ಲಂಡನ್: ಬ್ರಿಟನ್‌ನ ಮುಂದಿನ ಪ್ರಧಾನಿಯನ್ನು ನಿರ್ಧರಿಸಲು ಕನ್ಸರ್ವೇಟಿವ್ ಪಕ್ಷದ (Conservative Patry) ಸಂಸದರು ಸೋಮವಾರ ನಡೆಸಿದ 3ನೇ ಸುತ್ತಿನ ಮತದಾನದಲ್ಲಿ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ (Rishi Sunak) ಮುನ್ನಡೆ ಸಾಧಿಸಿದ್ದಾರೆ. ರಿಷಿ ಸುನಕ್ 115 ಮತಗಳನ್ನು ಪಡೆದು ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಬ್ರಿಟನ್ ಪ್ರಧಾನಿ ಸ್ಥಾನದ ಸ್ಪರ್ಧೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ಇಂದು ಮುಂದಿನ ಸುತ್ತಿನ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಬ್ರಿಟನ್ ಪ್ರಧಾನಿ ಹುದ್ದೆಗೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಿಷಿ ಸುನಕ್ 115 ಟೋರಿ ಶಾಸಕರ ಬೆಂಬಲವನ್ನು ಗಳಿಸಿದ್ದಾರೆ. ಅವ ಬಳಿಕ ಪೆನ್ನಿ ಮೊರ್ಡಾಂಟ್ 82, ಲಿಜ್ ಟ್ರಸ್ 71, ಕೆಮಿ ಬಡೆನೋಚ್ 58 ಮತ್ತು ಟಾಮ್ ತುಗೆಂಧತ್ 31 ಮತಗಳನ್ನು ಗಳಿಸಿದ್ದಾರೆ ಎಂದು ಪಕ್ಷ ಘೋಷಿಸಿದೆ. ರೇಸ್ನಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಉಳಿಯುವವರೆಗೆ ಸಂಸದರು ಮತ ಚಲಾಯಿಸುತ್ತಾರೆ. ವಿಜೇತರನ್ನು ಪಕ್ಷದ ಸದಸ್ಯರು ನಿರ್ಧರಿಸುತ್ತಾರೆ.
ಇದನ್ನೂ ಓದಿ: Rishi Sunak: ‘ಅಭಿಯಾನ’ ಪದದಲ್ಲಿನ ತಪ್ಪಾದ ಕಾಗುಣಿತದಿಂದಾಗಿ ವೈರಲ್ ಆದ ರಿಷಿ ಸುನಕ್
ವಿದೇಶಾಂಗ ಕಾರ್ಯದರ್ಶಿ ಟ್ರಸ್ ಅವರ ಅಂತರ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಬಡೆನೋಚ್ ಅವರ ಬೆಂಬಲಿಗರಿಂದ ಹೆಚ್ಚಿನ ಬೆಂಬಲವನ್ನು ನಿರೀಕ್ಷಿಸಬಹುದಾಗಿದೆ. ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ಹೊಸ ನಾಯಕನ ಆಯ್ಕೆಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯುತ್ತಾರೆ.
ಬ್ರಿಟನ್ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ಆಯ್ಕೆಗೆ ಈಗಿನ ಹಂಗಾಮಿ ಪ್ರಧಾನಿ ಬೋರಿಸ್ ಜಾನ್ಸನ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಕೂಡ ವರದಿಯಾಗಿದೆ. ಯಾರನ್ನು ಬೇಕಾದರೂ ಬೆಂಬಲಿಸಿ ಆದರೆ ರಿಷಿ ಸುನಕ್ನನ್ನು ಮಾತ್ರ ಆಯ್ಕೆ ಮಾಡಬೇಡಿ ಎಂದು ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ತಾವು ತಮ್ಮ ಪಕ್ಷದ ಸದಸ್ಯರಿಂದಲೇ ಬೆಂಬಲ ಕಳೆದುಕೊಳ್ಳುವುದಕ್ಕೆ ರಿಷಿ ಸುನಕ್ ಕಾರಣ ಎಂದು ಅವರು ದೂಷಿಸಿದ್ದು, ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಬಾರದೆಂದು ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಲ್ಲಿ ಹೇಳಿದ್ದಾರೆ ಎಂದು ಟೈಮ್ಸ್ ವರದಿ ಪ್ರಕಟಿಸಿದೆ. ಪ್ರಧಾನಿ ಹುದ್ದೆಗೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ನೇಮಕವಾಗಬೇಕೆಂಬುದು ಬೋರಿಸ್ ಅಭಿಪ್ರಾಯವಾಗಿದೆ ಎನ್ನಲಾಗಿದೆ.
Published On - 9:02 am, Tue, 19 July 22