ಸಮಾಧಾನಕರ ಸಂಗತಿ: ಬಂಕರ್ನಲ್ಲಿದ್ದ ಕನ್ನಡಿಗರು ಸೇಫ್-ಸೇಫ್, ಅಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸುವ ಆಶಯ, ಆತ್ಮವಿಶ್ವಾಸ!
Kannadigas in Ukraine Safe: ಉಕ್ರೇನ್ ನಲ್ಲಿ ಕನ್ನಡಿಗ ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ವಿಚಾರವಾಗಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿ ಬಗ್ಗೆ ಕ್ರಮ ವಹಿಸಲು ಈ ವೇಳೆ ಮನವಿ ಮಾಡಿಕೊಂಡಿದ್ದಾರೆ.
ಬಲಾಢ್ಯ ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟೀನ್ ಒಂದು ರೇಂಜಿಗೆ ಕೆಂಡಾಮಂಡಲವಾಗಿದ್ದೇ ತಡ ಪುಟ್ಟ ಉಕ್ರೇನ್ ನೆಲ ಕೊತಕೊತಾ ಕುದಿಯುತಿದೆ (Russia Ukraine War). ಇಂದು ಯುದ್ಧದ ಎರಡನೆಯ ದಿನವಾಗಿದೆ. ಇದರಿಂದ ಪೀಕಲಾಟಕ್ಕೆ ಸಿಕ್ಕಿಕೊಂಡಿರುವುದು ಜಗತ್ತು,ಅದರಲ್ಲೂ ನಮ್ಮ ಒಂದಷ್ಟು ಕನ್ನಡಿಗರು. ಉಕ್ರೇನ್ ನಲ್ಲಿ ಜೀವನ ಕಂಡುಕೊಳ್ಳಲು ಹೋಗಿರುವ ನೂರಾರು ಕನ್ನಡಿಗರು ನಿನ್ನೆಯಿಂದ ಪರದಾಡುತ್ತಿದ್ದಾರೆ. ಉಕ್ರೇನ್‌ನಲ್ಲಿ MBBS ವಿದ್ಯಾರ್ಥಿಗಳು ಪರದಾಡುತ್ತಿದ್ದು, ಬಂಕರ್‌ವೊಂದರಲ್ಲಿ ಆಶ್ರಯ ಪಡೆದಿದ್ದಾರೆ. 2 ದಿನಕ್ಕೆ ಆಗುವಷ್ಟು ಆಹಾರದೊಂದಿಗೆ ಬಂಕರ್‌ಗೆ ಶಿಫ್ಟ್ ಆಗಿದ್ದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಮಧ್ಯೆ, ಉಸಿರುಗಟ್ಟುವ ಬಂಕರ್ನಿಂದ ಅವರನ್ನು ಮುಕ್ತಿಗೊಳಿಸಿ, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂಬ ಖಚಿತ ಮಾಹಿತಿ ದಿಕ್ಕಿದೆ. ಇದು ನಿಜಕ್ಕೂ ಸಮಾಧಾನಕರ ಸಂಗತಿಯಾಗಿದ್ದು, ಸೇಫ್ ಆದ ಕನ್ನಡಿಗರು ಉಕ್ರೇನ್ ನಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸುವ ಆಶಯ, ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ (Kannadigas in Ukraine Safe).
