Queen Elizabeth: ಆಸ್ಟ್ರೇಲಿಯನ್ ಕರೆನ್ಸಿ ನೋಟುಗಳಿಂದ ಎಲಿಜಬೆತ್ ರಾಣಿಯ ಫೋಟೋ ತೆಗೆದುಹಾಕಲು ನಿರ್ಧಾರ
Australian Currency Notes: ಆಸ್ಟ್ರೇಲಿಯಾ ಕರೆನ್ಸಿಯ 5 ಡಾಲರ್ ನೋಟಿನಲ್ಲಿ ಮುದ್ರಣವಾಗುತ್ತಿದ್ದ ಎರಡನೇ ಎಲಿಜಬೆತ್ ರಾಣಿಯ ಫೋಟೋಗಳು ಮುಂದಿನ ದಿನಗಳಲ್ಲಿ ಇರುವುದಿಲ್ಲ. ನೋಟುಗಳಲ್ಲಿ ರಾಣಿಯ ಚಿತ್ರದ ಬದಲು ಆಸ್ಟ್ರೇಲಿಯಾದ ಸ್ಥಳೀಯ ಪ್ರಾಚೀನಾ ನಾಗರಿಕತೆಯನ್ನು ಪ್ರತಿನಿಧಿಸುವ ಚಿತ್ರವೊಂದನ್ನು ಹಾಕಲು ನಿರ್ಧರಿಸಲಾಗಿದೆ.
ಸಿಡ್ನಿ: ಆಸ್ಟ್ರೇಲಿಯಾ ಕರೆನ್ಸಿಯ ಡಾಲರ್ 5 ನೋಟಿನಲ್ಲಿ (Australian Dollar) ಮುದ್ರಣವಾಗುತ್ತಿದ್ದ ಎರಡನೇ ಎಲಿಜಬೆತ್ ರಾಣಿಯ (Queen Elizabeth II) ಫೋಟೋಗಳು ಮುಂದಿನ ದಿನಗಳಲ್ಲಿ ಇರುವುದಿಲ್ಲ. ನೋಟುಗಳಲ್ಲಿ ರಾಣಿಯ ಚಿತ್ರದ ಬದಲು ಆಸ್ಟ್ರೇಲಿಯಾದ ಸ್ಥಳೀಯ ಪ್ರಾಚೀನಾ ನಾಗರಿಕತೆಯನ್ನು (Australian Indigenous Civilisation) ಪ್ರತಿನಿಧಿಸುವ ಚಿತ್ರವೊಂದನ್ನು ಹಾಕಲು ನಿರ್ಧರಿಸಲಾಗಿದೆ.
ಆಸ್ಟ್ರೇಲಿಯಾದ ಕರೆನ್ಸಿ ನೋಟುಗಳಲ್ಲಿ ಒಂದು ಬದಿಯಲ್ಲಿ ಎರಡನೇ ಎಲಿಜಬೆತ್ ರಾಣಿಯ ಫೋಟೋ ಇದ್ದರೆ ಮತ್ತೊಂದು ಬದಿಯಲ್ಲಿ ಆ ದೇಶದ ಸಂಸತ್ತಿನ ಚಿತ್ರ ಇದೆ. ಈಗ ರಾಣಿಯ ಚಿತ್ರವನ್ನು ಮಾತ್ರ ಬದಲಿಸಲಾಗುತ್ತದೆ. ಇನ್ನೊಂದು ಬದಿಯಲ್ಲಿ ಸಂಸತ್ತಿನ ಚಿತ್ರ ಮುಂದುವರಿಯುತ್ತದೆ. ಆದರೆ, ಬ್ರಿಟನ್ ರಾಣಿಯ ಚಿತ್ರದ ಬದಲು ಬೇರೆ ಯಾವುದನ್ನು ಮುದ್ರಿಸಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ. ಅಲ್ಲಿನ ಮೂಲನಿವಾಸಿಗಳ ಸಂಘಟನೆಗಳೊಂದಿಗೆ ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕ್ ಸಮಾಲೋಚನೆ ನಡೆಸುತ್ತಿದೆ. ಈ ಪ್ರಕ್ರಿಯೆ ಮುಗಿಯಲು ಸುಮಾರು ಕೆಲ ವರ್ಷಗಳೇ ಆಗಬಹುದು. ಅಲ್ಲಿಯವರೆಗೂ ಈಗಿರುವ ರೀತಿಯಲ್ಲೇ ಕರೆನ್ಸಿ ಮುದ್ರಣ ಆಗಲಿದೆ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾ ಕರೆನ್ಸಿಯಲ್ಲಿ ಬ್ರಿಟನ್ ರಾಣಿ ಫೋಟೋ ಯಾಕೆ?
