ಮಿಖಾಯೀಲ್ ಗೋರ್ಬಚೆವ್ ಅಂತ್ಯಸಂಸ್ಕಾರದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಲ್ಗೊಳ್ಳುತ್ತಿಲ್ಲ: ಕ್ರೆಮ್ಲಿನ್ ವಕ್ತಾರ
ಅವರ ನಿಧನ ಸುದ್ದಿ ಕೇಳಿದ ನಂತರ ಪುಟಿನ್ ಶೋಕ ವ್ಯಕ್ತಪಡಿಸಿದರೆರಾದರೂ, ಗತಿಸಿದ ನಾಯಕನೊಂದಿಗೆ ಅವರ ಸಂಬಂಧ ಹಿತಕರವಾಗೇನೂ ಇರಲಿಲ್ಲ. ಬುಧವಾರ ಬೆಳಗ್ಗೆ ಅವರು ಗೋರ್ಬಚೆವ್ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ಸಂತಾಪ ಸೂಚಕ ಟೆಲಿಗ್ರಾಮ್ ಕಳಿಸಿದ್ದರು.
ಪ್ರಾಯಶಃ ಶೇಷ ವಿಶ್ವ ಇದನ್ನು ನಿರೀಕ್ಷಿಸಿತ್ತು. ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ಅರಂಭಿಸಿದ ನಂತರ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಧೋರಣೆಗಳು ಸಂಪೂರ್ಣವಾಗಿ ಬದಲಾಗಿವೆ. ಅವರು ತಮ್ಮನ್ನು ತಾವು ವಿಶ್ವದ ಅಗ್ರಗಣ್ಯ ನಾಯಕ ಎಂದು ಭಾವಿಸತೊಡಗಿದ್ದಾರೆ. ವಿಶ್ವದಲ್ಲೇ ತನಗಿಂತ ಶ್ರೇಷ್ಠರಿಲ್ಲ ಅಂದುಕೊಂಡಿರುವ ಅವರು ಇನ್ನು ಹಿಂದೊಮ್ಮೆ ಸೋವಿಯತ್ ಒಕ್ಕೂಟದ ಪ್ರಶ್ನಾತೀತ ನಾಯಕರೆನಿಸಿಕೊಂಡಿದ್ದ ಮಿಖಾಯೀಲ್ ಗೋರ್ಬಚೆವ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿಯಾರೆ?
ಪುಟಿನ್ ಹೋಗುತ್ತಿಲ್ಲ ಅನ್ನೋದನ್ನು ಅವರ ವಕ್ತಾರ ಗುರುವಾರದಂದು ಸ್ಪಷ್ಟಪಡಿಸಿದ್ದಾರೆ.
‘ಗೋರ್ಬಚೆವ್ ಅವರ ಅಂತ್ಯಕ್ರಿಯೆ ಸೆಪ್ಟಂಬರ್ 3ರಂದ ನಡೆಯಲಿದೆ. ಆದರೆ ದುರದೃಷ್ಟವಶಾತ್ ಕೆಲಸಗಳ ಒತ್ತಡದಿಂದಾಗಿ ಅಧ್ಯಕ್ಷ ಪುಟಿನ್ ಅವರಿಗೆ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಗುವುದಿಲ್ಲ,’ ಅಂದು ಕ್ರೆಮ್ಲಿನ್ ವಕ್ತಾರ ಡಿಮಿತ್ರಿ ಪೆಸ್ಕೋವ್ ಸುದ್ದಿಗಾರರಿಗೆ ಗುರುವಾರ ಹೇಳಿದರು. ಗೋರ್ಬಚೆವ್ ಅವರು ನಿಧನ ಹೊಂದಿದ ಅಸ್ಪತ್ರೆಯಲ್ಲೇ ಅವರಿಗೆ ಅಧ್ಯಕ್ಷ ಪುಟಿನ್ ಅಂತಿಮ ನಮನ ಸಲ್ಲಿಸಿದ್ದಾರೆ, ಎಂದು ಸಹ ಪೆಸ್ಕೋವ್ ಹೇಳಿದ್ದಾರೆ.
ಸೋವಿಯತ್ ಒಕ್ಕೂಟದ ಅಂತಿಮ ನಾಯಕರಾಗಿದ್ದ ಮತ್ತು ಯಾವುದೇ ರಕ್ತಪಾತವಿಲ್ಲದೆ ಶೀತಲ ಸಮರವನ್ನು ಕೊನೆಗೊಳಿಸಿದ್ದ ಗೋರ್ಬಚೆವ್ ಮಂಗಳವಾರದಂದು ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮಾಸ್ಕೋದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ ಗೋರ್ಬಚೆವ್ ಸುದೀರ್ಘ ಅವಧಿಯವರೆಗೆ ಕಾಯಿಲೆಗಳಿಂದ ಬಳಲುತ್ತಿದ್ದರು.
ಅವರ ನಿಧನ ಸುದ್ದಿ ಕೇಳಿದ ನಂತರ ಪುಟಿನ್ ಶೋಕ ವ್ಯಕ್ತಪಡಿಸಿದರೆರಾದರೂ, ಗತಿಸಿದ ನಾಯಕನೊಂದಿಗೆ ಅವರ ಸಂಬಂಧ ಹಿತಕರವಾಗೇನೂ ಇರಲಿಲ್ಲ. ಬುಧವಾರ ಬೆಳಗ್ಗೆ ಅವರು ಗೋರ್ಬಚೆವ್ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ಸಂತಾಪ ಸೂಚಕ ಟೆಲಿಗ್ರಾಮ್ ಕಳಿಸಿದ್ದರು.
ಅಧಿಕೃತ ಸುದ್ದಿ ಸಂಸ್ಥೆ ತಾಸ್ ನೀಡಿರುವ ಮಾಹಿತಿ ಪ್ರಕಾರ ಗೋರ್ಬಚೆವ್ ಅಂತ್ಯಕ್ರಿಯೆಯನ್ನು ಮಾಸ್ಕೋ ನಗರದ ನೊವೊದೆವಿಚಿ ಸೆಮೆಟ್ರಿಯಲ್ಲಿ ಅವರ ಪತ್ನಿಯ ಸಮಾಧಿ ಪಕ್ಕದಲ್ಲೇ ನೆರವೇರಿಸಲಾಗುವುದು.