ಆದರೂ ಯುದ್ಧವೆಂದ ಮೇಲೆ ಭೀತಿಯಿದ್ದೇ ಇದ್ದು ಉಕ್ರೇನ್ ನಲ್ಲಿ ಕನ್ನಡಿಗ ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ವಿಚಾರವಾಗಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿ ಬಗ್ಗೆ ಕ್ರಮ ವಹಿಸಲು ಈ ವೇಳೆ ಮನವಿ ಮಾಡಿಕೊಂಡಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ವಾಪಸ್ ಕರೆತರುವ ಬಗ್ಗೆ ಜೈಶಂಕರ್ ಭರವಸೆ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಮಾಹಿತಿ Ukraine.Karnataka.tech ಗೆ ಮಾಹಿತಿ ನೀಡಿದರೆ ರಕ್ಷಣೆ ಉಕ್ರೇನ್‌ನಲ್ಲಿರುವವರ ಮಾಹಿತಿ ಅಪ್‌ಲೋಡ್ ಮಾಡಿ ಮಾಹಿತಿ ಆಧರಿಸಿ ಕನ್ನಡಿಗರನ್ನು ರಕ್ಷಣೆ ಮಾಡಲಾಗುವುದು ಬೆಂಗಳೂರಿನಲ್ಲಿ ಮನೋಜ್ ರಾಜನ್ ಮಾಹಿತಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ
ಉಕ್ರೇನ್ ನಲ್ಲಿರುವ ಮಗಳು ಸೇಫ್ ಸೇಫ್ ಆಗಿದ್ದಾಳೆ: ಉಕ್ರೇನ್ ನಲ್ಲಿ MBBS ವ್ಯಾಸಂಗ ಮಾಡ್ತಿರೋ ಗಾಯತ್ರಿ ಖನ್ನ ತಂದೆ ರಾಜೇಶ್ ಖನ್ನ ಟಿವಿ9 ಜೊತೆ ಮಾತನಾಡಿದ್ದು ಉಕ್ರೇನ್ ನಲ್ಲಿರುವ ತಮ್ಮ ಮಗಳು ಸೇಫ್ ಸೇಫ್ ಆಗಿದ್ದಾಳೆ ಎಂದು ತಿಳಿಸಿದ್ದಾರೆ. ರಾಜೇಶ್ ಖನ್ನ ಅವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ನಿವಾಸಿ. ಗಾಯತ್ರಿ ಖನ್ನಾ ಅವರು ಕಾರ್ಕ್ಯೂ ನ್ಯಾಷಿನಲ್ ಮೆಡಿಕಲ್ ಕಾಲೇಜಿನಲ್ಲಿ ಮೂರನೇ ವರ್ಷದ MBBS ವ್ಯಾಸಂಗ ಮಾಡ್ತಿದಾರೆ. ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳೆಲ್ಲ ಸೇಫ್ ಆಗಿದ್ದಾರೆ.
ಮೊನ್ನೆಯವರೆಗೂ ಯಾವುದೇ ತೊಂದರೆಗಳಿಲ್ಲದೆ ಕಾಲೇಜು ನಡೆದಿದೆ. ನಿನ್ನೆ ಒಂದು ದಿನ ಕಾಲೇಜು ನಡೆದಿಲ್ಲ. ಉಕ್ರೇನ್ ನ ಕೆಲವು ಭಾಗದಲ್ಲಿ ವಿದ್ಯುತ್ ಸಮಸ್ಯೆ ಆಗಿದೆ. ನನ್ನ ಮಗಳು ಇರುವ ಅಪಾರ್ಟ್‌ಮೆಂಟ್ ನಲ್ಲಿ ಯಾವುದೇ ರೀತಿ ತೊಂದರೆ ಇಲ್ಲ. ಪ್ರತಿ ನಾಲ್ಕು ಗಂಟೆಗೊಮ್ಮೆ ನಮ್ಮನ್ನ ಸಂಪರ್ಕ ಮಾಡ್ತಿದ್ದಾರೆ. ಮುಂಜಾಗತ್ರೆಯಾಗಿ ನಿನ್ನೆ ಬಂಕರ್ಸ್ ನಲ್ಲಿ ಅವರನ್ನ ಇಟ್ಟಿದ್ದರಂತೆ. ಆದ್ರೆ ಇವತ್ತು ಯಾವುದೇ ರೀತಿಯ ತೊಂದರೆ ಇಲ್ಲ ಎಂಬ ಮಾಹಿತಿ ನೀಡಿದ್ದಾರೆ. ವಿದ್ಯಾಭ್ಯಾಸವನ್ನು ಅಲ್ಲೆ ಮುಂದುವರೆಸುವ ಆಶಯವನ್ನೂ ಸಹ ತಮ್ಮ ಮಗಳು ಗಾಯತ್ರಿ ಖನ್ನಾ ವ್ಯಕ್ತಪಡಿಸುತ್ತಿದ್ದಾಳೆ. ನನಗೂ ಕೂಡ ಈಗ ಯಾವುದೇ ಆತಂಕವಿಲ್ಲ ಎಂದು ಗಾಯಿತ್ರಿ ಖನ್ನ ತಂದೆ ರಾಜೇಶ್ ಖನ್ನ ಹೇಳಿದ್ದಾರೆ.
