ಪ್ರಧಾನಿ ಮೋದಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

PM Modi Namibia Visit: ಪ್ರಧಾನಿ ಮೋದಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್ ಪ್ರದಾನ ಮಾಡಲಾಯಿತು. ಇದು ಪ್ರಧಾನಿ ಮೋದಿ ಅವರ ನಮೀಬಿಯಾಕ್ಕೆ ಮೊದಲ ಭೇಟಿ ಮತ್ತು ಅವರು ಭಾರತದಿಂದ ದೇಶಕ್ಕೆ ಭೇಟಿ ನೀಡಿದ ಮೂರನೇ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಅವರನ್ನು ವಿಮಾನ ನಿಲ್ದಾಣದಲ್ಲಿ ನಮೀಬಿಯಾದ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ವ್ಯಾಪಾರ ಸಚಿವೆ ಸೆಲ್ಮಾ ಅಶಿಪಲಾ-ಮುಸಾವಿ ಅವರು ಬರಮಾಡಿಕೊಂಡರು. ಈ ದೇಶಕ್ಕೆ ಆಗಮಿಸಿದಾಗ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ಪ್ರಧಾನಿ ಮೋದಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ
Modi In Namibia

Updated on: Jul 09, 2025 | 8:39 PM

ನವದೆಹಲಿ, ಜುಲೈ 9: ಭಾರತದ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್ ಪ್ರದಾನ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಪ್ರಧಾನಿ ಮೋದಿ (PM Modi in Namibia) ಭಾರತ ಮತ್ತು ನಮೀಬಿಯಾ ದೇಶಗಳ ಪ್ರಜೆಗಳಿಗೆ ಅರ್ಪಿಸಿದ್ದಾರೆ. “ವೆಲ್ವಿಟ್ಶಿಯಾ ಮಿರಾಬಿಲಿಸ್ ಪ್ರಶಸ್ತಿಗೆ ಭಾಜನರಾಗಿರುವುದು ನನಗೆ ಅತ್ಯಂತ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ. ನಮೀಬಿಯಾ ಸರ್ಕಾರ ಮತ್ತು ನಮೀಬಿಯಾದ ಜನರಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. 140 ಕೋಟಿ ಭಾರತೀಯರ ಪರವಾಗಿ ನಾನು ಈ ಗೌರವವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತ-ನಮೀಬಿಯಾ ಸಂಬಂಧಗಳನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, “ಇದು ಭಾರತ ಮತ್ತು ನಮೀಬಿಯಾ ನಡುವಿನ ಶಾಶ್ವತ ಸ್ನೇಹಕ್ಕೆ ಸಾಕ್ಷಿಯಾಗಿದೆ. ಈ ದೇಶದ ಜೊತೆ ಸಂಬಂಧ ಹೊಂದಲು ನನಗೆ ತುಂಬಾ ಹೆಮ್ಮೆಯಾಗುತ್ತದೆ. ನಾನು ಈ ಗೌರವವನ್ನು ನಮೀಬಿಯಾ ಮತ್ತು ಭಾರತದ ಜನರಿಗೆ, ಅವರ ನಿರಂತರ ಪ್ರಗತಿ ಮತ್ತು ಅಭಿವೃದ್ಧಿಗೆ ಅರ್ಪಿಸುತ್ತೇನೆ. ನಿಜವಾದ ಸ್ನೇಹಿತನನ್ನು ಕಷ್ಟದ ಸಮಯದಲ್ಲಿ ಮಾತ್ರ ಗುರುತಿಸಲಾಗುತ್ತದೆ. ಭಾರತ ಮತ್ತು ನಮೀಬಿಯಾ ಸ್ವಾತಂತ್ರ್ಯ ಹೋರಾಟದ ಸಮಯದಿಂದ ಪರಸ್ಪರ ಬೆಂಬಲವಾಗಿ ನಿಂತಿವೆ. ನಮ್ಮ ಸ್ನೇಹ ರಾಜಕೀಯದಿಂದ ಹುಟ್ಟಿಲ್ಲ; ಹೋರಾಟ, ಸಹಕಾರ ಮತ್ತು ಪರಸ್ಪರ ನಂಬಿಕೆಯಿಂದ ಹುಟ್ಟಿದೆ. ಇದು ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಉಜ್ವಲ ಭವಿಷ್ಯದ ಕನಸುಗಳಿಂದ ಪೋಷಿಸಲ್ಪಟ್ಟಿದೆ. ಭವಿಷ್ಯದಲ್ಲಿಯೂ ಸಹ, ನಾವು ಅಭಿವೃದ್ಧಿಯ ಹಾದಿಯಲ್ಲಿ ಪರಸ್ಪರರ ಕೈಗಳನ್ನು ಹಿಡಿದುಕೊಂಡು ಮುಂದುವರಿಯುತ್ತೇವೆ.” ಎಂದು ಮೋದಿ ಹೇಳಿದ್ದಾರೆ.


ಇದನ್ನೂ ಓದಿ: Video: ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ

ಜುಲೈ ಆರಂಭದಲ್ಲಿ ಪ್ರಧಾನಿ ಮೋದಿ ಅವರು ಆರಂಭಿಸಿದ 5 ರಾಷ್ಟ್ರಗಳ ಪ್ರವಾಸದ ಹಿನ್ನೆಲೆಯಲ್ಲಿ ಅವರು ನಮೀಬಿಯಾ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೋದಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.


ನಮೀಬಿಯಾದ ಅಧ್ಯಕ್ಷ ನೆಟುಂಬೊ ನಂದಿ-ನದೈತ್ವಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ನಮೀಬಿಯಾಕ್ಕೆ ಭೇಟಿ ನೀಡಿದ್ದಾರೆ. ಅವರು ಇಂದು ಬೆಳಿಗ್ಗೆ ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ಗೆ ಆಗಮಿಸಿದರು. ಇದು ಅವರ ಮೊದಲ ಭೇಟಿ ಮತ್ತು ಭಾರತೀಯ ಪ್ರಧಾನಿಯೊಬ್ಬರು ನಮೀಬಿಯಾಕ್ಕೆ ಭೇಟಿ ನೀಡುತ್ತಿರುವುದು ಮೂರನೇ ಭೇಟಿಯಾಗಿದೆ.


ಪ್ರಧಾನಿ ಮೋದಿಗೆ ನೀಡಲಾಗಿರುವ ಮೋಸ್ಟ್ ಏನ್ಷಿಯಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. 1990ರಲ್ಲಿ ನಮೀಬಿಯಾ ಸ್ವಾತಂತ್ರ್ಯ ಪಡೆದ ಸ್ವಲ್ಪ ಸಮಯದ ನಂತರ ವಿಶಿಷ್ಟ ಸೇವೆ ಮತ್ತು ನಾಯಕತ್ವವನ್ನು ಗುರುತಿಸಲು 1995ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಇದು ಪ್ರಧಾನಿ ಮೋದಿಗೆ ಬೇರೆ ದೇಶ ನೀಡುತ್ತಿರುವ 27ನೇ ಪ್ರಶಸ್ತಿಯಾಗಿದೆ. ಈಗ ನಡೆಯುತ್ತಿರುವ ಅವರ ವಿದೇಶ ಪ್ರವಾಸದಲ್ಲಿ 4ನೇ ಪ್ರಶಸ್ತಿಯಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:36 pm, Wed, 9 July 25