ಗುರುವಾರ ಉಕ್ರೇನ್ ಇರುದ್ಧ ರಷ್ಯಾ ಯುದ್ಧ (Russia- Ukraine War) ಘೋಷಿಸಿದೆ. ಈಗಾಗಲೇ ಈ ಕದನದಲ್ಲಿ ಎರಡೂ ದೇಶದ ಹಲವಾರು ಸೈನಿಕರು, ಜನ ಸಾಮಾನ್ಯರು ಪ್ರಾಣ ಕಳೆದುಕೊಂಡಿದ್ದಾರೆ. ವಿಶ್ವದ ಹಲವು ರಾಷ್ಟ್ರಗಳು ರಷ್ಯಾಗೆ ನಿರ್ಬಂಧಗಳನ್ನು ಹೇರಿ, ಯುದ್ಧ ನಿಲ್ಲಿಸಲು ಒತ್ತಾಯಿಸಿವೆ. ಆದರೆ ರಷ್ಯಾ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ತಂಟೆಗೆ ಬಂದರೆ ಪರಿಣಾಮ ಭೀಕರವಾಗಿರಲಿದೆ ಎಂದು ಪ್ರತಿಯಾಗಿ ಎಚ್ಚರಿಸಿದೆ. ಇದೀಗ ರಷ್ಯಾದ ನಿರ್ಧಾರದ ವಿರುದ್ಧ ಅದೇ ದೇಶದ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ. ‘ಯುದ್ಧ ಬೇಡ’ (No to war) ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಜನರನ್ನು ರಷ್ಯಾದಲ್ಲಿ ಬಂಧಿಸಲಾಗಿದೆ. ಸುದ್ದಿ ಸಂಸ್ಥೆ ಎಎಫ್ಪಿ ಈ ಕುರಿತು ವರದಿ ಮಾಡಿದ್ದು, ರಷ್ಯಾದ ಮಾಜಿ ರಾಜಧಾನಿ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸುಮಾರು 1,000 ಜನರು ಪ್ರತಿಭಟನೆಗೆ ಆಗಮಿಸಿದ್ದರು. ಮಧ್ಯ ಮಾಸ್ಕೋದ ಪುಷ್ಕಿನ್ ಚೌಕದ ಬಳಿಯೂ ಜನರು ಪ್ರತಿಭಟನೆ ನಡೆಸಿದ್ದಾರೆ. ಎಲ್ಲೆಡೆ ‘ಯುದ್ಧ ಬೇಡ’ ಎಂಬ ಘೋಷಣೆ ಮೊಳಗಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಒಟ್ಟು 1,700 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರತಿಭಟನಾಕಾರರಲ್ಲಿ ಒಬ್ಬರಾಗಿದ್ದ ಅನಸ್ತಾಸಿಯಾ ನೆಸ್ಟುಲ್ಯ ಎಎಫ್ಪಿ ಜತೆ ಮಾತನಾಡಿ, ‘ನನಗೆ ಆಘಾತವಾಗಿದೆ. ನನ್ನ ಸಂಬಂಧಿಕರು ಮತ್ತು ಪ್ರೀತಿಪಾತ್ರರು ಉಕ್ರೇನ್‌ನಲ್ಲಿ ವಾಸಿಸುತ್ತಿದ್ದಾರೆ. ನಾನು ಅವರಿಗೆ ಫೋನ್ ಮೂಲಕ ಏನು ಹೇಳಬಹುದು? ನೀವು ಅಲ್ಲಿಯೇ ಇರಿ ಎನ್ನಲೇ?’ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ ಜನರು ಸರ್ಕಾರದ ವಿರುದ್ಧ ಪ್ರತಿಭಟಿಸಲು ಹೆದರುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮುಖವಾಡ ಧರಿಸಿದ್ದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಬಲವಂತವಾಗಿ ಬಂಧಿಸಿ ಎಳೆದುಕೊಂಡು ಹೋಗುತ್ತಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಪ್ರತಿಭಟನಾಕಾರರು ತಮ್ಮನ್ನು ಬಿಟ್ಟು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು. ‘ಅಧಿಕಾರಿಗಳು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂಬ ಭಾವನೆ ನನ್ನಲ್ಲಿದೆ’ ಎಂದು ಸ್ವೆಟ್ಲಾನಾ ವೋಲ್ಕೊವಾ ಮಾಧ್ಯಮದೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಪ್ರತಿಭಟನಾಕಾರರ ಹೊರತಾಗಿ ವ್ಲಾಡಿಮಿರ್ ಪುಟಿನ್ ಮತ್ತು ಅವರ ಆಡಳಿತದ ಕಟು ಟೀಕಾಕಾರರಾಗಿರುವ, ಪ್ರಸ್ತುತ ಜೈಲಿನಲ್ಲಿರುವ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರು ಉಕ್ರೇನ್ ಆಕ್ರಮಣದ ವಿರುದ್ಧ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ರಷ್ಯಾ ದೇಶದೊಳಗಿನ ಸಮಸ್ಯೆಗಳನ್ನು ಮುಚ್ಚಿಹಾಕಿ, ಜನರ ಗಮನ ಬೇರೆಡೆ ಸೆಳೆಯಲು ಉಕ್ರೇನ್ ಮೇಲೆ ಯುದ್ಧ ಸಾರಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಪುಟಿನ್ರನ್ನು ಅರೆಸ್ಟ್ ಮಾಡಿ, ನನ್ನನ್ನಲ್ಲ’ ಎಂದ ಪ್ರತಿಭಟನಾಕಾರ; ವಿಡಿಯೋ ಇಲ್ಲಿದೆ:
“Arrest Putin not me”, yells a protestor in Russia. #Ukraine pic.twitter.com/TzZHmx4y16
— Rasis Bhandari (@rasisbhandari) February 25, 2022
ರಷ್ಯಾದ ವಿರುದ್ಧ ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ಉಕ್ರೇನಿಯನ್ನರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಪಾನ್ನಲ್ಲಿ ರಷ್ಯಾ ರಾಯಭಾರ ಕಚೇರಿಯ ಮುಂದೆ ಜನರು ಪ್ರತಿಭಟನೆ ನಡೆಸಿದ್ದರು. ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿರುವ ಉಕ್ರೇನಿಯನ್ ನಾಗರಿಕರು ರಷ್ಯಾ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
Published On - 10:59 am, Fri, 25 February 22