Russia Attack Ukraine: 2 ದಿನಕ್ಕಾಗುವಷ್ಟು ಆಹಾರದೊಂದಿಗೆ ಬಂಕರ್‌ಗೆ ಶಿಫ್ಟ್
ಕೆ.ಆರ್.ಎಸ್. ನಿವಾಸಿ ಮನೋಜ್ ಸೇಫ್ ಇನ್ನು, ಉಕ್ರೇನ್ ನಲ್ಲಿರುವ ಮಂಡ್ಯದ ಮತ್ತೋರ್ವ ವಿದ್ಯಾರ್ಥಿ ಮನೋಜ್ ಸಹ ಯುದ್ಧ ಕಾಲದಲ್ಲಿ ಸಮಾಧಾನಕರ ಮಾತುಗಳನ್ನಾಡಿದ್ದಾರೆ. ಇವರ ಕುಟುಂಬಸ್ಥರೂ ಸಹ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ನಿವಾಸಿ. ಮನೋಜ್, ಕಾರ್ಕ್ಯೂ ಮೆಡಿಕಲ್ ಕಾಲೇಜಿನಲ್ಲಿ 3 ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡ್ತಿದಾರೆ.
ಸದ್ಯ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿರುವ ಮನೋಜ್, ನಮಗೆ ಯಾವುದೇ ತೊಂದರೆ ಇಲ್ಲ, ಆತಂಕ ಪಡಬೇಡಿ ಎಂದು ಪೋಷಕರಿಗೆ ತಿಳಿಸಿದ್ದಾರೆ. ಕಳೆದ ರಾತ್ರಿ 11 ಗಂಟೆ ಸಮಯದಲ್ಲಿ ಮಾತನಾಡಿರುವ ಮನೋಜ್ ಪೋಷಕರು ಹಾಸ್ಟೆಲ್ ನಲ್ಲಿ ಎಲ್ಲ ವ್ಯವಸ್ಥೆ ಇದೆಯಂತೆ. ಯಾವುದೇ ತೊಂದರೆ ಇಲ್ಲ ಎಂದು ಪುತ್ರ ಮನೋಜ್ ಹೇಳಿರುವುದಾಗಿ ತಂದೆ ಜಯರಾಮು ಹೇಳಿದ್ದಾರೆ.
ಸದ್ಯಕ್ಕೆ ಯಾವುದೆ ತೊಂದರೆಯಿಲ್ಲ ಎಂದಿರುವ ಚಿಕ್ಕಬಳ್ಳಾಪುರ ಮೆಡಿಕಲ್ ವಿದ್ಯಾರ್ಥಿ ಗೌತಮ್: ಉಕ್ರೇನ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತೋರ್ವ ವಿದ್ಯಾರ್ಥಿ ಸಿಲುಕಿಕೊಂಡಿದ್ದಾನೆ. ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಗೌತಮ್ ಸಾಯಿಕೃಷ್ಣ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ನಿವಾಸಿ. ಕಳೆದ 3 ವರ್ಷಗಳಿಂದ ಉಕ್ರೇನ್ ನಲ್ಲಿ ಎಂಬಿಬಿಎಸ್ ಮಾಡ್ತಿರುವ ಗೌತಮ್ ಸಾಯಿಕೃಷ್ಣ ಮೊಬೈಲ್ ಮೂಲಕ ಪೋಷಕರನ್ನು ಸಂಪರ್ಕಿಸಿದ್ದಾರೆ. ಸದ್ಯಕ್ಕೆ ಯಾವುದೆ ತೊಂದರೆಯಿಲ್ಲ ಎಂದಿದ್ದಾರೆ ಗೌತಮ್.
