಿಕೆಗಳನ್ನು ಹತ್ತಿಕ್ಕಲು ಎಸ್‌ಸಿಒ ಅಡಿಯಲ್ಲಿ ಸ್ಥಾಪಿತ ಕೇಂದ್ರಗಳ ಮೂಲಕ ತ್ವರಿತ ಜಂಟಿ ಕ್ರಮ ಕೈಗೊಳ್ಳುವುದು.
  • ಸಾರ್ವಭೌಮತ್ವ ಗೌರವಿಸುವ ಸಂಪರ್ಕ: ಯಾವುದೇ ಸಾರಿಗೆ ಮತ್ತು ವ್ಯಾಪಾರ ಕಾರಿಡಾರ್‌ಗಳನ್ನು ನಿರ್ಮಿಸುವಾಗ ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಡ್ಡಾಯವಾಗಿ ಗೌರವಿಸುವುದು.
  • ವ್ಯಾಪಾರ ಹಾಗೂ ಲಾಜಿಸ್ಟಿಕ್ಸ್ ಆಧುನೀಕರಣ: ಕಸ್ಟಮ್ಸ್ ಪ್ರಕ್ರಿಯೆಗಳನ್ನು ಸರಳಗೊಳಿಸುವುದು, ಡಿಜಿಟಲ್ ದಾಖಲಾತಿಯನ್ನು ವಿಸ್ತರಿಸುವುದು ಮತ್ತು ಲಾಜಿಸ್ಟಿಕ್ಸ್ ಜಾಲವನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು.
  • ಜನಕೇಂದ್ರಿತ ಸಹಕಾರ: ಎಸ್‌ಸಿಒ ಸಹಕಾರದ ನೈಜ ಲಾಭವು ಯುವಜನರು, ಉದ್ಯಮಿಗಳು, ರೈತರು ಮತ್ತು ಸಾಮಾನ್ಯ ನಾಗರಿಕರನ್ನು ನೇರವಾಗಿ ತಲುಪುವಂತೆ ಮಾಡುವುದು.
  • ಸಾಂಸ್ಕೃತಿಕ ಮತ್ತು ಯುವ ವಿನಿಮಯ: ಎಸ್‌ಸಿಒ ಸ್ಟಾರ್ಟ್-ಅಪ್ ಫೋರಮ್, ಯುವ ಲೇಖಕರ ಸಮಾವೇಶ, ಯುವ ವಿಜ್ಞಾನಿಗಳ ವೇದಿಕೆ ಮತ್ತು ಭಾರತದಲ್ಲಿ ಮೊದಲ ಅಧಿವೇಶನ ನಡೆಯಲಿರುವ ಎಸ್‌ಸಿಒ ನಾಗರಿಕತೆಯ ಸಂವಾದ ವೇದಿಕೆ’ಮೂಲಕ ಯುವ ಸಮುದಾಯವನ್ನು ಬೆಸೆಯುವುದು.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಕಿರ್ಗಿಸ್ತಾನ ಭೇಟಿ: ಹಾರ್ಮುಜ್​ನಲ್ಲಿ ಶಾಂತಿ, ಉಕ್ರೇನ್ ಯುದ್ಧ ಅಂತ್ಯಕ್ಕೆ ಕರೆ

ಭಾರತದ ನಾಯಕತ್ವ: ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳ ಸಮ್ಮುಖದಲ್ಲಿ ಭಾರತವು ಮಂಡಿಸಿದ ಈ ಪ್ರಸ್ತಾವನೆಯು, ಪ್ರಾದೇಶಿಕ ಗಡಿ ಸಂಘರ್ಷಗಳನ್ನು ಬದಿಗಿಟ್ಟು ಸುಸ್ಥಿರ ಆರ್ಥಿಕತೆ ಮತ್ತು ನೈಜ ಭದ್ರತೆಗೆ ಒತ್ತು ನೀಡುವ ಜಾಗತಿಕ ದಕ್ಷಿಣದ ಧ್ವನಿಯಾಗಿ ಹೊರಹೊಮ್ಮಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us