ಬ್ರಿಟಿಷರು ಆಳ್ವಿಕೆ ನಡೆಸಿದ ದೇಶಗಳನ್ನು ಕಾಮನ್ವೆಲ್ತ್ ರಾಷ್ಟ್ರಗಳೆಂದು (Comonwealth Nations) ಕರೆಯಲಾಗುತ್ತದೆ. ಇದರಲ್ಲಿ ಭಾರತವೂ ಒಂದು. ಆದರೆ, ಬ್ರಿಟನ್ ಹೊರಗಿನ 14 ದೇಶಗಳಲ್ಲಿ ಬ್ರಿಟನ್ ಅರಸರೇ ಮುಖ್ಯಸ್ಥರಾಗಿದ್ದಾರೆ. ಇಲ್ಲಿ ಮುಖ್ಯಸ್ಥ ಸ್ಥಾನ ಕೇವಲ ನಾಮಕಾವಸ್ತೆಗೆ ಮಾತ್ರವಾಗಿದ್ದು ಅವರಿಗೆ ಯಾವುದೇ ಶಾಸನಾಧಿಕಾರ ಇರುವುದಿಲ್ಲ. ಇಂಥ 14 ದೇಶಗಳಲ್ಲಿ ಆಸ್ಟ್ರೇಲಿಯಾವೂ ಒಂದು. ಭಾರತ ಸೇರಿದಂತೆ ಇನ್ನೂ ಹಲವು ದೇಶಗಳು ಬ್ರಿಟಿಷರ ಆಳ್ವಿಕೆಯಿಂದ ಪೂರ್ಣ ಸ್ವಾತಂತ್ರ್ಯ ಪಡೆದಿದ್ದಾರೆ. ಬ್ರಿಟಿಷ್ ಅರಸರು ಆಸ್ಟ್ರೇಲಿಯಾದ ಮುಖ್ಯಸ್ಥರಾಗುವುದು ಮುಂದುವರಿಯಬೇಕಾ ಎಂದು ಅಲ್ಲಿ 1999ರಲ್ಲಿ ಜನಾಭಿಪ್ರಾಯ ಪಡೆಯಲಾಯಿತು. ಅದರಲ್ಲಿ ಅರಸರ ಪರವಾಗಿ ತೀರಾ ಕಡಿಮೆ ಅಂತರದ ಬಹುಮತ ಬಂದಿತ್ತು.
ಇದನ್ನೂ ಓದಿ: Ajit Doval: ಭಾರತಕ್ಕೆ ರಷ್ಯಾ, ಚೀನಾ ಸಹವಾಸ ತಪ್ಪಿಸಲು ಅಮೆರಿಕ ಪ್ಲಾನ್; ಅಜಿತ್ ದೋವಲ್ ಅಮೆರಿಕ ಭೇಟಿಗೆ ವಿಶೇಷತೆ ಇದೆ
ಆಸ್ಟ್ರೇಲಿಯಾಗೆ ಬ್ರಿಟಿಷರ ವಸಾಹತು ನಡೆಯುವ ಮುನ್ನ ಅಲ್ಲಿ ಮೂಲನಿವಾಸಿಗಳಿದ್ದು, ಅವರ ಸಮಾಜವು ಅದು ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿತ್ತು. ಈಗ ಮೂಲನಿವಾಸಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಆದರೂ ಅಲ್ಲಿ ಆಸ್ಟ್ರೇಲಿಯಾದ ಪ್ರಾಚೀನ ನಾಗರಿಕತೆಯೊಂದಿಗೆ ಗುರುತಿಸಿಕೊಳ್ಳುವ ಮನೋಭಾವ ಹೆಚ್ಚುತ್ತಿದೆ. ಹೀಗಾಗಿ, ಆಸ್ಟ್ರೇಲಿಯಾ ಯುವ ಮತ್ತು ಮುಕ್ತ ದೇಶ ಎಂದು ಹಾಡುವ ಅಲ್ಲಿನ ರಾಷ್ಟ್ರಗೀತೆಯನ್ನು 2021ರಲ್ಲಿ ಬದಲಾಯಿಸಲಾಯಿತು.
2022ರ ಸೆಪ್ಟಂಬರ್ನಲ್ಲಿ ಎರಡನೇ ಎಲಿಜಬೆತ್ ರಾಣಿ ನಿಧನರಾಗಿ ಮೂರನೇ ಕಿಂಗ್ ಚಾರ್ಲ್ಸ್ ಬ್ರಿಟನ್ನ ಅರಸರಾದರು. ಈಗ ಅವರೇ ಆಸ್ಟ್ರೇಲಿಯಾದ ಮುಖ್ಯಸ್ಥರು. ಆದರೆ ಆಸ್ಟ್ರೇಲಿಯಾದ ಕರೆನ್ಸಿ ನೋಟುಗಳಲ್ಲಿ ದೊರೆ ಚಾರ್ಲ್ಸ್ನ ಫೋಟೋ ಹಾಕಲಾಗುತ್ತಿಲ್ಲ. ಕರೆನ್ಸಿ ನೋಟಿನಲ್ಲಿ ರಾಣಿಯ ಚಿತ್ರ ಹಾಕುತ್ತಿರುವುದು ಅವರ ವ್ಯಕ್ತಿತ್ವದ ಗುರುತಿಗಾಗಿಯೇ ಹೊರತು ಆಕೆ ಮಹಾರಾಣಿಯಾಗಿದ್ದರು ಎಂಬ ಕಾರಣಕ್ಕಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಸ್ಪಷ್ಟಪಡಿಸಿದೆ. ಈಗ ಆ ದೇಶದ ಸ್ಥಳೀಯ ಮೂಲ ನಾಗರಿಕತೆಯ ಗುರುತೊಂದನ್ನು ಕರೆನ್ಸಿ ನೋಟುಗಳಲ್ಲಿ ಹಾಕುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ.
Published On - 11:04 am, Thu, 2 February 23