“ಪ್ಲೀಸ್ ಪ್ಯಾನಿಕ್ ಆಗ್ಬೇಡಿ.. ಸದ್ಯಕ್ಕೆ ನಾವಿಲ್ಲಿ ಸೇಫಾಗಿದ್ದೀವಿ..” ಇದು ಉಕ್ರೇನ್ ನಲ್ಲಿ ಮೈಸೂರಿನ ಭೂಮಿಕಾ ಭಾವುಕ ಮಾತು.. ಕೀವ್ ನಲ್ಲಿರೋ ತಾರಾಸ್ ಯೂನಿವರ್ಸಿಟಿಯ MBBS ವಿದ್ಯಾರ್ಥಿನಿ ಭೂಮಿಕಾ ಟಿವಿ9ಗಾಗಿ ಗ್ರೌಂಡ್ ರಿಪೋರ್ಟ್ ಕೊಟ್ಟಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಹಾಸ್ಟೆಲ್ ಬಿಲ್ಡಿಂಗ್ ನಲ್ಲಿ ತನ್ನ ಸಹಪಾಠಿಗಳೊಂದಿಗೆ ವಾಸವಿರೋ ಮೈಸೂರಿನ ಭೂಮಿಕಾ ಟಿವಿ9ಗಾಗಿ ಅಲ್ಲಿನ ವಾಸ್ತವತೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಭೂಮಿಕಾ ವಾಸವಿರೋ ಹಾಸ್ಟೆಲ್ ಕಟ್ಟಡದ ಬೇಸ್ ಮೆಂಟ್ ನಲ್ಲಿ ಅಹಿತಕರ ಘಟನೆ ನಡೆದ್ರೆ ಆಶ್ರಯ ಪಡೆದುಕೊಳ್ಳಲು ಬಂಕರ್ ಇದೆ. ಯುದ್ಧದ ಈ ಸನ್ನಿವೇಶದಲ್ಲಿ ಅಪಾಯ ಇದೆ ಅಂತಾದ್ರೆ ಸೇನಾ ಸಿಬ್ಬಂದಿ ಸೈರನ್ ಸೌಂಡ್ ಮಾಡ್ತಾರೆ. ಆ ಕೂಡಲೇ ಹಾಸ್ಟೆಲ್ ನಲ್ಲಿರೋರೆಲ್ಲಾ ಬಿಲ್ಡಿಂಗ್ ನೆಲಮಹಡಿಯ ಬಂಕರ್ಸ್ ಸೇರಿಕೊಳ್ಳಬೇಕು. ಈ ಪ್ರೋಸೆಸ್ ನಡುವೆಯೂ ಸದ್ಯಕ್ಕೆ ಅಪಾಯ ಏನಿಲ್ಲ. ನಮ್ಮವರು ಯಾರೂ ಪ್ಯಾನಿಕ್ ಆಗ್ಬೇಡಿ. ನಾವೆಲ್ಲಾ ಸೇಫಾಗಿದ್ದೀವಿ. ಸೇಫಾಗಿ ವಾಪಸ್ ಬರ್ತೀವಿ ಅಂತಾ MBBS ವಿದ್ಯಾರ್ಥಿನಿ ಭೂಮಿಕಾ ವಿಶ್ವಾಸವ್ಯಕ್ತಪಡಿಸಿದ್ದಾರೆ.
ನಾವು ಸದ್ಯ ಸುರಕ್ಷಿತವಾಗಿದ್ದೇವೆ ಮುಂದೆ ಎನಾಗುತ್ತೆ ಹೇಳಲಾಗಲ್ಲ: ದಾವಣಗೆರೆ: ನಾವು ವಸತಿ ನಿಲಯದಲ್ಲೇ ಇದ್ದೇವೆ. ಸದ್ಯ ಸುರಕ್ಷಿತವಾಗಿದ್ದೇವೆ. ಆದರೆ ಆತಂಕದಲ್ಲಿದ್ದೇವೆ. ಇಲ್ಲಿಂದ ಬಸ್‌ನಲ್ಲಿ ಬೇರೆಡೆಗೆ ಕರೆದುಕೊಂಡು ಹೋಗಿ ವಿಮಾನದಲ್ಲಿ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ’ ಎಂದು ಉಕ್ರೇನ್‌ನಲ್ಲಿ ಇರುವ ಸೈಯಿದಾ ಹಬೀಬಾ ಮತ್ತು ಪ್ರಿಯಾ ಅವರು ಟಿವಿ 9 ಗೆ ತಿಳಿಸಿದ್ದಾರೆ.
‘ನಾವು ಇರುವ ಸ್ಥಳದಿಂದ 30 ಕಿಲೋ ಮೀಟರ್ ದೂರದ ನಗರವನ್ನು ರಷ್ಯಾದವರು ವಶಪಡಿಸಿಕೊಂಡಿದ್ದಾರೆ. ಆದರೂ ನಮಗೇನು ತೊಂದರೆ ಇಲ್ಲ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ. ನಾವಲ್ಲದೇ ನಮ್ಮ ಜೂನಿಯರ್‌ಗಳು ಕರ್ನಾಟಕದವರು ಬಹಳ ಮಂದಿ ಇದ್ದಾರೆ’ ಎಂದು ಅವರು ಮಾಹಿತಿ ನೀಡಿದರು. ಆದ್ರೆ ಯೂನಿವರ್ಸಿಟಿಯವರು ನೀಡಿದ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇವೆ. ಎನಾಗುತ್ತದೆ ಎಂಬುದೇ ಹೇಳಲಾಗಲ್ಲ ಎಂದಿದ್ದಾರೆ ಪ್ರಿಯಾ.
ವಿಜಯನಗರ ಶಿಕ್ಷಕಿ ಪುತ್ರ ಸೇಫ್: ರಷ್ಯಾ- ಉಕ್ರೇನ್ ನಲ್ಲಿ ಯದ್ಧ ಹಿನ್ನಲೆ ಉಕ್ರೇನ್ ನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ವಿಕಾಸ್ ಪಾಟೀಲ್ ಸಿಲುಕಿಕೊಂಡಿದ್ದಾರೆ. ವಿಕಾಸ್ ಪಾಟೀಲ್ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಶಿಕ್ಷಕಿಯೊಬ್ಬರ ಮಗ. ನಿನ್ನೆ ರಾತ್ರಿ ತಮ್ಮ ಪುತ್ರನೊಂದಿಗೆ ಮಾತನಾಡಿರುವುದಾಗಿ ಶಿಕ್ಷಕಿ ತಿಳಿಸಿದ್ದಾರೆ.
ಉಕ್ರೇನ್ನಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳ ರಕ್ಷಣೆಗೆ ನೋಡೆಲ್ ಅಧಿಕಾರಿ ನೇಮಕ ಬೆಂಗಳೂರು: ರಷ್ಯಾ-ಉಕ್ರೇನ್ ಸಂಘರ್ಷ ವಿಷಮಿಸುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿರುವ ಕರ್ನಾಟಕ ಮೂಲದ ವಿದ್ಯಾರ್ಥಿಗಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಅಗತ್ಯ ಕ್ರಮ ತೆಗೆದುಕೊಂಡಿದೆ. ಈ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅಧಿಸೂಚನೆ ಹೊರಡಿಸಿದ್ದಾರೆ. ‘ಉಕ್ರೇನ್‌ನಲ್ಲಿ ಪ್ರಸ್ತುತ ಮಿಲಿಟರಿ ಕಾನೂನು ಜಾರಿ ಮಾಡಲಾಗಿದೆ. ಮುಂದೇನಾಗಲಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಗೊತ್ತಿಲ್ಲ. ಉಕ್ರೇನ್ನ ವಾಯುಮಾರ್ಗವನ್ನು ಮುಚ್ಚಲಾಗಿದೆ. ವಿಶೇಷ ವಿಮಾನಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ ಭಾರತದ ಜನರು ಮತ್ತು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಸಮಸ್ಯೆಯಾಗಿದೆ. ಉಕ್ರೇನ್ ರಾಜಧಾನಿ ಕೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಎಲ್ಲ ಭಾರತೀಯರನ್ನು ರಕ್ಷಿಸಲು ಯತ್ನಿಸುತ್ತಿದೆ’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
‘ಕರ್ನಾಟಕದ ಸಾಕಷ್ಟು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಇವರ ರಕ್ಷಣೆಗಾಗಿ ಮುಖ್ಯಮಂತ್ರಿ ಕಚೇರಿ ಮತ್ತು ಮುಖ್ಯಕಾರ್ಯದರ್ಶಿ ಸತತ ಪ್ರಯತ್ನ ನಡೆಸುತ್ತಿದ್ದಾರೆ. ವಿದೇಶಾಂಗ ವ್ಯವಹಾರಗಳ ಇಲಾಖೆ ಹಾಗೂ ಕೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮುಖ್ಯಮಂತ್ರಿ ಕಚೇರಿ ಸತತ ಸಂಪರ್ಕದಲ್ಲಿದೆ. ಅಲ್ಲಿನ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಮತ್ತು ಅವರಿಗೆ ಸಾಧ್ಯವಿರು ಎಲ್ಲ ನೆರವು ಒದಗಿಸಲು ವಿದೇಶಾಂಗ ವ್ಯವಹಾರಗಳ ಇಲಾಖೆ ಶ್ರಮಿಸುತ್ತಿದೆ. ಇದಕ್ಕಾಗಿ ಭಾರತ ಸರ್ಕಾರವು 24X7 ಕಾರ್ಯನಿರ್ವಹಿಸುವ ಸಹಾಯವಾಣಿಗಳನ್ನು ಆರಂಭಿಸಿದೆ’ ಎಂದು ಹೇಳಿದ್ದಾರೆ.
Published On - 10:37 am, Fri, 25 February 22